ಮುತಾಲಿಕ್​ ಪ್ರತಿಪಾದಿಸುವ 'ತ್ರಿಶೂಲ ದೀಕ್ಷೆ' ಮಹಿಳೆಯರ 'ನೈಜ ಶೋಷಕರಿಗೆ' ಮುಳುವಾಗಬಹುದು!

ಮಹಿಳೆ ಏನು ತಿನ್ನಬೇಕು ಮತ್ತು ಕುಡಿಯಬೇಕು, ಯಾವ ಸಂಗಾತಿಯನ್ನು ಆಯ್ಕೆ ಮಾಡಬೇಕು ಎಂಬುದನ್ನು ನಿಯಂತ್ರಿಸಲು ಬಯಸುವ ಪುರುಷರ ಗುಂಪು, ಅವರನ್ನು ರಕ್ಷಿಸುವ ನೆಪದಲ್ಲಿ 'ತ್ರಿಶೂಲ' ನೀಡಲು ಬಯಸುತ್ತಿರುವುದು ಹಾಸ್ಯಾಸ್ಪದ.;

Update: 2025-04-06 11:24 GMT

ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಅವರ ಅಭಿಲಾಷೆಯಂತೆಯೇ ನಡೆದರೆ, ಕರ್ನಾಟಕದ ಮಹಿಳೆಯರು ಶೀಘ್ರದಲ್ಲೇ ತಮಗೆದುರಾಗುವ ಸಂಭವನೀಯ ಅಪಾಯವನ್ನು ತಡೆಗಟ್ಟಲು ತ್ರಿಶೂಲಗಳನ್ನು ಹಿಡಿದುಕೊಂಡು ಓಡಾಡಲಿದ್ದಾರೆ. ಆದರೆ, ಅಪಾಯಗಳು ಯಾವುದು ಎಂಬುದೇ ಚೋದ್ಯ! ಯಾಕೆಂದರೆ, 'ಲವ್​ ಜಿಹಾದ್' ಅಪಾಯದಿಂದ ತಪ್ಪಿಸಿಕೊಳ್ಳುವುದಕ್ಕೆ​ ಹೆಣ್ಣು ಮಕ್ಕಳಿಗೆ ತ್ರಿಶೂಲ ದೀಕ್ಷೆ ನೀಡುವುದಾಗಿ ಮುತಾಲಿಕ್​ ಕೆಲವು ವಾರಗಳ ಹಿಂದೆ ಪ್ರಕಟಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂಥದ್ದೊಂದು 'ಭಯಂಕರ' ಯೋಜನೆಯನ್ನು ಪ್ರಕಟಿಸಿದ್ದ ಮುತಾಲಿಕ್, ಮಹಿಳೆಯರು ತಮ್ಮನ್ನುತಾವು ಶಸ್ತ್ರಸಜ್ಜಿತಗೊಳಿಸಿಕೊಳ್ಳಲು ಮತ್ತು 'ಲೈಂಗಿಕ ಕಿರುಕುಳ' ನೀಡುವವರ ಎದೆಗೆ ತ್ರಿಶೂಲ ನಾಟಿಸಬೇಕು ಎಂದು ಸಲಹೆ ನೀಡಿದ್ದಾರೆ. ಶ್ರೀರಾಮಸೇನೆ ಅಧ್ಯಕ್ಷರ ಪ್ರಕಾರ, ಕರ್ನಾಟಕ ಪೊಲೀಸರು ಮಹಿಳೆಯರ ರಕ್ಷಣೆ ವಿಚಾರದಲ್ಲಿ ಅದಕ್ಷರು ಹಾಗೂ ಕರ್ನಾಟಕ ಸರ್ಕಾರ ಮಹಿಳೆಯರ ಗೌರವವನ್ನು ಕಾಪಾಡುತ್ತಿಲ್ಲ...

