ಹೊಂದಾಣಿಕೆ ʻಮಂತ್ರʼಕ್ಕೆ ಹೊಂದಿಕೊಂಡ ಕರ್ನಾಟಕದ ರಾಜಕಾರಣ; ಇದು ಬದಲಾದರೂ ಅಚ್ಚರಿಯಿಲ್ಲ!

ʻಕ್ರಿಯಾತ್ಮಕʼ ರಾಜಕೀಯದ ಬದಲಿಗೆ, ಹೊಂದಾಣಿಕೆಯ ಬೆಚ್ಚಗಿನ ರಾಜಕಾರಣದಲ್ಲಿ ರಾಜಿ ಮಾಡಿಕೊಂಡು ನೆಮ್ಮದಿಯಾಗಿರುವ ವಿವಿಧ ವರ್ಣ ಪ್ರತಿನಿಧಿಸುವ ಕರ್ನಾಟಕದ ರಾಜಕಾರಣಿಗಳು ಮತ್ತು ಅಧಿಕಾರಶಾಹಿಗೆ ಈಗ ಬದಲಾಗುತ್ತಿರುವ ರಾಜಕಾರಣ ತಂತ್ರದ ಬಿಸಿ ತಟ್ಟಿದಂತೆ ಕಾಣುತ್ತಿದೆ. ಕಾರಣವಿಷ್ಟೇ; ಬಿಜೆಪಿಯ ಅದರಲ್ಲೂ ವಿಶೇಷವಾಗಿ ರಾಜಕೀಯ ತಂತ್ರಗಾರಿಕೆಯ ದಾಳ ಉರುಳಿಸುತ್ತಿರುವ ಮೋದಿ ಮತ್ತು ಷಾ ಹಾಗೂ ಕಾಂಗ್ರೆಸ್‌ನ ನಾಯಕ ರಾಹುಲ್‌ ಗಾಂಧೀ ಅವರ ಅಕ್ರಮಣಕಾರಿ ನಡೆ.;

Update: 2024-09-17 11:24 GMT
ಮುಖ್ಯಮಂತ್ರಿ ಸಿದ್ದರಾಮಯ್ಯ, ಯಡಿಯೂರಪ್ಪ
Click the Play button to listen to article

ಎದುರಾಳಿಗಳೊಂದಿಗೆ ಕಣ್ಣು ಮಿಟುಕಿಸುತ್ತಲೇ, ಒತ್ತಡಕ್ಕೆ ಸಿಲುಕಿಸುತ್ತಾ, ಮತ್ತೇನನ್ನೋ ಮಾಡುತ್ತಾ, ಯೋಚಿಸುತ್ತಾ, ತಂತ್ರಗಾರಿಕೆ ಹೆಣೆಯುತ್ತಲೇ ನಡೆಯುತ್ತಿರುವ ಕರ್ನಾಟಕ ರಾಜಕಾರಣದ ತಂತ್ರಗಾರಿಕೆಗೆ ನಿಧಾನವಾಗಿ ಅಂತ್ಯ ಕಾಣುತ್ತಿರುವಂತೆ ತೋರುತ್ತಿದೆ. ಕರ್ನಾಟಕ ರಾಜಕಾರಣದ ಆಡಳಿತ ಮತ್ತು ವಿರೋಧ ಪಕ್ಷದ ರಾಜಕಾರಣಿಗಳ ಅನುಮಾನಾಸ್ಪದ ರಾಜಕಾರಣದ ಈ ರೀತಿಯ ತೆರೆಮರೆಯ ಹೊಂದಾಣಿಕೆಯ ತಳಹದಿ ಅಲ್ಲಾಡುತ್ತಿರುವಂತೆ ಕಾಣುತ್ತಿದೆ. ಈ ಬೆಳವಣಿಗೆಯ ಸೂಚನೆ ಕರ್ನಾಟಕ ಮೂರು ಪ್ರಮುಖ ರಾಜಕೀಯ ಪಕ್ಷಗಳಿಂದಲೂ ಕಾಣಸಿಗುತ್ತಿವೆ.

ಜನಪ್ರಿಯ ಗ್ರಹಿಕೆ, ಪಿಸುಮಾತುಗಳು ಮತ್ತು ರಾಜಕೀಯ ʻಒಳನೋಟಗಳʼ ದೃಷ್ಟಿ ಸರಿಯಾಗಿದೆ ಎಂದುಕೊಳ್ಳಬಹುದಾದರೆ , ಅದು ನಿಜವೇ ಆಗಿದ್ದರೆ, ಸದ್ಯಕ್ಕೆ ಇದು ರಾಜ್ಯದ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ರಾಜಕೀಯವಾಗಿ ಅನುಕೂಲ ಸಿಂಧು ರಾಜಕಾರಣ ವ್ಯವಸ್ಥೆ. ರಾಜಕೀಯ ಪಕ್ಷವೊಂದು ಆಡಳಿತದಲ್ಲಿದ್ದಾಗ ಆ ಪಕ್ಷದ ರಾಜಕಾರಣಿಗಳ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಲಾಗುತ್ತದೆ. ಚುನಾವಣೆಯ ನಂತರ ವಿರೋಧ ಪಕ್ಷ ಅಧಿಕಾರಕ್ಕೆ ಬಂದಾಗ ಆ ಪಕ್ಷ ಅದೇ ಮಾದರಿಯ ರಾಜಕಾರಣವನ್ನು ಚಾಚೂ ತಪ್ಪದಂತೆ ಪಾಲಿಸಿಕೊಂಡು ಬರುತ್ತದೆ.

