ದಲಿತರ ಕಾಲೋನಿಗಳಲ್ಲಿ ವೆಂಕಟೇಶ್ವರ ದೇಗುಲ: ವಿವಾದದ ಸುಳಿಯಲ್ಲಿ ಟಿಟಿಡಿಯ 'ದಲಿತರ ಓಲೈಕೆ' ಯೋಜನೆ
ಟಿಟಿಡಿ ಮಂಡಳಿಯ ಅಧ್ಯಕ್ಷ ಬಿ.ಆರ್.ನಾಯ್ಡು ಅವರು "ಧಾರ್ಮಿಕ ಮತಾಂತರಗಳನ್ನು ತಡೆಯಲು" ದಲಿತ ಕಾಲೋನಿಗಳಲ್ಲಿ ದೇವಾಲಯಗಳನ್ನು ನಿರ್ಮಿಸುವುದಾಗಿ ಹೇಳಿದ್ದರು. ಶ್ರೀವಾಣಿ ಟ್ರಸ್ಟ್‌ನ ಆರ್ಥಿಕ ನೆರವಿನೊಂದಿಗೆ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಆರು ದೇವಾಲಯಗಳನ್ನು ನಿರ್ಮಿಸಲಾಗುವುದು ಎಂದಿದ್ದಾರೆ.
ತಿರುಪತಿ
ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮಂಡಳಿಯು ಈ ತಿಂಗಳ ಆರಂಭದಲ್ಲಿ, ದೇಶಾದ್ಯಂತ ದಲಿತ ಕಾಲೋನಿಗಳಲ್ಲಿ 1,000 ವೆಂಕಟೇಶ್ವರ ದೇವಾಲಯಗಳನ್ನು ನಿರ್ಮಿಸುವುದಾಗಿ ಘೋಷಿಸಿದೆ. ದಲಿತ ಸಮುದಾಯಗಳಲ್ಲಿ ಹಿಂದೂ ನಂಬಿಕೆಯನ್ನು ಬಲಪಡಿಸುವುದು ಮತ್ತು ಧಾರ್ಮಿಕ ಮತಾಂತರಗಳನ್ನು ತಡೆಯುವುದು ಈ ಕಾರ್ಯಕ್ರಮದ ಪ್ರಮುಖ ಗುರಿ ಎಂದು ಟಿಟಿಡಿ ಹೇಳಿಕೊಂಡಿದೆ. ಆದರೆ, ಈ ಘೋಷಣೆಯು 'ಧಾರ್ಮಿಕ ಶೋಷಣೆ', 'ಮತಬ್ಯಾಂಕ್ ರಾಜಕಾರಣ' ಮತ್ತು ಟಿಟಿಡಿಯೊಳಗಿನ ಜಾತಿ ತಾರತಮ್ಯದಂತಹ ಗಂಭೀರ ಚರ್ಚೆಗಳಿಗೆ ನಾಂದಿ ಹಾಡಿದೆ.
ಇತ್ತೀಚೆಗೆ ನಡೆದ ಟಿಟಿಡಿ ಮಂಡಳಿ ಸಭೆಯಲ್ಲಿ, ದಲಿತರು ವಾಸಿಸುವ ಗ್ರಾಮಗಳಲ್ಲಿ 1,000 ದೇವಾಲಯಗಳನ್ನು ನಿರ್ಮಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ. ಈ ವೇಳೆ ಮಾತನಾಡಿದ ಮಂಡಳಿಯ ಅಧ್ಯಕ್ಷ ಬಿ.ಆರ್. ನಾಯ್ಡು, "ಧಾರ್ಮಿಕ ಮತಾಂತರಗಳನ್ನು ತಡೆಯಲು ಈ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಗಿದ್ದು, ಶ್ರೀವಾಣಿ ಟ್ರಸ್ಟ್‌ನ ನೆರವಿನೊಂದಿಗೆ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ 6 ದೇವಾಲಯಗಳನ್ನು ನಿರ್ಮಿಸಲಾಗುವುದು," ಎಂದಿದ್ದಾರೆ.
