ಸಾರ್ವಜನಿಕ ಶಾಲಾ ಶಿಕ್ಷಣ ವ್ಯವಸ್ಥೆಯ ಬಲವರ್ಧನೆಗೆ ಇಂಬು ನೀಡುವ ಆಯವ್ಯಯ
ಸಾಮಾಜಿಕ ನ್ಯಾಯ ಹಾಗು ಸಮಾನತೆಯನ್ನು ಸಾಧಿಸುವತ್ತ ದಮನಿತ ಸಮುದಾಯಗಳಿಗೆ ನ್ಯಾಯೋಚಿತ ಅವಕಾಶ ಒದಗಿಸಬಲ್ಲ ಸಾರ್ವಜನಿಕ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಬಲವರ್ಧನೆಗೊಳಿಸಲು ಇಂದಿನ ಬಜೆಟ್ ಮತ್ತೊಮ್ಮೆ ಭರವಸೆಯನ್ನು ಮೂಡಿಸಿದೆ.;
ಸಾಮಾಜಿಕ ನ್ಯಾಯ ಹಾಗು ಸಮಾನತೆಯನ್ನು ಸಾಧಿಸುವತ್ತ ದಮನಿತ ಸಮುದಾಯಗಳಿಗೆ ನ್ಯಾಯೋಚಿತ ಅವಕಾಶ ಒದಗಿಸಬಲ್ಲ ಸಾರ್ವಜನಿಕ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಬಲವರ್ಧನೆಗೊಳಿಸಲು ಇಂದಿನ ಬಜೆಟ್ ಮತ್ತೊಮ್ಮೆ ಭರವಸೆಯನ್ನು ಮೂಡಿಸಿದೆ.
ಇಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಶಾಲಾ ಶಿಕ್ಷಣದ ಪಾಲಿಗೆ ಹಲವು ಒಳಿತುಗಳನ್ನು ಒಳಗೊಂಡಿದೆ.
ಮೊದಲಿಗೆ , ಈ ಬಾರಿಯ ಬಜೆಟ್ ಗಾತ್ರ ₹ 4,09,549 ಕೋಟಿ. ಅದರಲ್ಲಿ ಶಾಲಾ ಶಿಕ್ಷಣದ ಪಾಲು 45,286 ಕೋಟಿ. ಶೇಕಡವಾರು ಲೆಕ್ಕದಲ್ಲಿ ಶಿಕ್ಷಣಕ್ಕೆ ಸುಮಾರು 10% ದೊರೆತಿದೆ. ಇದು ಕಳೆದ ಬಾರಿಗಿಂತ ಶೇಕಡ ಎರಡರಷ್ಟು ಕಡಿಮೆಯಾದರೂ , ಶಿಕ್ಷಣಕ್ಕೆ ಮೀಸಲಿಟ್ಟಿರುವ ಹಣ ಕಳೆದ ಬಾರಿಗೆ ಹೋಲಿಸಿದರೆ 864 ಕೋಟಿ ಹೆಚ್ಚಳವಾಗಿದೆ. ಶೇಕಡವಾರು ಲೆಕ್ಕದಲ್ಲಿ ಶೇಕಡ ಎರಡರಷ್ಟು ಹೆಚ್ಚಳ ಕಂಡಿದೆ.
ಈಗಾಗಲೇ ತಿಳಿಸಿದಂತೆ ಒಳಿತಿನ ಭಾಗವಾಗಿ, ಪ್ರಾಥಮಿಕ ಹಾಗು ಪೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಮತ್ತು ಬಿಸಿಯೂಟದ ನೌಕರರರಿಗೆ ನೀಡುತ್ತಿರುವ ಗೌರವಧನವನ್ನು ಕ್ರಮವಾಗಿ 2000 ಮತ್ತು 1000 ರೂಗಳನ್ನು ಹೆಚ್ಚಿಸಿರುವುದು ಮಾನವೀಯತೆ ಹಾಗು ಶಾಲೆಗಳ ಕಾರ್ಯಕ್ಷಮತೆ ದೃಷ್ಟಿಯಿಂದ ಒಳಿತಿನ ನಡೆಯಾಗಿದೆ.
