ಪ್ರತ್ಯೇಕವಾದಕ್ಕೆ ಕುಮ್ಮುಕ್ಕು: ಕಾಶ್ಮೀರದಲ್ಲಿ ನಿಷೇಧಕ್ಕೊಳಗಾದ 25 ಕೃತಿಗಳ ಒಳಹೊಕ್ಕು ನೋಡಿದಾಗ...

ನಿಷೇಧಕ್ಕೆ ಒಳಗಾಗಿರುವ ಈ ಕೃತಿಗಳ ಒಳಹೊಕ್ಕು ನೋಡಿದಾಗ ಅವು ಯಾಕೆ ಇನ್ನೂ ‘ಗೌರವದ ಪಟ್ಟಿ’ಯಲ್ಲಿ ಸ್ಥಾನ ಪಡೆದುಕೊಂಡಿವೆ ಎಂಬುದು ವೇದ್ಯವಾಗುತ್ತ ಹೋಗುತ್ತವೆ.;

Update: 2025-08-20 10:30 GMT

ಖ್ಯಾತ ಚಿತ್ರನಟಿ ನರ್ಗಿಸ್ ದತ್ ಅವರು ಒಮ್ಮೆ ಚಿತ್ರರಂಗದ ದಿಗ್ಗಜ ಸತ್ಯಜಿತ್ ರೇ ಅವರನ್ನು ಟೀಕಿಸಿದ್ದರು.

1980ರಲ್ಲಿ ಇಂದಿರಾ ಗಾಂಧಿ ಅವರು ನರ್ಗಿಸ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ನರ್ಗಿಸ್ ಅವರು ಸತ್ಯಜಿತ್ ರೇ ಅವರ ಮೇಲೆ ಆರೋಪದ ಸುರಿಮಳೆ ಗೆರೆದಿದ್ದರು. ತಾವೇನೂ ‘ಮದರ ಇಂಡಿಯಾ’ಗಿಂತ ಕಮ್ಮಿಯಿಲ್ಲ ಎಂದು ಭಾವಿಸಿದ್ದ ಅವರು ತಮ್ಮ ‘ರಾಜಕೀಯದ ಗಾಡ್-ಮದರ್’ ಇಂದಿರಾ ಗಾಂಧಿ ಅವರಂತೆ ದೇಶದ ರಕ್ಷಕಿ ಎಂಬಂತೆ ವರ್ತಿಸಿದ್ದರು.

ಸತ್ಯಜಿತ್ ಅವರು ‘ಬಡತನವನ್ನು ಶಾಶ್ವತಗೊಳಿಸುತ್ತಿದ್ದಾರೆ’, ‘ವಿದೇಶದಲ್ಲಿ ಭಾರತದ ಪ್ರತಿಷ್ಠೆಯನ್ನು ವಿರೂಪಗೊಳಿಸುತ್ತಿದ್ದಾರೆ’ ಎಂಬುದು ನರ್ಗಿಸ್ ಅವರ ಆರೋಪವಾಗಿತ್ತು.

ಇದೇ ಸಂದರ್ಭದಲ್ಲಿ ಪಂಜಾಬ್-ನಲ್ಲಿ ಉಂಟಾದ ಆಡಳಿತಾತ್ಮಕ ಮತ್ತು ರಾಜಕೀಯ ಸಮಸ್ಯೆಗಳಿಗೆ ತಾವೇ ಬಲಿಪಶು ಎಂದು ಬಿಂಬಿಸಿಕೊಳ್ಳುವ ಇಂದಿರಾ ಗಾಂಧಿಯವರ ಆರಂಭಿಕ ಪ್ರಯತ್ನಗಳಿಗೆ ನರ್ಗಿಸ್ ಮಾಡಿದ ಆರೋಪವು ಇನ್ನಷ್ಟು ಪುಷ್ಟಿಯನ್ನು ನೀಡಿತು. ಪಂಜಾಬ್ ನಲ್ಲಿನ ಘಟನೆಗಳು ಅವರೇ ಸೃಷ್ಟಿಸಿಕೊಂಡ ಬಿಕ್ಕಟ್ಟಾಗಿತ್ತು. ಪ್ರತಿಬಾರಿ ಸಿಖ್ ಕಾರ್ಯಕರ್ತರು ಹಿಂಸಾಚಾರದಲ್ಲಿ ತೊಡಗಿದಾಗ ಮತ್ತು ಪ್ರತ್ಯೇಕ ಖಾಲಿಸ್ತಾನದ ಬೇಡಿಕೆಯನ್ನು ಇಟ್ಟಾಗ ಪ್ರಧಾನಿ ಹೇಳುತ್ತಿದ್ದ ಮಾತು ಏನೆಂದರೆ, ‘ಪಂಜಾಬ್ ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವುದರ ಹಿಂದೆ ‘ವಿದೇಶಿ ಶಕ್ತಿ’ಯ ಕೈವಾಡವಿದೆ’ ಎಂದು ಆರೋಪಿಸುತ್ತಿದ್ದರು.

ಇಂದಿರಾ ಗಾಂಧಿಯವರು ನೀಡಿದ ಈ ಪದಪುಂಜವು ಆಗಿನ ಕಾಲದ ಅವರ ಭಟ್ಟಂಗಿಗಳ ಹಿಂಡು ವಾಕರಿಕೆ ಬರುವ ರೀತಿಯಲ್ಲಿ ಪದೇ ಪದೇ ಪುನರುಚ್ಛರಿಸುತ್ತಿತ್ತು. ಇದು ಆ ಕಾಲದ ರಾಜಕೀಯ ನಿರೂಪಣೆಯ ಮೂಲಾಧಾರವಾಗಿತ್ತು. ಈಗಿನ ‘ದೇಶದ್ರೋಹಿಗಳು’, ‘ನಗರ ನಕ್ಸಲರು’ ಮುಂತಾದ ಅವಹೇಳನಕಾರಿ ಪದಗುಚ್ಛಗಳಿಗೆ ಅವುಗಳನ್ನು ಸಮೀಕರಿಸಬಹುದಾಗಿದೆ.

ಆ ಸಮಯದಲ್ಲಿ ಸತ್ಯಜಿತ್ ರೇ ಅವರ ಸೃಜನಶೀಲತೆಯನ್ನು ತಡೆಯಲು ನರ್ಗಿಸ್ ಅವರಿಂದ ಹೆಚ್ಚೇನೂ ಮಾಡಲು ಸಾಧ್ಯವಾಗಲಿಲ್ಲ. ರೇ ಅವರು ಮಹೋನ್ನತವಾದ ಚಲನಚಿತ್ರಗಳ ನಿರ್ಮಾಣವನ್ನು ಮುಂದುವರೆಸಿದರು. ಅವರು ತಮ್ಮ ಬಹುಮುಖಿ ಕಲಾತ್ಮಕ ವ್ಯಕ್ತಿತ್ವವನ್ನು ಉಳಿಸಿಕೊಂಡರು. ದುಃಖಕರ ಸಂಗತಿ ಎಂದರೆ ನರ್ಗಿಸ್ ಅವರನ್ನು ಕ್ಯಾನ್ಸರ್ ನುಂಗಿಹಾಕಿತ್ತು. ಇಂದಿರಾ ಗಾಂಧಿ ಅವರೂ ಕೂಡ ತಾವೇ ಹುಟ್ಟುಹಾಕಿದ ರಾಕ್ಷಸನಿಗೆ ಬಲಿಯಾದರು.

ಆದರೆ ನರ್ಗೀಸ್ ಅವರು ರೇ ಅವರ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದ ಸಮಯದಲ್ಲಿ, ರೇ ಅವರು ತಮ್ಮ ವಿಕೃತ ಕಲ್ಪನೆಯ ದೌರ್ಜನ್ಯದಿಂದ ಕೂಡಿದ ರಾಜನಿಂದ ಆಳುತ್ತಿದ್ದ ರಾಜ್ಯದ ಕುರಿತಾದ 'ಹಿರಕ್ ರಾಜರ್ ದೇಶೇ' (ವಜ್ರದ ಸಾಮ್ರಾಜ್ಯ) ಎಂಬ ಚಲನಚಿತ್ರಕ್ಕೆ ಅಂತಿಮ ರೂಪ ನೀಡುತ್ತಿದ್ದರು.

