ದಳಪತಿ ವಿಜಯ್ TVK ಪಕ್ಷದ ನಿಲುವು-ನಿರ್ಣಯಗಳು; ಮಹತ್ವವೇನು? ಪರಿಣಾಮಗಳೇನು?
ತಾವು ಹುಟ್ಟುಹಾಕಿರುವ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ನಾಯಕ-ಚಿತ್ರ ನಟ ವಿಜಯ್ ಅವರು ತಮ್ಮ ಪಕ್ಷ ಡಿಎಂಕೆಗೆ ಪರ್ಯಾಯ ಎಂಬಂತೆ ಬಿಂಬಿಸಿಕೊಂಡರೂ, ಚುನಾವಣೆಯಲ್ಲಿ ಅವರ ಯಾರ ಮತಗಳತ್ತ ಕಣ್ಣಿಟ್ಟಿದ್ದಾರೆ? ಯಾರ ಮತಬ್ಯಾಂಕ್ ಗೆ ಧಕ್ಕೆಯಾಗುತ್ತದೆ ಎಂಬುದು ಇಲ್ಲಿ ಮಿಲಿಯಾಂತರ ಡಾಲರ್ ಪ್ರಶ್ನೆ. ಒಂದು ವೇಳೆ ಹಾಗೇನಾದರೂ, ಡಿಎಂಕೆ ವಿರೋಧಿ ಮತಗಳು ವಿಭಜನೆಯಾದರೆ ವಿರುದ್ಧ ಪರಣಾಮವಾಗುವುದು ಎಐಎಡಿಎಂಕೆ ಮೇಲೆಯೇ ಎಂಬಂತೆ ಕಾಣಿಸುತ್ತಿದೆ. ಇದರಿಂದ , ಎಐಎಡಿಎಂಕೆ ಸೋಲಾಗಲೂಬಹುದು.;
ಜನಪ್ರಿಯ ಚಲನಚಿತ್ರ ನಟ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ ನಾಯಕ ವಿಜಯ್ ಅವರು ಅಕ್ಟೋಬರ್ 27, ಭಾನುವಾರ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ವಿಕ್ರವಂಡಿಯಲ್ಲಿ ತಮ್ಮ ಪಕ್ಷದ ಮೊದಲ ರಾಜಕೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಈ ಮೂಲಕ ತಮಿಳು ನಾಡಿನ ರಾಜಕಾರಕ್ಕೆ ಚಿತ್ರರಂಗದ ಮತ್ತೊಬ್ಬ ಜನಪ್ರಿಯ ಚಿತ್ರನಟ ಪ್ರವೇಶಿಸಿದಂತಾಗಿದೆ. ವಿಜಯ್ ಅವರು ತಮಿಳುನಾಡಿನ ವಿಕ್ರವಾಂಡಿಯಲ್ಲಿ ಸಾಗರೋಪಾದಿಯಲ್ಲಿ ಬಂದ ತಮ್ಮ ಅಭಿಮಾನಿಗಳೊಂದಿಗೆ ತಮ್ಮ ರಾಜಕೀಯ ಪಕ್ಷದ ಶಕ್ತಿ ಪ್ರದರ್ಶನ ಮಾಡಿ, ರಾಜ್ಯ ರಾಜಕಾರಣಕ್ಕೆ ತಮ್ಮ ರಾಜಕೀಯ ಶಕ್ತಿಯ ಒಂದು ಝಲಕ್ ನೀಡಿದ್ದಾರೆ.
