ಡೊನಾಲ್ಡ್ ಟ್ರಂಪ್ ಹತ್ಯೆ ಯತ್ನ| ಅಮೆರಿಕ ಎಡವಿದ್ದೆಲ್ಲಿ? ಭಾರತದಲ್ಲಿ ಪರಿಸ್ಥಿತಿ ಹೇಗಿದೆ?

Update: 2024-07-20 00:30 GMT

ಇದೇ ಜುಲೈ 13 ರಂದು ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ಮುಂದಿನ ಅಧ್ಯಕ್ಷೀಯ ಚುನಾವಣೆಗಳ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ರ ಹತ್ಯೆಯ ಯತ್ನವು ಆ ದೇಶದ ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ನಡೆದಿದೆ. ಟ್ರಂಪ್ ತಮ್ಮ ಪ್ರಚಾರ ಭಾಷಣವನ್ನು ಮಾಡುತ್ತಿದ್ದಾಗ ಹತ್ತಿರದ ಮಹಡಿಯ ತಾರಸಿಯೊಂದರ ಮೇಲೆ ಕುಳಿತಿದ್ದ ಯುವಕನೊಬ್ಬ ಅವರತ್ತ ತನ್ನ ರೈಫಲ್ನಿಂದ ಎಂಟು ಗುಂಡುಗಳನ್ನು ಹಾರಿಸಿದ. ಅವುಗಳಲ್ಲಿ ಒಂದು ಗುಂಡು ಟ್ರಂಪ್ರ ಕಿವಿಗೆ ತಗಲಿ ಅವರನ್ನು ಗಾಯಪಡಿಸಿತು; ಇನ್ನೊಂದು ಅವರ ಪಕ್ಷದ ಕಾರ್ಯಕರ್ತನೊಬ್ಬನ ಸಾವಿಗೆ ಕಾರಣವಾಯಿತು. ಉಳಿದವು ಇತರ ಕೆಲವರನ್ನು ಗಾಯಗೊಳಿಸಿದವು. ಟ್ರಂಪ್ರ ಅಂಗರಕ್ಷಕರು ಹಂತಕನ ಮೇಲೆ ಕೂಡಲೇ ಗುಂಡು ಹಾರಿಸಿ ಅವನನ್ನು ಸ್ಥಳದಲ್ಲಿಯೇ ಕೊಂದರು.

ಇಂತಹ ಘಟನೆಗಳು ಅಮೆರಿಕದಲ್ಲಿ ಹೊಸತಲ್ಲ. ಇಲ್ಲಿಯವರೆಗೆ ಆ ದೇಶದಲ್ಲಿ ಅಬ್ರಹಾಂ ಲಿಂಕನ್‌ರನ್ನೂ ಸೇರಿ ನಾಲ್ಕು ಅಧ್ಯಕ್ಷರ ಹತ್ಯೆಯಾಗಿದೆ. ಅಧ್ಯಕ್ಷ ರೊನಾಲ್ಡ್ ರೇಗನ್ ಅಲ್ಲದೆ ಟ್ರಂಪ್ರಂತಹ ಇನ್ನಿಬ್ಬರು ಮಾಜಿ ಅಧ್ಯಕ್ಷರ ಹತ್ಯೆಯ ಯತ್ನವು ನಡೆದಿದೆ.

ದೇಶದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮಾಜಿ ಅಧ್ಯಕ್ಷ-ಉಪಾಧ್ಯಕ್ಷರ ರಕ್ಷಣೆಗಾಗಿ ಸೀಕ್ರೇಟ್ ಸರ್ವಿಸ್ ಎನ್ನುವ ವಿಶೇಷ ದಳವು ಅಮೆರಿಕದಲ್ಲಿ ಅಸ್ಥಿತ್ವದಲ್ಲಿದೆ. ಇದೊಂದು ಪ್ರತಿಷ್ಟಿತ ದಳವಾಗಿದ್ದು ವಿಶ್ವದಾದ್ಯಂತ ತನ್ನ ಕ್ಷಮತೆಗೆ ಹೆಸರುವಾಸಿಯಾಗಿದೆ. ಆದರೂ ಆ ದೇಶದಲ್ಲಿ ವಿ.ಐ.ಪಿ ಗಳ ಹತ್ಯೆ ಇಲ್ಲವೇ ಹತ್ಯೆಯ ಯತ್ನವನ್ನು ಆ ದಳಕ್ಕೆ ತಡೆಯಲು ಏಕೆ ಸಾಧ್ಯವಾಗುತ್ತಿಲ್ಲ ಎನ್ನುವುದೇ ಎಲ್ಲರೂ ಕೇಳುತ್ತಿರುವ ಪ್ರಶ್ನೆ. ಇದಕ್ಕೆ ಉತ್ತರವನ್ನು ನೀಡುವುದು ಕಷ್ಟವಲ್ಲ. ಅಮೆರಿಕದಲ್ಲಿ ಎಲ್ಲ ಬಗೆಯ ಬಂದೂಕುಗಳೂ ಸುಲಭವಾಗಿ ಸಾರ್ವಜನಿಕರಿಗೆ ಲಭ್ಯವಿದೆ. ಆ ದೇಶದ ಸಂವಿಧಾನವು 21 ವರ್ಷ ವಯಸ್ಸಿನ ಮೇಲ್ಪಟ್ಟ ಎಲ್ಲ ನಾಗರಿಕರಿಗೂ ಬಂದೂಕುಗಳನ್ನು ಹೊಂದುವ ಹಕ್ಕನ್ನು ನೀಡಿದೆ.

ಟ್ರಂಪ್ರ ಹತ್ಯೆಯ ಯತ್ನವನ್ನು ಮಾಡಿದವನು ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂಬ 20 ವರ್ಷ ವಯಸ್ಸಿನ ಯುವಕ. ಆತ ಉಪಯೋಗಿಸಿದ ಬಂದೂಕು ಬಹು ದೂರದ ಗುರಿಯನ್ನು ತಲುಪುವ ವ್ಯವಸ್ಥೆಯನ್ನು ಹೊಂದಿರುವ ಅರೆ-ಆಟೋಮ್ಯಾಟಿಕ್ ರೈಫಲ್ ಎ.ಆರ್-15. ಈ ಬಂದೂಕನ್ನು ಮ್ಯಾಥ್ಯೂನ ತಂದೆಯ ಹೆಸರಿನಲ್ಲಿ ಕೇವಲ ಆರು ತಿಂಗಳ ಹಿಂದೆ ಖರೀದಿಸಲಾಗಿತ್ತು. ಗಮನಿಸಬೇಕಾದ ಅಂಶವೆAದರೆ ಅಮೆರಿಕದಲ್ಲಿನ ಎಲ್ಲ ವಿ.ಐ.ಪಿ ಹತ್ಯಾ ಪ್ರಕರಣಗಳಲ್ಲಿಯೂ ಈ ರೀತಿಯ ದೂರಗುರಿಯನ್ನು ಮುಟ್ಟುವ ಕ್ಷಮತೆಯ ಬಂದೂಕುಗಳನ್ನೇ ಉಪಯೋಗಿಸಲಾಗಿದೆ.

ಲೋಪವೆಲ್ಲಿ?