ರೇ ಅವರು "ನೇರವಾಗಿ ರಾಜಕೀಯ ಚಲನಚಿತ್ರಗಳನ್ನು ಮಾಡಲಿಲ್ಲ" ಎಂದು ಅಸಮಾಧಾನ ಹೊಂದಿದ್ದವರೂ ಸಹ ತುರ್ತುಪರಿಸ್ಥಿತಿಯು ಭಾರತ ಪ್ರಜಾಪ್ರಭುತ್ವ ದೇಶವಾಗಿದ್ದರೂ, ಸರ್ವಾಧಿಕಾರಿಗಳು ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ ಹೊರಹೊಮ್ಮಬಹುದು ಎಂದು ಅವರಿಗೆ ಸಾಬೀತುಪಡಿಸಿತು ಎಂದು ಅಸಹನೆಯಿಂದಲೇ ಒಪ್ಪಿಕೊಂಡರು.

ಚಲನಚಿತ್ರದ ಒಂದು ಬಹುಮುಖ್ಯ ದೃಶ್ಯದಲ್ಲಿ, ನಿಷ್ಕರುಣಿ ರಾಜನು ತನ್ನ ಆಸ್ಥಾನಿಕರಿಗೆ ಎಲ್ಲಾ ಶಾಲೆಗಳನ್ನು ಮುಚ್ಚುವಂತೆ ಆದೇಶಿಸುತ್ತಾನೆ. ಕಾರಣ ತೀರಾ ಸಾಮಾನ್ಯವಾಗಿತ್ತು, ಆದರೆ ವಾಟ್ಸನ್ ರೀತಿಯಲ್ಲಿ: "ಶಾಲೆಗೆ ಹೋಗುವವನು ಹೆಚ್ಚು ಕಲಿಯುತ್ತಾನೆ, ಹೆಚ್ಚು ಕಲಿಯುವವರು ಆದೇಶಗಳನ್ನು ಪಾಲಿಸುವುದಿಲ್ಲ ಮತ್ತು ಪ್ರಶ್ನೆಗಳನ್ನು ಕೇಳುತ್ತಾರೆ, ಆದ್ದರಿಂದ ಎಲ್ಲಾ ಶಾಲೆಗಳನ್ನು ಮುಚ್ಚಬೇಕು."

ನಿಷೇಧಕ್ಕೆ ಕಾರಣಗಳು

ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಭಾರತೀಯ ಆಡಳಿತಾತ್ಮಕ ಸೇವೆಗೆ ಸೇರಿದ ಚಂದ್ರಾಕರ್ ಭಾರತಿ ಎಂಬವರಿಗೆ 25 ಪುಸ್ತಕಗಳನ್ನು ನಿಷೇಧಿಸುವಂತೆ (ಅಧಿಕೃತವಾಗಿ ಮುಟ್ಟುಗೋಲು ಹಾಕಿಕೊಳ್ಳುವಂತೆ) ಆದೇಶ ನೀಡಿದ್ದಾರೆ ಎಂಬ ಸುದ್ದಿಯನ್ನು ಓದಿದಾಗ ನಮ್ಮ ಸ್ಮೃತಿಪಟಲದಲ್ಲಿ ಈ ಚಿತ್ರಣ ಮೂಡಿತು. ಈ ಕೃತಿಗಳು ‘ಪ್ರತ್ಯೇಕತಾವಾದವನ್ನು ಪ್ರಚೋದಿಸುವ ಹಾಗೂ ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ ದಕ್ಕೆ ಉಂಟುಮಾಡುತ್ತವೆ’ ಎಂಬುದು ಅವರು ನೀಡಿರುವ ಕಾರಣ.

“ಯುವಜನರು ಹಿಂಸಾಚಾರ ಮತ್ತು ಭಯೋತ್ಪಾದನೆಯಲ್ಲಿ ತೊಡಗಿಕೊಳ್ಳಲು ಬಹುಮುಖ್ಯ ಕಾರಣವೆಂದರೆ ಸುಳ್ಳು ನಿರೂಪಣೆಗಳನ್ನು ಹಾಗೂ ಪ್ರತ್ಯೇಕವಾದಿ ಸಾಹಿತ್ಯದ ವ್ಯವಸ್ಥಿತ ಪ್ರಸಾರ... ಕೆಲವೊಮ್ಮೆ ಇದನ್ನು ಐತಿಹಾಸಿಕ ಅಥವಾ ರಾಜಕೀಯ ವ್ಯಾಖ್ಯಾಖದ ರೂಪದಲ್ಲಿ ಮರೆಮಾಚಲಾಗುತ್ತದೆ” ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಇವನ್ನೆಲ್ಲ ಓದಿದಾಗ ಚಿತ್ರನಟ ಉತ್ಪಲ್ ದತ್ (ಆ ಸರ್ವಾಧಿಕಾರಿಯ ಪಾತ್ರವನ್ನು ನಿರ್ವಹಿಸಿದ) ಭಾವಾಭಿನಯ ನನ್ನ ನೆನಪಿಗೆ ಬಂತು. ಸತ್ಯಜಿತ್ ರೇ ಅವರ, ಮೇಲ್ನೋಟಕ್ಕೆ ಮಕ್ಕಳ ಚಿತ್ರವೆಂದು ಕಾಣುವ ಕ್ಲಾಸಿಕ್ ಕೃತಿಯು ಕಾಲಾತೀತ ಎಂಬುದು ಅರಿವಾಯಿತು.

ಲೆಫ್ಟಿನೆಂಟ್ ಗವರ್ನರ್ ಅವರ ಆದೇಶದ ಬಳಿಕ ಕಾಶ್ಮೀರ ಕಣಿವೆಯಾದ್ಯಂತ ಪುಸ್ತಕದ ಅಂಗಡಿಗಳಲ್ಲಿ ವ್ಯಾಪಕ ಶೋಧ ನಡೆಸಲಾಯಿತು. ಪಟ್ಟಿ ಮಾಡಿದ ಯಾವುದೇ ಪುಸ್ತಕಗಳು ಕಂಡುಬಂದರೆ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ರಾಜ್ಯದ ಪೊಲೀಸರಿಗೆ ಸೂಚನೆ ನೀಡಲಾಯಿತು.

ಈ ಆದೇಶಕ್ಕೆ ಸಹಿ ಹಾಕಿರುವುದು ಆಗಸ್ಟ್ ಐದರಂದು. ಅದು ಭಾರತೀಯ ಸಂವಿಧಾನದಿಂದ 370 ಮತ್ತು 35A ವಿಧಿಗಳನ್ನು ಕಿತ್ತುಹಾಕಿದ ಆರನೇ ವಾರ್ಷಿಕೋತ್ಸವದ ದಿನ. ಆರು ವರ್ಷಗಳ ಕೇಂದ್ರಾಡಳಿತ ಬಳಿಕವೂ, ಬಹಳ ತಡವಾಗಿ ಅಲ್ಲೊಂದು ಹೆಸರಿಗೆ ಮಾತ್ರವೇ ಆದರೂ ಒಂದು ಚುನಾಯಿತ ಸರ್ಕಾರ ಹೊಂದಿದ್ದರೂ ಕೇಂದ್ರಾಡಳಿತವು ‘ಲಿಖಿತ ಪದ’ವನ್ನು ಎದುರಿಸಲು ಅಸಮರ್ಥವಾಗಿದೆ ಎಂಬುದಕ್ಕೆ ಈ ಆದೇಶವು ಸ್ಪಷ್ಟ ಸಾಕ್ಷಿಯಾಗಿದೆ.

ಲಿಖಿತ ಪದಕ್ಕೆ ಒಂದು ಶಕ್ತಿ ಇರಲೇಬೇಕು!