ಇದೇ ರೀತಿ100 ಅರ್ಹ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಮತ್ತು ಅರ್ಹ 50 ಪ್ರೌಢ ಶಾಲೆಗಳನ್ನು ಪದವಿಪೂರ್ವ ಕಾಲೇಜುಗಳಾಗಿ ಮೇಲ್ದರ್ಜೆಗೇರಿಸುವ ಕ್ರಮ ಪ್ರೌಢ ಶಿಕ್ಷಣ ಹಾಗು ಪದವಿ-ಪೂರ್ವ ಶಿಕ್ಷಣದಲ್ಲಿ ದಾಖಲಾತಿ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳ ದಾಖಲಾತಿಯನ್ನು ಹೆಚ್ಚಿಸಲು ದೊಡ್ಡ ರೀತಿಯಲ್ಲಿ ಸಹಾಯವಾಗುತ್ತದೆ .
ಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯದ ಕೊರತೆ ನೀಗಿಸಲು ಹೆಚ್ಚುವರಿ ತರಗತಿ ಕೋಣೆ, ಶೌಚಾಲಯ ಹಾಗು ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲು 725 ಕೋಟಿ ಹಾಗು ಅಗತ್ಯ ಪೀಠೋಪಕರಣಕ್ಕೆ 50 ಕೋಟಿ; 46 ಕೋಟಿ ಅನುದಾನದ ಮೂಲಕ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಅಡಿಯಲ್ಲಿ 16,347 ಶಾಲೆಗಳಲ್ಲಿ ಆಧುನಿಕ ಅಡುಗೆ ಕೋಣೆ ಹಾಗು ಪಾತ್ರೆಗಳನ್ನು ಒದಗಿಸುವ ಕಾರ್ಯ ;ಕಲ್ಯಾಣ ಕರ್ನಾಟಕದ ಭಾಗದಲ್ಲಿ 200 ಕೋಟಿ ವೆಚ್ಚದೊಂದಿಗೆ 50 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಮೇಲ್ದರ್ಜೆಗೇರಿಸುವುದು; ಕಲ್ಯಾಣ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿ ಖಾಲಿ ಇರುವ ಸುಮಾರು 5,267 ಶಿಕ್ಷಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಹಾಗು 5000 ಸಾವಿರ ಹುದ್ದೆಗಳನ್ನು ಮರುಸಂಯೋಜನೆ ಮೂಲಕ ಪುನರ್ವ್ಯವಸ್ಥೆಗೊಳಿಸುವ ತುಂಬುವುದು ಮತ್ತು 5000 ಶಾಲೆಗಳಲ್ಲಿ ಪೂರ್ವ-ಪ್ರಾಥಮಿಕ ಶಿಕ್ಷಣದ ವಿಸ್ತರಣೆ ಇತ್ಯಾದಿಗಳು ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸಹಾಯವಾಗುತ್ತದೆ. ಈ ಎಲ್ಲಾ ಒಳಿತಿನ ಅಂಶಗಳಿಗೆ ಮುಖ್ಯ ಮಂತ್ರಿಯವರನ್ನು ಅಭಿನಂದಿಸಬೇಕಿದೆ.
ಒಟ್ಟಾರೆ, ಸಾರ್ವಜನಿಕ ಶಾಲಾ ಶಿಕ್ಷಣ ಬಜೆಟ್‌ನಲ್ಲಿ ಈಗಿರುವ ಆರ್ಥಿಕ ಇತಿಮಿತಿ ಮತ್ತು ಉಳಿದ ಎಲ್ಲಾ ವಲಯಗಳಿಗೆ ನ್ಯಾಯ ಒದಗಿಸುತ್ತಲೇ ಶಾಲಾ ಶಿಕ್ಷಣ ವಲಯ ಉತ್ತಮ ಪಾಲನ್ನು ಪಡೆದಿದೆ. ಇದನ್ನು ಪರಿಣಾಮಕಾರಿಯಾಗಿ ಬಳಿಸಿ ವ್ಯವಸ್ಥೆಯನ್ನು ಬಲವರ್ಧನೆಗೊಳಿಸುವ ಜವಾಬ್ದಾರಿ ಈಗ ಶಿಕ್ಷಣ ಇಲಾಖೆಯ ಮೇಲಿದೆ.
(ನಿರಂಜನಾರಾಧ್ಯ .ವಿ.ಪಿ ಅವರು, ಅಭಿವೃದ್ಧಿ ಶಿಕ್ಷಣ ತಜ್ಞರು)