ಮೋದಿ-ಕ್ಸಿ ರಾಜತಾಂತ್ರಿಕ ಹೆಜ್ಜೆಗಳಲ್ಲಿ ಕಾಣದ ಒಮ್ಮತಾಭಿಪ್ರಾಯ

ಇತ್ತೀಚಗೆ ಮುಕ್ತಾಯವಾದ SCO ಶೃಂಗಸಭೆಯಲ್ಲಿ ಸಹಕಾರದ ಚಹರೆಗಳು ಕಾಣಿಸಿವೆಯಾದರೂ, ಗಡಿ ಬಿಕ್ಕಟ್ಟುಗಳು ಮತ್ತು ಭವಿಷ್ಯದ ದ್ವಿಪಕ್ಷೀಯ ಸಮಾನತೆಯ ವಿಚಾರದಲ್ಲಿ ಭಾರತ ಮತ್ತು ಚೀನಾ ಈಗಲೂ ಭಿನ್ನಾಭಿಪ್ರಾಯಗಳನ್ನು ಹೊಂದಿವೆ.;

Update: 2025-09-03 20:30 GMT
ಚೀನಾದ ಟಿಯಾಂಜಿನ್ ನಲ್ಲಿ ನಡೆದ ಎಸ್.ಸಿ.ಓ ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಜಿಯಾಂಗ್ ಕ್ಸಿ.
Click the Play button to listen to article

ಅಂತರರಾಷ್ಟ್ರೀಯ ಸಂಬಂಧಗಳು ನಿಂತ ನೀರಲ್ಲ. ಅದು ನಿರಂತರ ಬದಲಾಗುತ್ತಿರುತ್ತವೆ ಮತ್ತು ಚಲನಶೀಲವಾಗಿರುತ್ತವೆ. ಒಮ್ಮೆ ದೇಶಗಳ ಹಿತಾಸಕ್ತಿಗಳ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಂಡರೆ, ಇನ್ನೊಮ್ಮೆ ಅವು ಘರ್ಷಣೆಗೆ ನಿಲ್ಲುತ್ತವೆ. ಆದ್ದರಿಂದ, ಜಾಗತಿಕ ಸಮೀಕರಣಗಳು ರೂಪಾಂತರಗೊಳ್ಳುತ್ತ ಹೋದ ಹಾಗೆ ಒಂದು ದೇಶದ ವಿದೇಶಾಂಗ ನೀತಿಯೂ ಕೂಡ ನಿರಂತರವಾಗಿ ಅವುಗಳಿಗೆ ಹೊಂದಿಕೊಳ್ಳುವುದು ಅವಶ್ಯಕ.

ಅದೇ ರೀತಿ, ಕೆಲವು ರಾಷ್ಟ್ರೀಯ ನಿಲುವುಗಳನ್ನು ಕೂಡ ನಿರ್ವಹಿಸಬೇಕಾಗುತ್ತದೆ. ಅವುಗಳಲ್ಲಿ ಪ್ರಮುಖವಾದುದು ಪ್ರಾದೇಶಿಕ ಸಮಗ್ರತೆಯ ಸಂರಕ್ಷಣೆ ಮತ್ತು ಶತ್ರು ರಾಷ್ಟ್ರಗಳು ಅಥವಾ ಶತ್ರುಗಳಿಂದ ಪ್ರಚೋದಿಸಲ್ಪಟ್ಟ ಮತ್ತು ಉತ್ತೇಜಿಸಲ್ಪಟ್ಟ ಸರ್ಕಾರೇತರ ಶಕ್ತಿಗಳಿಂದ ನಡೆಯುವ ಹಿಂಸಾಚಾರದಿಂದ ರಾಷ್ಟ್ರದ ಜನರನ್ನು ರಕ್ಷಿಸುವ ಅವಶ್ಯಕತೆ.

ಹೌದು, ಅವುಗಳನ್ನು ಸಾಧಿಸುವ ವಿಧಾನಗಳ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು, ಆದರೆ ಅವುಗಳ ಉದ್ದೇಶಗಳನ್ನು ಎಂದಿಗೂ ನಿರ್ಲಕ್ಷಿಸಲು ಸಾಧ್ಯವಿಲ್ಲ.