ಹಲವಾರು ಕೃತಿಗಳು ಮತ್ತು ಬಹುಷಃ ಸಾವಿರಾರು ಲೇಖನಗಳನ್ನು ಬರೆದ ಬಳಿಕ ಮತ್ತು ಇನ್ನಷ್ಟು ಬರೆಯುವ ಉದ್ದೇಶ ಹೊಂದಿರುವುದರಿಂದ ಈ ಆದೇಶವು ಒಂದು ದೃಢೀಕರಣದಂತೆ ಕಂಡುಬರುತ್ತದೆ. ಈ ಆದೇಶದ ಪ್ರಕಾರ, ಜಮ್ಮು-ಕಾಶ್ಮೀರದ ಗೌರವದ ಪಟ್ಟಿಯಲ್ಲಿರುವ ಪುಸ್ತಕಗಳ ಲೇಖಕರು (ಅವರು ಕಾಶ್ಮೀರಿಗಳಾಗಿರಬಹುದು ಅಥವಾ ಕಾಶ್ಮೀರಿಗಳು ಅಲ್ಲದೇ ಇರಬಹುದು) ತಮ್ಮ ಸಮಯ, ಶಕ್ತಿ ಹಾಗೂ ಸಂಪನ್ಮೂಲಗಳನ್ನು ಎಲ್ಲಿಯೂ ವ್ಯರ್ಥ್ಯ ಮಾಡಿಲ್ಲ ಎಂಬುದು ಖಾತ್ರಿಯಾಯಿತು. ಆ ನಿಟ್ಟಿನಲ್ಲಿ ಈ ಆದೇಶ ಆಶೀರ್ವಾದದಂತೆ ಕಾಣುತ್ತಿದೆ.

ಈ ಜಮ್ಮು ಮತ್ತು ಕಾಶ್ಮೀರದಲ್ಲಿನ ರಾಜಕೀಯ ಹಿಂಸಾಚಾರಕ್ಕೆ ಕಾರಣವಾದ ಅಂಶಗಳೆಂದು ಪಟ್ಟಿ ಮಾಡಲಾದ ಪುಸ್ತಕಗಳ ಲೇಖಕರಲ್ಲಿ, ಜಾಗತಿಕವಾಗಿ ಗುರುತಿಸಿಕೊಂಡಿರುವ ಅನೇಕ ಶಿಕ್ಷಣ ತಜ್ಞರು, ವಿದ್ವಾಂಸರು, ಬರಹಗಾರರು ಮತ್ತು ಪತ್ರಕರ್ತರು ಇದ್ದಾರೆ. ಮುಖ್ಯವಾಗಿ, ಈ ಲೇಖಕರು ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿ ಇಲ್ಲದೆ ವಿರೋಧ ಪಕ್ಷದಲ್ಲಿದ್ದ ಕಾಲದಿಂದಲೂ ಈ ಪ್ರದೇಶದಲ್ಲಿ ನಡೆಯುತ್ತಿರುವ ಪ್ರಕ್ಷುಬ್ಧತೆ ಮತ್ತು ಆಗಾಗ್ಗೆ ಉಂಟಾಗುವ ಗಲಭೆಗಳ ಬಗ್ಗೆ ತಮ್ಮ ನಿಲುವನ್ನು ವ್ಯಕ್ತಪಡಿಸುತ್ತ ಬಂದವರು. ಹಲವು ದಶಕಗಳಿಂದ ಅವರ ನಿಲುವುಗಳಲ್ಲಿ ಬದಲಾವಣೆ ಉಂಟಾಗಿಲ್ಲ.

ಇಲ್ಲಿನ ಹೆಚ್ಚಿನ ಪುಸ್ತಕಗಳಲ್ಲಿ ಇರುವ ಲೇಖಕರ "ಸಮಸ್ಯೆ" ಏನೆಂದರೆ, ಇದರಲ್ಲಿನ ವಿಶ್ಲೇಷಣೆಗಳಲ್ಲಿ ಬಹುತೇಕವು ಕಾಶ್ಮೀರವು ರಾಜಪ್ರಭುತ್ವ ಆಳ್ವಿಕೆಯಲ್ಲಿದ್ದ ಸಮಯದಿಂದಲೂ ಮೂಡಿಬಂದಿವೆ ಎಂಬುದು ಗಮನಾರ್ಹ.

ಈ ಆದೇಶವು ಭಾರತದ ಪ್ರಸ್ತುತ ರಾಜಕೀಯ ಆಡಳಿತದ ಪ್ರತೀಕವಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಲೆಫ್ಟಿನೆಂಟ್ ಗವರ್ನರ್ ಎಂದು ಕರೆಯಲ್ಪಡುವ “ಬದಲಿ ಪ್ರತಿನಿಧಿ” ಮೂಲಕ, ರಾಜ್ಯದ ಕಾರ್ಯಸೂಚಿಗೆ ರಾಜಕೀಯ ವಿರೋಧವನ್ನು ಬೇರುಸಹಿತ ಕಿತ್ತುಹಾಕುವಲ್ಲಿ “ವಿಫಲವಾಗಿದೆ” ಎಂಬುದನ್ನು ಈ ಆದೇಶ ಒಪ್ಪಿಕೊಳ್ಳುತ್ತದೆ.

ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ: ಇಷ್ಟು ಮಾತ್ರವಲ್ಲದೆ, ಕೇವಲ ತುರ್ತು ಪರಿಸ್ಥಿತಿ ಹೇರಿದ್ದು ಮಾತ್ರವಲ್ಲದೆ, ಪತ್ರಿಕಾ ಸೆನ್ಸಾರ್-ಶಿಪ್ ಅನ್ನೂ ಜಾರಿಗೆ ತಂದ ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವನ್ನು ಇಡೀ ದೇಶದ ರಾಜಕೀಯ ವ್ಯವಸ್ಥೆಯು ರಾಜಕೀಯವಾಗಿ ಟೀಕಿಸಿದ ಕೆಲವೇ ವಾರಗಳ ಬಳಿಕ ಲೆಫ್ಟಿನೆಂಟ್ ಗವರ್ನರ್ ಸಿನ್ಹಾ ಅವರ ಆದೇಶವನ್ನು ಜಾರಿಗೊಳಿಸಲಾಗಿದೆ.

ಹಾಗಾದರೆ, ಈ ಆದೇಶ ಯಾವುದು? ಈ ಆದೇಶವು “ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ"ವನ್ನು ಒದಗಿಸುವ ಸಂವಿಧಾನದ 19ನೇ ವಿಧಿಯನ್ನು ಸಂಪೂರ್ಣವಾಗಿ ಉಲ್ಲಂಘಿಸುವುದಿಲ್ಲವೇ? ಕಾಶ್ಮೀರ ಮತ್ತು ಅದರ ಜನರ ಮೇಲೆ ತುರ್ತು ಪರಿಸ್ಥಿತಿಯಂತಹ ಸ್ಥಿತಿಯನ್ನು ಹೇರಲಾಗಿದೆ ಎಂಬುದಕ್ಕೆ ಈ ಆದೇಶ ಸಾಕ್ಷಿಯಾಗಿಲ್ಲವೇ?

ಅಂದರೆ, ಜನರ ಹಕ್ಕುಗಳಿಗೆ ಧಕ್ಕೆ ಉಂಟಾಗದ ರೀತಿಯಲ್ಲಿ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯವಲ್ಲವೇ?

ಸಾಹಿತ್ಯ, ಪುಸ್ತಕಗಳು ಮತ್ತು ಇತರ ಪ್ರಕಟಣೆಗಳನ್ನು ನಿಷೇಧಿಸುವ ಕೆಟ್ಟ ಪ್ರವೃತ್ತಿ 2014ರಿಂದೇನು ಪ್ರಾರಂಭವಾಗಲಿಲ್ಲ ಎಂಬುದು ಯಾವುದೇ ಘಟನೆಯನ್ನು ಐತಿಹಾಸಿಕ ದೃಷ್ಟಿಕೋನದಿಂದ ಅವಲೋಕಿಸಿದ ಯಾರಿಗಾದರೂ ತಿಳಿದಿರು ವಿಚಾರವೇ ಆಗಿದೆ. ಈಗಿರುವ ಸರ್ಕಾರದ ಅವಧಿ ಮುಗಿದು ಹೊಸ ಸರ್ಕಾರ ಬಂದರೂ, ಇದು ಸುಲಭವಾಗಿ ಕೊನೆಗೊಳ್ಳುವ ಸಾಧ್ಯತೆ ಇಲ್ಲ.

