ಟರ್ಕಿ ಪಾಕಿಸ್ತಾನ ಪರ; ಹಾಗೆಂದು ಭಾರತದ ವಿರೋಧಿಯೇ?
ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಕಾರಣಕ್ಕೆ ಟರ್ಕಿಯೊಂದಿಗೆ ಸಂಬಂಧ ಕಡಿತ ಮಾಡಿಕೊಳ್ಳುವ ಭಾರತದ ನಿರ್ಧಾರವು, ಪಾಕಿಸ್ತಾನದೊಂದಿಗೆ ತನ್ನನ್ನು ಹೋಲಿಸಿಕೊಳ್ಳುವ ಅಪಾಯ ಸೃಷ್ಟಿಸಿದೆ.;
ಇತ್ತೀಚಿನ ಭಾರತ-ಪಾಕಿಸ್ತಾನ ಮಿಲಿಟರಿ ಸಂಘರ್ಷದ ಸಂದರ್ಭದಲ್ಲಿ, ಚೀನಾ ಮತ್ತು ಅಮೆರಿಕ ತಮ್ಮ ದ್ವಿಮುಖ ನೀತಿಯ ಪಾತ್ರವನ್ನು ನಿರೀಕ್ಷಿತ ರೀತಿಯಲ್ಲಿ ನಿರ್ವಹಿಸಿದವು. ಆದರೆ, ಈ ಪೈಕಿ ''ಜೋಕರ್ ಇನ್ ದಿ ಪ್ಯಾಕ್; (ಇಸ್ಟೀಟ್ ಕಾರ್ಡ್ಗಳಲ್ಲಿ ಅನಿರೀಕ್ಷಿತವಾಗಿ ಬರುವ ಜೋಕರ್) ಆಗಿದ್ದು ಟರ್ಕಿ. ನಾಲ್ಕು ದಿನಗಳ ಸಂಘರ್ಷದ ಸಮಯದಲ್ಲಿ ಟರ್ಕಿಯು ಪಾಕಿಸ್ತಾನಕ್ಕೆ ಸೇನಾ ಬೆಂಬಲ ನೀಡಿದ್ದು, ಭಾರತದಲ್ಲಿ ಒಂದು ವರ್ಗದ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ಮಟ್ಟದಲ್ಲೂ ಅವರ ಅಭಿಪ್ರಾಯ ಪ್ರತಿಧ್ವನಿಸಿದೆ. ಈ ಕೋಪ ಸಹಜವಾದರೂ, ಟರ್ಕಿಯೊಂದಿಗಿನ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಳ್ಳುವ ನಿರ್ಧಾರವು ರಾಷ್ಟ್ರೀಯತೆಯ ಉತ್ಸಾಹದ ಎಲ್ಲೆ ಮೀರುತ್ತವೆ.
ಚೀನಾ ಮತ್ತು ಅಮೆರಿಕವನ್ನು ಏಕೆ ಬಿಟ್ಟು ಬಿಡಬೇಕು?
ಅಮೆರಿಕ ನೇತೃತ್ವದ ಸೈನ್ಯದ ಮೈತ್ರಿಕೂಟ ನ್ಯಾಟೊ ಸದಸ್ಯ ರಾಷ್ಟ್ರವಾಗಿರುವ ಟರ್ಕಿಯು ಪಾಕಿಸ್ತಾನಕ್ಕೆ ಬಹಿರಂಗವಾಗಿ ಬೆಂಬಲ ನೀಡಿದ ಆರೋಪಕ್ಕೆ ಒಳಗಾಗಿದೆ ಎಂದಾದರೆ, ಅದೇ ತರ್ಕವು ಚೀನಾ ಮತ್ತು ಅಮೆರಿಕಕ್ಕೂ ಅನ್ವಯವಾಗುವುದಿಲ್ಲವೇ? ಪ್ರಾಯೋಗಿಕವಾಗಿ ಹೇಳುವುದಾದರೆ, ಚೀನಾವು ಪಾಕಿಸ್ತಾನಕ್ಕೆ ಮೂಲಭೂತ ಬೆಂಬಲ ನೀಡುತ್ತಿದೆ. ಅದೇ ರೀತಿ ದಶಕಗಳಿಂದ ಅಮೆರಿಕದ ಮತ್ತು ಇಸ್ಲಾಮಾಬಾದ್ ನಡುವಿನ ಸಂಬಂಧ ಗಟ್ಟಿಯಾಗಿದೆ ಮತ್ತು ಅತ್ಯಂತ ಕಷ್ಟದ ಸಂದರ್ಭಗಳಲ್ಲಿ ಇನ್ನಷ್ಟು ಹೆಚ್ಚಾಗಿದೆ. ಅಂದ ಹಾಗೆ, ಎಲ್ಲ ರಾಷ್ಟ್ರಗಳು ತಮ್ಮ ವಿದೇಶಾಂಗ ನೀತಿಯಲ್ಲಿ ಆದರ್ಶಗಳ ಹೊಂದಿರುತ್ತವೆ. ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಮತ್ತು ಯಾರಿಂದ ದೂರವಿರಬೇಕು ಎಂದು ನಿರ್ಧರಿಸಿರುತ್ತವೆ. ಆದರೆ ಈ ತತ್ವವು "ರಿಯಲ್‌ಪಾಲಿಟಿಕ್" (ವಾಸ್ತವಿಕ ರಾಜಕೀಯ) ಅನ್ನು ಆಗಾಗ ಮೀರಿಸುತ್ತದೆ. ಇಲ್ಲಿ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಪ್ರಾಯೋಗಿಕ ವಿಧಾನಕ್ಕೆ ಒತ್ತು ನೀಡಲಾಗುತ್ತದೆ.
ಮೇಲ್ನೋಟ ಮತ್ತು ಪ್ರಾಯೋಗಿಕ ನೆಲೆಗಟ್ಟು
ಟರ್ಕಿಯ ವಿಷಯದಲ್ಲಿ, ಸಂಬಂಧವನ್ನು ಕಡಿದುಕೊಳ್ಳುವ ಭಾರತದ ತೀವ್ರ ಕ್ರಮವು ದೊಡ್ಡ ವ್ಯತ್ಯಾಸವನ್ನುಂಟುಮಾಡದು. ಏಕೆಂದರೆ ನವದೆಹಲಿ ಮತ್ತು ಅಂಕಾರಾ ನಡುವಿನ ವ್ಯಾಪಾರ ಸಂಬಂಧಗಳು ಸೀಮಿತವಾಗಿವೆ ಮತ್ತು ಒಟ್ಟಾರೆ ಜಾಗತಿಕ ರಾಜಕೀಯದಲ್ಲಿ ಎರಡೂ ದೇಶಗಳಿಗೆ ಪ್ರಾಮುಖ್ಯತೆ ಇಲ್ಲ. ಆದರೆ, ಟರ್ಕಿಯು ಪಾಕಿಸ್ತಾನಕ್ಕೆ ಬೆಂಬಲ ನೀಡಿರುವುದನ್ನು ಆಧರಿಸಿ ಭಾರತವು ಗಂಭೀರ ನಿರ್ಧಾರ ತೆಗೆದುಕೊಂಡರೆ ಸಮಸ್ಯೆ ಉದ್ಭವಿಸುತ್ತದೆ. ಭಾರತವು ತನ್ನನ್ನು ಪಾಕಿಸ್ತಾನದಿಂದ ಪ್ರತ್ಯೇಕ ಎಂದು (ಡಿ-ಹೈಫನೇಷನ್) ತೋರಿಸಿಕೊಳ್ಳುವ ಪ್ರಯತ್ನವನ್ನು ದೀರ್ಘಕಾಲದಿಂದ ಮಾಡುತ್ತಲೇ ಬಂದಿದೆ. ಅಂದರೆ ಅವರೇನಾದರೂ ಮಾಡಿಕೊಳ್ಳಲಿ, ನಮಗೂ ಅದಕ್ಕೂ ಸಂಬಂಧವಿಲ್ಲ ಎನ್ನುತ್ತಾ ಬರುತ್ತಿದೆ. ಈಗ ಟರ್ಕಿಯೊಂದಿಗಿನ ಸಂಬಂಧ ನಿಲ್ಲಿಸುವಾಗ ನವದೆಹಲಿಯು ಪಾಕಿಸ್ತಾನ ಜತೆ ಮತ್ತೆ ಸಂಬಂಧ ಕಲ್ಪಿಸಿಕೊಂಡಂತೆ ಆಗುವ (ರಿ-ಹೈಫನೇಷನ್) ಅಪಾಯ ಎದುರಾಗಿದೆ.