ಪರಸ್ಪರ ಕ್ಷಮೆಯ ಸ್ಥಿತಿ

ಆಡಳಿತದಲ್ಲಿರುವ ಮತ್ತು ವಿರೋಧ ಪಕ್ಷಗಳ ನಾಯಕರ ಈ ಪರಸ್ಪರ ಸಹಾನುಭೂತಿ ಕ್ಷಮೆಯ ಪರಿಸ್ಥಿತಿ ಸರಾಗವಾಗಿ ನಡೆದುಕೊಂಡು ಹೊಗುತ್ತಿರುವ ಭಾವನೆ ಹುಟ್ಟಿಸಿದರೂ, ಅದು ಘನೀರ್ಭೂತವಾಗಿ ಇದ್ದು, ಒಮ್ಮೆ ಅಪರೂಪಕ್ಕೆ ತಾರ್ಕಿಕ ಅಂತ್ಯ ಕಾಣುತ್ತವೆ. ಈ ಹೊಂದಾಣಿಕೆಯ ರಾಜಕಾರಣದಿಂದಾಗಿ ಎಷ್ಟೋ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದ ಪ್ರಕರಣಗಳು, ಹಿನ್ನೆಲೆಗೆ ಸರಿದು, ಸಾರ್ವಜನಿಕರ ನೆನಪಿನಿಂದ ಮಾಸಿ ಹೋಗುತ್ತವೆ. ಇದನ್ನು ಯಾರಾದರೂ ನೆನಪಿಸಿದಾಗ ಮತ್ತು ಹಳೆಯ ಗಾಯವನ್ನು ಮತ್ತೊಮ್ಮೆ ಕೆರೆದುಕೊಂಡಂಥ ನೋವು. ಸದ್ಯಕ್ಕಂತೂ, ಪರಿಸ್ಥಿತಿ ಎಲ್ಲರಿಗೂ ಸಮಾಧಾನ ತರುವಂಥ ಸ್ಥಿತಿಯಲ್ಲಿದ್ದಂತೆ ಕಂಡರೂ, ಬೂದಿ ಮುಚ್ಚಿದ ಕಂಡದಂಥ ಸ್ಥಿತಿ ಎನ್ನಬಹುದು. ಈ ಸಂದರ್ಭದಲ್ಲಿ ನೆನಪಾಗುವ ಕನ್ನಡದ ಜನಪ್ರಿಯ ಗಾದೆ; “ನೀನು ಹೊಡೆದ ಹಾಗೆ ಮಾಡು, ನಾನು ಅತ್ತಹಾಗೆ ಮಾಡುತ್ತೇನೆ”.

ಸಾರ್ವಜನಿಕವಾಗಿ ದಕ್ಕುವ ದತ್ತಾಂಶ ಈ ತಿಳುವಳಿಕೆಯನ್ನು ಸಮರ್ಥಿಸುತ್ತದೆ. ಅಧಿಕೃತ ಅಂಕಿಅಂಶಗಳನ್ನು ಉಲ್ಲೇಖಿಸಿದ ವರದಿಗಳು, 2017 ರಿಂದ 2022 ರವರೆಗಿನ ಐದು ವರ್ಷಗಳಲ್ಲಿ, ಕರ್ನಾಟಕ ಸರ್ಕಾರವು 310 ರಲ್ಲಿ ಸುಮಾರು 220 ಭ್ರಷ್ಟಾಚಾರ ಪ್ರಕರಣಗಳಲ್ಲಿ ಅಧಿಕಾರಿಗಳ ವಿಚಾರಣೆಗೆ ಅನುಮತಿ ನೀಡಲಿಲ್ಲ. ಇವುಗಳನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಈಗಾಗಲೇ ತನಿಖೆ ನಡೆಸಿದೆ. . ಚಾರ್ಜ್ ಶೀಟ್ ಸಲ್ಲಿಸಲು ರಾಜ್ಯ ಸರ್ಕಾರದ ಅನುಮತಿಯ ಅಗತ್ಯವಿತ್ತು. ಅನುಮತಿ ದಕ್ಕದಿರುವುದು ರಾಜ್ಯದ ಅತ್ಯಂತ ಕೆಟ್ಟ ವ್ಯವಸ್ಥೆಯತ್ತ ಬೆಟ್ಟುಮಾಡಿ ತೋರಿಸುತ್ತದೆ - ಇದು ಭ್ರಷ್ಟಾಚಾರದ ವಿಷಯಗಳಲ್ಲಿ ತಟಸ್ಥ ಸಡಿಲ ನೀತಿ ಅನುಸರಿಸಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ಭ್ರಷ್ಟಾಚಾರ ಕೇವಲ ತೆಳು ಪರದೆ