TVK ಪಕ್ಷವನ್ನು ಹುಟ್ಟುಹಾಕುವುದರ ಮೂಲಕ 2026 ರ ವಿಧಾನ ಸಭಾ ಚುನಾವಣೆಯಲ್ಲಿ ಮತ-ಕದನಕ್ಕೆ ವೇದಿಕೆಯನ್ನು ಸಿದ್ಧಪಡಿಸಿ, ವಿಜಯ್ ಅವರು ತಮಿಳುನಾಡಿನ ಆಡಳಿತಾರೂಢ ಡಿಎಂಕೆಗೆ ಸವಾಲು ಎಸೆದಿದ್ದಾರೆ. ಮೇಲ್ನೋಟಕ್ಕೆ ಅವರ ಪಕ್ಷ ಬಿಜೆಪಿಯನ್ನು ವಿರೋಧಿಸುವಂತೆ ತೋರುತ್ತಿದ್ದರೂ, ದ್ರಾವಿಡ ಪಕ್ಷಗಳ "ಜಾತ್ಯತೀತ, ಸಮಾಜವಾದಿ, ಸಾಮಾಜಿಕ ನ್ಯಾಯ" ಮಾರ್ಗವನ್ನು ಅನುಸರಿಸುವ ಸೂಚನೆಗಳನ್ನು ಅವರು ನೀಡಿದ್ದಾರೆ.
ಹಿಟ್‌ಗಳು ಮತ್ತು ಮಿಸ್‌ಗಳು
ಆದರೆ, ಈ ಮೂಲಕ ಡಿಎಂಕೆ, ಎಐಎಡಿಎಂಕೆ ಮತ್ತು ಬಿಜೆಪಿಗೆ ಪರ್ಯಾಯವಾಗಬಹುದಾದ ಹೊಸ ವಿಷಯ ಸೂಚಿ ಹಾಗೂ ಎಲ್ಲ ಜನಗಳನ್ನು ಆಕರ್ಷಿಸುವ ಮಾದರಿಯೊಂದನ್ನು ನೀಡುಲ ವಿಜಯ್ ಅವರಿಗೆ ಸಾಧ್ಯವಾದಂತೆ ಕಾಣುತ್ತಿಲ್ಲ.
ದ್ರಾವಿಡ ನೆಲೆಗಟ್ಟಿನಲ್ಲಿ ತಮ್ಮ TVK ಪಕ್ಷವನ್ನು ಸ್ಥಾಪಿಸುವಾಗಲೂ, ಡಾ.ಬಿ.ಆರ್. ಅಂಬೇಡ್ಕರ್ ಪೆರಿಯಾರ್ ಇವಿ ರಾಮಸ್ವಾಮಿ, ದ್ರಾವಿಡರ್ ಕಳಗಂನ ಸಂಸ್ಥಾಪಕ, ದಿವಂಗತ ಕಾಂಗ್ರೆಸ್ ಧೀಮಂತ ಕೆ.ಕಾಮರಾಜ್ ಅವರ ಸಾಲಿಗೆ ಸೇರುವುದಾಗಿ ಹೇಳುತ್ತಾ, ವಿಜಯ್ ಅವರು ಡಿಎಂಕೆ ಆಡಳಿತದಲ್ಲಿ ಹೆಚ್ಚಿರುವ "ಭ್ರಷ್ಟಾಚಾರ" ವನ್ನು ತರಾಟೆಗೆ ತೆಗೆದುಕೊಂಡಿರುವುದು, ವಂಶಪಾರಂಪಾರ್ಯ ರಾಜಕಾರಣ ಪ್ರಶ್ನಿಸವುದನ್ನು ಹೊರತು ಪಡಿಸಿ ಅವರು ಸೇರಿದ ಜಜಸಮುದಾಯಕ್ಕೆ ಯಾವುದೇ ಖಚಿತವಾದ ರಾಜಕಾರಣದ ಮೌಲ್ಯಗಳ ಬದಲಾವಣೆಯ ಭರವಸೆಯನ್ನೂ ಕೂಡ ಹುಟ್ಟಿಸಲಿಲ್ಲ.