ಅಂಕಾರಾದೊಂದಿಗಿನ ಸಂಬಂಧ ಕಡಿದುಕೊಳ್ಳುವುದು ಜಿರಲೆಯನ್ನು ಸುತ್ತಿಗೆಯಿಂದ ಹೊಡೆದು ಕೊಂದಂತೆ ಆಗಿದೆ. ಆದರೆ, ಪಹಲ್ಗಾಮ್ ಭಯೋತ್ಪಾದನಾ ಕೃತ್ಯದ ನಂತರ ಕಟ್ಟುನಿಟ್ಟು ಮತ್ತು ಶೂನ್ಯ ಸಹನೆಯ ರಾಷ್ಟ್ರೀಯತೆಯ ಮುಖವನ್ನು ತೋರಿಸಲು ಪ್ರಯತ್ನಿಸುತ್ತಿರುವ ಭಾರತಕ್ಕೆ, ಈ ತಂತ್ರ ಮೇಲ್ನೋಟಕ್ಕೆ ಅತ್ಯುತ್ತಮ ಎಂದು ಕಾಣಿಸತೊಡಗಿದೆ.
ಟರ್ಕಿ ಮೇಲೆ ಭಾರತದ ಕೋಪದ ಪರಿಣಾಮ
ಟರ್ಕಿ ಮತ್ತು ಪಾಕಿಸ್ತಾನ ನಡುವಣ ಉತ್ತಮ ಸಂಬಂಧದ ಬಗ್ಗೆ ಭಾರತದ ಅಧಿಕೃತ ಅಸಮಾಧಾನ ವ್ಯಕ್ತಗೊಂಡಿದ್ದು, ಹಲವು ವಿಶ್ವವಿದ್ಯಾಲಯಗಳು ತಮ್ಮ ಟರ್ಕಿಶ್ ವಿವಿಗಳ ಜತೆಗಿನ ಸಂಬಂಧಕ್ಕೆ ಪೂರ್ಣ ವಿರಾಮ ಹಾಕಿದೆ. ಭಾರತದಲ್ಲಿ ವಿಮಾನ ನಿಲ್ದಾಣ ಗ್ರೌಂಡ್ ಹ್ಯಾಂಡ್ಲಿಂಗ್ ಸೇವೆ ನೀಡುತ್ತಿದ್ದ ಟರ್ಕಿಯ ಸೆಲೆಬಿ ಏವಿಯೇಷನ್‌ನ ಭದ್ರತಾ ಅನುಮತಿ ಹಿಂಪಡೆಯಲಾಗಿದೆ. ಇಂಡಿಗೋ ಏರ್‌ಲೈನ್ಸ್ ತನ್ನ ಟರ್ಕಿಶ್ ಏರ್‌ಲೈನ್ಸ್‌ನೊಂದಿಗಿನ ಕೋಡ್‌ಶೇರ್ ಒಪ್ಪಂದ ನಿಲ್ಲಿಸಲು ಒತ್ತಡಕ್ಕೆ ಒಳಗಾಗಿದೆ ಎಂದು ವರದಿಯಾಗಿದೆ.
ಭಾರತೀಯರಿಗೆ ಇನ್ನು ಟರ್ಕಿಯ ಮಾರ್ಬಲ್ ಮತ್ತು ಸೇಬುಗಳು ಸಿಗುವುದಿಲ್ಲ. ಇವು ಒಟ್ಟು 2.84 ಬಿಲಿಯನ್ ಡಾಲರ್ ಮೊತ್ತದ ವ್ಯಾಪಾರ ಒಪ್ಪಂದದಲ್ಲಿ ಪ್ರಮುಖ ಆಮದು ವಸ್ತುಗಳು. ಟರ್ಕಿಗೆ ಪ್ರವಾಸ ಮಾಡಲು ಯೋಜಿಸಿದ್ದ ಸುಮಾರು ಶೇಕಡಾ 60ರಷ್ಟು ನಿರ್ಧಾದಿಂದ ಹಿಂದೆ ಸರಿದಿದ್ದಾರೆ ಎಂಬುದಾಗಿಯೂ ವರದಿಯಾಗಿದೆ.