ʻಕ್ರಿಯಾತ್ಮಕʼ ರಾಜಕೀಯದ ಬದಲಿಗೆ, ಹೊಂದಾಣಿಕೆಯ ಬೆಚ್ಚಗಿನ ರಾಜಕಾರಣದಲ್ಲಿ ರಾಜಿ ಮಾಡಿಕೊಂಡು ನೆಮ್ಮದಿಯಾಗಿರುವ ವಿವಿಧ ವರ್ಣ ಪ್ರತಿನಿಧಿಸುವ ಕರ್ನಾಟಕದ ರಾಜಕಾರಣಿಗಳು ಮತ್ತು ಅಧಿಕಾರಶಾಹಿಗೆ ಈಗ ಬದಲಾಗುತ್ತಿರುವ ರಾಜಕಾರಣ ತಂತ್ರದ ಬಿಸಿ ತಟ್ಟಿದಂತೆ ಕಾಣುತ್ತಿದೆ. ಕಾರಣವಿಷ್ಟೇ; ಬಿಜೆಪಿಯ ಅದರಲ್ಲೂ ವಿಶೇಷವಾಗಿ ರಾಜಕೀಯ ತಂತ್ರಗಾರಿಕೆಯ ದಾಳ ಉರುಳಿಸುತ್ತಿರುವ ಮೋದಿ ಮತ್ತು ಷಾ ಹಾಗೂ ಕಾಂಗ್ರೆಸ್‌ನ ನಾಯಕ ರಾಹುಲ್‌ ಗಾಂಧೀ ಅವರ ಅಕ್ರಮಣಕಾರಿ ನಡೆ.

ಇನ್ನು ಸ್ಥಳೀಯವಾಗಿ ಬಿಜೆಪಿ ನಾಯಕರು, ತಮ್ಮ ಕಾಂಗ್ರೆಸ್ ಪ್ರತಿಸ್ಪರ್ಧಿಗಳಿಗೆ ಕಣ್ಣು ಮಿಟುಕಿಸಲು ಅವಕಾಶ ನೀಡುತ್ತಿಲ್ಲ. ಅದೇ ವಿಧಾನವನ್ನು ಅನುಸರಿಸಿ, ಕಾಂಗ್ರೆಸ್‌ ಬಿಜೆಪಿಯನ್ನು ಅದರದೆ ಹಗ್ಗದಲ್ಲಿ ಕಟ್ಟಿ ಹಾಕುತ್ತಿದೆ. ಈ ಬೆಳವಣಿಗೆ ವ್ಯವಸ್ಥೆಯನ್ನು ಸರಿಪಡಿಸುವ ಉದ್ದೇಶದಿಂದ, ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಉದ್ದೇಶವಿದ್ದರೆ ಅದು ಸ್ವಾಗತಾರ್ಹ. ಮೇಲ್ನೋಟಕ್ಕೆ ನಡೆಯುತ್ತಿರುವ ರಾಜಕಾರಣದ ಮೇಲಾಟವನ್ನು ಅರ್ಥಮಾಡಿಕೊಳ್ಳದ ಸಾಮಾನ್ಯ ನಾಗರಿಕರು, ಈ ಹೊಂದಾಣಿಕೆಯ ಸಂಬಂಧದಿಂದ ಸೋರಿ ಬರುತ್ತಿರುವ ವಿವರಗಳಿಂದ ಲಾಭ ಪಡೆದುಕೊಳ್ಳಲು ನೋಡುತ್ತಾರೆ. ಆದರೆ ಶ್ರೀ ಸಾಮಾನ್ಯ ಅಷ್ಟೊಂದು ಅದೃಷ್ಟಶಾಲಿ ಎಂದು ಭಾವಿಸಬೇಕಿಲ್ಲ. ಇಲ್ಲಿ ಭ್ರಷ್ಟಾಚಾರದ ಸ್ವರೂಪ ಒಂದು ತೆಳು ಪರದೆಯ ಮಾದರಿಯಲ್ಲಿದೆ. ಪ್ರತಿ ರಾಜಕೀಯ ಪಕ್ಷವೂ ತನ್ನ ಲಾಭಕ್ಕೆ ಪರಿಸ್ಥಿತಿ ಮತ್ತು ಭ್ರಷ್ಟಾಚಾರದ ಸ್ಪರೂಪವನ್ನು ಬಳಸಿಕೊಂಡು ಲಾಭ ಪಡೆದಯಕೊಳ್ಳಲು ಸತತವಾಗಿ ಪ್ರಯತ್ನಿಸುತ್ತಲೇ ಇರುತ್ತದೆ.

ಕಾಂಗ್ರೆಸ್ ಮೌನ

ಭ್ರಷ್ಟಾಚಾರದ ಮೇಲಿನ ಹೋರಾಟವು ಇತ್ತೀಚೆಗೆ ಹೊಸ ತಿರುವನ್ನು ಪಡೆದುಕೊಂಡಿರುವಂತೆ ಕಂಡರೂ, ಮೇ 2023 ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಅದ್ಭುತ ಗೆಲುವಿನೊಂದಿಗೆ ಇದು ಪ್ರಾರಂಭವಾಗಿರಬಹುದು. ಬಿಜೆಪಿಯ ಅಂದಿನ ಬಸವರಾಜ ಬೊಮ್ಮಾಯಿ ಸರ್ಕಾರವು ಎಲ್ಲಾ ವ್ಯವಹಾರಗಳಲ್ಲಿ 40 ಪರ್ಸೆಂಟ್ ಕಮಿಷನ್ ಸಂಗ್ರಹಿಸಿದೆ ಎಂದು ಕಾಂಗ್ರೆಸ್ ಆರೋಪಿಸಿ ಚುನಾವಣಾ ಪ್ರಚಾರದ ಮೂಲಕ ಪ್ರಚಾರ ನಡೆಸಿತ್ತು. ಅಧಿಕಾರಕ್ಕೆ ಬಂದ ನಂತರ ಸಿದ್ದರಾಮಯ್ಯ ಸರ್ಕಾರ ಈ ಆರೋಪಗಳನ್ನು ಅನುಸರಿಸುತ್ತದೆಯೇ ಎಂಬ ಅನುಮಾನವಿತ್ತು.