ಆದರೆ, ಈ ಇಷ್ಟೂ 25 ಪುಸ್ತಕಗಳ ಪಟ್ಟಿಯನ್ನು ಸಿದ್ಧಪಡಿಸಿ ಅವುಗಳನ್ನು ನಿಷೇಧಿಸಿರುವುದರ ಹಿಂದಿನ ತರ್ಕ ಅಥವಾ ಅದರ ಕೊರತೆಯನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಈ ಬೆಳವಣಿಗೆಯಲ್ಲಿ ಅಡಕವಾಗಿರುವ ಈ ಸಂಗತಿ ಯಾರ ಗಮನಕ್ಕೂ ಬಂದಿಲ್ಲ, ಏಕೆಂದರೆ ಹೆಚ್ಚಿನ ವಿಶ್ಲೇಷಕರು ಪುಸ್ತಕಗಳನ್ನು ನಿಷೇಧಿಸಿದ ಇತಿಹಾಸದ ಬಗ್ಗೆಯೇ ಗಮನಹರಿಸಿದ್ದಾರೆ ಅಥವಾ ಸಾಧ್ಯವಾದಷ್ಟು ಬೇಗ ಪ್ರತಿಕ್ರಿಯಿಸುವ ಅವಶ್ಯಕತೆಯಿಂದಾಗಿ ಸರ್ಕಾರದ ಕಾರಣಗಳ ವಿಶ್ಲೇಷಣೆಗೆ ತಮ್ಮನ್ನು ಸೀಮಿತಗೊಳಿಸಿದ್ದಾರೆ.

ದಿವಂಗತ ಎ.ಜಿ. ನೂರಾನಿ ಮತ್ತು ಜಮ್ಮು ಮತ್ತು ಕಾಶ್ಮೀರ ಮೂಲದ ಖ್ಯಾತ ಪತ್ರಕರ್ತೆ ಅನುರಾಧಾ ಭಾಸಿನ್ ಬರೆದಿರುವ ಅತಿಹೆಚ್ಚು ಚರ್ಚೆಗೆ ಒಳಗಾಗಿರುವ ಪುಸ್ತಕಗಳನ್ನು ಹೊರತುಪಡಿಸಿ, ಈ ಕಡಿಮೆ ಚರ್ಚೆಗೆ ಒಳಗಾಗಿರುವ ಪುಸ್ತಕಗಳ ಕೆಲವು ಭಾಗಗಳನ್ನು ಆಳವಾಗಿ ಪರಿಶೀಲಿಸಿದರೆ, ಈ ಪುಸ್ತಕಗಳಲ್ಲಿ ಹೆಚ್ಚಿನವು ಈ ಗೌರವದ ಪಟ್ಟಿಗೆ ಸೇರ್ಪಡೆಗೊಂಡಿರುವುದಕ್ಕೆ ಸ್ವಯಂ-ವಿವರಣಾತ್ಮಕ ಕಾರಣಗಳನ್ನು ನೀಡಿರುವುದು ಸ್ಪಷ್ಟವಾಗುತ್ತದೆ.

ಆಕ್ಷೇಪಾರ್ಹ ಪುಸ್ತಕಗಳು

ಉದಾಹರಣೆಗೆ, ಪಟ್ಟಿಯಲ್ಲಿರುವ 'Human Rights Violations in Kashmir' ಎನ್ನುವ ಮೊದಲ ಕೃತಿಯನ್ನೇ ಕೈಗೆತ್ತಿಕೊಳ್ಳೋಣ. ಇದು ಪೋಲ್ಯಾಂಡಿನ ವಿದ್ವಾಂಸರಾದ ಪಿಯೋಟರ್ ಬಾಲ್ಸೆರೋವಿಚ್ ಮತ್ತು ಆಗ್ನೀಸ್ಕಾ ಕುಸ್ಜೆವ್ಸ್ಕಾ (Piotr Balcerowicz ಮತ್ತು Agnieszka Kuszewska),) ಅವರು 2022ರಲ್ಲಿ ಪ್ರಕಟಿಸಿದ ಪುಸ್ತಕ. ಭಾರತದ ಶೈಕ್ಷಣಿಕ ವಲಯದಲ್ಲಿ ಇದೇನು ವ್ಯಾಪಕವಾಗಿ ಪರಿಚಿತವಾಗಿಲ್ಲ. ಆದರೆ, ಶೈಕ್ಷಣಿಕ ಪ್ರಕಾಶನ ಸಂಸ್ಥೆಯು ಇದನ್ನು ಕಟ್ಟುನಿಟ್ಟಾಗಿ ಪ್ರಕಟಿಸಿದ್ದರೂ, ಇದು ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ “ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ” ಎಂಬ ಪದಗುಚ್ಛವೇ ಸರ್ಕಾರಕ್ಕೆ ತೀವ್ರ ಕಿರಿಕಿರಿ ಉಂಟುಮಾಡಿರುತ್ತದೆ.

ಪುಸ್ತಕದ ವಿವರಣೆಯೇ ಈ ಕೇಂದ್ರಾಡಳಿತ ಪ್ರದೇಶದಲ್ಲಿ ಪುಸ್ತಕದ ನಿಷೇಧಕ್ಕೆ ಕಾರಣವೆಂದರೆ ತಪ್ಪಾಗಲಾರದು. ಈ ಪುಸ್ತಕವು "ಮಾನವ ಹಕ್ಕುಗಳ ಉಲ್ಲಂಘನೆಗೆ ದಾರಿ ಮಾಡುವ ಮೂಲ ಕಾರಣಗಳು ಮತ್ತು ಅಪರಾಧಿಗಳು ಶಿಕ್ಷೆಯಿಲ್ಲದೆ ತಮ್ಮ ಅಪರಾಧಗಳನ್ನು ಎಸಗುವ ವಾತಾವರಣದ ಬಗ್ಗೆ ಪರಿಶೀಲನೆ ನಡೆಸುತ್ತದೆ. ಜೊತೆಗೆ, ಅಪರಾಧಗಳ ಹಿಂದಿನ ಕಾನೂನುಬದ್ಧ ಮತ್ತು ಕಾನೂನುಬಾಹಿರ ಸಂಬಂಧಗಳನ್ನು ಅನಾವರಣ ಮಾಡುತ್ತದೆ."

ಇವು ಸರ್ಕಾರಿ ಅಧಿಕಾರಿಗಳನ್ನು ಬಿಡದ ಕಠಿಣ ಪದಗಳು. ಸತ್ಯವು ಬಹಿರಂಗವಾಗದಂತೆ ತಡೆಯುವುದರ ಮೇಲೆಯೇ ತನ್ನ ಅಳಿವು-ಉಳಿವನ್ನು ನೆಚ್ಚಿಕೊಂಡಿರುವ ಸರ್ಕಾರಕ್ಕೆ ಈ ಅಧ್ಯಾಯಗಳ ಶೀರ್ಷಿಕೆಗಳೂ "ಸಮಸ್ಯೆ"ಯನ್ನುಂಟು ಮಾಡುವ ರೀತಿಯಲ್ಲಿವೆ.

ಮಾನವ ಹಕ್ಕುಗಳ ಉಲ್ಲಂಘನೆಯ ಬೇರು ಇರುವುದೇ ಬಹುಸಂಖ್ಯಾತ ಹಿಂದೂ ರಾಷ್ಟ್ರೀಯತೆ, ಭಯೋತ್ಪಾದಕತೆ ಮತ್ತು ಇಸ್ಲಾಮೀಕರಣ, ಸೈನ್ಯೀಕರಣ ಮತ್ತು ಸಶಸ್ತ್ರ ಪಡೆಗಳ ನಿರ್ಭೀತಿಯಲ್ಲಿ. ಪುಸ್ತಕದಲ್ಲಿ ಇವೆಲ್ಲವನ್ನೂ ಪರಿಶೀಲಿಸಲಾಗಿದೆ. ಜೊತೆಗೆ ಕಾಶ್ಮೀರ ಕಣಿವೆಯಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಗಳ ವಿವರವಾದ 'ಪ್ರಕಟಣೆಗಳನ್ನು' ಸಹ ವಿಶ್ಲೇಷಿಸುತ್ತದೆ.