ವಿರೋಧಭಾಸದ ಸಂಬಂಧಗಳು
ಭಾರತ ಸೇರಿದಂತೆ ಎಲ್ಲ ರಾಷ್ಟ್ರಗಳು ಒಂದಕ್ಕೊಂದು ವೈರುಧ್ಯದ ಅಂತಾರಾಷ್ಟ್ರೀಯ ಸಂಬಂಧಗಳನ್ನು ಹೊಂದಿರುವುದು ಸಾಮಾನ್ಯ. ಉದಾಹರಣೆಗೆ, ಉಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತದ ನಿಲುವು ಗಮನಿಸಿ. ನರೇಂದ್ರ ಮೋದಿ ಸರ್ಕಾರವು ಎರಡೂ ದೇಶಗಳೊಂದಿಗೆ ಸಂಪರ್ಕದಲ್ಲಿದೆ. ಆದಾಗ್ಯೂ ರಷ್ಯಾದಿಂದ ತೈಲ ಖರೀದಿಸುವ ಮೂಲಕ ರಷ್ಯಾದೊಂದಿಗಿನ ಸಂಬಂಧ ಮತ್ತಷ್ಟು ಬಲಪಡಿಸಿದೆ. ಇದು ಉಕ್ರೇನ್ ಕೋಪಕ್ಕೆ ಕಾರಣವಾಗಿದೆ. ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ ಭಾರತದ ನಿಲುವಿನ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಭಾರತದೊಂದಿಗಿನ ಸಂಬಂಧ ಕಡಿದುಕೊಳ್ಳುವಂತೆ ಇಲ್ಲಿಯವರೆಗೆ ಎಲ್ಲಿಯೂ ಹೇಳಿಲ್ಲ. ಅಂತೆಯೇ, ಇಸ್ರೇಲ್-ಪ್ಯಾಲೆಸ್ತೀನ್ ವಿಷಯದಲ್ಲಿ ಕಳೆದ ಮೂರು ದಶಕಗಳಲ್ಲೇ ಭಾರತವು ಇಸ್ರೇಲ್‌ಗೆ ಇನ್ನಷ್ಟು ಹತ್ತಿರವಾಗಿದೆ. ಅವೀವ್‌ನೊಂದಿಗೆ ಬಲವಾದ ಸಂಬಂಧ ಹುಟ್ಟಿಕೊಂಡಿದೆ. 2024ರ ಮೊದಲಾರ್ಧದಲ್ಲಿ ಭಾರತವು ಇಸ್ರೇಲ್‌ನಿಂದ 2.34 ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳೇತರ ಸರಕುಗಳನ್ನು ಆಮದು ಮಾಡಿಕೊಂಡಿದ್ದು. ಮುಂದಿನ ದಶಕದಲ್ಲಿ ಇದನ್ನು 10 ಪಟ್ಟು ಹೆಚ್ಚಿಸುವ ಯೋಜನೆ ಇದೆ.
ಇಸ್ರೇಲ್‌ನ ಶಸ್ತ್ರಾಸ್ತ್ರಗಳ ರಫ್ತಿನಲ್ಲಿ ಮೂರನೇ ಅತಿದೊಡ್ಡ ಆಮದುದಾರ ದೇಶ ಭಾರತ. 2020-2024ರ ಅವಧಿಯಲ್ಲಿ ಇಸ್ರೇಲ್‌ನ ಒಟ್ಟು ರಫ್ತಿನ ಶೇಕಡಾ 34 ಭಾರತಕ್ಕೆ ಬಂದಿದೆ. ಇವುಗಳಲ್ಲಿ ಕೆಲವನ್ನು ಇತ್ತೀಚಿನ ಪಾಕಿಸ್ತಾನದೊಂದಿಗಿನ ಸಂಘರ್ಷದಲ್ಲಿ ಬಳಸಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಗಾಜಾದ ಮೇಲಿನ ಚಾಲ್ತಿಯಲ್ಲಿರುವ ದಾಳಿಯ ಸಮಯದಲ್ಲಿ ಭಾರತವು ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಿದೆ ಎಂದು ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ.
