ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಕರ್ನಾಟಕದ ಅನುಕರಣೀಯ ಶೈಕ್ಷಣಿಕ ಪ್ರಯೋಗ - ʼಎಸ್‌ಡಿಎಂಸಿʼ

2001ರಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸಮುದಾಯದ ಮಾಲೀಕತ್ವ ಹಾಗು ಪಾಲ್ಗೊಳ್ಳುವಿಕೆಗೆ ʼಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿʼ (ಎಸ್‌ಡಿಎಂಸಿ) ರಚಿಸಲಾಯಿತು.;

Update: 2025-04-30 02:00 GMT
ಪ್ರಾತಿನಿಧಿಕ ಚಿತ್ರ

ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆಯಿಲ್ಲದೆ ಗುಣಾತ್ಮಕ ಶಾಲಾ ಶಿಕ್ಷಣದ ಸಾರ್ವತ್ರೀಕರಣ ಸಾಧ್ಯವಿಲ್ಲವೆಂಬುದು ಸಾರ್ವತ್ರಿಕ ಸತ್ಯ. ಈ ಸತ್ಯವನ್ನು ಮನಗಂಡ ಕೇಂದ್ರ ಹಾಗು ಹಲವು ರಾಜ್ಯ ಸರ್ಕಾರಗಳು 1986ರ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಸಮುದಾಯವನ್ನು ಒಳಮಾಡಿಕೊಳ್ಳುವ ಪ್ರಕ್ರಿಯೆಗೆ ಹಲವು ಪ್ರಯತ್ನಗಳನ್ನು ಮಾಡುತ್ತಾ ಬಂದಿವೆ . ಬಹುತೇಕ ಸಂದರ್ಭದಲ್ಲಿ , ಈ ಪ್ರಯತ್ನಗಳು ಒಂದು ಬಗೆಯ ಸಾಂಕೇತಿಕ ಹಾಗು ಸಮುದಾಯವನ್ನು ಭಾಗಶಃ ಒಳಮಾಡಿಕೊಳ್ಳುವ ಪ್ರಯತ್ನಗಳಾಗಿದ್ದವು ಎಂದರೆ ತಪ್ಪಾಗಲಾರದು . ಕಾರಣ, ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಪಾಲಕ-ಪೋಷಕರಿಗೆ ಗರಿಷ್ಠ ಪ್ರಾತಿನಿಧ್ಯ ನೀಡುವ ಬದಲು, ತೋರಿಕೆಗೆ ಒಂದೋ-ಎರಡೋ ಪ್ರಾತಿನಿಧ್ಯ ನೀಡಿ ,ಅದನ್ನೇ ಸಮುದಾಯದ ಪಾಲ್ಗೊಳ್ಳುವಿಕೆ ಎಂದು ಬಿಂಬಿಸಲಾಗಿತ್ತು.

ಇದಕ್ಕೆ ಅಪವಾದವೆಂಬಂತೆ , ನಮ್ಮ ರಾಜ್ಯದಲ್ಲಿ  ದೇಶವೇ ಅನುಕರಣೆ ಮಾಡಬಹುದಾದ ಪ್ರಯೋಗವನ್ನು ರಾಜ್ಯ ಸರ್ಕಾರವು 2001ರಲ್ಲಿ. ಶಿಕ್ಷಣ ಕಾರ್ಯಪಡೆ ಶಿಫಾರಸ್ಸಿನ (2000) ಆಧಾರದ ಮೇಲೆ, ರಾಜ್ಯದ ಎಲ್ಲಾ ಸರ್ಕಾರಿ ಕಿರಿಯ,ಹಿರಿಯ ಹಾಗು ಪ್ರೌಢ ಶಾಲೆಗಳಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳನ್ನು (ಎಸ್‌ಡಿಎಮ್‌ಸಿ) ರಚಿಸಲು ಅಗತ್ಯವಾದ ನೀತಿ ಮತ್ತು ಆದೇಶವನ್ನು ಕಾನೂನಾತ್ಮಕವಾಗಿ ರೂಪಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ವಿಸ್ತೃತ ಪ್ರಕ್ರಿಯೆಯನ್ನು ಕೈಗೊಂಡಿತ್ತು. ಅಂದಿನ ಶಿಕ್ಷಣ ಸಚಿವರಾಗಿದ್ದ ಹೆಚ್‌.ವಿಶ್ವನಾಥ್‌ ರವರ ಪ್ರಾಮಾಣಿಕ ಪ್ರಯತ್ನದಿಂದ , ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಪಾಲಕರನ್ನು ಶಾಲಾ ನಿರ್ವಹಣೆ ಮತ್ತು ಮೇಲುಸ್ತುವಾರಿಯ ಕೆಲಸದಲ್ಲಿ ಪ್ರಜಾಸತ್ತಾತ್ಮಕವಾಗಿ ಒಳಮಾಡಿಕೊಳ್ಳುವ ಪ್ರಕ್ರಿಯೆ ದೇಶದಲ್ಲಿಯೇ ಮೊದಲ ಬಾರಿಗೆ ಸಾಂಸ್ಥಿಕ ಸ್ವರೂಪದಲ್ಲಿ ಜಾರಿಯಾಯಿತು .