ಮೋದಿ-ಕ್ಸಿ ಭೇಟಿಯ ಫಲಿತಾಂಶದ ಮೇಲೆ ಕಣ್ಣು

ಆಗಸ್ಟ್ 31 ರಂದು ಚೀನಾದ ಟಿಯಾಂಜಿನ್ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು ಭೇಟಿ ಮಾಡಿದ ಫಲಿತಾಂಶಗಳ ಮೌಲ್ಯನಿರ್ಣಯ ಮಾಡಲು ಈ ಅಂಶಗಳನ್ನು ನೆನಪಿಸಿಕೊಳ್ಳುವುದು ಅತ್ಯಗತ್ಯ. ಜೂನ್ 2020ರ ಗಾಲ್ವಾನ್ ಘಟನೆಯ ನಂತರ ಮೋದಿ ನೀಡುತ್ತಿರುವ ಎರಡನೇ ಭೇಟಿ ಇದಾಗಿತ್ತು, ಆದರೆ ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ತೀವ್ರ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ಭೇಟಿ ನಡೆದ ಕಾರಣ ಎಸ್.ಸಿ.ಓ ಸಭೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.

ಭಾರತದ ರಫ್ತುಗಳ ಮೇಲೆ ಅಮೆರಿಕವು ಶೇಕಡಾ 50ರಷ್ಟು ಸುಂಕ ವಿಧಿಸಿದ್ದರಿಂದ ಮತ್ತು ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ವೈಯಕ್ತಿಕ ಸಂಬಂಧಗಳು ಕೂಡ ಹದಗೆಟ್ಟಿರುವ ಕಾರಣ ಭಾರತ-ಅಮೆರಿಕ ನಡುವೆ ಈ ಪ್ರತಿಕೂಲ ವಾತಾವರಣ ಉಂಟಾಗಿದೆ.

ಮೋದಿ-ಕ್ಸಿ ಭೇಟಿಯ ನಂತರ, ಭಾರತ ಮತ್ತು ಚೀನಾ ಪ್ರತ್ಯೇಕ ಹೇಳಿಕೆಗಳನ್ನು ಬಿಡುಗಡೆ ಮಾಡಿದವು. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಮೋದಿ ಮತ್ತು ಕ್ಸಿ ನಡುವಿನ ಸಂವಾದದ ಕುರಿತು ಮಾಧ್ಯಮಗೋಷ್ಠಿಯಲ್ಲಿಯೂ ಮಾತನಾಡಿದರು. ಚೀನಾದ ಹೇಳಿಕೆಯಲ್ಲಿ, ಕ್ಸಿ ಅವರು ಮೋದಿಗೆ ಏನು ಹೇಳಿದರು ಮತ್ತು ಮೋದಿ ಅವರು ಕ್ಸಿಗೆ ಏನು ಹೇಳಿದರು ಎಂಬ ಬಗ್ಗೆ ಚೀನಾ ಹೇಳಿಕೊಂಡಿರುವ ಸಂಗತಿಯನ್ನು ಉಲ್ಲೇಖಿಸಲಾಗಿದೆ. ಎರಡೂ ರಾಷ್ಟ್ರಗಳ ನಾಯಕರು ಪರಸ್ಪರ ಒಪ್ಪಿಕೊಂಡಿರುವ ಸಂಗತಿಗಳಾದರೂ ಏನು ಎಂಬುದನ್ನು ಬಿಂಬಿಸಲು ಯಾವುದೇ ಪ್ರಯತ್ನ ನಡೆಯಲಿಲ್ಲ. ಇಂತಹ ಸೂತ್ರಗಳನ್ನು ಸಾಮಾನ್ಯವಾಗಿ ಜಂಟಿ ಹೇಳಿಕೆಯಲ್ಲಿ ನಮೂದಿಸಲಾಗುತ್ತದೆ.

ಭಾರತದ ಹೇಳಿಕೆಯ ಕೆಲವು ಭಾಗಗಳಲ್ಲಿ “ಇಬ್ಬರೂ ನಾಯಕರು ಒಪ್ಪಿದರು" ಎಂಬ ವಿಧಾನವನ್ನು ಬಳಸಲು ಪ್ರಯತ್ನಿಸಿತು. ಮಾಧ್ಯಮಗೋಷ್ಠಿಯಲ್ಲಿ ಮಿಸ್ರಿ ಅವರ ಆರಂಭಿಕ ಹೇಳಿಕೆಗಳಲ್ಲಿಯೂ ಇದೇ ಮಾದರಿ ಅನುಸರಿಸಲಾಯಿತು.