ಸಂಘರ್ಷದ ಸಂಬಂಧಗಳು
ಕೆಲವು ಅರಬ್ ಜಗತ್ತಿನ ರಾಷ್ಟ್ರಗಳು ಮತ್ತು ಇತರ ಮುಸ್ಲಿಂ ದೇಶಗಳು ಇಸ್ರೇಲ್ ಬಗ್ಗೆ ಮೃದು ಧೋರಣೆ ತೋರಿಸುತ್ತಿರುವ ಹೊರತಾಗಿಯೂ ಗಣನೀಯ ದ್ವೇಷ ಇಟ್ಟುಕೊಂಡಿದೆ. ಹಾಗೆಂದು ಇಸ್ರೇಲ್ ಜತೆಗಿನ ಗೆಳೆತನಕ್ಕಾಗಿ ಭಾರತದ ಬಗ್ಗೆ ಬಹಿರಂಗ ಆಕ್ರೋಶ ವ್ಯಕ್ತಪಡಿಸಿಲ್ಲ. ವ್ಯತಿರಿಕ್ತವಾಗಿ, ಸೌದಿ ಅರೇಬಿಯಾ ಮತ್ತು ಯುಎಇಯಂತಹ ದೇಶಗಳೊಂದಿಗಿನ ಭಾರತದ ಸಂಬಂಧ ವೃದ್ಧಿಯಾಗುತ್ತಿದೆ. ಇತ್ತೀಚಿನ ಸಂಘರ್ಷದ ಸಮಯದಲ್ಲಿ ಮಧ್ಯಪ್ರಾಚ್ಯ ಇಸ್ಲಾಮಿಕ್ ದೇಶಗಳು ತನ್ನ ಸಾಂಪ್ರದಾಯಿಕ ಮಿತ್ರ ಪಾಕಿಸ್ತಾನದಿಂದ ದೂರವುಳಿದಿದ್ದವು. ಇದು ಭಾರತಕ್ಕೇ ಸಂತಸದ ವಿಷಯ. ಅಂದರೆ, ಭಾರತದ ನೇತಾರರಿಗೆ, ಅರಬರೊಂದಿಗೆ ಮಧ್ಯಾಹ್ನದ ಊಟ ಮಾಡಲು ಮತ್ತು ಇಸ್ರೇಲ್‌ನೊಂದಿಗೆ ರಾತ್ರಿಯ ಭೋಜನವನ್ನು ಮಾಡಲು ಸಾಧ್ಯವಾಗಿದೆ.
ದಶಕಗಳಿಂದ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿರುವ ಚೀನಾವು ಭಾರತದೊಂದಿಗೆ ಸಹ ಗಾಢ ವ್ಯಾಪಾರ ಸಂಬಂಧ ಹೊಂದಿದೆ. ಇತ್ತೀಚಿನ ಸಂಘರ್ಷದ ಸಂದರ್ಭವು ಶಿ ಜಿನ್‌ಪಿಂಗ್ ಸರ್ಕಾರವನ್ನು ಸಂದಿಗ್ಧತೆಗೆ ದೂಡಿತ್ತು. ಒಂದೆಡೆ ಇಸ್ಲಾಮಾಬಾದ್‌ಗೆ ಬೆಂಬಲ ನೀಡಬೇಕಾದ ಅನಿವಾರ್ಯತೆ ಮತ್ತೊಂದೆಡೆ ನವದೆಹಲಿಯನ್ನು ವಿರೋಧಿಸದಿರುವ ಸವಾಲು. ಭಾರತಕ್ಕೆ ಚೀನಾವು ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದ್ದು, ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವು 131.84 ಬಿಲಿಯನ್ ಡಾಲರ್ ಮೊತ್ತದ್ದು.