ಅಂದ ಹಾಗೆ ಈ ತ್ರಿಶೂಲವು, ಫೆಮಿನಿಸ್ಟ್​ಗಳು ಬ್ಯಾಗ್​ನಲ್ಲಿ ಇಟ್ಟುಕೊಳ್ಳಿ ಎಂದು ಹೇಳುವ ಪೆಪ್ಪರ್ ಸ್ಟ್ರೆಗೆ ಪರ್ಯಾಯ. ಮುತಾಲಿಕ್, ತ್ರಿಶೂಲವನ್ನು ನಿಮ್ಮ ವ್ಯಾನಿಟಿ ಬ್ಯಾಗ್​ನಲ್ಲಿ ಇಟ್ಟುಕೊಳ್ಳಿ ಹಾಗೂ ಕಿರುಕುಳ ಕೊಟ್ಟವರಿಗೆ ಅಲ್ಲೇ ಚುಚ್ಚಿ ಎಂದಿದ್ದಾರೆ. ಆದರೆ, ಹುಬ್ಬಳ್ಳಿಯ ಮಹಿಳೆಯರು ಮುತಾಲಿಕ್ ಅವರ ಸಲಹೆಯನ್ನು ಏನಾದರೂ ಗಂಭೀರವಾಗಿ ತೆಗೆದುಕೊಂಡರೆ, ಕೌಟುಂಬಿಕ ಕಲಹ ಪ್ರಕರಣದಲ್ಲಿ ಮತ್ತೊಂದು ಗಾಯವನ್ನು ಪೊಲೀಸರು ವರದಿ ಮಾಡಬೇಕಾಗುತ್ತದೆ! ಅದುವೇ ತ್ರಿಶೂಲದಲ್ಲಿ ತಿವಿದ ಗಾಯ. ಅಂದ ಹಾಗೆ ಮುತಾಲಿಕ್ ಅವರು ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ (NFHS) ಐದನೇ ಸುತ್ತಿನ ಅಂಕಿಅಂಶಗಳನ್ನು ಓದಿಕೊಂಡಿಲ್ಲ.

ಕೌಟುಂಬಿಕ ಹಿಂಸೆಯ ತೀವ್ರ ಏರಿಕೆ

2019-20ರ ಅವಧಿಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ 18 ರಿಂದ 49 ವಯಸ್ಸಿನ ಅಂತರದ ಮಹಿಳೆಯರ ಮೇಲಿನ ಕೌಟುಂಬಿಕ ಹಿಂಸೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ. (ಅಸ್ಸಾಂ ಬಿಹಾರದಲ್ಲೂ ಹೆಚ್ಚಾಗಿದೆ) .

‘2015-16ರ ಸಮೀಕ್ಷೆಯಲ್ಲಿ ಶೇಕಡಾ 20.6 ರಷ್ಟಿದ್ದ ದೌರ್ಜನ್ಯ ಐದನೇ ವರದಿಯಲ್ಲಿ ಶೇಕಡಾ 44.4 ಕ್ಕೆ ಏರಿದೆ. ಇಲ್ಲಿ ಹೆಚ್ಚುವರಿಯಾಗಿ ಸೇರ್ಪಡೆಗೊಂಡಿರುವ ದೌರ್ಜನ್ಯದ ಮಾದರಿಯೆಂದರೆ “ಗರ್ಭಾವಸ್ಥೆಯ ಸಮಯದಲ್ಲಿ ಎದುರಿಸುವ ಹಿಂಸೆ”.

ದಕ್ಷಿಣ ಭಾರತದ ಆರ್ಥಿಕ ಶಕ್ತಿಕೇಂದ್ರವಾಗಿರುವ ಕರ್ನಾಟಕವು, ಈ ಕಳಪೆ ದಾಖಲೆಯ ಪಟ್ಟಿಯಲ್ಲಿ, ದಕ್ಷಿಣ ರಾಜ್ಯಗಳ ಪೈಕಿ ಮುಂಚೂಣಿಯಲ್ಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ನಗರಗಳು ಈ ವಿಚಾರದಲ್ಲಿ ಸ್ವಲ್ಪ ಪರ್ವಾಗಿಲ್ಲ ಎನ್ನುವಂತಿದೆ. (ಗ್ರಾಮೀಣ ಪ್ರದೇಶದಲ್ಲೇ ಶೇಕಡಾ 36 ಇದ್ದರೆ, ನಗರದಲ್ಲಿ ಶೇಕಡಾ 28ರಷ್ಟಿದೆ).

ನೈಜ ದಬ್ಬಾಳಿಕೆ ಯಾರಿಂದ?