ಕಳೆದ ಮೇ ತಿಂಗಳಿನಲ್ಲಿ ಬಿಜೆಪಿ ಸೋತ ಬಳಿಕ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಶೇ.40ರಷ್ಟು ಕಮಿಷನ್ ಹಗರಣದ ಆರೋಪ ಮಾಡಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮೌನ ವಹಿಸಿದೆ ಎಂದು ಹೇ ಳಿದ್ದರು. ಪ್ರಾಸಂಗಿಕವಾಗಿ, ಈ ವರ್ಷದ ಜೂನ್‌ನಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿಂಹ ಅವರಿಗೆ ಬಿಜೆಪಿಯ ಟಿಕೆಟ್ ನಿರಾಕರಿಸಲಾಯಿತು.

ಬಹುಶಃ ಸಿದ್ದರಾಮಯ್ಯನವರಿಗೆ ಸಿಂಹ ಅವರ ಸವಾಲಿನಿಂದಾಗಿ ಅಥವಾ ಒಟ್ಟಾರೆ ರಾಜಕೀಯ ಮನಸ್ಥಿತಿಯಲ್ಲಿ

ಬದಲಾಗುತ್ತಿರುವ ಸನ್ನಿವೇಶದಿಂದಾಗಿ, ಕಾಂಗ್ರೆಸ್ ಸರ್ಕಾರವು ನಿಜವಾಗಿಯೂ ಆರೋಪಗಳ ತನಿಖೆಗಾಗಿ ನ್ಯಾಯಾಂಗ ಸಮಿತಿಯನ್ನು ರಚಿಸಿತು.

ಮೂಡಾ ಹಗರಣ

ತೀರಾ ಇತ್ತೀಚೆಗೆ, ಈ ವರ್ಷದ ಏಪ್ರಿಲ್-ಮೇನಲ್ಲಿ ಕರ್ನಾಟಕದ ಮೊದಲ ಹಂತದ ಲೋಕಸಭೆ ಚುನಾವಣೆಯ ನಂತರ, ಮಾಜಿ ಪ್ರಧಾನಿ ಮತ್ತು ಜನತಾ ದಳ (ಜಾತ್ಯತೀತ) ನಾಯಕ ದೇವೇಗೌಡರ ಕುಟುಂಬವು ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡಿದೆ. ಕಾಂಗ್ರೆಸ್‌ ಸರ್ಕಾರ ಸುಮ್ಮನಿರಲಿಲ್ಲ. ಕೂಡಲೇ ಅದು ಕ್ರಿಯಾಶೀಲವಾಯಿತು.

ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಜೈಲು ಪಾಲಾಗಿದ್ದರು. ಅವರ ತಂದೆ ಮಾಜಿ ಸಚಿವ ಎಚ್‌ ಡಿ ರೇವಣ್ಣ ಅವರನ್ನೂ ಜೈಲಿಗೆ ಕಳುಹಿಸಲಾಗಿತ್ತು. ಅವರ ಪತ್ನಿಯ ಮೇಲೆ ಕಾನೂನು ಕ್ರಮ ಜರುಗಿಸಲಾಯಿತು ಆದರೆ ಪ್ರಜ್ವಲ್‌ ತಪ್ಪಿಸಿಕೊಳ್ಳಲು ಅನುಕೂಲ ಕಲ್ಪಿಸಲಾಯಿತು ಎಂಬ ಆರೋಪವನ್ನು ಕಾಂಗ್ರೆಸ್‌ ಹೊತ್ತುಕೊಳ್ಳ ಬೇಕಾಯಿತು. ಮತ್ತೊಬ್ಬ ಪುತ್ರ ಸೂರಜ್ ರೇವಣ್ಣ ಕೂಡ ಪ್ರತ್ಯೇಕ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಜೈಲು ಪಾಲಾಗಿದ್ದರು. ಅವರು ಜಾಮೀನಿನ ಮೇಲೆ ಹೊರಗಿದ್ದಾರೆ.