ವಿದೇಶಿ ನೀತಿಯ ಸಂಕೀರ್ಣ ಆಟ
ಸಂಕ್ಷಿಪ್ತವಾಗಿ ಹೇಳುವುದಾದರೆ, ವಿದೇಶಿ ನೀತಿಯು ಶೂನ್ಯ ಸಂವೇದನೆಯ ಕ್ರಿಯೆಯಾಗಿರುವುದಿಲ್ಲ. ಒಂದು ಕಡೆ ಸಂಘರ್ಷ ಮತ್ತೊಂದು ಕಡೆ ವ್ಯಾಪಾರ ಸಂಬಂಧವನ್ನು ಮುಂದುವರಿಸುತ್ತದೆ. ಪಾಕಿಸ್ತಾನ ಮತ್ತು ಭಾರತದೊಂದಿಗಿನ ಟರ್ಕಿಯ ಸಂಬಂಧದ ಹಾಗೆ. ಹಿಂದೆ ರಾಷ್ಟ್ರಗಳು ಪರಸ್ಪರ ಪ್ರತ್ಯೇಕವಾಗಿ ನಿಂತು ಸಂಬಂಧ ಕಡಿದುಕೊಳ್ಳುವುದು ಸುಲಭವಿತ್ತು. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಇದನ್ನು ಮಾಡಬಹುದಾದರೂ ಅಷ್ಟೇನೂ ಪರಿಣಾಮ ಬೀರುವುದಿಲ್ಲ. ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಅಮೆರಿಕಾವು ಚೀನಾದ ವಿರುದ್ಧ ಪ್ರತೀಕಾರದ ಸುಂಕ ಘೋಷಿಸಿತು. ಬೀಜಿಂಗ್ ಅದಕ್ಕೆ ಪ್ರತೀಕಾರವಾಗಿ ಸುಂಕವನ್ನು ಹೆಚ್ಚಿಸಿದಾಗ, ಟ್ರಂಪ್ ತಮ್ಮ ದೊಡ್ಡಣ್ಣನ ಸ್ಥಾನ ಮರೆತು ಸುಂಕವನ್ನು ವಾಪಸ್ ಪಡೆಯಲು ಒಪ್ಪಿಕೊಂಡರು.
ವಿಶೇಷ ಎಂದರೆ, 1949ರಿಂದ ಟರ್ಕಿಯು, ಇಸ್ರೇಲ್‌ನೊಂದಿಗೆ ಸೌಹಾರ್ದ ಸಂಬಂಧ ಹೊಂದಿದ್ದ ಏಕೈಕ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾಗಿತ್ತು. ಅರಬ್ ಮತ್ತು ಮುಸ್ಲಿಂ ಜಗತ್ತು ಇಸ್ರೇಲ್‌ಗೆ ವಿರೋಧವಾಗಿದ್ದಾಗ, ಟರ್ಕಿಯು ಟೆಲ್ ಅವೀವ್ ಜತೆ ವ್ಯಾಪಾರ ಮುಂದುವರಿಸಿತ್ತು. ಮಧ್ಯಪ್ರಾಚ್ಯದ ಅರಬ್ ರಾಷ್ಟ್ರಗಳು ಟರ್ಕಿಯ ಮೇಲೆ ನಿಜವಾಗಿಯೂ ಕೋಪಗೊಂಡಿದ್ದವು. ಆದರೆ ಯಾರೂ ಸಂಬಂಧವನ್ನು ಕಡಿದುಕೊಳ್ಳಲಿಲ್ಲ. ಟರ್ಕಿ-ಇಸ್ರೇಲ್ ಸಂಬಂಧದಲ್ಲಿ ಹಲವು ಬಾರಿ ಏರಿಳಿತಗಳಿದ್ದರೂ ಅದನ್ನು ಸತತವಾಗಿ ಮುಂದುವರಿಸಿದ್ದರು. 2023ರ ನವೆಂಬರ್‌ವರೆಗೆ ಅಂದರೆ, ಇಸ್ರೇಲ್ ಗಾಜಾದ ಮೇಲೆ ದಾಳಿ ಆರಂಭಿಸಿದ ಒಂದು ತಿಂಗಳ ನಂತರ, ಟರ್ಕಿಯ ಎರ್ಡೊಗನ್ ಸರ್ಕಾರವು ಟೆಲ್ ಅವೀವ್‌ನೊಂದಿಗಿನ ಸಂಬಂಧ ನಿಲ್ಲಿಸಿತು.