ಎಪ್ರಿಲ್ 18ರಂದು ಮಹಿಳೆಯರಿಗೆ 'ತ್ರಿಶೂಲ ದೀಕ್ಷೆ' ನೀಡುವುದಾಗಿ ಮುತಾಲಿಕ್ ಪ್ರಕಟಿಸುವಾಗ, ಹಿಂದೂ ಮಹಿಳೆಯರನ್ನು ಕಾಡುವ 'ಲವ್ ಜಿಹಾದಿಗಳು' ಅವರ ದೊಡ್ಡ ಆತಂಕ ಎಂದಿದ್ದರು. ಜಿಹಾದಿಗಳು ಹತ್ತಿರ ಬರದಂತೆ ನೋಡಿಕೊಳ್ಳುವುದಕ್ಕೆ ತ್ರಿಶೂಲ ಇಟ್ಟಿಕೊಳ್ಳಿ ಎಂದಿದ್ದರು. ಆದರೆ, ನಮ್ಮ ಸಮಾಜದ ಆಗುಹೋಗುಗಳಿಗೆ ನಿಜವಾಗಿಯೂ ಕಿವಿಯಾದರೆ, ಮುತಾಲಿಕ್ ಅವರ ಯೋಜನೆ ತಪ್ಪಾಗಿ ಕಾರ್ಯಗತಗೊಳ್ಳಬಹುದು. ಮುತಾಲಿಕ್ ಉಚಿವಾಗಿ ನೀಡುವ ತ್ರಿಶೂಲಗಳನ್ನು ಮಹಿಳೆಯರು ಮನೆಯ ಹೊರಗಡೆ ಹೋಗುವ ಬಳಸುವುದರ ಬದಲಾಗಿ ಮನೆಯ ಒಳಗೇ ಪ್ರಯೋಗಿಸಲು ಆರಂಭಿಸಬಹುದು. ಮನೆಯೊಳಗೆ ಸತತವಾಗಿ ಕಿರುಕುಳ ನೀಡುವ ಗಂಡಸರು ಅದಕ್ಕೆ ಈಡಾಗಬಹುದು.

ಹಿಂದೂ ಮಹಿಳೆಯರನ್ನು ಬೆನ್ನುಹತ್ತಿ ಕಾಡುವ ಮುಸ್ಲಿಂ ಪುರುಷರ ವಿರುದ್ಧ ತ್ರಿಶೂಲವನ್ನು ನಿರ್ಭಯದ ಚಿಹ್ನೆಯಾಗಿ ಬಳಸುವುದು ಫಲಕಾರಿಯಾಗದೇ ಹೋದರೆ, ಹುಬ್ಬಳ್ಳಿಯ ಮಹಿಳೆಯರು ತಮ್ಮ ಮನೆಯೊಳಗೆ ನೈಜ ಕಿರುಕುಳದ ನೀಡುವ ವಿರುದ್ಧವೇ ಬಳಸುವ ಸಾಧ್ಯತೆಗಳಿವೆ.

ಗಂಡಸರು ತಮ್ಮ ಹೆಂಡತಿಯರನ್ನು ಹೇಗೆ ಹಿಂಸಿಸುತ್ತಾರೆ ಎಂಬುದನ್ನು ನಾವು ಆಗಾಗ ಸುದ್ದಿಗಳಲ್ಲಿ ಕೇಳಿರಬಹುದು. ಗಂಡಸರಿಗೆ ಕೋಪ ಬರಲು ದೊಡ್ಡ ಕಾರಣ ಬೇಕಾಗಿಲ್ಲ. ಇತ್ತೀಚೆಗಷ್ಟೆ ಒಬ್ಬ ತನ್ನ ಹೆಂಡತಿಯನ್ನು ಕೊಂದು ಸೂಟ್​​ಕೇಸ್​​ನಲ್ಲಿ ತುಂಬಿಟ್ಟಿದ್ದ. ಅಂದ ಹಾಗೆ ಇಬ್ಬರೂ ಹಿಂದೂ ಧರ್ಮಕ್ಕೆ ಸೇರಿದವರು!