ತಮ್ಮ ಅವೇಶಭರಿತ ಭಾಷಣದಲ್ಲಿ ವಿಜಯ್ ಅವರು ಎಐಎಡಿಎಂಕೆ ಮತ್ತು ಬಿಜೆಪಿಯ ರಾಜಕೀಯ ನಿಲುವುಗಳ ಬಗ್ಗೆ ಮೌನವಾಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಆದರೆ ಅವರು ಧರ್ಮ,ನಿರಪೇಕ್ಷತಾ ಮೌಲ್ಯಗಳಿಗೆ ಬದ್ಧರಾಗಿರುವಂತೆ ಕಂಡುಬಂತು. ಬಿಜೆಪಿಯನ್ನು ಪರೋಕ್ಷವಾಗಿ ಉಲ್ಲೇಖಿಸಿ, ಆ ಪಕ್ಷದ "ಸಮಾಜ ವಿಭಜನೆ ರಾಜಕಾರಣ" ವನ್ನು ಗಟ್ಟಿಯಾಗಿ ಟೀಕಿಸಿದರು.
ದ್ರಾವಿಡ ಮಾದರಿ
ದ್ರಾವಿಡ ಪಕ್ಷಗಳು ಅಂಗೀಕರಿಸಿದ ದ್ವಿಭಾಷಾ ಸೂತ್ರದ ಪರವಾಗಿ ತೆಗೆದುಕೊಂಡ TVK ಪಕ್ಷದ ನಿರ್ಣಯಗಳು, ಜಾತಿ ಆಧಾರಿತ ಜನಗಣತಿ (ಜನಸಂಖ್ಯೆಗೆ ಅನುಗುಣವಾಗಿ ಅನುಪಾತದ ಪ್ರಾತಿನಿಧ್ಯದ ವಾಸ್ತವದ ಮೇಲೆ) , ಸಾಮಾಜಿಕ ನ್ಯಾಯ, ರಾಜ್ಯಪಾಲರ ಹುದ್ದೆಯ ಬಳಕೆ ಎಲ್ಲವನ್ನೂ ಅವರು ಪ್ರಸ್ತಾಪಿಸಿದರು. ಅವರ ಮಾತುಗಳಲ್ಲಿ ದ್ರಾವಿಡ ರಾಜಕಾರಣದ ಬಣ್ಣ-ವಾಸನೆ ಇದ್ದರೂ, ಅದನ್ನು ಎದುರುಹಾಕಿಕೊಳ್ಳುವ ಎದೆಗಾರಿಕೆಯನ್ನು ವಿಜಯ್ ಅವರು ತೋರಿಸಲಿಲ್ಲ.
ಹಾಗಾಗಿ TVK ಪಕ್ಷ ತೆಗೆದುಕೊಂಡಿರುವ ನಿಲುವುಗಳು ಹಾಗೂ ನಿರ್ಣಯಗಳು ಮಹತ್ವದ ಹಾದಿಯೊಂದನ್ನು ಸೃಷ್ಟಿಸಿದಂತೆ ಕಾಣಿಸಲಿಲ್ಲ. ಒಂದುವೇಳೆ ತಮಿಳು ನಾಡಿನಲ್ಲಿ TVK ಪಕ್ಷ ಅಧಿಕಾರಕ್ಕೆ ಬಂದರೂ, ಸಮ್ಮಿಶ್ರ ಸರ್ಕಾರದ ಅಗತ್ಯವೇರ್ಪಟ್ಟಲ್ಲಿ, ಅಧಿಕಾರ ಹಂಚಿಕೆಗೆ ತಮ್ಮ ನೇತೃತ್ವದ ಪಕ್ಷ ಸಿದ್ಧವೆಂಬ ಸಂದೇಶವನ್ನೂ ಅವರು ನೀಡಿ, ತಮ್ಮ ಸಮತೋಲಿತ ಎನ್ನಬಹುದಾದ ರಾಜಕಾರಣದ ಸೂಚನೆ ನೀಡಿದರು. ಅದು ಸಾರ್ವಜನಿಕ ಸಭೆಯಲ್ಲಿಯೇ ಈ ಘೋಷಣೆ ಮಾಡಿರುವುದರಿಂದ TVK ಪಕ್ಷವು ಒಂದು ರೀತಿಯ ನಿರ್ಲಿಪ್ತ ನಿಲುವು ತೆಗೆದುಕೊಳ್ಳುವುದರ ಸ್ಪಷ್ಟ ಸೂಚನೆ ನೀಡಿದರು.