ವಿಮರ್ಶೆಗಳ ಸುರಿಮಳೆ
ಟಿಟಿಡಿಯ ಈ ನಡೆ ಕೇವಲ 'ಹಿಂದೂ ಧರ್ಮ ಪ್ರಚಾರ'ದ ಒಂದು ರೂಪವಾಗಿದ್ದು, ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯದಂತಹ ದಲಿತ ಸಮುದಾಯದ ಮೂಲಭೂತ ಅವಶ್ಯಕತೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರವಾಗಿದೆ ಎಂದು ವಿಮರ್ಶಕರು ಟೀಕಿಸುತ್ತಿದ್ದಾರೆ. "ಉನ್ನತ ನಾಯಕತ್ವದ ಸ್ಥಾನಗಳಿಗೆ ನೇಮಕಾತಿ ಮಾಡುವಾಗ ದಲಿತರನ್ನು ಪರಿಗಣಿಸದ ಟಿಟಿಡಿ, ದೇವಾಲಯ ನಿರ್ಮಾಣ ವಿಚಾರದಲ್ಲಿ ಏಕೆ ಇಷ್ಟು ಕಾಳಜಿ ವಹಿಸುತ್ತಿದೆ? ಇಂದಿಗೂ ಟಿಟಿಡಿ ಮಂಡಳಿಯ ಉನ್ನತ ಸ್ಥಾನಗಳಲ್ಲಿ ದಲಿತರು ಏಕೆ ನೇಮಕವಾಗಿಲ್ಲ?" ಎಂದು ಅವರು ಪ್ರಶ್ನಿಸುತ್ತಿದ್ದಾರೆ.
'ದಲಿತ ಗೋವಿಂದಂ'ನಿಂದ ಇಂದಿನವರೆಗೆ
ರಾಜಕೀಯ ವಿಶ್ಲೇಷಕರ ಪ್ರಕಾರ, 2004ರಲ್ಲಿ ವೈ.ಎಸ್. ರಾಜಶೇಖರ ರೆಡ್ಡಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಟಿಟಿಡಿ ಮೊದಲು "ದಲಿತರ ಪರ ತಿರುವು" ಪಡೆದುಕೊಂಡಿತು. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಸಿಎಂ ರೆಡ್ಡಿ, ಬಾಲಾಜಿಗೆ ರೇಷ್ಮೆ ವಸ್ತ್ರಗಳನ್ನು ಅರ್ಪಿಸಿದಾಗ ತೀವ್ರ ಟೀಕೆಗೆ ಗುರಿಯಾಗಿದ್ದರು. ಈ ವಿವಾದದ ನಂತರ, ಅಂದಿನ ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಅವರು 'ದಲಿತ ಗೋವಿಂದಂ' ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಈ ಕಾರ್ಯಕ್ರಮದಡಿ, ಟಿಟಿಡಿಯು ದಲಿತರ ಕಾಲೋನಿಗಳಲ್ಲಿ ಬಾಲಾಜಿಯ ಮೆರವಣಿಗೆ ನಡೆಸಿ, ಪ್ರಸಾದ ವಿತರಿಸಲು ಆರಂಭಿಸಿತ್ತು.
2014ರಲ್ಲಿ ಆಂಧ್ರಪ್ರದೇಶ ವಿಭಜನೆಯಾದ ನಂತರ ಈ ಕಾರ್ಯಕ್ರಮ ಸ್ಥಗಿತಗೊಂಡಿತ್ತು. 2019ರಲ್ಲಿ ಜಗನ್ ಮೋಹನ್ ರೆಡ್ಡಿ ಅಧಿಕಾರಕ್ಕೆ ಬಂದಾಗ, ಕರುಣಾಕರ್ ರೆಡ್ಡಿ ಅವರೇ ಮತ್ತೆ ಟಿಟಿಡಿ ಅಧ್ಯಕ್ಷರಾದರು ಮತ್ತು ದೇಶಾದ್ಯಂತ ದೇವಸ್ಥಾನಗಳನ್ನು ಸ್ಥಾಪಿಸುವ ಯೋಜನೆಗೆ ಮರುಚಾಲನೆ ನೀಡಿದ್ದರು. ಈ ಕಾರ್ಯಕ್ರಮಕ್ಕಾಗಿ ಭಕ್ತರಿಂದ ದೇಣಿಗೆ ಸಂಗ್ರಹಿಸಲು ಶ್ರೀವಾಣಿ ಟ್ರಸ್ಟ್ ಅನ್ನು ಪ್ರಾರಂಭಿಸಲಾಗಿತ್ತು.