ವಿ.ಐ.ಪಿಗಳ ಭದ್ರತಾ ವ್ಯವಸ್ಥೆಯಲ್ಲಿ ಅವರ ಸುತ್ತಲೂ ಮೂರು ಅದೃಶ್ಯ ಭದ್ರತಾ ವರ್ತುಲಗಳನ್ನು ಮಾಡಬೇಕಾಗುತ್ತದೆ. ಮೊದಲನೆಯ ವರ್ತುಲಕ್ಕೆ ‘ಕ್ಲೋಸ್ ಪ್ರೊಟೆಕ್ಷನ್’ ಎನ್ನಲಾಗುತ್ತದೆ. ಈ ತಂಡದಲ್ಲಿರುವ ಅಂಗರಕ್ಷಕರು ವಿ.ಐ.ಪಿಯ ದೇಹ ರಕ್ಷಣೆಯನ್ನು ಮಾಡಬೇಕಾಗುತ್ತದೆ. ಅವರ ಸುತ್ತಲೂ ಭಧ್ರಕೋಟೆಯಂತೆ ನಿಂತು ಅವರನ್ನು ಎಲ್ಲ ರೀತಿಯ ದೈಹಿಕ ಅಪಾಯದಿಂದ ರಕ್ಷಿಸಬೇಕಾಗುತ್ತದೆ. ಇದೇ ಅತಿ ಮಹತ್ವದ ವರ್ತುಲ. ಈ ವರ್ತುಲದಲ್ಲಿ ವಿಶೇಷವಾಗಿ ತರಬೇತಿ ಹೊಂದಿದ ಅಂಗರಕ್ಷಕರಿರುತ್ತಾರೆ. ಭಾರತದಲ್ಲಿ ಹೇಗೆ ಪ್ರಧಾನಿಯ ಅತಿ ಸಮೀಪದ ಭದ್ರತೆಗಾಗಿ ಎಸ್.ಪಿ.ಜಿ ದಳವಿದೆಯೋ ಅದೇ ರೀತಿಯಾಗಿಯೇ ಅಮೆರಿಕದಲ್ಲಿ ಸೀಕ್ರೆಟ್ ಸರ್ವಿಸ್ ಇದೆ. ವಿ.ಐ.ಪಿಯ ಅತಿ ಸಮೀಪ ಬರುವ ಸಂಶಯಾಸ್ಪದ ವ್ಯಕ್ತಿಗಳನ್ನು ತಡೆಯುವ ಕಾರ್ಯವೂ ಅವರದ್ದು.

ಎರಡನೆಯ ವರ್ತುಲದಲ್ಲಿರುವ ರಕ್ಷಣಾ ತಂಡಗಳು ಸಭೆ-ಸಮಾರಂಭದಲ್ಲಿ ಭಾಗವಹಿಸುವ ವ್ಯಕ್ತಿಗಳ ನಿಯಂತ್ರಣವನ್ನು ಮಾಡುವುದಲ್ಲದೆ ಅವರು ವಿ.ಐ.ಪಿ ಯ ಅತಿ ಹತ್ತಿರಕ್ಕೆ ಬರದಂತೆ ನೋಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಈ ವರ್ತುಲದಲ್ಲಿ ಸ್ಥಳೀಯ ಪೊಲೀಸರು ಮತ್ತು ಸಮವಸ್ತ್ರದಲ್ಲಿರದ ರಾಜ್ಯ ಗುಪ್ತಚಾರ ದಳದ ಸಿಬ್ಬಂದಿಗಳು ಇರುತ್ತಾರೆ. ಮೂರನೆಯ ವರ್ತುಲದಲ್ಲಿರುವ ಪೊಲೀಸರು ಸಭೆ-ಸಮಾರಂಭವು ನಡೆಯುವ ಪ್ರದೇಶಗಳೇ ಅಲ್ಲದೆ ವಿ.ಐ.ಪಿ ಇವರ ವಾಹನವು ಹಾದುಹೋಗುವ ಸ್ಥಳಗಳ ಸುಮಾರು 200 ಮೀಟರ್ ಫಾಸಲೆಯಲ್ಲಿರುವ ಕಟ್ಟಡಗಳ ಒಳಗಿನಿಂದ ಅಥವಾ ಅದರ ತಾರಸಿಯ ಮೇಲಿನಿಂದ ವಿ.ಐ.ಪಿಯ ಮೇಲೆ ಗುಂಡಿನ ದಾಳಿ ನಡೆಯದಂತೆ ನೋಡಿಕೊಳ್ಳುತ್ತಾರೆ. ಈ ವ್ಯವಸ್ಥೆಯನ್ನು ಸೀಕ್ರೆಟ್ ಸರ್ವಿಸ್ ಇಲ್ಲವೇ ಎಸ್.ಪಿ.ಜಿ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ಸ್ಥಳೀಯ ರಾಜ್ಯ ಪೊಲೀಸರು ಮಾಡಬೇಕು. ಇದೇ ಬಹಳ ಮುಖ್ಯವಾದ ಕಾರ್ಯ. ಇದೇ ಕಾರ್ಯದಲ್ಲಿಯೇ ಅಮೆರಿಕದ ರಕ್ಷಣಾ ವ್ಯವಸ್ಥೆಯು ಪದೇ ಪದೆ ವಿಫಲವಾಗಿದೆ. ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಮತ್ತು ಜಾನ್ ಎಫ್ ಕೆನಡಿ ಇವರಿಬ್ಬರ ಹತ್ಯೆಗಳೂ ಎತ್ತರದ ಸ್ಥಳದಲ್ಲಿ ಕುಳಿತಿದ್ದ ಶೂಟರ್ನಿಂದ ಬಂದ ಗುಂಡುಗಳಿಂದಲೇ ಆದವು ಎನ್ನುವುದು ವಿಶೇಷ.