ಸಮ್ಮಿಶ್ರ ರಾಜಕಾರಣ
TVK ಪಕ್ಷದ ಈ ನಿಲುವನ್ನು ವಿಡುದಲೈ ಚಿರುತೈಗಳ್ ಕಚ್ಚಿ (Viduthalai Chiruthaigal Katchi-VCK) ಮತ್ತು ಕಾಂಗ್ರೆಸ್ ಪಕ್ಷವನ್ನು ಓಲೈಸುವ ಪ್ರಯತ್ನವೆಂದೇ ವ್ಯಾಖ್ಯಾನಿಸಲಾಗುತ್ತಿದೆ. ತೊಳ್ ತಿರುಮಾವಳವನ್ ನೇತೃತ್ವದ ವಿಸಿ̧ಕೆ ಇತ್ತೀಚೆಗೆ ಸರ್ಕಾರದಲ್ಲಿ ಪಾಲು ಬಯಸಿದ್ದು, ಅದರ ಸಮ್ಮಿಶ್ರ ಪಾಲುದಾರ ಡಿಎಂಕೆಯನ್ನು ಕೆರಳಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಹಿಂದೆ ಕೂಡ ಕೆಲವು ರಾಜ್ಯ ಕಾಂಗ್ರೆಸ್ ನಾಯಕರು ಇದೇ ರೀತಿಯ ಬೇಡಿಕೆಯನ್ನು ಮುಂದಿಟ್ಟಿದ್ದರು. ಆದರೆ ಆಗ ಅಧಿಕಾರದಲ್ಲಿದ್ದ ಡಿಎಂಕೆ ಅದನ್ನು ಸ್ಪಷ್ಟವಾಗಿ ತಿರಸ್ಕರಿಸಿತ್ತು.
ಡಿಎಂಕೆ ನೇತೃತ್ವದ ಮೈತ್ರಿಕೂಟದ ಪಕ್ಷಗಳಿಗೆ ವಿಜಯ್ ಈಗ ಒಂದು ರೀತಿಯಲ್ಲಿ ಸವಾಲಾಗಿದ್ದಾರೆ. ಮತ್ತು ಮೈತ್ರಿಕೂಟದ ಸ್ಥಿರತೆಗೆ ಧಕ್ಕೆ ಬಂದಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ವಿಜಯ್ ಅವರ TVK ಒಂದು ರಾಜಕೀಯ ಪಕ್ಷವಾಗಿ ಯಶಸ್ವಿಯಾಗಬೇಕಾದರೆ, ಅದು ಡಿಎಂಕೆ ನೇತೃತ್ವದ ಶಕ್ತಿವಂತ ಮೈತ್ರಿಕೂಟವನ್ನು ಒಡೆಯುವುದು ಅತ್ಯಗತ್ಯ.
ಪರಿಸ್ಥಿತಿ ಹೀಗಿರುವಂತೆ ತೋರುತ್ತಿದ್ದರೂ, ಈ ಸಮಯದಲ್ಲಿ, ಡಿಎಂಕೆ ಮಿತ್ರಪಕ್ಷಗಳು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಹಿಂದೆ ಗಟ್ಟಿಯಾಗಿ ನಿಂತಿವೆ. ಮುಖ್ಯವಾಗಿ ಅವರು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಭಾರತದ ಮೈತ್ರಿಕೂಟದ ಅವಿಭಾಜ್ಯ ಅಂಗವಾಗಿರುವುದರಿಂದ ಅವರಯ ಬಿಜೆಪಿ ಹಾಗೂ ಎನ್ ಡಿ ಎ ಮೈತ್ರಿಕೂಟವನ್ನು ವಿರೋಧಿಸಲು ಬದ್ಧರಾಗಿದ್ದಾರೆ.