ಹಾಗಾಗಿ, ಈ ಪುಸ್ತಕವನ್ನು ಕಾಶ್ಮೀರದ ಯಾವುದೇ ಕಪಾಟಿನಿಂದಲೂ ಎತ್ತಿಕೊಳ್ಳಲು ಸಾಧ್ಯವಿಲ್ಲ. ಆದರೆ ಈ ಪಟ್ಟಿಯು "ಭಾರತವನ್ನು ಅಸ್ಥಿರಗೊಳಿಸಲು, ಮತ್ತು ಒಡೆಯಲು ಒಂದು ದೊಡ್ಡ ಅಂತರರಾಷ್ಟ್ರೀಯ 'ಷಡ್ಯಂತ್ರ'ವಿದೆ, ಮತ್ತು ಈ ಆಯ್ದ ಪುಸ್ತಕಗಳು ಭಾರತ ವಿರೋಧಿ (ಮತ್ತು ಹಿಂದೂ ವಿರೋಧಿ) ಭಾವನೆಗಳನ್ನು ಪ್ರಚೋದಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ" ಎಂಬ ನಿರೂಪಣೆಯನ್ನು ಸೃಷ್ಟಿಸುವ ಉದ್ದೇಶವನ್ನು ಖಂಡಿತ ಪೂರೈಸುತ್ತದೆ.

ಈ ಪುಸ್ತಕಗಳನ್ನು ನಿಷೇಧಿಸುವ ಪ್ರಯತ್ನವು ನಿರರ್ಥಕವೆಂದು ಪರಿಗಣಿಸಬಹುದು, ಏಕೆಂದರೆ ಮೊಹಮ್ಮದ್ ಯೂಸುಫ್ ಸರಾಫ್ ಬರೆದ 'Kashmir's Fight for Freedom' ನಂತಹ ಕೆಲವು ಪುಸ್ತಕಗಳು ಬಹಳ ಹಿಂದಿನಿಂದಲೂ ಭಾರತದಲ್ಲಿ ಅಲಭ್ಯ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸರಾಫ್ ಅವರು 1995ರಲ್ಲಿ ನಿಧನರಾದರು.

ಈ ಪುಸ್ತಕವನ್ನು ಪಟ್ಟಿಯಲ್ಲಿ ಸೇರಿಸುವ ಏಕೈಕ ಉದ್ದೇಶವೆಂದರೆ, ಪ್ರಕಾಶಕರು ಪಾಕಿಸ್ತಾನದವರಾಗಿರುವುದು ಮತ್ತು ಅದರ ಮೂಲಕ ಒಂದು ಬೆದರಿಕೆಯನ್ನು ಸೃಷ್ಟಿಸುವುದು. ಆದರೂ, ಆದೇಶದಲ್ಲಿ ಕಂಪನಿಯ ಹೆಸರನ್ನು ತಪ್ಪಾಗಿ ಉಚ್ಚರಿಸಲಾಗಿದೆ (ಇದು ಪಟ್ಟಿಯನ್ನು ಸಿದ್ಧಪಡಿಸಿದ ಅಧಿಕಾರಿಗಳ ಸಾಮರ್ಥ್ಯದ ಕೊರತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ).

ಕಾಶ್ಮೀರ ಅವಿಭಾಜ್ಯ ಅಂಗವಾಗಿದ್ದು ಹೇಗೆ

ಹಫ್ಸಾ ಕಂಜ್ವಾಲ್ ಅವರ Colonizing Kashmir. State Building under Indian occupation ಎಂಬ ಪುಸ್ತಕದ ಶೀರ್ಷಿಕೆಯಲ್ಲಿಯೇ ‘ಭಾರತದ ಸ್ವಾಧೀನಕ್ಕೆ ಒಳಪಟ್ಟಿದ್ದ’ ಎಂದು ಪ್ರಸ್ತಾಪವಾಗಿರುವುದೇ ನಿಷೇಧ ವಿಧಿಸಲು ಸಾಕಷ್ಟಾಯಿತು.

ಜೊತೆಗೆ, ಈ ಪುಸ್ತಕವು ಜಮ್ಮು ಮತ್ತು ಕಾಶ್ಮೀರದ ಎರಡನೇ ಪ್ರಧಾನಿಯಾಗಿದ್ದ ಬಕ್ಷಿ ಗುಲಾಮ್ ಮೊಹಮ್ಮದ್ ಅವರ ಒಂದು ದಶಕದ ಆಳ್ವಿಕೆಯನ್ನು (1953-1963) ಅಧ್ಯಯನ ಮಾಡುವುದರ ಮೂಲಕ ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವನ್ನಾಗಿ ಹೇಗೆ ಮಾಡಲಾಯಿತು ಎಂಬುದನ್ನು ಪ್ರಶ್ನಿಸುತ್ತದೆ.

ಈ ಕೃತಿಯಲ್ಲಿ ಪ್ರಸ್ತಾಪವಾದ ಸಂಗತಿಗಳು ಕೇವಲ ಕಾಲ್ಪನಿಕ ಮತ್ತು ಆಧಾರರಹಿತ ಪ್ರಯತ್ನವಲ್ಲ, ಯಾಕೆಂದರೆ ಕೃತಿಯ ಲೇಖಕರು 1993ರಲ್ಲಿ, ಅಂದರೆ ಬಾಲ್ಯದಲ್ಲೇ ಕಾಶ್ಮೀರವನ್ನು ತೊರೆದವರು. ಅವರು ಹಿಂದಿನ ದಾಖಲೆಗಳನ್ನು ಆಧರಿಸಿ, ವರ್ತಮಾನದಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.

ಯಾವತ್ತೂ ಹಿಂದಿನ ಘಟನೆಗಳ ಪರಿಶೀಲನೆ ನಡೆಸುವುದು ಇತಿಹಾಸಕಾರರ ಕೆಲಸ. ಆದರೆ ಸರ್ವಾಧಿಕಾರಿ ಆಡಳಿತವು 'ನೈಜ' ಇತಿಹಾಸವನ್ನು ಬಿಂಬಿಸುವುದಕ್ಕೆ ಬೆಂಬಲ ನೀಡುವುದಿಲ್ಲ. ಅವರು ಇದನ್ನು ಬಹಳ ಸಮರ್ಥವಾಗಿ ಮಾಡಿದ್ದಾರೆ. ಒಂದು ಸಂದರ್ಶನದಲ್ಲಿ, ಅವರು 2019ರಲ್ಲಿ ಕಾಶ್ಮೀರಕ್ಕೆ ಕೊನೆಯ ಬಾರಿ, ತಮ್ಮ ಅನಾರೋಗ್ಯಪೀಡಿತ ಅಜ್ಜಿಯನ್ನು ನೋಡುವ ಉದ್ದೇಶದಿಂದ ಭೇಟಿ ನೀಡಿದ್ದರ ಪ್ರಸ್ತಾಪ ಬರುತ್ತದೆ. ಹಾಗೆ ಪ್ರತಿ ಬಾರಿ ಹಿಂದಿರುಗಿದಾಗಲೂ, 'ಇದು ಇಲ್ಲಿಗೆ ಹಿಂದಿರುಗಲು ನಿಮಗೆ ನೀಡಿದ ಕೊನೆಯ ಅವಕಾಶವಾಗಿರಬಹುದು' ಎಂದು ಹಫ್ಸಾ ಭಾವಿಸಿದ್ದರು.

ಆಕೆಯ ಈ ಪುಸ್ತಕವನ್ನು ನಿಷೇಧಿಸಿದ ಬಳಿಕ ಮತ್ತು ಅವರು ಪ್ರಮುಖವಾಗಿ ಗಮನ ಸೆಳೆದ ಕಾರಣ, ಬಹುಶಃ ಭವಿಷ್ಯವೂ ಹೀಗೇ ಇರಬಹುದು.