ಇದೇ ಕಾರಣಕ್ಕಾಗಿ ಯಾವುದೇ ವಿಐಪಿ ಹಾದುಹೋಗುವ ಇಲ್ಲವೇ ಭಾಷಣ ಮಾಡುವ ಸ್ಥಳಗಳ ಸುಮಾರು 500 ಮೀಟರ್ ಸುತ್ತಮುತ್ತಲೂ ಇರುವ ಎತ್ತರದ ಕಟ್ಟಡಗಳನ್ನು ಭದ್ರತಾ ಸಿಬ್ಬಂದಿ ವಿ.ಐ.ಪಿ ಕಾರ್ಯಕ್ರಮದ 12 ರಿಂದ 24 ಗಂಟೆಗಳ ಮೊದಲೇ ತಮ್ಮ ವಶಕ್ಕೆ ಪಡೆಯುತ್ತಾರೆ. ಎಲ್ಲಿಂದ ವಿ.ಐ.ಪಿ ಇವರನ್ನು ನೋಡಲು ಸಾಧ್ಯವೋ ಆ ಎಲ್ಲ ಜಾಗಗಳ ತಾರಸಿಗಳ ಮೇಲೆ ಅಥವಾ ಅವುಗಳ ಕಿಟಕಿಗಳ ಬಳಿ ಯಾವ ವ್ಯಕ್ತಿಯೂ ಬರದೇ ಇರುವಂತೆ ನೋಡಿಕೊಳ್ಳುತ್ತಾರೆ. ಸ್ಥಳೀಯ ಪೊಲೀಸರು ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ತನ್ನ ಬಂದೂಕಿನೊಡನೆ ಎತ್ತರದ ಕಟ್ಟಡದ ತಾರಸಿಗೆ ಯಾರೂ ಹೋಗದಂತೆ ನೋಡಿಕೊಳ್ಳದ ಕಾರಣವೇ ಹೀಗಾಯಿತು ಎಂದು ಅಮೆರಿಕದ ಸೀಕ್ರೆಟ್ ಸರ್ವಿಸ್ ಮುಖ್ಯಸ್ಥೆ ಕಿಂಬರ್ಲಿ ಚೀಟಲ್ ಹೇಳಿದ್ದಾರೆ. ಇದೇ ನಿಜವಾಗಿದ್ದರೆ ಸೀಕ್ರೆಟ್ ಸರ್ವಿಸ್ ಮತ್ತು ಸ್ಥಳೀಯ ಪೊಲೀಸರ ನಡುವಿನ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ.

ಭಾರತದಲ್ಲಿ ಹೇಗಿದೆ ಪರಿಸ್ಥಿತಿ?