ವಿಜಯ್ vs ಉದಯನಿಧಿ
ಈ ನಡುವೆ ಎಐಎಡಿಎಂಕೆಯ ಆಶಯವೂ ಕೂಡ ಡಿಎಂಕೆ ನೇತೃತ್ವದ ಮೈತ್ರಿಕೂಟದ ವಿಭಜನೆಯ ಮೇಲೆ ಅವಲಂಬಿತವಾಗಿದೆ ಎನ್ನುವಂತೆ ಕಾಣಿಸುತ್ತಿದೆ. ವಿಜಯ್ ಅವರ ಟಿವಿಕೆ ಪಕ್ಷವು ಎಐಎಡಿಎಂಕೆಯನ್ನು ಹಿಂದಿಕ್ಕಿ ಡಿಎಂಕೆಗೆ ಪ್ರಮುಖ ಸವಾಲಾಗಿ ನಿಲ್ಲಬಹುದೇ ಎಂಬುದನ್ನು ಸಮಯವಷ್ಟೇ ನಿರ್ಧರಿಸಬಲ್ಲದು. . ಇದೇ ವೇಳೆ ವಿಜಯ್ ಮತ್ತು ಉಪಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ನಡುವೆ ಮುಂದಿನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಇಬ್ಬರೂ ಚಲನಚಿತ್ರ ನಟರು ಮತ್ತು ಯುವಕರು ಎಂಬುದನ್ನು ಇಲ್ಲಿ ಗಮನಿಸಬೇಕು. ಹಾಗಾಗಿ ತಮಿಳು ನಾಡಿನ ರಾಜಕಾರಣ; ʻಜೆನ್ ನೆಕ್ಸ್ಟ್ʼ (ಯುವತಲೆಮಾರಿನ) ಚುನಾವಣಾ ಕದನಕ್ಕೆ ಸಾಕ್ಷಿಯಾಗಬಹುದು ಎನ್ನಲಾಗುತ್ತಿದೆ. ಅಷ್ಟೇ ಅಲ್ಲ. ಜೆ ಜಯಲಲಿತಾ ಅವರ ಮರಣದ ನಂತರ ವರ್ಚಸ್ವಿ ನಾಯಕರ ಕೊರತೆಯಿಂದಾಗಿ ನರಳುತ್ತಿರುವ ಎಐಎಡಿಎಂಕೆ ನಿಧಾನವಾಗಿ ತನ್ನ ಅಸ್ತಿತ್ವ ಕಳೆದುಕೊಳ್ಳಲೂ ಬಹುದು ಎಂದು ಹೇಳಲಾಗುತ್ತಿದೆ. ಹೋಗಬಹುದು.
ವಿಜಯ್ ಅವರದ್ದು ದೊಡ್ಡ ಸವಾಲು
ವಿಜಯ್ ಪಕ್ಷ ಯಾರ ಮತಗಳಿಗೆ ಕನ್ನ ಹಾಕಲಿದೆ ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಡಿಎಂಕೆ ತನ್ನ "ರಾಜಕೀಯ ಶತ್ರು" ಎಂದು ವಿಜಯ್ ಎತ್ತಿ ತೋರಿಸುವುದರೊಂದಿಗೆ, ಡಿಎಂಕೆ ವಿರೋಧಿ ಮತಗಳು ವಿಭಜನೆಯಾಗಬಹುದು. ಎಐಎಡಿಎಂಕೆಯು ಡಿಎಂಕೆ-ವಿರೋಧಿ ಮತಗಳ ಬಹುಭಾಗವನ್ನು ಪಡೆಯುವ ಗುರಿಯನ್ನು ಹೊಂದಿದ್ದರೆ, ವಿಜಯ್ ಅವರ ಪ್ರವೇಶವು ಎಐಎಡಿಎಂಕೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಬಹುದು. ಅಂಥ ಸಂದರ್ಭದಲ್ಲಿ ಡಿಎಂಕೆ ವಿರುದ್ಧವಾದ ಮತಗಳು ವಿಭಜನೆಗೊಳ್ಳುವುದರಿಂದಾಗಿ 026 ರಲ್ಲಿ ಡಿಎಂಕೆ ಅಧಿಕಾರಕ್ಕೆ ಮರಳಲು ಸಹಾಯವಾದರೂ, ಆಗಬಹುದು ಎನ್ನಲಾಗುತ್ತಿದೆ.