ಈ ಎಲ್ಲಾ ಪ್ರಯತ್ನಗಳ ಫಲದಿಂದ, ದಿನಾಂಕ 28.04.2001ರಲ್ಲಿ ಸರ್ಕಾರವು ಕಾರ್ಯಕಾರಿ ಆದೇಶವನ್ನು ಹೊರಡಿಸಿ ರಾಜ್ಯದ ಎಲಾ ಸರ್ಕಾರಿ ಕಿರಿಯ ,ಹಿರಿಯ ಹಾಗು ಪ್ರೌಢ ಶಾಲೆಗಳಲ್ಲಿ ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಸದಾ ಕಾಳಜಿಯುಳ್ಳ ಪೋಷಕರು/ಪಾಲಕರು ಶಿಕ್ಷಣ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ಶಾಲಾ ಹಂತದಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳನ್ನು ರಚಿಸಲು ಅವಕಾಶ ಕಲ್ಪಿಸಿತು. ಈ ಸಮಿತಿಗಳು ಇಂದು ಬೆಳ್ಳಿ ಹಬ್ಬವನ್ನು (25 ನೇ ವಾರ್ಷಿಕೋತ್ಸವ) ವನ್ನು ಆಚರಿಸಿಕೊಳ್ಳುತ್ತಿವೆ. ಈ ಆದೇಶದ ಅನ್ವಯ ಎಲ್ಲಾ ಶಾಲೆಗಳಲ್ಲಿ ಸಮಿತಿಗಳನ್ನು ರಚಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ಮತ್ತು ತರಬೇತಿಗಳನ್ನು ನೀಡಲು ರಾಜ್ಯದ ಪ್ರತಿಷ್ಠಿತ ಸಂಸ್ಥೆಯಾದ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿ ಯ ಮಗು ಮತ್ತು ಕಾನೂನು ಕೇಂದ್ರವು ಪೂರ್ಣವಾಗಿ ಶಿಕ್ಷಣ ಇಲಾಖೆಯ ಜೊತೆ ಕೈಜೋಡಿಸಿತ್ತು. ಅಂದಿನಿಂದ ಇಂದಿನವರೆಗೂ , ಈ ಎಲ್ಲಾ ಪ್ರಕ್ರಿಯೆಗಳಲ್ಲಿ ನಿರಂತರವಾಗಿ ತೊಡಗಿಸಕೊಳ್ಳಲು ನನಗೆ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