ವಿವಾದಗಳ ಮುಂದುವರಿಕೆ, ಶ್ರೀವಾಣಿ ಟ್ರಸ್ಟ್‌ನ ಪಾತ್ರ
ಕಳೆದ ವರ್ಷ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿ ಮರಳಿದ ನಂತರ, ಲಡ್ಡುವಿನ ಪ್ರಾಣಿಗಳ ಕೊಬ್ಬು ಹಾಗೂ ವೈಕುಂಠ ಏಕಾದಶಿ ದಿನಗಳಲ್ಲಿ ನಡೆದ ಕಾಲ್ತುಳಿತದಂತಹ ಘಟನೆಗಳಿಂದ ಟಿಟಿಡಿ ವಿವಾದಕ್ಕೆ ಸಿಲುಕಿತ್ತು. ಈ ನಕಾರಾತ್ಮಕ ಪ್ರಚಾರದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು 'ದಲಿತ ಸಂಪರ್ಕ' ಕಾರ್ಯಕ್ರಮವನ್ನು ಒಂದು ಕಾರ್ಯತಂತ್ರವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ರಾಜಕೀಯ ಪರಿಣಿತರು ವಿಶ್ಲೇಷಿಸುತ್ತಿದ್ದಾರೆ.
ಶ್ರೀವಾಣಿ ಟ್ರಸ್ಟ್ ಈ ಯೋಜನೆಯ ಕೇಂದ್ರಬಿಂದುವಾಗಿದ್ದು, ದೇವಾಲಯ ನಿರ್ಮಾಣಕ್ಕೆ ಹಣಕಾಸು ಮತ್ತು ಆಡಳಿತದ ಜವಾಬ್ದಾರಿ ಹೊತ್ತಿದೆ. 3,615 ದೇವಾಲಯಗಳನ್ನು ನಿರ್ಮಿಸುವ ಗುರಿ ಹೊಂದಿದ್ದ ಈ ಟ್ರಸ್ಟ್, ಈವರೆಗೆ ಕೇವಲ 722 ದೇವಾಲಯಗಳನ್ನು ಮಾತ್ರ ನಿರ್ಮಿಸಿದೆ. ಈ ಟ್ರಸ್ಟ್‌ಗೆ ಭಕ್ತರು ಖರೀದಿಸುವ ದರ್ಶನ ಟಿಕೆಟ್ ದರದ ಒಂದು ಭಾಗವನ್ನು ನೀಡಲಾಗುತ್ತದೆ. ದಲಿತ, ಬುಡಕಟ್ಟು ಮತ್ತು ಮೀನುಗಾರರ ವಸತಿ ಪ್ರದೇಶಗಳಲ್ಲಿ ದೇವಸ್ಥಾನ ನಿರ್ಮಿಸಲು ಟಿಟಿಡಿ ಮಂಡಳಿಯು 10 ಲಕ್ಷದಿಂದ 20 ಲಕ್ಷ ರೂಪಾಯಿವರೆಗೆ ಅನುದಾನ ನೀಡುತ್ತಿದೆ. ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆಯಿಂದಾಗಿ, ಇತ್ತೀಚೆಗೆ ಪ್ರತೀ ಸ್ಲ್ಯಾಬ್‌ಗೆ ಹೆಚ್ಚುವರಿಯಾಗಿ 5 ಲಕ್ಷ ರೂಪಾಯಿ ನೀಡಲು ಒಪ್ಪಿಗೆ ಸೂಚಿಸಲಾಗಿದೆ.
2023ರಲ್ಲಿ ಟಿಟಿಡಿ ಮಾಜಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಅವರು ಬಿಡುಗಡೆಗೊಳಿಸಿದ ಶ್ವೇತಪತ್ರದ ಪ್ರಕಾರ, ಶ್ರೀವಾಣಿ ಟ್ರಸ್ಟ್ ಮೂಲಕ 860 ಕೋಟಿ ರೂಪಾಯಿ ಸಂಗ್ರಹಿಸಲಾಗಿತ್ತು. ಇದರಲ್ಲಿ 93 ಕೋಟಿ ರೂಪಾಯಿಗಳನ್ನು ಹಳೆಯ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಮತ್ತು ಉಳಿದ ಹಣವನ್ನು ಹೊಸ ದೇವಸ್ಥಾನಗಳ ನಿರ್ಮಾಣಕ್ಕೆ ಬಳಸಲಾಗಿದೆ.