ಸೇನಾ ದೌರ್ಜನ್ಯದ ಚಿತ್ರಣ

‘ಡು ಯೂ ರಿಮೆಂಬರ್ ಕುನನ್ ಪೋಶ್ಪೊರಾ?' (Do You Remember Kunan Poshpora?) ಎಂಬುದು 2016ರಲ್ಲಿ ಪ್ರಕಟವಾದ ಒಂದು ವಾಸ್ತವಿಕ ಸಂಗತಿಗಳನ್ನು ಬಿಂಬಿಸುವ ಪುಸ್ತಕವಾಗಿದ್ದು, ಇದನ್ನು ಐವರು ಕಾಶ್ಮೀರಿ ಮಹಿಳೆಯರಾದ ಇಸ್ಸರ್ ಬತೂಲ್, ಇಫ್ರಾ ಭಟ್, ಮುನಾಝಾ ರಶೀದ್, ನತಾಶಾ ರಾಥರ್, ಮತ್ತು ಸಮ್ರೀನಾ ಮುಷ್ತಾಕ್ ಬರೆದಿದ್ದಾರೆ. 1991ರಲ್ಲಿ ಭಾರತೀಯ ಭದ್ರತಾ ಪಡೆಗಳು ಸಾಮೂಹಿಕ ಅತ್ಯಾಚಾರ ಎಸಗಿದ ಬಗ್ಗೆ ಈ ಕೃತಿಯಲ್ಲಿ ಕಠಿಣ ಚಿತ್ರಣಗಳನ್ನು ನೀಡಲಾಗಿದೆ.

ಆ ಕಾಲಘಟ್ಟದಲ್ಲಿ ಬಿಜೆಪಿ ಕಾಶ್ಮೀರದಲ್ಲಾಗಲಿ ಅಥವಾ ಕೇಂದ್ರದಲ್ಲಾಗಲಿ ಅಧಿಕಾರದಲ್ಲಿ ಇರಲಿಲ್ಲ. ಆದರೂ, ಈ ಪುಸ್ತಕದ ಮೇಲಿನ ವಿರೋಧ ಮತ್ತು ಇದನ್ನು ನಿಷೇಧಿತ ಪಟ್ಟಿಗೆ ಸೇರಿಸಲು ಕಾರಣವೇನೆಂದರೆ, ಸಶಸ್ತ್ರ ಪಡೆಗಳ ಕಾರ್ಯಗಳು ಪ್ರಶ್ನಾರ್ಹವಾಗಿವೆ ಎಂಬುದು. ಬಿಜೆಪಿಯ ಮತ್ತು ಸಂಘ ಪರಿವಾರದ ಅತಿರೇಕದ ರಾಷ್ಟ್ರೀಯತೆಯ ಕಲ್ಪನೆಯಲ್ಲಿ ಸಶಸ್ತ್ರ ಪಡೆಗಳು ಯಾವುದೇ ತಪ್ಪು ಮಾಡಲು ಸಾಧ್ಯವೇ ಇಲ್ಲ ಎಂದು ಪರಿಗಣಿಸಲಾಗುತ್ತದೆ.

ಕಟ್ಟಾ ಇಸ್ಲಾಮಿ ಚಿಂತನೆ

ಔರಂಗಾಬಾದ್ನಲ್ಲಿ ಜನಿಸಿದ ಮತ್ತು ಪಾಕಿಸ್ತಾನದಲ್ಲಿ ರಾಜಕೀಯ ಅಧಿಕಾರಕ್ಕೆ ಏರಿದ ಸೈಯಿದ್ ಅಬುಲ್ ಅಲಾ ಮೌದುದಿ ಅವರು 'ಅಲ್ ಜಿಹಾದ್ ಫಿಲ್ ಇಸ್ಲಾಂ' (ಇಸ್ಲಾಂನಲ್ಲಿ ಜಿಹಾದಿ ಪರಿಕಲ್ಪನೆ) ಎಂಬ ಪುಸ್ತಕವನ್ನು ಬರೆದರು.

ಆರಂಭದಲ್ಲಿಯೇ ಯಾವುದೇ ಹಿಂಜರಿಕೆಯಿಲ್ಲದ ಇಸ್ಲಾಮಿಕ್ ಚಿಂತಕರಾಗಿದ್ದ ಇವರನ್ನು ಸಾರ್ವಜನಿಕವಾಗಿ ಗಮನಕ್ಕೆ ತಂದ ಈ ಪುಸ್ತಕದ ಭಾಗಗಳು 1927ರಲ್ಲಿ ಒಂದು ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದವು. ಇವರ ಇಸ್ಲಾಮಿ ಕಲ್ಪನೆಯು ಸರ್ವವ್ಯಾಪಿಯಾಗಿತ್ತು ಮತ್ತು ಮುಸ್ಲಿಮರು ಬಹುಸಂಖ್ಯೆಯಲ್ಲಿರುವ ಪ್ರದೇಶಗಳಿಗೆ ಮಾತ್ರವಲ್ಲದೆ ಇಡೀ ಪ್ರಪಂಚಕ್ಕೆ ಇಸ್ಲಾಮಿಕ್ ರಾಷ್ಟ್ರವನ್ನು ಸ್ಥಾಪಿಸಲು ಕರೆ ನೀಡಲು ಇವರು ಹಿಂಜರಿಯಲಿಲ್ಲ.

ಈ ಪಟ್ಟಿಯಲ್ಲಿರುವ ಉಳಿದೆಲ್ಲ ಪುಸ್ತಕಗಳ ಪೈಕಿ, ಈ ಪುಸ್ತಕವನ್ನು ಸಾರ್ವಜನಿಕವಾಗಿ ಪ್ರಸಾರ ಮಾಡಬೇಕೇ ಅಥವಾ ಕೇವಲ ಶೈಕ್ಷಣಿಕ ಪರಿಶೀಲನೆಗೆ ಮಾತ್ರ ಸೀಮಿತಗೊಳಿಸಬೇಕೇ ಎಂಬುದನ್ನು ನಿರ್ಧರಿಸಲು ಹೆಚ್ಚಿನ ಪರಿಶೀಲನೆ ಅಗತ್ಯವಿದೆ. ಆದರೂ, ಈ ಪುಸ್ತಕವು ಎರಡು ಕಾರಣಗಳಿಗಾಗಿ ಬಹಳ ಮುಖ್ಯವಾಗಿದೆ. ಮೊದಲನೆಯದಾಗಿ, ಇದು ಜಿಹಾದ್ ಬಗ್ಗೆ ತರ್ಕಬದ್ಧವಾದ ವಿವರಣೆಯನ್ನು ನೀಡುತ್ತದೆ ಮತ್ತು ಅದು ಯಾಕೆ ಸರಿಯಾದ ಮಾರ್ಗ ಎಂಬುದನ್ನು ಮುಸ್ಲಿಮರಿಗೆ ತಿಳಿಸುತ್ತದೆ. ಎರಡನೆಯದಾಗಿ, ಮೌಲಾನಾ ಮೌದುದಿ ಅವರು ಗಡಿಯ ಎರಡೂ ಕಡೆಗಳಲ್ಲಿ ಜಮಾಅತ್-ಎ-ಇಸ್ಲಾಮಿಯನ್ನು ಸ್ಥಾಪಿಸಿದವರು.

ಸ್ವಾಯತ್ತತೆಯ ಮೇಲೆ ಕ್ಷಕಿರಣ

ಆಸ್ಟ್ರೇಲಿಯಾದ ವಿದ್ವಾಂಸ ಕ್ರಿಸ್ಟೋಫರ್ ಸ್ನೆಡೆನ್ ಅವರ Independent Kashmir An Incomplete Aspiration ಎಂಬ ಪುಸ್ತಕವೂ ನಿಷೇಧಿತ ಕೃತಿಗಳ ಪಟ್ಟಿಯಲ್ಲಿದೆ. ದಶಕಗಳಿಂದ ಕಾಶ್ಮೀರದ ಸಮಸ್ಯೆಗಳ ಬಗ್ಗೆ ಬರೆಯುತ್ತಿರುವ ಲೇಖಕರಲ್ಲಿ ಇವರೂ ಒಬ್ಬರು. ಅವರ ಮೊದಲ ಪುಸ್ತಕಗಳಲ್ಲಿ ಒಂದಾದ Kashmir. The Unwritten History 1993ರಲ್ಲಿ ಪ್ರಕಟವಾಗಿದ್ದು, ಇದನ್ನು ಪತ್ರಕರ್ತರ ಹಿರಿಯ ಮಾರ್ಗದರ್ಶಕರಾದ ದಿವಂಗತ ಬಿ.ಜಿ. ವರ್ಗೀಸ್ ಅವರು ವಿಮರ್ಶೆಗಾಗಿ ಪಡೆದಿದ್ದರು ಎಂಬುದು ವಿಶೇಷ.