ಈಗ ಬಿಜೆಪಿ-ಜೆಡಿ(ಎಸ್) ಪಾಲುದಾರರು ಕಾಂಗ್ರೆಸ್ಸಿನ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಅವರು ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಮೂಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣವನ್ನು ಬಳಸುತ್ತಿದ್ದಾರೆ. ಮೂಡಾ ಸ್ವಾಧೀನಪಡಿಸಿಕೊಂಡಿರುವ ಅವರ ಕೃಷಿ ಭೂಮಿಗೆ ಬದಲಾಗಿ ಮುಖ್ಯಮಂತ್ರಿಯವರ ಪತ್ನಿ ಪಾರ್ವತಿ ಅವರಿಗೆ ವಿವೇಚನೆಯಿಂದ ನಿವೇಶನಗಳನ್ನು ಹಂಚಿಕೆ ಮಾಡಿರುವುದಕ್ಕೆ ಈ ಹಗರಣ ಸಂಬಂಧಿಸಿದೆ. ಪರ್ಯಾಯ ನಿವೇಶನ ಹಂಚಿಕೆ ರೂಢಿಯಲ್ಲಿದ್ದರೂ, ಸ್ವಾಧೀನಪಡಿಸಿಕೊಂಡಿರುವ ಕೃಷಿ ಭೂಮಿಗಿಂತ ಮಂಜೂರಾದ ನಿವೇಶನಗಳ ಮೌಲ್ಯ ಹೆಚ್ಚು ಎಂದು ಬಿಜೆಪಿ ಆರೋಪಿಸಿದೆ. ಈ ಆರೋಪವನ್ನು ಸಿದ್ದರಾಮಯ್ಯ ವಿರೋಧಿಸಿ, ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭವನ್ನು ಯಶಸ್ವಿಯಾಗಿ ಬಳಸಿಕೊಂಡಿರುವ ಬಿಜೆಪಿಯ ಕೇಂದ್ರ ನಾಯಕತ್ವವು ಸಿದ್ದರಾಮಯ್ಯ ಸರ್ಕಾರಕ್ಕೆ ಕೊಕ್ಕೆ ಸಿಕ್ಕಿಸಿ, ತಪ್ಪಿಸಿಕೊಳ್ಳಲಾಗದಂತೆ ನೋಡಿಕೊಳ್ಳುತ್ತಿದೆ. ಮತ್ತು ಇದರಿಂದ ಬಿಜೆಪಿ ರಾಜ್ಯ ಘಟಕದ ಒಂದು ಗುಂಪಿಗೆ ಅನಾನುಕೂಲವಾಗುತ್ತದೆ, ಎನ್ನಲಾಗುತ್ತಿದೆ. . ಏಕೆಂದರೆ, ರಾಷ್ಟ್ರೀಯ ನಾಯಕರ ಒತ್ತಡದ ಹೊರತಾಗಿಯೂ,

ಸ್ಥಳೀಯ ಸಂಬಂಧಗಳು ತೊಂದರೆಯಿಲ್ಲದೆ ಮುಂದುವರೆದುಕೊಂಡೇ ಹೊಗುತ್ತವೆ.

ಹೊಂದಾಣಿಕೆ ರಾಜಕಾರಣ

2023ರ ವಿಧಾನಸಭೆ ಚುನಾವಣೆಯ ನಂತರ ಬಿಜೆಪಿಯ ಸೋತ ಅಭ್ಯರ್ಥಿ ಸಿ.ಟಿ.ರವಿ ಕೂಡ ಈ ಒಳ ರಾಜಕಾರಣದ ಲಾಭವನ್ನು ಪಡೆದುಕೊಂದು, ಕಾಂಗ್ರೆಸ್ ನ ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆಯಲು ಯತ್ನಿಸಿದರು. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮತ್ತು ಆರ್‌ಎಸ್‌ಎಸ್‌ನ ಬಿಎಲ್‌ ಸಂತೋಷ್‌ಗೆ ನಿಕಟವರ್ತಿಯಾಗಿದ್ದ ರವಿ, ತಮ್ಮ ಅನಿರೀಕ್ಷಿತ ಸೋಲಿಗೆ “ಹೊಂದಾಣಿಕೆ ರಾಜಕಾರಣ” ವೇ ಕಾರಣ ಎಂದು ಆರೋಪಿಸಿದ್ದಾರೆ. ಹೊಂದಾಣಿಕೆ ರಾಜಕೀಯದ ಮೂಲಕ ರವಿ ಅವರು ರಾಜ್ಯ ಬಿಜೆಪಿ ನಾಯಕತ್ವದ ಒಂದು ವಿಭಾಗ ಮತ್ತು ಅದರ ಕಾಂಗ್ರೆಸ್ ಸಹವರ್ತಿ ನಡುವಿನ ಒಳ ಒಪ್ಪಂದದ ಲಾಭ ಪಡೆದುಕೊಂಡಿದ್ದರು. ಕಾಂಗ್ರೆಸ್‌ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ಬಿಜೆಪಿ ಮುಖ್ಯಮಂತ್ರಿ ಬೊಮ್ಮಾಯಿ ಬಯಲಿಗೆಳೆದಿದ್ದರೆ, ಅದರಿಂದ ಲೋಕಸಭೆಯ , ಫಲಿತಾಂಶ ಭಿನ್ನವಾಗಿರಬಹುದಿತ್ತು ಎಂದು ಅವರು ಹೇಳಿದರು. ಸಿದ್ದರಾಮಯ್ಯನವರನ್ನು ಒಳಗೊಂಡ ಅರ್ಕಾವತಿ ವಸತಿ ಬಡಾವಣೆಯ ಭಾಗಶಃ ಡಿನೋಟಿಫಿಕೇಷನ್ ಮತ್ತು ಡಿಕೆ ಶಿವಕುಮಾರ್ ಒಳಗೊಂಡ ಸೌರ ವಿದ್ಯುತ್ ಯೋಜನೆ - ಎರಡು ಆರೋಪದ ಹಗರಣಗಳನ್ನು ಅವರು ಸೂಚಿಸಿದರು. ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಅವರು ಹಗರಣಗಳಿಗೆ ಸಂಬಂಧಿಸಿದ ಪ್ರಕರಣವನ್ನು ಏಕೆ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲಿಲ್ಲ ಎಂದು ಪ್ರಶ್ನಿಸಿದರು.