ಪಂಚಾಯತಿ ರಾಜ್‌ ವ್ಯವಸ್ಥೆಯ ಭಾಗ

ನಂತರ 2006 ರಲ್ಲಿ ರೂಪಿಸಲಾದ ಎಸ್‌ ಡಿ ಎಮ್‌ ಸಿ ಬೈಲಾಗಳು , ಎಸ್‌ ಡಿ ಎಮ್‌ ಸಿ ಗಳನ್ನು ಸ್ಥಳೀಯ ಸರ್ಕಾರವಾದ ಪಂಚಾಯಿತಿ ರಾಜ್‌ ವ್ಯವಸ್ಥೆಯ ಭಾಗವಾಗಿ ಬೆಸೆಯಲು ಪಂಚಾಯತ್‌ ರಾಜ್‌ ಕಾಯಿದೆ ಅಡಿಯಲ್ಲಿ ಕಾನೂನುದತ್ತವಾದ ಅವಕಾಶ ಕಲ್ಪಿಸಿತು . ಇದು ಒಂದು ರೀತಿಯಲ್ಲಿ, ಶಿಕ್ಷಣದ ಆಡಳಿತವನ್ನು ಗಾಂಧೀಜಿಯ ಕನಸಿನಂತೆ ಗ್ರಾಮ ಸ್ವರಾಜ್ಯ, ಅಂದರೆ , ಪ್ರತಿಯೊಂದು ಶಾಲೆಯೂ ತನ್ನದೇ ನಿರ್ವಹಣಾ ಮತ್ತು ಮೇಲುಸ್ತುವಾರಿಯ ಸಾಂಸ್ಥಿಕ ವ್ಯವಸ್ಥೆಯನ್ನು ಕಟ್ಟಿಕೊಳ್ಳುವತ್ತ ಒಂದು ಮೈಲಿಗಲ್ಲು. ಈ ಸಮಿತಿಯ ರಚನೆ, ಪಾಲಕರ ಭಾಗವಹಿಸುವಿಕೆ ಹಾಗು ಕಾರ್ಯ ವೈಖರಿಯನ್ನು ಮಾದರಿಯಾಗಿ ಪರಿಗಣಿಸಿದ ಕೇಂದ್ರ ಸರ್ಕಾರ , 2009 ರಲ್ಲಿ ಸಂವಿಧಾನದ ವಿಧಿ 21ಎ ಯನ್ನು ಸಾಕಾರಗೊಳಿಸಲು ರೂಪಿಸಿದ ಶಿಕ್ಷಣ ಹಕ್ಕು ಕಾಯಿದೆ 2009ರ ಅಡಿಯಲ್ಲಿ, ಈ ಸಮಿತಿಗಳಿಗೆ ಸಂವಿಧಾನ ಬದ್ಧ ಸ್ಥಾನವನ್ನು ಕಲ್ಪಿಸಿತು. 2001ರಲ್ಲಿ ಕೇವಲ ಸರ್ಕಾರದ ಒಂದು ಕಾರ್ಯಕಾರಿ ಆದೇಶದ ಮೂಲಕ ರಚನೆಯಾದ ಈ ಸಮಿತಿಗಳಿಗೆ ಅಂತಿಮವಾಗಿ ಸಂವಿಧಾನಬದ್ಧ ಸ್ಥಾನಮಾನ ಕಲ್ಪಿಸುವ ಮೂಲಕ ಎಸ್‌ ಡಿ ಎಮ್‌ ಸಿ ಗಳು ಇಡೀ ದೇಶಕ್ಕೆ ಮಾದರಿಯಾಗಿದ್ದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಶಿಕ್ಷಣ ಹಕ್ಕು ಕಾಯಿದೆ ಅನ್ವಯ ಪ್ರಕರಣ 21,22 ಮತ್ತು 35 ರ ಅನ್ವಯ, ಈ ಸಮಿತಿಗಳು ಸಂವಿಧಾನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿವೆ.



 