ಇಂತಹ ಲೋಪಗಳಾಗದಂತೆ ನಮ್ಮ ದೇಶದಲ್ಲಿ ಹೆಚ್ಚಿನ ಕಾಳಜಿಯನ್ನು ವಹಿಸಲಾಗುತ್ತದೆ. ದೇಶದ ಪ್ರಧಾನಿ ಒಂದು ರಾಜ್ಯಕ್ಕೆ ಬರುವ ಹಲವಾರು ದಿನಗಳ ಮೊದಲೇ ಪ್ರಧಾನಿಯವರ ಭದ್ರತಾ ತಂಡದ ಸದಸ್ಯರು ಮತ್ತು ಕೇಂದ್ರ ಗುಪ್ತಚಾರದಳದ ಅಧಿಕಾರಿಗಳು ಸಂಬಂಧಿಸಿದ ರಾಜ್ಯಗಳಿಗೆ ಬಂದು ಅಲ್ಲಿಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಪ್ರಧಾನಿಯ ಕಾರ್ಯಕ್ರಮದಲ್ಲಿ ಬರುವ ಎಲ್ಲ ಸ್ಥಳಗಳನ್ನೂ ವೀಕ್ಷಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಸಮನ್ವಯವನ್ನು ಸಾಧಿಸುತ್ತಾರೆ.

ಅತಿ ಮುಖ್ಯ ವ್ಯಕ್ತಿಗಳ ಹತ್ಯೆ ಅಥವಾ ಅದರ ಯತ್ನವನ್ನು ತಡೆಯಲು ಸಾಧ್ಯವೇ? ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ ಎನ್ನುವುದು ಎಲ್ಲ ಪೊಲೀಸರೂ ನೀಡುವ ಉತ್ತರ. ಅಮೆರಿಕವೊಂದೇ ಅಲ್ಲ, ಎಲ್ಲ ಮುಂದುವರಿದ ದೇಶಗಳಲ್ಲಿಯೂ ಸರ್ಕಾರದ ಇಲ್ಲವೇ ರಾಷ್ಟ್ರ ಪ್ರಮುಖರ ಹತ್ಯೆಯಾಗಿದೆ. 1984 ರಲ್ಲಿ ಇಂಗ್ಲೆಂಡಿನ ಬ್ರೆಂಟನ್ನಲ್ಲಿ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಸಮಾರಂಭವೊಂದಕ್ಕೆ ಆಗಮಿಸಿದ್ದ ಹೊಟೆಲ್ ಒಂದರಲ್ಲಿ ಬಾಂಬ್ ಸ್ಪೋಟಿಸಲಾಯಿತು. ಕೂದಲೆಳೆಯ ಅಂತರದಲ್ಲಿ ಪ್ರಧಾನಿ ಪಾರಾದರು.

ಅದೇ ವರ್ಷವೇ ನಮ್ಮ ದೇಶದಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯಾಯಿತು. ಈ ಹತ್ಯೆ ಪ್ರಧಾನಿಯ ಅಂಗರಕ್ಷಕರಿಂದಲೇ ನಡೆದಿದ್ದು ಗಮನಾರ್ಹ. ಪ್ರಧಾನಿಯ ಹತ್ಯೆಯ ಬಗ್ಗೆ ಭದ್ರತಾಧಿಕಾರಿಗಳಿಗೆ ಮುನ್ಸೂಚನೆಯಿದ್ದು ಅವರ ಅಂಗರಕ್ಷಕ ದಳದಲ್ಲಿದ್ದ ಕೆಲವರನ್ನು ಭದ್ರತಾ ದಳದಿಂದ ಹೊರಗೆ ಕಳಿಸಿದ್ದರೂ ಪ್ರಧಾನಿಯೇ ಆ ಸಿಬ್ಬಂದಿಯನ್ನು ಮರಳಿ ಬರುವಂತೆ ಮಾಡಿದ ಕಾರಣವೇ ಈ ಹತ್ಯೆಯಾಯಿತು ಎಂದು ಕೆಲ ವಿಶ್ಲೇಷಕರು ಹೇಳುತ್ತಾರೆ. ಆನಂತರ ಎಚ್ಚೆತ್ತ ದೇಶವು ಪ್ರಧಾನಿಯ ರಕ್ಷಣೆಗೆಂದೇ ಎಸ್.ಪಿ.ಜಿ ಎನ್ನುವ ವಿಶೇಷ ಭದ್ರತಾ ದಳವನ್ನು ಸ್ಥಾಪಿಸಿತು. ಈಗ ಎಸ್.ಪಿ.ಜಿ ತನ್ನಲ್ಲಿ ನೇಮಕ ಹೊಂದುವ ಎಲ್ಲರ ಹಿನ್ನೆಲೆಯನ್ನು ಸೂಕ್ಷ್ಮವಾಗಿ ಅವಲೋಕಿಸಿಯೇ ಭರ್ತಿ ಮಾಡುವುದಲ್ಲದೆ ಭರ್ತಿಯಾದ ನಂತರವೂ ಅವರ ಖಾಸಗಿ ಚಟುವಟಕೆಗಳ ಮೇಲೆ ನಿಗಾ ಇಡುತ್ತದೆ.