ಎರಡೂ ರಾಷ್ಟ್ರಗಳ ದುರ್ಬಲ ಸಂಬಂಧಗಳು

ಚೀನಾದವರು ಉದ್ದೇಶಪೂರ್ವಕವಾಗಿ ವರ್ತಿಸುವ ಜನರು. ಪೂರ್ವ ಸಿದ್ಧತೆಗಳ ಆಧಾರದಲ್ಲಿ ಅವರ ಅಧಿಕೃತ ನಿಲುವುಗಳನ್ನು ಪ್ರಕಟಿಸಲಾಗುತ್ತದೆ, ಮತ್ತು ಅವುಗಳನ್ನು ವ್ಯಕ್ತಪಡಿಸುವ ವಿಧಾನವೂ ಮೊದಲೇ ನಿರ್ಧರಿಸಲಾಗುತ್ತದೆ. ಆದ್ದರಿಂದ, ಗಡಿ ವಿಚಾರ ಮತ್ತು ಶಾಂತಿ ಕಾಪಾಡುವ ಅಗತ್ಯದ ಕುರಿತು ಕ್ಸಿ ಏನು ಹೇಳಿದರು ಎಂಬುದನ್ನು, ಈ ಪ್ರಮುಖ ವಿಷಯದ ಬಗ್ಗೆ ಮೋದಿ ಏನು ಹೇಳಿದರು ಎಂಬುದಕ್ಕೆ ಹೋಲಿಸಿದಾಗ, ಸಾಮ್ಯತೆ ಮತ್ತು ವ್ಯತ್ಯಾಸ ಎರಡನ್ನೂ ಗಮನಿಸಬೇಕು. ಇದರ ಜೊತೆಗೆ, ಭಾರತದ ಹೇಳಿಕೆಯಲ್ಲಿ ಪ್ರಸ್ತಾಪಿಸಲಾದ ಕೆಲವು ಇತರ ವಿಷಯಗಳು ವಿದೇಶಾಂಗ ಮತ್ತು ಭದ್ರತಾ ನೀತಿ ತಜ್ಞರಷ್ಟೇ ಅಲ್ಲದೆ, ಸಾಮಾನ್ಯ ನಾಗರಿಕರ ಗಮನವನ್ನೂ ಸೆಳೆಯುತ್ತವೆ.

ಇದು ಯಾಕೆಂದರೆ ಚೀನಾ ನಮ್ಮ ಬಹುದೊಡ್ಡ ನೆರೆಯ ರಾಷ್ಟ್ರವಾಗಿದೆ. ಮೋದಿ ಮತ್ತು ಕ್ಸಿ ಅವರು ಭವಿಷ್ಯದ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಎಷ್ಟೇ ಬಣ್ಣ ಬಣ್ಣದ ಮಾತುಗಳನ್ನು ಮಾಡಿದ್ದರೂ ಕೂಡ ಚೀನಾ ಎಂದಿಗೂ ಭಾರತ ತಲೆ ಎತ್ತಿನಿಲ್ಲುವುದನ್ನು ಸಹಿಸಿಕೊಳ್ಳುವುದಿಲ್ಲ. ಅದು ಪಾಕಿಸ್ತಾನದ ಜೊತೆಗೆ ಹೊಂದಿರುವ ಗಟ್ಟಿ ಸಂಬಂಧಗಳೇ ಇದಕ್ಕೆ ಸಾಕ್ಷಿ.