ಒಟ್ಟಾರೆ , 2001ರಲ್ಲಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ ರಚನೆಯಾದ ಎಸ್‌ಡಿಎಮ್‌ಸಿ ಸಮಿತಿಗಳು ಇಂದು ಬೆಳ್ಳಿ ಹಬ್ಬದ ಸಡಗರದಲ್ಲಿವೆ. 25 ವರ್ಷಗಳನ್ನು ಪೂರೈಸಿದ ಸಂಭ್ರಮಾಚರಣೆಯಲ್ಲಿವೆ. ಕಳೆದ 25 ವರ್ಷಗಳಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಎಸ್‌ ಡಿ ಎಮ್‌ ಸಿ ಸಮಿತಿಗಳು ಉತ್ತಮ ಕೆಲಸ ಕಾರ್ಯ ಹಾಗೂ ಕರ್ತವ್ಯಗಳನ್ನು ನಿರ್ವಹಿಸಿಕೊಂಡು ಬರುತ್ತಿವೆ. ಶಾಲೆಯಲ್ಲಿ ಮಕ್ಕಳ ದಾಖಲಾತಿ, ಹಾಜರಾತಿ , ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ತರುವ ಕಾರ್ಯ, ಮೂಲಭೂತ ಸೌಕರ್ಯ, ಮಧ್ಯಾಹ್ನದ ಬಿಸಿಯೂಟ, ರಾಷ್ಟ್ರೀಯ ಹಬ್ಬಗಳಾದ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಮಹನೀಯರ ಜಯಂತಿಗಳು, ಹೀಗೆ ಶಾಲೆಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಎಸ್‌ ಡಿ ಎಮ್‌ ಸಿ ಭಾಗವಹಿಸುವಿಕೆ ಶಾಲಾ ಆಡಳಿತ ನಿರ್ವಹಣೆಯನ್ನು ಪ್ರಜಾಸತ್ತಾತ್ಮಕಗೊಳಿಸಿದೆ. ಇಂದು ಪಾಲಕರು , ಶಿಕ್ಷಕರು ಮತ್ತು ಮಕ್ಕಳ ಅನ್ಯೋನ್ಯತೆಯಿಂದಾಗಿ ಸರ್ಕಾರಿ ಶಾಲೆಗಳು ಇನ್ನೂ ಉಳಿದಿವೆಯೆಂದರೆ ಅತಿಶಯೋಕ್ತಿಯಾಗಲಾರದು.

ಎಸ್‌ಡಿಎಂಸಿ ಕೊಡುಗೆಯೇನು?

ಕಳೆದ 25 ವರ್ಷದಲ್ಲಿ ಎಸ್‌ ಡಿ ಎಮ್‌ ಸಿ ಗಳು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಅನನ್ಯ ಕೊಡಿಗೆ ನೀಡಿವೆ . ಮಕ್ಕಳಿಗೆ ಕುಡಿಯುವ ನೀರು , ಪೀಠೋಪಕರಣ, ಪಾಠೋಪಕರಣ, ಕ್ರೀಡಾ ಸಾಮಗ್ರಿ, ಆವರಣ ಗೋಡೆ (ಕಾಂಪೌಂಡು),ಸರ್ಕಾರದ ಉತ್ತೇಜಕಗಳ ಜೊತೆಗೆ ನೋಟ್‌ ಪುಸ್ತಕ , ಶಾಲಾ ಬ್ಯಾಗ್‌ , ಸಮವಸ್ತ್ರ , ಇತ್ಯಾದಿಗಳನ್ನು ಶಾಲೆಗೆ ಪಡೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ. ಜೊತೆಗೆ , ಶಾಲಾ ಕಾರ್ಯಕ್ರಮಗಳಿಗೆ ಸಹಾಯಕವಾಗುವ ಕುರ್ಚಿ ವ್ಯವಸ್ಥೆ, ಧ್ವನಿವರ್ಧಕದ ವ್ಯವಸ್ಥೆ, ಟೇಬಲ್ ಇತ್ಯಾದಿಗಳನ್ನು ದಾನಿಗಳ ಸಹಾಯದಿಂದ ಶಾಲೆಗೆ ದೊರಕಿಸಿವೆ . ಶಾಲೆಯ ಸುತ್ತ ಮರ-ಗಿಡಗಳನ್ನು ಬೆಳೆಸುವ ಮೂಲಕ ಉತ್ತಮ ಸ್ಚಚ್ಛತೆ ಹಾಗು ಉತ್ತಮ ಶಾಲಾ ಪರಿಸರ ನಿರ್ಮಿಸಿವೆ . ಶಾಲೆಯ ಸೊಬಗನ್ನು ಹೆಚ್ಚಿಸಲು ಹಲವು ಶಾಲಾ ಆವರಣದಲ್ಲಿ ಹೂವಿನ ಗಿಡ, ಹಣ್ಣಿನ ಗಿಡ, ಸಂಪಿಗೆ, ತೆಂಗು , ನುಗ್ಗೆ, ಕರಿಬೇವು ಇನ್ನು ಹಲವಾರು ರೀತಿಯ ಗಿಡ-ಮರಗಳನ್ನು ಬೆಳಸಿವೆ. ಪೂರ್ವ-ಪ್ರಾಥಮಿಕ ವ್ಯವಸ್ಥೆಯಿಲ್ಲದ ಹಲವೆಡೆ ಈ ಸಮಿತಿಗಳು ಬೇರೆ ಬೇರೆ ಹೆಸರಿನಲ್ಲಿ ಪೂರ್ವ-ಪ್ರಾಥಮಿಕ ತರಗತಿಗಳನ್ನು ತೆರೆದು, ತಾವೇ ಸಂಪನ್ಮೂಲ ಕ್ರೋಡೀಕರಿಸಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ಯಶಸ್ವಿಯಾಗಿ ನಡೆಸುವ ಮೂಲಕ ಶಾಲೆಯ ಹಾಜರಾತಿಯನ್ನು ಗಣನೀಯವಾಗಿ ಹೆಚ್ಚಿಸಿವೆ. ಇದು ಇಂದು ಸರ್ಕಾರಕ್ಕೆ ಮಾದರಿ ಕಾರ್ಯಕ್ರಮವಾಗಿದೆ.