ಇಸ್ರೇಲ್ ಉದಾಹರಣೆ

ತಂತ್ರಜ್ಞಾನದಲ್ಲಿ ಮಂಚೂಣಿಯಲ್ಲಿರುವ ಇಸ್ರೇಲ್ ದೇಶದ ಟೆಲ್ ಅವೀವ್ನಲ್ಲಿ 1995ರಲ್ಲಿ ಆ ದೇಶದ ಪ್ರಧಾನಿಯ ಹತ್ಯೆಯಾಗಿದೆ. ಸಾರ್ವಜನಿಕ ಭಾಷಣವನ್ನು ಮಾಡಿ ವೇದಿಕೆಯಿಂದ ನಿರ್ಗಮಿಸುತ್ತಿದ್ದ ಪ್ರಧಾನಿ ಯಿಟ್ಸಾಕ್ ರಾಬಿನ್ ಅವರನ್ನು ಹಂತಕನೊಬ್ಬ ಅವರ ಕಾರಿನ ಬಳಿಯೇ ಗುಂಡಿಕ್ಕಿ ಕೊಂದ. ಇದನ್ನೂ ಭದ್ರತಾ ಪಡೆಗಳು ತಡೆಯಲು ಸಾಧ್ಯವಾಗಲಿಲ್ಲ.

ಮಹಿಳಾ ಅಂಗರಕ್ಷಕರು

ಟ್ರಂಪ್ರ ಅಂಗರಕ್ಷಣಾ ತಂಡದಲ್ಲಿ ಹೆಚ್ಚು ಮಂದಿ ಮಹಿಳಾ ಅಂಗರಕ್ಷಕರು ಇದ್ದ ಕಾರಣವೇ ಈ ಘಟನೆಯನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ಟ್ರಂಪ್ರ ಬೆಂಬಲಿಗರು ದೂರಿದ್ದಾರೆ. ಸಿಕ್ರೇಟ್ ಸರ್ವಿಸ್ನ ನೇಮಕಾತಿಯಲ್ಲಿ ಡಿಈಐ ನೀತಿಯನ್ನು ಪಾಲಿಸಬೇಕೆನ್ನುವ ನಿಯಮ ಅಮೆರಿಕದಲ್ಲಿದೆ. ಡಿ.ಇ.ಐ ಎಂದರೆ ಡೈರ್ವಸಿಟಿ (ವೈವಿಧ್ಯತೆ), ಈಕ್ವಾಲಿಟಿ (ಸಮಾನತೆ) ಮತ್ತು ಇನ್ಕ್ಲೂಷನ್(ಸೇರ್ಪಡುವಿಕೆ) ಎಂಬರ್ಥ. ಈ ನಿಯಮದನ್ವಯ ವಿಐಪಿ ರಕ್ಷಣಾ ಡ್ಯೂಟಿಗೆ ನೇಮಕಾತಿ ಮಾಡುವಾಗ, ಜನಾಂಗ, ಮತ, ಲಿಂಗ, ಮೈಬಣ್ಣ ಮುಂತಾದ ಬೇಧಭಾವ ಮಾಡದೆ ಎಲ್ಲ ವರ್ಗಗಳ ಜನರನ್ನೂ ಸರಿಸಮನಾಗಿ ಪರಿಗಣಸಿ ವೈವಿಧ್ಯತೆಯನ್ನು ತರಬೇಕಾಗಿದೆ. ಇದೇ ಕಾರಣದಿಂದ ಹತ್ಯೆಯ ಯತ್ನವು ನಡೆದ ದಿನ ಟ್ರಂಪ್ರ ಭದ್ರತಾ ತಂಡದಲ್ಲಿ ಹೆಚ್ಚು ಸ್ತಿಯರಿದ್ದರು. ಅಂದು ಟ್ರಂಪ್ರ ಅಂಗರಕ್ಷಣಾ ತಂಡದ ವೈಫಲ್ಯವೇನು ಎಂದರಿಯಲು ಒಂದು ವಿಚಾರಣಾ ಸಮಿತಿಯನ್ನು ನೇಮಿಸಲಾಗಿದೆ. ಆನಂತರವೇ ಹೆಚ್ಚಿನ ಮಾಹಿತಿ ಸಿಗಲಿದೆ.