ಹಾಗಾಗಿ, ಭಾರತ ಮತ್ತು ಚೀನಾ ಸಹಭಾಗಿಗಳೇ ಹೊರತು ಪ್ರತಿಸ್ಪರ್ಧಿಗಳಲ್ಲ ಎಂಬ ಮೋದಿ ಅವರ ಹೇಳಿಕೆ ಸಹ್ಯವಾದುದೇ ಆಗಿದೆ. ಆದರೆ ಚೀನಾ ಅದನ್ನು ಗಂಭೀರವಾಗಿ ಪರಿಗಣಿಸುವುದೇ? ಒಂದು ವೇಳೆ ಚೀನಾ ಸಹಭಾಗಿಯಾಗಲು ಒಪ್ಪಿಕೊಂಡರೂ, ಅದು ಭಾರತವನ್ನು ಕಿರಿಯ ಪಾಲುದಾರ ಎಂದು ನೋಡಲು ಬಯಸುತ್ತದೆಯೇ ಹೊರತು ಸಮಾನ ಪಾಲುದಾರನನ್ನಾಗಿ ಅಲ್ಲ. ಅದೇ ರೀತಿ ಚೀನಾದ ಆರ್ಥಿಕತೆಯು ಪ್ರಸ್ತುತ ಭಾರತಕ್ಕಿಂತ ಆರು ಪಟ್ಟು ದೊಡ್ಡದಾಗಿದ್ದರೂ, ಭಾರತ ಖಂಡಿತವಾಗಿಯೂ ಅದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ.

ಸಂಬಂಧ ಹಳಸಲು ಕಾರಣವಾದ ಸಂಗತಿಗಳು

ಇತ್ತೀಚಿನ ದಿನಗಳಲ್ಲಿ, ಅಂದರೆ 2020ರ ಏಪ್ರಿಲ್ನಲ್ಲಿ ಲಡಾಖ್ನಲ್ಲಿರುವ ವಾಸ್ತವ ಗಡಿ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಯಥಾಸ್ಥಿತಿಯನ್ನು ಬದಲಿಸಲು ಚೀನಾ ಮಾಡಿದ ಸ್ಪಷ್ಟ ಮತ್ತು ಹಿಂಸಾತ್ಮಕ ಪ್ರಯತ್ನದಿಂದ ಭಾರತದ ಸಂಬಂಧ ಹಳಸಲು ಆರಂಭವಾಯಿತು. ಇದು ಹಿಂಸಾತ್ಮಕ ಸಂಘರ್ಷಕ್ಕೆ ದಾರಿ ಮಾಡಿತು. ಈ ಪರಿಸ್ಥಿತಿ ತಿಳಿಗೊಳ್ಳಲು ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳಿಗೆ ಹಲವು ವರ್ಷಗಳು ಬೇಕಾಯಿತು.

ಗಡಿಯಲ್ಲಿ ಶಾಂತಿ ನೆಲೆಸುವವರೆಗೆ ಮತ್ತು ಚೀನೀ ಸೇನೆಯು ಆಕ್ರಮಣಕಾರಿ ಕ್ರಮಗಳಿಂದ ದೂರವಿರುವ ತನಕ ದ್ವಿಪಕ್ಷೀಯ ಸಂಬಂಧಗಳು ಸಹಜ ಸ್ಥಿತಿಗೆ ಮರಳಲು ಸಾಧ್ಯವಿಲ್ಲ ಎಂದು ಭಾರತ ಪ್ರತಿಪಾದಿಸುತ್ತ ಬಂದಿದೆ. ವಾಸ್ತವ ಗಡಿ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ನೆಲೆಗೊಂಡಿರುವ ಪರಿಸ್ಥಿತಿಯನ್ನು ಬದಲಿಸುವ ಪ್ರಯತ್ನದಲ್ಲಿ, ಚೀನಾ 1990ರ ದಶಕದಲ್ಲಿ ಎರಡೂ ದೇಶಗಳ ನಡುವೆ ಮಾಡಿಕೊಂಡ ಒಪ್ಪಂದಗಳನ್ನು ಉಲ್ಲಂಘಿಸಿತು. ಈ ಒಪ್ಪಂದಗಳ ಪ್ರಕಾರ, ಎರಡೂ ಸೇನೆಗಳು ಪರಸ್ಪರ ಸಮ್ಮತಿಸಿದ ನಿಯಮಗಳನ್ನು ಗೌರವಿಸುವುದರ ಮೂಲಕ ಗಡಿಗಳಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಯ್ದುಕೊಳ್ಳಬೇಕಾಗಿತ್ತು.