ಒಟ್ಟಾರೆ, ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸಿ ನೆರೆಹೊರೆಯ ಸಮಾನ ಶಾಲೆಯನ್ನಾಗಿಸಲು ಎಸ್‌ ಡಿ ಎಮ್‌ ಸಿಗಳು ಹಗಲಿರುಳು ಕಾರ್ಯ ನಿರ್ವಹಿಸುತ್ತವೆ. ಸರ್ಕಾರಿ ಶಾಲೆ ಉಳಿಯಲಿ ಬೆಳೆಯಲಿ ನೆರೆಹೊರೆಯ ಸಮಾನ ಶಾಲೆಯಾಗಲಿ ಎಂಬುದು ಎಸ್‌ ಡಿ ಎಮ್‌ ಸಿ ಗಳ ಘೋಷ ವಾಕ್ಯವಾಗಿದೆ. ಎಸ್‌ ಡಿ ಎಮ್‌ ಸಿ ಗಳ ಈ ಅನನ್ಯ ಕಾರ್ಯಕ್ಕೆ ಪ್ರಾಥಮಿಕ ಶಿಕ್ಷಕರ ಸಂಘ, ಬಿಸಿಯೂಟ ನೌಕರರರ ಸಂಘ, ಅಂಗನವಾಡಿ ಕಾರ್ಯಕರ್ತೆಯರ ಸಂಘ, ಆಶಾ ಕಾರ್ಯಕರ್ತರ ಸಂಘ , ದಲಿತ ಸಂಘರ್ಷ ಸಮಿತಿ , ರೈತ ಸಂಘ, ಹೀಗೆ ಹತ್ತು ಹಲವು ಸಾಮೂಹಿಕ ಸಂಘನೆಗಳ ಸಹಕಾರ ಬೆಂಬಲವಿದೆ. ಸರ್ಕಾರ ಈ ಸಮಿತಿಗಳ ಕೆಲಸವನ್ನು ಶ್ಲಾಘಿಸಿ ಪ್ರಶಸ್ತಿ ನೀಡುವ ಕಾರ್ಯಕ್ಕೆ ಮುಂದಾಗಿದೆ.