ಮೇ 2023 ರ ಅಸೆಂಬ್ಲಿ ಚುನಾವಣೆಯಲ್ಲಿ, ಕಾಂಗ್ರೆಸ್ 135 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿತು. ಅಗತ್ಯ ಬಹುಮತಕ್ಕಿಂತ 22 ಹೆಚ್ಚಿನ ಸ್ಥಾನವನ್ನು ತನ್ನದಾಗಿಸಿಕೊಂಡಿತು ಬಿಜೆಪಿ 66 ಸ್ಥಾನಗಳಿಗೆ ಕುಸಿಯಿತು. ಇದರ ಹೊರತಾಗಿಯೂ ಒಂದು ವರ್ಷದ ನಂತರ 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ ಎಂಬ ಆಶಾ ಭಾವನೆ ಬಿಜೆಪಿಯದಾಗಿತ್ತು. ಆಂತರಿಕ ವೈರುಧ್ಯಗಳಿಂದಾಗಿ ಕಾಂಗ್ರೆಸ್ ಛಿದ್ರವಾಗಲಿದ್ದು, ಕರ್ನಾಟಕ ಬಿಜೆಪಿ ತೆಕ್ಕೆಗೆ ಬರಲಿದೆ ಎಂದು ಬಿಜೆಪಿ ರಾಜ್ಯ ಘಟಕ ಇನ್ನೂ ವಿಶ್ವಾಸ ಹೊಂದಿದೆ. ಆದರೆ ಬಿಜೆಪಿಯ ನಿರೀಕ್ಷೆ ಸುಳ್ಳುಮಾಡಿ ಕಾಂಗ್ರೆಸ್ ಒಗ್ಗಟ್ಟಾಗಿ ನಿಂತಿದೆ. ಆದರೆ, ಬಿಜೆಪಿಗೆ ಆಘಾತಕಾರಿಯಾಗಿ, ಲೋಕಸಭೆಯಲ್ಲಿ ಸರಳ ಬಹುಮತದ ಗಡಿಯನ್ನು ದಾಟಲು ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಮತ್ತು ರಾಜ್ಯದ 28 ಸ್ಥಾನಗಳ ಪೈಕಿ ಒಂಬತ್ತನ್ನು ಕಾಂಗ್ರೆಸ್ ಪಡೆದುಕೊಂಡಿದೆ. ಅಂದಿನಿಂದ ಬಿಜೆಪಿಯ ಲೆಕ್ಕಾಚಾರವನ್ನೇ ತಲೆಕೆಳಗು ಮಾಡುತ್ತಾ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಊಹಾಪೋಹಗಳಿಗೆ ವ್ಯತಿರಿಕ್ತವಾಗಿ ಸಿದ್ದರಾಮಯ್ಯ ಬೆನ್ನಿಗೆ ಪಕ್ಷ ಒಗ್ಗಟ್ಟಾಗಿ ನಿಂತಿದೆ. ಈ ಹಿನ್ನೆಲೆಯಲ್ಲಿ ಮೂಡಾ ಸಮಸ್ಯೆಯು ಕಾಂಗ್ರೆಸ್ ಅನ್ನು ಬಿಟ್ಟುಬಿಡದೆ ಕಾಡುತ್ತದೆ. ಕಾಂಗ್ರೆಸ್‌ ಬಲವರ್ಧಕ ಔಷಧಿಯ ನೆರವಿನಿಂದ ನಿಂತಿದೆ ಎಂಬ ಭಾವನೆ ಮೂಡಿದೆ. ಬಿಜೆಪಿ ಮತ್ತು ಅದರ ಮಿತ್ರ ಪಕ್ಷವಾದ

ಜೆಡಿಎಸ್ (ಎಸ್), ಆರೋಪಿತ ಹಗರಣದ ಕುರಿತು ಮುಖ್ಯಮಂತ್ರಿಯ ಮೇಲೆ ಒತ್ತಡ ಹೇರಲು ಪಟ್ಟುಬಿಡದೆ ಪ್ರಯತ್ನಿಸುತ್ತಿದೆ. ರಾಜ್ಯಪಾಲರು, ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದಿದ್ದಾರೆ ಎನ್ನಲಾಗಿದೆ. ಹಾಗಾಗಿ ಅವರು ಯಾವುದೇ ಮುಲಾಜಿಲ್ಲದೆ ಮುಖ್ಯಮಂತ್ರಿಯನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ನೀಡಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ಪ್ರತಿಭಟನಾ ಯಾತ್ರೆ ಮತ್ತು ರಾಜ್ಯ ವಿಧಾನಸಭೆಯೊಳಗೆ ಅಹೋರಾತ್ರಿ ಧರಣಿ ನಡೆಸಿದ ಬಿಜೆಪಿ ಪ್ರಯತ್ನಗಳ ಗಂಭೀರತೆಯನ್ನು ಗ್ರಹಿಸಿದ ಸಿದ್ದರಾಮಯ್ಯ ಸರ್ಕಾರ ಅಂತಿಮವಾಗಿ ವಾಸ್ತವದತ್ತ