ಗಡಿ ನಿಯಂತ್ರಣ ರೇಖೆ (LAC)ಯಲ್ಲಿ ಈಗ ಪರಿಸ್ಥಿತಿ ತಿಳಿಯಾಗಿದೆ ಎಂಬ ಬಗ್ಗೆ ಭಾರತಕ್ಕೆ ತೃಪ್ತ ಭಾವನೆ ಇದ್ದಂತೆ ಕಾಣುತ್ತಿದೆ. ಕ್ಸಿ ಅವರೊಂದಿಗಿನ ಸಭೆಯಲ್ಲಿ ಮೋದಿ ತಮ್ಮ ಆರಂಭಿಕ ಹೇಳಿಕೆಯಲ್ಲಿ, "ಗಡಿಯಿಂದ ಸೇನೆಯನ್ನು ಹಿಂದಕ್ಕೆ ಕರೆದ ನಂತರ, ಈಗ ಶಾಂತಿ ಮತ್ತು ಸ್ಥಿರ ವಾತಾವರಣವಿದೆ. ನಮ್ಮ ವಿಶೇಷ ಪ್ರತಿನಿಧಿಗಳು ಗಡಿ ನಿರ್ವಹಣೆಯ ಕುರಿತು ಒಪ್ಪಂದಕ್ಕೂ ಬಂದಿದ್ದಾರೆ" ಎಂದು ಹೇಳಿದರು.

ಗಡಿಯಲ್ಲಿ ಶಾಂತಿ-ಇನ್ನೂ ಸಹಮತವಿಲ್ಲ

ಮೋದಿ ಅವರ ಮಾತುಗಳಿಗೆ ಹೋಲಿಸಿದರೆ ಗಡಿ ಕುರಿತ ಕ್ಸಿ ಅವರ ಮಾತು ಸಂಪೂರ್ಣ ಭಿನ್ನ. "ಎರಡೂ ಏಷ್ಯಾ ರಾಷ್ಟ್ರಗಳು ತಮ್ಮ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಯ್ದುಕೊಳ್ಳಲು ತಮ್ಮ ಶಕ್ತಿಯನ್ನು ಒಟ್ಟುಗೂಡಿಸಬೇಕು" ಎಂದು ಅವರು ಹೇಳಿದರು. ಗಡಿ ಸ್ಥಿರತೆಯ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆಯು, "ಕಳೆದ ವರ್ಷದ ಯಶಸ್ವಿ ಸೇನಾ ವಾಪಸಾತಿ ಕ್ರಮ ಮತ್ತು ಅಂದಿನಿಂದ ಗಡಿ ಪ್ರದೇಶಗಳಲ್ಲಿ ಶಾಂತಿ ಹಾಗೂ ಸೌಹಾರ್ದತೆ ಕಾಯ್ದುಕೊಂಡಿದ್ದನ್ನು ಇಬ್ಬರೂ ನಾಯಕರು ಸಂತೃಪ್ತಿಯಿಂದ ಗಮನಿಸಿದರು" ಎಂದು ತಿಳಿಸಿದೆ.

ಚೀನಾದ ಹೇಳಿಕೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆಗಳ ನಡುವೆ ಸ್ಪಷ್ಟ ವ್ಯತ್ಯಾಸವಿದೆ. ಕ್ಸಿ ಅವರು ಮೋದಿ ಮಾತಿಗೆ ಸಮ್ಮತಿಸಿದ್ದಾರೆಂದು ಭಾವಿಸಲಾದ ವಿಷಯಗಳ ಬಗ್ಗೆ ಈ ವ್ಯತ್ಯಾಸಗಳು, ಗಡಿಗಳಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ವಿಷಯದಲ್ಲಿಯೂ ಎರಡೂ ದೇಶಗಳು ಇನ್ನೂ ಸಂಪೂರ್ಣವಾಗಿ ಏಕಮತವನ್ನು ಹೊಂದಿಲ್ಲ ಎಂಬುದನ್ನು ತೋರಿಸುತ್ತವೆ.

ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು 1988ರಲ್ಲಿ ಚೀನಾಕ್ಕೆ ಭೇಟಿ ನೀಡಿದ ನಂತರ ಭಾರತ-ಚೀನಾ ಸಂಬಂಧ ಸಹಜ ಸ್ಥಿತಿಗೆ ಮರಳಲು ಶುರುವಾಯಿತು. ಕಳೆದ 15 ವರ್ಷಗಳಲ್ಲಿ, ಎರಡೂ ದೇಶಗಳ ಆರ್ಥಿಕ ಮತ್ತು ವಾಣಿಜ್ಯ ಸಂಬಂಧಗಳು ಮತ್ತಷ್ಟು ಬಲಗೊಂಡಿವೆ. ಆದರೂ, ಈ ಎಲ್ಲದರ ನಡುವೆಯೂ, ದ್ವಿಪಕ್ಷೀಯ ಸಂಬಂಧಗಳು ಸಂಪೂರ್ಣ ಸಹಜ ಸ್ಥಿತಿಗೆ ಬರಲು ಗಡಿ ಸಮಸ್ಯೆಯ ಪರಿಹಾರ ಅಗತ್ಯ ಎಂದು ಭಾರತ ಯಾವತ್ತಿನಿಂದಲೂ ಪ್ರತಿಪಾದಿಸುತ್ತ ಬಂದಿದೆ.