ವಿಜಯ್ ಅವರು ರಾಜಕೀಯ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಸಣ್ಣ ಪಕ್ಷಗಳಿಗೆ ಸ್ಪಲ್ಪ ಮಟ್ಟಿಗೆ ತಲುಪಬಹುದು. ಈಗ ನಟ ವಿಜಯ್ ರೂಪದಲ್ಲಿ 'ಮತ ಸಂಗ್ರಹಿಸುವ ಯಂತ್ರ' ಲಭ್ಯವಾಗಿರುವುದರಿಂದ, ಈ ಪಕ್ಷಗಳು ಅವರಲ್ಲಿ ಒಬ್ಬ ನಾಯಕನನ್ನು ತಮ್ ಹಿತರಕ್ಷಕನನ್ನು ಕಂಡುಕೊಳ್ಳಬಹುದು.
ಏತನ್ಮಧ್ಯೆ, ತಮ್ಮ ಚಲನಚಿತ್ರ ಅಭಿಮಾನಿಗಳ ಸಂಘವನ್ನು ಪೂರ್ಣ ಪ್ರಮಾಣದ ರಾಜಕೀಯ ಪಕ್ಷವಾಗಿ ಪರಿವರ್ತಿಸುವುದು ಸೂಪರ್‌ಸ್ಟಾರ್ ವಿಜಯ್ ರಾಜಕಾರಣದ ಮುಂದಿರುವ ದೊಡ್ಡ ಸವಾಲು. ಅದು ಗುಲಾಬಿಗಳ ಹಾಸಿಗೆಯಲ್ಲ. ಹಾಗೆ ನೋಡಿದರೆ ಅವರಿಗೆ ಪ್ರಸ್ತುತ ಸಂದರ್ಭದಲ್ಲಿ ರಾಜಕೀಯ ಪಟ್ಟುಗಳು, ಡಿಎಂಕೆ ಚುನಾವಣಾ ಚಾಕುಚಕ್ಯತೆ, ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಧರ್ಮ ನಿರಪೇಕ್ಷ ರಾಜಕಾರಣದ ಬಗ್ಗೆ ಅವರಿಗೆ ಮಾರ್ಗದರ್ಶನ ನೀಡಲು ಅನುಭವಿ ರಾಜಕಾರಣಿಗಳ ಗುಂಪೇ ಇಲ್ಲ.
ಇಂಥ ಸಂದರ್ಭದಲ್ಲಿ ವಿಜಯ್ ಗೆ ಸಲಹೆ ಸೂಚನೆ ತಿಳುವಳಿಕೆ ನೀಡಬಲ್ಲ ನುರಿತ ಕುಶಾಗ್ರಮತಿ ರಾಜಕಾರಣಿ ಮತ್ತು ವಿಜಯ್ ಅವರನ್ನು ತಿದ್ದಿ ತೀಡುವಂತಹ ರಾಜಕೀಯ ಚಾವಡಿಯಾಗಬಲ್ಲ ವೃತ್ತಿಪರರ ಗುಂಪನ್ನು ಆಕರ್ಷಿಸುವುದರಲ್ಲಿ TVK ಪಕ್ಷದ ಮುಂದಿನ ಭವಿಷ್ಯ ಅಡಗಿದೆ ಎನ್ನುವುದು ನಿಚ್ಛಳವಾಗಿ ಕಾಣಿಸುತ್ತಿದೆ.