ವಿಮರ್ಶೆಯು ಸಮತೋಲಿತವಾಗಿತ್ತು ಮತ್ತು ಭಾರತದ ದೃಷ್ಟಿಕೋನದಿಂದ ಧನಾತ್ಮಕ ಅಂಶಗಳನ್ನು ಎತ್ತಿ ತೋರಿಸಿತ್ತು. “ಆಜಾದ್ ಜಮ್ಮು-ಕಾಶ್ಮೀರ ಹಾಗೂ ಉತ್ತರ ಪ್ರದೇಶಗಳ ಸ್ವಾಯತ್ತತೆಯು ಒಂದು ಕಣ್ಕಟ್ಟು, ನಾನಾ ಸಾಂವಿಧಾನಿಕ ಸುಧಾರಣೆಗಳ ಹೊರತಾಗಿಯೂ ಅದು ನಿಜವೆಂದು ನಂಬಲು ಸಾಧ್ಯವಿಲ್ಲ. ರಾವಲ್ಪಿಂಡಿಯಿಂದ ಕಾಶ್ಮೀರ ವ್ಯವಹಾರಗಳ ಸಚಿವಾಲಯವು ಆಡಳಿತ ನಡೆಸುತ್ತದೆ ಮತ್ತು ಎಲ್ಲಾ ಪ್ರಮುಖ ಅಧಿಕಾರಿಗಳನ್ನು ನೇಮಿಸುತ್ತದೆ. ಇದಲ್ಲದೆ, ಪಾಕಿಸ್ತಾನದ ಪ್ರಧಾನಿ ಅಧ್ಯಕ್ಷತೆ ವಹಿಸುವ ಮೇಲ್ಮನೆ ಅಥವಾ ಕಾಶ್ಮೀರ ಕೌನ್ಸಿಲ್ ಇಸ್ಲಾಮಾಬಾದ್ನಲ್ಲಿ ಕುಳಿತು ಕಾರ್ಯನಿರ್ವಹಿಸುತ್ತದೆ" ಎಂದು ಸ್ನೆಡೆನ್ ಸ್ಪಷ್ಟವಾಗಿ ಬರೆಯುತ್ತಾರೆ. ಸ್ನೆಡೆನ್ ಪಾಕಿಸ್ತಾನದ ಜಿಹಾದಿ ಪ್ರಯತ್ನಗಳು ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಗಡಿಯಾಚೆಗಿನಿಂದ ನಡೆಯುವ ಅತಿಕ್ರಮಣವನ್ನೂ ಪ್ರಮಾಣೀಕರಿಸುತ್ತಾರೆ.

ಇಂತಹ ದೃಷ್ಟಿಕೋನವನ್ನು ಹೊಂದಿರುವ ಲೇಖಕರು ಭಾರತಕ್ಕೆ ಸಮ್ಮತವಾಗಿರಬೇಕು. ಆದರೆ, ಸ್ನೆಡೆನ್ ಅವರ ವಾದವು “ವಿನಾಶಕಾರಿ ತರ್ಕವಾಗಿದ್ದು ಭಾರತವು ಈ ವಿಷಯವನ್ನು ಬಗೆಹರಿಸಲು ಪಾಕಿಸ್ತಾನಕ್ಕೆ ಏನಾದರೂ ನೀಡಬೇಕು” ಎಂಬುದು “ಏಕಪಕ್ಷೀಯ ಮತ್ತು ತಪ್ಪುದಾರಿಗೆಳೆಯುವ ಸಂಗತಿ ಎಂದು ಭಾರತವು ತಕ್ಷಣ ಬಿಂಬಿಸಬೇಕು" ಎಂದು ಕೂಡ ಬರೆದರು.

ಈಗಿನ ಆಡಳಿತವು ನಿಸ್ಸಂಶಯವಾಗಿ ಒಂದು ಚರ್ಚಾತ್ಮಕ ಪುಸ್ತಕವನ್ನು ನಿರ್ಣಯಿಸುವಾಗ ಕೇವಲ ನಕಾರಾತ್ಮಕ ಅಂಶಗಳನ್ನು ಮಾತ್ರ ನೋಡುತ್ತದೆ. "ಭಾರತ-ಪಾಕಿಸ್ತಾನದ ಒಂದು ಅಪರೂಪದ ಒಪ್ಪಂದದಲ್ಲಿ, ಜಮ್ಮು ಮತ್ತು ಕಾಶ್ಮೀರವಾಗಲಿ ಅಥವಾ ಅದರ ಯಾವುದೇ ಭಾಗವಾಗಲಿ ಸ್ವತಂತ್ರವಾಗಿರಲು ಸಾಧ್ಯವಿಲ್ಲ ಎಂದು ಎರಡೂ ದೇಶಗಳು ಒಪ್ಪುತ್ತವೆ" ಎಂದು ಪುಸ್ತಕವು ಹೇಳುತ್ತದೆ. ಹಾಗಿದ್ದ ಮೇಲೆ ನಿಷೇಧ ಏಕೆ?

ನಾನಾ ಒಳನೋಟಗಳು

ಕಾಶ್ಮೀರದ ಬಗ್ಗೆ ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರುವ ಬೋಸ್ ಸಹೋದರರಾದ ಸುಮಂತ್ರಾ ಮತ್ತು ಸುಗತಾ ಅವರು ಬರೆದ ಪುಸ್ತಕಗಳೂ ನಿಷೇಧದ ಪಟ್ಟಿಯಲ್ಲಿವೆ.

ಸುಮಂತ್ರಾ ಬೋಸ್ ಅವರ Contested Lands Israel-Palestine Kashmir Bosnia, Cyprus ಮತ್ತು Sri Lanka, and Kashmir at the Crossroads Inside a 21st Century Conflict ಎಂಬ ಎರಡು ಕೃತಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ನಿಷೇಧಕ್ಕೆ ಒಳಗಾಗಿವೆ. ಸುಗತಾ ಬೋಸ್ ಅವರ 'ಕಾಶ್ಮೀರ್ & ದಿ ಫ್ಯೂಚರ್ ಆಫ್ ಸೌತ್ ಏಷ್ಯಾ' ಎಂಬ ಇನ್ನೊಂದು ನಿಷೇಧಿತ ಪುಸ್ತಕವನ್ನು ಆಯೆಶಾ ಜಲಾಲ್ ಅವರೊಂದಿಗೆ ಸೇರಿ ಸಂಪಾದಿಸಿದ್ದಾರೆ.

ಈ ಪುಸ್ತಕದ ಅಧ್ಯಾಯಗಳಲ್ಲಿ 'ದಿ ಸ್ಟೇಟ್ ಆಫ್ ಆಜಾದಿ: ವಾಯ್ಸಸ್ ಫ್ರಂ ಪಾಕಿಸ್ತಾನ್ ಅಡ್ಮಿನಿಸ್ಟರ್ಡ್ ಕಾಶ್ಮೀರ್' ಎಂಬ ಅನಮ್ ಝಕಾರಿಯಾ ಅವರ ಅಧ್ಯಾಯವನ್ನು ಉಲ್ಲೇಖಿಸಬೇಕು. ಅನಮ್ ಝಕಾರಿಯಾ ಅವರು ಇದೇ ವಿಷಯದ ಮೇಲೆ 'ಬಿಟ್ವೀನ್ ದಿ ಗ್ರೇಟ್ ಡಿವೈಡ್: ಎ ಜರ್ನಿ ಇಂಟು ಪಾಕಿಸ್ತಾನ್ ಅಡ್ಮಿನಿಸ್ಟರ್ಡ್ ಕಾಶ್ಮೀರ್' ಎಂಬ ಪುಸ್ತಕವನ್ನೂ ಬರೆದಿದ್ದಾರೆ. ಇದು ಪಾಕ್ ಆಡಳಿತದಲ್ಲಿರುವ ಕಾಶ್ಮೀರದ ಮೂಲಕ ಪ್ರಯಾಣಿಸಿ, ಅಲ್ಲಿನ ಜನರ ಕಷ್ಟಗಳು, ಭರವಸೆಗಳು ಮತ್ತು ಆಕಾಂಕ್ಷೆಗಳನ್ನು ಆಲಿಸಿ ಬರೆದ ಅಪರೂಪದ ಕೃತಿಯಾಗಿದೆ.