ಭಾರತದ ಸುಮಾರು 38,000 ಚದರ ಕಿ.ಮೀ ಭೂಪ್ರದೇಶ ಈಗಲೂ ಚೀನಾದ ವಶದಲ್ಲಿದೆ ಮತ್ತು ಪಾಕಿಸ್ತಾನವು ಕಾನೂನುಬಾಹಿರವಾಗಿ ಚೀನಾಕ್ಕೆ 5,000 ಚದರ ಕಿ.ಮೀಗೂ ಹೆಚ್ಚು ಭಾರತದ ಭೂಪ್ರದೇಶವನ್ನು ಬಿಟ್ಟುಕೊಟ್ಟಿದೆ. ಈ ವಿಷಯವನ್ನು ಇತ್ಯರ್ಥ ಪಡಿಸಬೇಕಾಗಿದ್ದರೂ, ಒಪ್ಪಿಕೊಂಡಿರುವ ವಾಸ್ತವ ಗಡಿ ನಿಯಂತ್ರಣ ರೇಖೆಗಾಗಿ ಕೆಲಸ ಮಾಡುವ ವಿಚಾರದಲ್ಲಿ ಗಂಭೀರ ನಿಲುವನ್ನು ತೋರಿಸುವಂತೆ ಚೀನಾವನ್ನು ಭಾರತ ಒತ್ತಾಯಿಸಿದೆ. ಎರಡೂ ಸರ್ಕಾರಗಳ ವಿಶೇಷ ಪ್ರತಿನಿಧಿಗಳು ಗಡಿ ಮತ್ತು ವಾಸ್ತವ ಗಡಿ ನಿಯಂತ್ರಣ ರೇಖೆಯ ಕುರಿತು ಚರ್ಚಿಸಲು ಜವಾಬ್ದಾರರಾಗಿದ್ದರೂ, ಚೀನಾ ಈ ಕುರಿತು ಯಾವುದೇ ಆಸಕ್ತಿ ತೋರಿಸಿಲ್ಲ.

ಗಡಿ ತಂಟೆಯು ಇತರ ಕ್ಷೇತ್ರಗಳ ಸಂಬಂಧಗಳಿಗೆ ಅಡ್ಡಿಯಾಗಬಾರದು ಎಂಬುದು ಚೀನಾದ ನಿಲುವು. ಕ್ಸಿ ಅವರು ಮೋದಿ ಅವರೊಂದಿಗಿನ ತಮ್ಮ ಮಾತುಕತೆಯಲ್ಲೂ ಇದನ್ನೇ ಪುನರುಚ್ಚರಿಸಿದರು. ಆದರೆ, ಮೋದಿ ಅವರು ಕ್ಸಿ ಜಿನ್ಪಿಂಗ್ ಅವರೊಂದಿಗಿನ ತಮ್ಮ ಆರಂಭಿಕ ಮಾತುಕತೆಯಲ್ಲಿ ಗಡಿ ಸಮಸ್ಯೆಯನ್ನು ಪರಿಹರಿಸುವ ಅಗತ್ಯದ ಬಗ್ಗೆ ಏನನ್ನೂ ಹೇಳದೇ ಇರುವುದು ಗಮನಾರ್ಹ.