ರಾಜೀವ್ ಗಾಂಧಿ ಹತ್ಯೆ

ಶ್ರೀಪೆರಂಬದೂರಿನಲ್ಲಿ 1991 ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯಾದಾಗ ಅವರೂ ಟ್ರಂಪ್ರಂತೆಯೇ ಮುಂದೆ ಅಧಿಕಾರ ಗಳಿಸುವಂತಹ ನಾಯಕರಾಗಿದ್ದರು. ಆತ್ಮಾಹತ್ಯಾ ಬಾಂಬರ್ನಿಂದ ಅವರ ಹತ್ಯೆ ನಡೆದಾಗ ಅವರಿಗೆ ಟ್ರಂಪ್ರಂತೆ ಹೆಚ್ಚಿನ ರಕ್ಷಣೆಯೂ ಇರಲಿಲ್ಲ.

ಬ್ರಿಟಿಷ್ ಪ್ರಧಾನ ಮಂತ್ರಿ ಮಾರ್ಗರೆಟ್ ಥ್ಯಾಚರ್ರ ಹತ್ಯೆ ಮಾಡುವುದರಲ್ಲಿ ತಾವು ವಿಫಲರಾದಾಗ ಐರಿಷ್ ಆತಂಕವಾದಿ ದಳವು “ಇಂದು ಅದೃಷ್ಟ ನಮ್ಮ ಜತೆಯಲ್ಲಿರಲಿಲ್ಲ, ಅದರೆ ನೆನಪಿರಲಿ, ನಾವು ನಮ್ಮ ಪ್ರಯತ್ನಗಳಲ್ಲಿ ಒಂದು ಬಾರಿ ಸಫಲರಾದರೆ ಮಾತ್ರ ಸಾಕು, ಆದರೆ ನೀವು (ಅಂಗರಕ್ಷಕ ದಳ) ಪ್ರತಿಯೊಂದು ಬಾರಿಯೂ ಅದೃಷ್ಟಶಾಲಿಗಳಾಗಿರಬೇಕು,” ಎಂಬ ಹೇಳಿಕೆಯನ್ನು ಬಿಡುಗಡೆ ಮಾಡಿತು. ಈ ಹೇಳಿಕೆಯು ನೂರಕ್ಕೆ ನೂರರಷ್ಟು ಸತ್ಯ. ಎಂತಹದೇ ಪ್ರತಿಷ್ಟಿತ ಅಂಗರಕ್ಷಕ ದಳವಾಗಲೀ ಒಮ್ಮೆ ಎಚ್ಚರ ತಪ್ಪಿದರೆ ಅಪಾಯ ತಪ್ಪಿದ್ದಲ್ಲ.


Tags:    

Similar News