ಎಚ್ಚೆತ್ತುಕೊಂಡಿದೆ. ಕಣ್ಣು ಮಿಟುಕಿಸುವ, ಹೊಂದಾಣಿಕೆ ಸಾಕಿನ್ನು, ಇನ್ನು ಎಂದಿನ ಆಕ್ರಮಣಕಾರಿ ರಾಜಕಾರಣವೇ ದಾರಿ ಎಂದು ಅರಿತ ಸಿದ್ದರಾಮಯ್ಯ ಸರ್ಕಾರ ಈಗ ಕಾರ್ಯಪ್ರವೃತ್ತವಾಗಿದೆ. ಇದುವರೆಗಿನ ಅಲಿಖಿತ ನಿಯಮಗಳನ್ನು ಮುರಿಯಲು ಪ್ರಯತ್ನಿಸುತ್ತಿದೆ.

ಬಿಕ್ಕಟ್ಟಿನಲ್ಲಿ ಸಿಲುಕಿರುವ ಸಿದ್ದರಾಮಯ್ಯ ಆಡಳಿತವು ಸಾಮಾನ್ಯವಾಗಿ ಹಿನ್ನೆಲೆಗೆ ಸರಿದಿದ್ದ ಎಲ್ಲ ಪ್ರಕರಣವನ್ನು ಮತ್ತೆ ಕೆದಕುತ್ತಿದೆ. ಅವುಗಳಿಗೆ ತಾರ್ಕಿಕ ಅಂತ್ಯ ನೀಡಲು ಎಲ್ಲ ತಂತ್ರಗಳನ್ನೂ ಅನುಸರಿಸುತ್ತಿದೆ. ಸಿದ್ದರಾಮಯ್ಯನವರು ತಮ್ಮ ಉದ್ದೇಶ ಸ್ಪಷ್ಟ ಎಂದು ರುಜುವಾತು ಪಡಿಸಲು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಆರೋಪದ ಹಗರಣಗಳ ತನಿಖೆಯ ಪ್ರಗತಿಯನ್ನು ತ್ವರಿತಗೊಳಿಸಲು ಗೃಹ ಸಚಿವ ಜಿ ಪರಮೇಶ್ವರ ನೇತೃತ್ವದಲ್ಲಿ ರಾಜ್ಯದ ಐದು ಉನ್ನತ ಸಚಿವರ ಸಮಿತಿಯನ್ನು ರಚಿಸಿದ್ದಾರೆ. 20-25 ಹಗರಣಗಳ ಪಟ್ಟಿಯನ್ನು ತೀವ್ರವಾಗಿ ಪರಿಗಣಿಸಲಾಗುವುದು ಎಂದು ಪರಮೇಶ್ವರ ಅವರನ್ನು ಉಲ್ಲೇಖಿಸಿ ವರದಿಗಳು ಹೇಳುತ್ತವೆ. ಸಮಿತಿಯು ತನ್ನ ಕೆಲಸವನ್ನು ಪೂರ್ಣಗೊಳಿಸಲು ಸರ್ಕಾರ ಎರಡು ತಿಂಗಳ ಕಾಲಾವಕಾಶ ನೀಡಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅಡಿಯಲ್ಲಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಔಷಧ ಮತ್ತು ಪರಿಕರಗಳ ಖರೀದಿಯಲ್ಲಿ ಭ್ರಷ್ಟಾಚಾರದ ಆರೋಪಗಳು ಮನ್ನಲೆಗೆಗೆ ಬಂದಿವೆ. ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ಹಾ ನೇತೃತ್ವದ ತನಿಖಾ ಆಯೋಗ ಇತ್ತೀಚೆಗೆ 1722 ಪುಟಗಳ ವರದಿಯನ್ನು ಸಲ್ಲಿಸಿದೆ. ಇದು ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ 1120 ಕೋಟಿ ರೂಪಾಯಿಗಳ ಭ್ರಷ್ಟಾಚಾರವನ್ನು ಅಂದಾಜಿಸಿದೆ. ಪ್ರಾಸಂಗಿಕವಾಗಿ ಹೇಳಬಹುದಾದರೆ, ಜಸ್ಟಿಸ್ ಕುನ್ಹಾ ಪ್ರಾಸಂಗಿಕವಾಗಿ ಭ್ರಷ್ಟಾಚಾರ ಪ್ರಕರಣದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರನ್ನು ದೋಷಿ ಎಂದು ಘೋಷಿಸಿದ ನ್ಯಾಯಾಧೀಶರಾಗಿದ್ದವರು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ರಾಜ್ಯ ಆರೋಗ್ಯ ಸಚಿವರಾಗಿದ್ದ ಬಿಜೆಪಿ ಲೋಕಸಭಾ ಸಂಸದ ಕೆ ಸುಧಾಕರ್ ಅವರು ತನಿಖೆಯನ್ನು ಕಾಂಗ್ರೆಸ್‌ನ “ಸೇಡಿನ ರಾಜಕೀಯ”

ಎಂದು ಕರೆದಿದ್ದಾರೆ. ಯಡಿಯೂರಪ್ಪ ಅವರು ತಮ್ಮ ಅಪ್ರಾಪ್ತ ಮಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಮಹಿಳಾ ದೂರುದಾರರ ವಿವಾದಾತ್ಮಕ ಸಾವಿನ ಪ್ರಕರಣವನ್ನು ಕಾಂಗ್ರೆಸ್ ಸರ್ಕಾರವು ಕಠಿಣ ಪೋಕ್ಸೊ ಕಾಯ್ದೆಯಡಿಯಲ್ಲಿ ನಡೆಸುತ್ತಿದೆ.