ಪ್ರಸ್ತುತ ಜಾರಿಯಲ್ಲಿರುವ ಶಿಕ್ಷಣ ಹಕ್ಕು ಕಾಯಿದೆಯು ಏಪ್ರಿಲ್‌ 1 , 2025 ಕ್ಕೆ 15 ವರ್ಷಗಳನ್ನು ಮುಗಿಸಿ 16ನೇ ವರ್ಷಕ್ಕೆ ಕಾಲಿಟ್ಟಿದೆ . ತಾತ್ವಿಕವಾಗಿ ನಾವೆಲ್ಲರೂ ಎಲ್ಲಾ ಮಕ್ಕಳಿಗೆ ಸಮಾನ ಗುಣಮಟ್ಟದ ಶಾಲಾ ಶಿಕ್ಷಣವನ್ನು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ “ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯ” ಮೂಲಕ ಕಂಡುಕೊಳ್ಳುವ ಆಶಯವನ್ನು ಹೊಂದಿದ್ದೇವೆ. ಈ ಆಶಯದ ಮೊದಲ ಹೆಜ್ಜೆಯಾಗಿ ಸರ್ಕಾರಿ ಶಾಲೆಗಳನ್ನು ಗುಣಾತ್ಮಕ ಕೇಂದ್ರಗಳಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಶಿಕ್ಷಣ ಹಕ್ಕು ಕಾಯಿದೆಯ ಜಾರಿಯಲ್ಲಿ ರಚನಾತ್ಮಕವಾಗಿ ಮತ್ತು ವಿಮರ್ಶಾತ್ಮಕವಾಗಿ ತೊಡಗಿಸಿಕೊಳ್ಳುವುದು ನಮ್ಮ ಈಗಿನ ಸರ್ಕಾರದ ಮಹತ್ವದ ಕೆಲಸವಾಗಿದೆ.

ಈ ನಿಟ್ಟಿನಲ್ಲಿ ಪೋಷಕರಾಗಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರಾಗಿ ಹಾಗೂ ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬರು ಈ ಕಾಯಿದೆಯನ್ನು ಅನುಷ್ಠಾನಗೊಳಿಸುವ ನೇರ ಹೊಣೆಗಾರಿಕೆ ಹೊಂದಿರುತ್ತಾರೆ. ಈ ದಿಶೆಯಲ್ಲಿ ಕಾಯಿದೆಯ ಅಡಿಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ರಚನೆ ಮತ್ತು ಪ್ರಕಾರ್ಯಗಳ ಬಗ್ಗೆ ಸದಸ್ಯರಿಗೆ ಸ್ಪಷ್ಟ ಅರಿವು ಮೂಡಿಸುವ ಮೂಲಕ ಅವುಗಳನ್ನು ಬಲವರ್ಧನೆಗೊಳಿಸಬೇಕಿದೆ.ಎಸ್‌ ಡಿ ಎಮ್‌ ಸಿಗಳ ಬೆಳ್ಳಿಹಬ್ಬದ ಈ ಸಂದರ್ಭದಲ್ಲಿ , ಸರ್ಕಾರ ಈ ಸಮಿತಿಗಳ ಬಲವರ್ಧನೆಗೆ ವಿಶೇಷ ಕ್ರಿಯಾ ಯೋಜನೆ ರೂಪಿಸುವ ಅಗತ್ಯವಿದೆ. ಸರ್ಕಾರ ಈ ಕೆಲಸವನ್ನು ಔಚಿತ್ಯಪೂರ್ಣವಾಗಿ ಮಾಡಿದರೆ, ಪ್ರತೀ ಶಾಲೆಯಲ್ಲಿನ ಈ ಸಮಿತಿಗಳು ಆಯಾ ಗ್ರಾಮದಲ್ಲಿ ಸಂವಿಧಾನದ ಶಿಕ್ಷಣದ ಆಶಯವನ್ನು ಸಾಕಾರಗೊಳಿಸುವ ಮೂಲಕ ಸಾಮಾಜಿಕ ಪರಿವರ್ತನೆಯ ಬಂಡಿಗಳಾಗಲಿವೆ.

(ಲೇಖಕರು ಅಭಿವೃದ್ಧಿ ಶಿಕ್ಷಣ ತಜ್ಞರು ಮತ್ತು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಸಂಸ್ಥಾಪಕ ಮಹಾ ಪೋಷಕರು)

Tags:    

Similar News