ಈ ವಿಚಾರದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆಯು ಹೀಗಿದೆ, "ಅವರು ತಮ್ಮ ಒಟ್ಟಾರೆ ದ್ವಿಪಕ್ಷೀಯ ಸಂಬಂಧಗಳು ಮತ್ತು ಎರಡೂ ಕಡೆಯ ಜನರ ದೀರ್ಘಕಾಲೀನ ಹಿತಾಸಕ್ತಿಗಳ ರಾಜಕೀಯ ದೃಷ್ಟಿಕೋನದ ಹಿನ್ನೆಲೆಯಲ್ಲಿ ಗಡಿ ಪ್ರಶ್ನೆಗೆ ನ್ಯಾಯಯುತ, ಸಮಂಜಸ ಮತ್ತು ಪರಸ್ಪರ ಸಮ್ಮತಾರ್ಹ ಪರಿಹಾರಕ್ಕಾಗಿ ಬದ್ಧತೆಯನ್ನು ವ್ಯಕ್ತಪಡಿಸಿದರು. ಈ ತಿಂಗಳ ಆರಂಭದಲ್ಲಿ ನಡೆದ ತಮ್ಮ ಮಾತುಕತೆಯಲ್ಲಿ ಎರಡೂ ದೇಶಗಳ ವಿಶೇಷ ಪ್ರತಿನಿಧಿಗಳು ತೆಗೆದುಕೊಂಡ ಪ್ರಮುಖ ನಿರ್ಧಾರಗಳನ್ನು ಅವರು ಗುರುತಿಸಿದರು ಮತ್ತು ಅವರ ಪ್ರಯತ್ನಗಳಿಗೆ ಮತ್ತಷ್ಟು ಬೆಂಬಲ ನೀಡಲು ಒಪ್ಪಿಕೊಂಡರು".

ಚೀನಾದ ಹೇಳಿಕೆಯಲ್ಲಿ ಈ ವಿಷಯಗಳ ಉಲ್ಲೇಖವೇ ಇಲ್ಲ. "ಚೀನಾ-ಭಾರತದ ಒಟ್ಟಾರೆ ಸಂಬಂಧಗಳನ್ನು ನಿರ್ಧರಿಸಲು ಗಡಿ ಸಮಸ್ಯೆಗೆ ಅವಕಾಶ ನೀಡಬಾರದು" ಎಂದು ಕ್ಸಿ ಜಿನ್ಪಿಂಗ್ ಹೇಳಿದ್ದಾರೆ ಎಂದು ಮಾತ್ರ ಅದು ತಿಳಿಸಿದೆ.

ಗಡಿ ತಂಟೆ ಪರಿಹಾರಕ್ಕೆ ಚೀನಾಕ್ಕಿಲ್ಲ ಆಸಕ್ತಿ

ಹೀಗಾಗಿ, ಗಡಿ ಸಮಸ್ಯೆಯಂತಹ ಮಹತ್ವದ ವಿಷಯದಲ್ಲಿ ಎರಡೂ ದೇಶಗಳ ನಿಲುವುಗಳು ಇನ್ನೂ ದೂರವೇ ಉಳಿದಿವೆ. ಈ ಸಮಸ್ಯೆಯನ್ನು ಪರಿಹರಿಸಲು ಚೀನಾಕ್ಕೆ ಆಸಕ್ತಿಯೇ ಇಲ್ಲ. ಹೆಚ್ಚೆಂದರೆ, ಭಾರತಕ್ಕೆ ಅನನುಕೂಲವಾಗುವ ರೀತಿಯಲ್ಲಿ ತುಂಡು-ತುಂಡಾಗಿ ಪರಿಹರಿಸಲು ಅದು ಬಯಸಬಹುದು. ಚೀನಾ ಟಿಬೆಟ್ನಲ್ಲಿ ಕೈಗೊಳ್ಳುತ್ತಿರುವ ಭಾರಿ ಮೂಲಸೌಕರ್ಯ ಅಭಿವೃದ್ಧಿಯನ್ನು ಭಾರತ ನಿರ್ಲಕ್ಷಿಸಲು ಸಾಧ್ಯವಿಲ್ಲ. ಯಾಕೆಂದರೆ ಇದು ಮಿಲಿಟರಿ ಪರಿಣಾಮಗಳನ್ನು ಹೊಂದಿದೆ. ಆದ್ದರಿಂದ, ಭಾರತವು ಲಡಾಖ್ ಸೇರಿದಂತೆ ವಾಸ್ತವ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ತನ್ನ ನಿಯೋಜನೆಗಳನ್ನು ಕಡಿಮೆ ಮಾಡಬಾರದು ಕೂಡ.