ಎರ್ಡೊಗನ್ ಆಡಳಿತದಲ್ಲಿ ಟರ್ಕಿ
ಪ್ರಥಮ ವಿಶ್ವಯುದ್ಧದ ನಂತರ ಮತ್ತು ಒಟ್ಟೊಮನ್ ಸಾಮ್ರಾಜ್ಯದ ಪತನದ ಬಳಿಕ, ಕೆಮಾಲ್ ಅಟಾಟರ್ಕ್ ಆಡಳಿತದಲ್ಲಿ ಟರ್ಕಿಯು ತನ್ನ ಇಸ್ಲಾಮಿಕ್ ಪರಂಪರೆಯಿಂದ ದೂರವಾಗಿ ಕಟ್ಟುನಿಟ್ಟಾದ ಜಾತ್ಯತೀತ ರಾಷ್ಟ್ರವಾಗಿ ಪರಿವರ್ತನೆಗೊಂಡಿತ್ತು. ಇದು ಪಾಶ್ಚಿಮಾತ್ಯ ಶೈಲಿಯಲ್ಲಿ ರೂಪುಗೊಂಡಿತ್ತು. ಇದು 2002ರಲ್ಲಿ ಇಸ್ಲಾಂ ಪ್ರೇರಿತ ಜಸ್ಟಿಸ್ ಆ್ಯಂಡ್ ಡೆವಲಪ್‌ಮೆಂಟ್ ಪಾರ್ಟಿ (AKP) ಅಧಿಕಾರಕ್ಕೆ ಬರುವವರೆಗೆ ಮುಂದುವರಿಯಿತು. ಬಳಿಕ ರೆಸೆಪ್ ತಯ್ಯಿಪ್ ಎರ್ಡೊಗನ್ ನೇತೃತ್ವದಲ್ಲಿ ಟರ್ಕಿಯು ತನ್ನ ಕಟ್ಟುನಿಟ್ಟಾದ ಜಾತ್ಯತೀತ ನೀತಿಯಿಂದ ದೂರವಾಗಿ ಇಸ್ಲಾಂ ಪರತೆಗೆ ಒಲವು ತೋರಿತು. "ಇಸ್ಲಾಮೊ-ರಾಷ್ಟ್ರೀಯ" ಗುಂಪು ಎಂದು ವಿವರಿಸಲಾದ ಎಕೆಪಿ ಎರ್ಡೊಗನ್ ನೇತೃತ್ವದಲ್ಲಿ ತನ್ನ ಜಾಗತಿಕ ಸಂಬಂಧಗಳನ್ನು ಧಾರ್ಮಿಕ ಸಿದ್ಧಾಂತದ ಆಧಾರದ ಮೇಲೆ ಪುನರ್ರಚಿಸಿದೆ.
ಟರ್ಕಿಯ ಆಡಳಿತದ ಬದಲಾವಣೆಯ ಪರಿಣಾಮವಾಗಿ ಅದು ಪಾಕಿಸ್ತಾನಕ್ಕೆ ಹತ್ತಿರವಾಯಿತು, ಇದು ಒಂದು ಇಸ್ಲಾಮಿಕ್ ಗಣರಾಜ್ಯವಾಯಿತು. ಎರ್ಡೊಗನ್ ಅವರು ಕಾಶ್ಮೀರ ವಿಷಯದಲ್ಲಿ ಇಸ್ಲಾಮಾಬಾದ್‌ಗೆ ಬಹಿರಂಗವಾಗಿ ಬೆಂಬಲ ನೀಡಿತು. ಆಸಕ್ತಿಕರವಾಗಿ, 2014ರಲ್ಲಿ ಎರ್ಡೊಗನ್ ಟರ್ಕಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸಮಯದಲ್ಲೇ ಭಾರತದಲ್ಲಿ ಹಿಂದುತ್ವ-ಪ್ರೇರಿತ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿಯಿತು. ಇದು ಒಂದು ರೀತಿಯ ಹೋಲಿಕೆ. ವಿವರಗಳ ಪ್ರಕಾರ, ಟರ್ಕಿಯ ಗಮನವು ಪಾಕಿಸ್ತಾನ ಕೇಂದ್ರಿತವಾಗಿಲ್ಲ. ಬದಲಿಗೆ ಎರ್ಡೊಗನ್ ಅವರ ಮುಸ್ಲಿಂ ಜಗತ್ತಿನ ನಾಯಕತ್ವದ ಮಹತ್ವಾಕಾಂಕ್ಷೆಯ ಭಾಗ. ಒಂದು ರೀತಿಯಲ್ಲಿ ಒಟ್ಟೊಮನ್ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಅದರ ಹಿಂದಿನ ದಿನಗಳ ಮರುಕಳಿಕೆ. ಇದರ ಒಂದು ಅನಪೇಕ್ಷಿತ ಆದರೆ ತಾರ್ಕಿಕ ಪರಿಣಾಮವೆಂದರೆ ಭಾರತ-ಟರ್ಕಿ ಸಂಬಂಧದಲ್ಲಿ ಕುಸಿತ.