ಊಟಕ್ಕೆ ಮಟನ್ ಖಾದ್ಯಗಳನ್ನು ತಯಾರಿಸದೇ ಮಾಡಿಲ್ಲವೆಂದು ಹೊಡೆಯುವ, ಹೆಣ್ಣಿನ ಸಾಧನೆಯನ್ನು ನೋಡಿ ಅಸೂಯೆಪಡುವ, ಮಕ್ಕಳು ಸರಿಯಾಗಿ ಕಲಿತಿಲ್ಲವೆಂದು, ಗಂಡು ಮಗು ಆಗದಿರುವುದಕ್ಕೆ ಸೇರಿದಂತೆ ನಾನಾ ಕಾರಣಗಳಿಗೆ ಪತ್ನಿಯರನ್ನು ಶಿಕ್ಷಿಸುವ, ನಿಂದಿಸುವ ಗಂಡಸರಿಗೆ ಈ ತ್ರಿಶೂಲ ಮುಳುವಾಗಬಹುದು.

'ಲವ್ ಜಿಹಾದ್’ ಭೀತಿ!

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ಮಾಹಿತಿ ಹಾಗೂ ಪ್ರತಿದಿನ ನಾವು ಕೇಳುವ ಸುದ್ದಿಗಳು ಲವ್ ಜಿಹಾದ್ ಎಂಬುದು 'ಕಲ್ಪಿತ ಭೂತ' ಎಂಬುದನ್ನು ಸಾಕ್ಷೀಕರಿಸುತ್ತದೆ. ಆದರೆ, ಮುತಾಲಿಕ್, ಕರ್ನಾಟಕದ ಎಲ್ಲ ಮಹಿಳೆಯರು ಮುಸ್ಲಿಂ ಪುರುಷರ 'ಲವ್ ಜಿಹಾದ್' ಖೆಡ್ಡಾಗೆ ಬೀಳುತ್ತಿದ್ದು ಅವರೆಲ್ಲರೂ ಅಪಾಯದಲ್ಲಿದ್ದಾರೆ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ.

ಹಾಸನ ಜಿಲ್ಲೆಯ ಮಹಿಳೆಯರ ಮೇಲಾದ ದೌರ್ಜನ್ಯ ಮುತಾಲಿಕ್ ಅವರಿಗೆ ಕಾಳಜಿಯ ವಿಷಯವಲ್ಲ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹೆಣ್ಣು ಮಕ್ಕಳನ್ನು ದುರ್ಬಳಕೆ (ಅತ್ಯಾಚಾರ ಸೇರಿದಂತೆ) ಮಾಡಿರುವುದು ಹಾಗೂ ಆ ಪ್ರಕರಣವನ್ನು ಅವರ ಕುಟುಂಬದ ಪ್ರಭಾವ ಬಳಸಿ ಮುಚ್ಚಿ ಹಾಕಲು ಯತ್ನಿಸಿದ್ದಕ್ಕೆ ಹಲವು ಸಾಕ್ಷಿಗಳಿವೆ. ಆದರೆ ಮುತಾಲಿಕ್‌ ಅವರಿಗೆ ಆ ಬಗ್ಗೆ ಚಿಂತೆ ಇಲ್ಲ. ಅವರ ಆತಂಕ ಮುಸ್ಲಿಂ ಗಂಡಸರ ಕಡೆಗೆ ಇದೆ.

ಮುತಾಲಿಕ್ ಆತಂಕ ಯಾವುದರ ಬಗ್ಗೆ?

ಕರ್ನಾಟಕದಲ್ಲಿ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮಹಿಳೆಯರು ಹಗಲು, ರಾತ್ರಿ ದುಡಿಯುತ್ತಾರೆ. ನಗರಗಳಲ್ಲೂ ಮಹಿಳೆಯರು ಎಲ್ಲೆಡೆ ಶ್ರಮವಹಿಸಿ ದುಡಿಯುತ್ತಾರೆ. ಆದರೂ, ಮುತಾಲಿಕ್ ಮತ್ತು ಅವರ ಸಹವರ್ತಿಗಳ ಕಾಳಜಿ ಮಹಿಳೆಯರ ಸುರಕ್ಷತೆ ಬಗ್ಗೆ ಅಲ್ಲ. ಅವರ ಪ್ರೀತಿಯ ಬಗ್ಗೆ.