ದಲಿತ ಸಂಘಟನೆಗಳ ತೀವ್ರ ವಿರೋಧ
ಟಿಟಿಡಿಯ ಈ ಹೊಸ ಕಾರ್ಯಕ್ರಮಕ್ಕೆ ದಲಿತ ಸಂಘಟನೆಗಳಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. "ಟಿಟಿಡಿಗೆ ನಿಜವಾಗಿಯೂ ದಲಿತರ ಬಗ್ಗೆ ಕಾಳಜಿ ಇದ್ದರೆ, ಅವರನ್ನು ಮಂಡಳಿಯ ಉನ್ನತ ಹುದ್ದೆಗಳಿಗೆ ನೇಮಿಸಬೇಕು" ಎಂಬುದು ಅವರ ಪ್ರಮುಖ ಆಗ್ರಹ.
ಟಿಟಿಡಿ ಅಸ್ತಿತ್ವಕ್ಕೆ ಬಂದು 93 ವರ್ಷಗಳಾದರೂ, ಇದುವರೆಗೆ ಒಬ್ಬ ದಲಿತ ಅಥವಾ ಆದಿವಾಸಿ ವ್ಯಕ್ತಿಯನ್ನು ಕಾರ್ಯನಿರ್ವಾಹಕ ಅಧಿಕಾರಿ (ಇಒ), ಜಂಟಿ ಕಾರ್ಯನಿರ್ವಾಹಕ ಅಧಿಕಾರಿ (ಜೆಇಒ) ಅಥವಾ ಅಧ್ಯಕ್ಷರನ್ನಾಗಿ ನೇಮಿಸಿಲ್ಲ. ಇಲ್ಲಿಯವರೆಗೆ 53 ಐಎಎಸ್ ಅಧಿಕಾರಿಗಳು ಇಒಗಳಾಗಿ ಮತ್ತು 54 ಮಂದಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಈ ಪೈಕಿ ಯಾರೊಬ್ಬರೂ ದಲಿತ ಸಮುದಾಯಕ್ಕೆ ಸೇರಿದವರಲ್ಲ.
ಟಿಟಿಡಿ ನೌಕರರ ಸಂಘದ ನಾಯಕ ಕಂದರಪು ಮುರಳಿ ಅವರ ಪ್ರಕಾರ, 1980ರ ದಶಕದಲ್ಲಿ ಭೂತಲಿಂಗಂ ಎಂಬ ದಲಿತ ಐಎಎಸ್ ಅಧಿಕಾರಿಯನ್ನು ಜೆಇಒ ಆಗಿ ನೇಮಿಸಲಾಗಿತ್ತು. ಆದರೆ, ಅವರಿಗೆ ಸಾಂಪ್ರದಾಯಿಕವಾಗಿ ಕಂಕಣ ಕಟ್ಟಲು ಅರ್ಚಕರು ನಿರಾಕರಿಸಿದ್ದರಿಂದ, ಅವಮಾನಿತರಾದ ಅವರು ಕರ್ತವ್ಯ ವಹಿಸಿಕೊಳ್ಳದೆ ಹೈದರಾಬಾದ್‌ಗೆ ಮರಳಿದರು. ಅಂದಿನಿಂದ ಟಿಟಿಡಿಯ ಉನ್ನತ ಸ್ಥಾನಗಳಿಗೆ ದಲಿತ ಸಮುದಾಯದವರನ್ನು ನೇಮಿಸಿಲ್ಲ.
ರಾಮಾನುಜಾಚಾರ್ಯರ ಬೋಧನೆ ಮತ್ತು ಜಾತಿ ಆಧಾರಿತ ತಾರತಮ್ಯವನ್ನು ವಿರೋಧಿಸುವ ವಿಶಿಷ್ಟಾದ್ವೈತ ತತ್ವವನ್ನು ಅನುಸರಿಸುವುದಾಗಿ ಹೇಳಿಕೊಳ್ಳುವ ಟಿಟಿಡಿ, ತನ್ನ ಆಡಳಿತದಲ್ಲಿಯೇ ದಲಿತರನ್ನು ಹೊರಗಿಟ್ಟಿರುವುದು ವಿಪರ್ಯಾಸ. "ಟಿಟಿಡಿಯ ನೀತಿಗಳಲ್ಲಿ ಸ್ಪಷ್ಟ ವಿರೋಧಾಭಾಸವಿದೆ" ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು 'ದ ಫೆಡರಲ್' ಟಿಟಿಡಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.