ಬಿಜೆಪಿಯಿಂದ ಆರೋಪ ಪ್ರತ್ಯಾರೋಪ

ಕಾಂಗ್ರೆಸ್‌ನ ಈ ನಡೆಯಿಂದ ಬೆಚ್ಚಿ ಬಿದ್ದಿರುವ ಬಿಜೆಪಿ ಕೂಡ ಈಗ ಸಕ್ರಿಯವಾಗಿದೆ. ವಾಲ್ಮೀಕಿ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಕಾರ್ಯಪ್ರವೃತ್ತವಾಗಿದೆ, ಅಲ್ಲಿ ಎಸ್‌ಸಿ/ಎಸ್‌ಟಿ ಕಲ್ಯಾಣಕ್ಕಾಗಿ ಮೀಸಲಾದ ಹಣವನ್ನು ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಚುನಾವಣಾ ಪ್ರಚಾರ ಸೇರಿದಂತೆ ಇತರ ಉದ್ದೇಶಗಳಿಗೆ ಬೇರೆಡೆಗೆ ತಿರುಗಿಸಲಾಗಿದೆ ಎಂದು ಆರೋಪಿಸಲಾಗಿದೆ. ರಾಜ್ಯ ಸಚಿವ ಬಿ ನಾಗೇಂದ್ರ ರಾಜೀನಾಮೆ ನೀಡಬೇಕಾಗಿ ಬಂದಿದ್ದು, ಇಡಿ ಅವರನ್ನು ಜೈಲಿಗೆ ಕಳುಹಿಸಿದ ನಂತರ ಅವರನ್ನು ಪ್ರಧಾನ ಆರೋಪಿ ಎಂದು ಹೆಸರಿಸಿದೆ.

ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಟ್ರಸ್ಟಿ ಮತ್ತು ಅವರ ಪುತ್ರ ರಾಹುಲ್ ನಿರ್ವಹಿಸುತ್ತಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಭೂಮಿ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ. ಮತ್ತೊಬ್ಬ ಪುತ್ರ ಪ್ರಿಯಾಂಕ್ ರಾಜ್ಯ ಸಚಿವರಾಗಿದ್ದು, ಟ್ರಸ್ಟಿ ಕೂಡ ಆಗಿದ್ದಾರೆ. ಈ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮಂಜೂರು ಮಾಡಿದೆ. ಐದು ಎಕರೆ ಜಮೀನು ಬೆಂಗಳೂರಿನ ಹೊರವಲಯದಲ್ಲಿದೆ, ದೊಡ್ಡದಾದ 45.94 ಎಕರೆ ಭೂಮಿಯ ಭಾಗವು ಹೈಟೆಕ್

ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಅಡಿಯಲ್ಲಿ ಬರುತ್ತದೆ. ಆದಾಗ್ಯೂ ಅಕ್ರಮಗಳನ್ನು ನಿರಾಕರಿಸಿದ ಪ್ರಿಯಾಂಕ್‌ ಖರ್ಗೆಯವರು ಇದು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಕುತಂತ್ರದ ಭಾಗವಾಗಿದೆ ಎಂದು ಆರೋಪಿಸಿದ್ದಾರೆ.

ಆರೋಪ, ಪ್ರತ್ಯಾರೋಪಗಳು, ತನಿಖೆಗಳು ಮತ್ತು ವಿಚಾರಣಾ ಆಯೋಗಗಳ ಕೋಲಾಹಲದಿಂದ ಏನಾದರೂ ಗಣನೀಯವಾಗಿ ಹೊರಬರುತ್ತದೆಯೇ ಎಂಬುದರ ಬಗ್ಗೆ ಕುತೂಹಲವಿದೆ. ಮುಂದಿನ ಕೆಲವು ದಿನಗಳಲ್ಲಿ ಮತ್ತೆ, “ನೀನು ಹೊಡೆದಂತೆ ನಟಿಸು, ನಾನು ಅತ್ತಂತೆ ನಟಿಸುತ್ತೇನೆʼ ಎಂಬ ತಂತ್ರದ ಅಳವಡಿಕೆಯೇ ಮುಂದುವರಿಯುತ್ತದೆಯೇ, ಇಲ್ಲವೇ ಎಂಬುದರ ಬಗ್ಗೆ ಪ್ರಬುದ್ಧ ಜನತೆ ಆಸಕ್ತವಾಗಿದೆ.

(ಈ ಲೇಖನವನ್ನು ʼದ ಫೆಡರಲ್‌ʼ  ಇಂಗ್ಲಿಷ್ ಆವೃತ್ತಿಯಿಂದ ಅನುವಾದಿಸಲಾಗಿದೆ)

Tags:    

Similar News