ಅವರೆಲ್ಲರಿಗೂ ಪ್ರೀತಿ ಒಂದು ಅಪಾಯಕಾರಿ ಪದ. ಮಹಿಳೆಯರು ತಮಗೆ ಇಷ್ಟವಾದ ಸಂಗಾತಿಯನ್ನು ಆಯ್ಕೆ ಮಾಡುವುದು, ತಿನ್ನುವುದು-ಕುಡಿಯುವುದು, ದಿನ ಅಥವಾ ರಾತ್ರಿ ಹೊರ ಹೋಗುವುದು ಇವರಿಗೆ ನೋಡಲಾಗುವುದಿಲ್ಲ. ಮಹಿಳೆಯರನ್ನು “ರಕ್ಷಿಸೋಣ” ಎಂದು ಕಣ್ಣೀರು ಹಾಕುವ ಈ ಪುರುಷರು, ವಾಸ್ತವದಲ್ಲಿ ಅವರಿಗೆ ಸ್ವತಂತ್ರವಾಗಿ ಬದುಕಲು ಬಿಡಲು ಇಚ್ಛಿಸುತ್ತಿಲ್ಲ. ಮಹಿಳೆಯರು ದುಡಿಯುವುದು, ಹಣ ಸಂಪಾದಿಸುವುದು ಅವರಿಗೆ ಸರಿ ಎನಿಸುತ್ತದೆ. ಆದರೆ ಆ ಹಣವನ್ನು ಎಲ್ಲಿ ಬಳಸುತ್ತಾರೆ ಎಂಬುದರ ಬಗ್ಗೆ ಇವರಿಗೆ ಜೋರು ತಕರಾರು.

2009ರಲ್ಲಿ ಮಂಗಳೂರು ಪಬ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯೇ ಪ್ರಮೋದ್ ಮುತಾಲಿಕ್. ಆ ಸಂದರ್ಭದಲ್ಲಿ ಅಲ್ಲಿದ್ದ ಮಹಿಳೆಯರನ್ನು ಹಿಂಸಿಸಲಾಗಿದೆ. ಏಕೆಂದರೆ ಅವರು ಹಿಂದೂ ಸಂಸ್ಕೃತಿಗೆ ವಿರೋಧವಾಗಿ ನಡೆದುಕೊಂಡಿದ್ದರಂತೆ. ಈ ನೈತಿಕ ಪೊಲೀಸ್​ಗಿರಿಗೆ ಪ್ರತಿಯಾಗಿ ಸೃಷ್ಟಿಯಾಗಿದ್ದೇ ‘ಪಿಂಕ್ ಚಡ್ಡಿ’ ಅಭಿಯಾನ . ಇದು ಮಹಿಳೆಯರ ತೀವ್ರ ಪ್ರತಿಕ್ರಿಯೆಯೂ ಆಗಿತ್ತು.

ಇಂತಹ 'ಮಹಿಳಾ ರಕ್ಷಕರು' ಮುಂದೊಂದು ದಿನ ಮಹಿಳೆಯರಿಂದಲೇ ತ್ರಿಶೂಲದ ತಿವಿತಕ್ಕೆ ಒಳಗಾಗಬಹುದು. ಯಾಕೆಂದರೆ ಮಹಿಳೆಯರು ತಾವು ಯಾರಿಂದ ರಕ್ಷಿಸಿಕೊಳ್ಳಬೇಕು ಎಂದು ಅವರು ಅರಿತುಕೊಂಡರೆ, ತ್ರಿಶೂಲವನ್ನು ಅವರ ವಿರುದ್ಧವೇ ಪ್ರಯೋಗಿಸುವುದರಲ್ಲಿ ಯಾವುದೇ ಸಂಶಯ ಇಲ್ಲ.

(ದ ಫೆಡರಲ್ ಎಲ್ಲಾ ದೃಷ್ಟಿಕೋನಗಳು ಮತ್ತು ಅಭಿಪ್ರಾಯಗಳನ್ನು ಪ್ರಸ್ತುತಪಡಿಸಲು ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಆಲೋಚನೆಗಳು ಅಥವಾ ಅಭಿಪ್ರಾಯಗಳು ಲೇಖಕರದ್ದಾಗಿದ್ದು, ಇದು ದ ಫೆಡರಲ್​ನಲ್ಲಿ ಆಲೋಚನೆಗಳು ಅಲ್ಲ) 

Tags:    

Similar News