ಹೃದಯಸ್ಪರ್ಶಿ ಬರಹ

ತಾರಿಕ್ ಅಲಿ, ಹಿಲಾಲ್ ಭಟ್, ಅಂಗನಾ ಪಿ. ಚಟರ್ಜಿ, ಪಂಕಜ್ ಮಿಶ್ರಾ ಮತ್ತು ಅರುಂಧತಿ ರಾಯ್ ಅವರು ಸಂಪಾದಿಸಿದ ಮತ್ತು 'ಕಾಶ್ಮೀರ್: ದಿ ಕೇಸ್ ಫಾರ್ ಫ್ರೀಡಂ' ಎಂಬ ಸಂಪುಟದಿಂದ ಒಂದು ಅಧ್ಯಾಯವನ್ನು ಪ್ರತ್ಯೇಕವಾಗಿ ಉಲ್ಲೇಖಿಸಬೇಕು. ಬಾಬ್ರಿ ಮಸೀದಿ ಧ್ವಂಸ ಮತ್ತು ಕೋಮು ಗಲಭೆಗಳ ನಂತರ ಭಾರತೀಯ ರೈಲ್ವೇಸ್ ನಡೆಸಿದ ಫೈಜಾಬಾದ್ ಸ್ಪೆಷಲ್ ರೈಲಿನಲ್ಲಿ ಹಿಲಾಲ್ ಭಟ್ ಅವರ ಪ್ರಯಾಣದ ಒಂದು ಕಥನ ಇದಾಗಿದ್ದು, ಶೀರ್ಷಿಕೆಗೆ ಸಂಬಂಧಿಸಿ ಇದರಲ್ಲಿ ಅಂತಹ ಗಹನ ಸಂಗತಿಗಳೇನೂ ಇಲ್ಲ.

ತಮ್ಮ ಧಾರ್ಮಿಕ ಅಸ್ತಿತ್ವದ ಬಗ್ಗೆ ಅಸ್ಪಷ್ಟ ಉತ್ತರ ನೀಡಿ ಹತ್ಯೆಯಿಂದ ಪಾರಾದೆ ಎಂದು ಭಟ್ ಬರೆಯುತ್ತಾರೆ, ಯಾಕೆಂದರೆ ಅವರ ಅನೇಕ ಸ್ನೇಹಿತರು ಹತರಾಗಿದ್ದರು. ಇಂದಿರಾ ಗಾಂಧಿಯವರ ಹತ್ಯೆಯ ನಂತರ ಭಾರತದಾದ್ಯಂತ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ಸಿಖ್ಖರ ಭೀಕರ ಹತ್ಯೆಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ ಮತ್ತು ದಾಖಲಿಸಿದ್ದೇನೆ. ಆದ್ದರಿಂದ ನಾನು ಭಟ್ ಅವರ ದುಃಖವನ್ನು ಅರ್ಥಮಾಡಿಕೊಳ್ಳಬಲ್ಲೆ. ಇಂತಹ ಹೃದಯಸ್ಪರ್ಶಿ ಬರಹವನ್ನು ಒಳಗೊಂಡಿರುವ ಪುಸ್ತಕವನ್ನು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರು ನಿಷೇಧಿಸಿದ್ದು ದುರದೃಷ್ಟಕರ ಎಂದು ಮಾತ್ರ ಹೇಳಬಲ್ಲೆ.

ಆದರೆ, ಇದು ಆಡಳಿತಾರೂಢ ಸರ್ಕಾರಕ್ಕೆ ಸತ್ಯದ ಮತ್ತೊಂದು ಮುಖ ಬಯಲಾಗುತ್ತಿರುವ ಬಗ್ಗೆ ಅಸಮಾಧಾನವಿದೆ ಎಂಬುದನ್ನು ತೋರಿಸುತ್ತದೆ. ಇಂದಿನ ಭಾರತದಲ್ಲಿ ಅಧಿಕಾರದಲ್ಲಿರುವವರು, ಈ ರಕ್ತಸಿಕ್ತ ಘಟನೆಯನ್ನು ಶೌರ್ಯವೆಂದು ಬಿಂಬಿಸುತ್ತಿದ್ದಾರೆ.

ನಿಷೇಧಿತ ಪುಸ್ತಕಗಳ ಪಟ್ಟಿಯಲ್ಲಿ ನನ್ನ ಸಹ-ಪತ್ರಕರ್ತ ಮತ್ತು ಮಾಜಿ ಸಹೋದ್ಯೋಗಿ ಡೇವಿಡ್ ದೇವದಾಸ್ ಅವರ ಪುಸ್ತಕವೂ ಇದೆ. ಅವರ In Search Of A Future (ದಿ ಕಾಶ್ಮೀರ್ ಸ್ಟೋರಿ) ಎಂಬ ಪುಸ್ತಕವು 2007ರಲ್ಲಿ ಪ್ರಕಟಗೊಂಡಿತ್ತು ಮತ್ತು ಹೇಳಬೇಕಾದ ವಿಷಯಗಳನ್ನು ಹೇಳಿದ್ದಕ್ಕಾಗಿ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಅವರಿಂದ ಮೆಚ್ಚುಗೆ ಗಳಿಸಿತ್ತು.

ನಾನು ಕಾಶ್ಮೀರದಲ್ಲಿ ವಾಸಿಸದೇ ಇರುವುದರಿಂದ, ಸದ್ಯಕ್ಕಂತೂ ನನ್ನ ಪುಸ್ತಕದ ಕಪಾಟಿನಲ್ಲಿ ದೇವದಾಸ್ ಅವರ ಪುಸ್ತಕ ಇರುವುದಕ್ಕೆ ಯಾವುದೇ ಕಾನೂನಿನ ಉಲ್ಲಂಘನೆಯಾಗದು ಎಂದು ಹೇಳಬಹುದು. ಈ ಪುಸ್ತಕವು ಸುಲಭವಾಗಿ ಸಿಗುವ ಮೂಲೆಯಲ್ಲಿ ಇತರ ಕೆಲವು ಪುಸ್ತಕಗಳ ಜೊತೆ ಇದೆ. ವಿಚಿತ್ರವೆಂದರೆ, ಲೇಖಕರು ಹೇಳಿದಂತೆ, "ಆ ಕಾಲದಲ್ಲಿ ಈ ಪುಸ್ತಕವನ್ನು ವಿಭಿನ್ನ ದೃಷ್ಟಿಕೋನಗಳಿಂದ ಟೀಕಿಸಲಾಯಿತು. ಕೆಲವರು ಇದನ್ನು ಸಮಾನವಾಗಿಲ್ಲ, 'ಆಜಾದಿ'ಯನ್ನು ಬೆಂಬಲಿಸುವುದಿಲ್ಲ ಮತ್ತು ಶಾಂತಿ ಹಾಗೂ ಸಂವಾದವನ್ನು ಪ್ರತಿಪಾದಿಸುತ್ತದೆ ಎಂದು ದೂಷಿಸಿದರು."

ಇವೆಲ್ಲ ಸಂಗತಿಗಳನ್ನು ಗಮನಿಸುತ್ತ ಹೋದರೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರು ಮತ್ತು ಅವರ ಸಹಚರರಿಗೆ ಪುಸ್ತಕಗಳ ವಿಷಯದ ಬಗ್ಗೆ ನಿಜವಾದ ಕಾಳಜಿ ಇರಲಿಲ್ಲ, ಬದಲಾಗಿ ಆದೇಶವನ್ನು ಹೊರಡಿಸುವಾಗ ಅನ್ಯ ಉದ್ದೇಶಗಳಿಂದ ಪ್ರೇರಿತರಾಗಿದ್ದರು ಎಂಬುದಕ್ಕೆ ಸಾಕ್ಷಿ.

Tags:    

Similar News