ಮೋದಿ ಮತ್ತು ಕ್ಸಿ ಜಿನ್ಪಿಂಗ್ ಇಬ್ಬರೂ ಪರಸ್ಪರ ಸಹಕಾರದ ಮನೋಭಾವದಿಂದ ಎರಡೂ ದೇಶಗಳಿಗೆ ಆಗುವ ಲಾಭಗಳ ಬಗ್ಗೆ ಮಾತನಾಡಿದರು. ಜಗತ್ತಿನ ದಕ್ಷಿಣ ರಾಷ್ಟ್ರಗಳಿಗೆ ಭಾರತ ಮತ್ತು ಚೀನಾ ನೀಡಬಹುದಾದ ಕೊಡುಗೆಗಳ ಬಗ್ಗೆಯೂ ಅವರು ಒತ್ತಿ ಹೇಳಿದರು. ಇವು ಒಳ್ಳೆಯ ಭಾವನೆಗಳು ಎಂಬುದೇನೋ ನಿಜ, ಆದರೆ ವಾಸ್ತವವಾಗಿ, ಚೀನಾ ಈಗ ತನ್ನನ್ನು ತಾನು ಅಮೆರಿಕಕ್ಕೆ ಸರಿಸಮಾನ ಎಂದು ಪರಿಗಣಿಸಿದೆ ಮತ್ತು ಭಾರತವನ್ನು ಕೇವಲ ದಕ್ಷಿಣ ಏಷ್ಯಾ ರಾಷ್ಟ್ರವೆಂದು ಭಾವಿಸಿದೆ, ಎಂದಿಗೂ ಅದು ತನ್ನ ಸರಿಸಮಾನ ಎಂದು ಪರಿಗಣಿಸುವುದಿಲ್ಲ. ಟ್ರಂಪ್ ಭಾರತದ ವಿರುದ್ಧ ತೆಗೆದುಕೊಂಡ ನಕಾರಾತ್ಮಕ ಕ್ರಮಗಳಿಂದಾಗಿ ಭಾರತೀಯ ನೀತಿ ನಿರೂಪಕರು ಇತರ ಆಯ್ಕೆಗಳನ್ನು ಹುಡುಕುತ್ತಿದ್ದರೂ, ಈ ವಾಸ್ತವ ಸಂಗತಿಯನ್ನು ಅವರು ಮರೆಯಬಾರದು.

ಮೋದಿ ಮತ್ತು ಕ್ಸಿ ಅವರ ಭೇಟಿಯ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಮಿಸ್ರಿ ಅವರು, "ಗಡಿಯಾಚೆಗಿನ ಭಯೋತ್ಪಾದನೆಯನ್ನು ಪ್ರಧಾನಿ ಪ್ರಮುಖ ವಿಷಯವೆಂದು ಉಲ್ಲೇಖಿಸಿದ್ದಾರೆ. ಇದು ಭಾರತ ಮತ್ತು ಚೀನಾ ಎರಡರ ಮೇಲೂ ಪರಿಣಾಮ ಬೀರುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಆದ್ದರಿಂದ, ನಾವು ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸಲು ಪರಸ್ಪರ ಅರಿವು ಮತ್ತು ಬೆಂಬಲ ನೀಡುವುದು ಮುಖ್ಯವಾಗಿದೆ. ಪ್ರಸ್ತುತ ಎಸ್.ಸಿ.ಓ ಶೃಂಗಸಭೆಯ ಸಂದರ್ಭದಲ್ಲಿ ಗಡಿಯಾಚೆಗಿನ ಭಯೋತ್ಪಾದನೆಯ ವಿಷಯವನ್ನು ನಾವು ನಿರ್ವಹಿಸಲು ಮುಂದಾದಾರೆ ನಮಗೆ ಚೀನಾದ ಸಹಕಾರ ದೊರೆಯುತ್ತದೆ ಎಂದು ಹೇಳಲು ಬಯಸುತ್ತೇನೆ" ಎಂದು ತಿಳಿಸಿದರು.

ಎಸ್.ಸಿ.ಓ ಶೃಂಗಸಭೆ ಪಹಲ್ಗಾಮ್ ದಾಳಿಯನ್ನು ಖಂಡಿಸಿದ್ದು ನಿಜ. ಆದಾಗ್ಯೂ, ಗಡಿಯಾಚೆಗಿನ ಭಯೋತ್ಪಾದನೆಯಿಂದ ಚೀನಾ ಕೂಡ ಬಳಲುತ್ತಿದೆ ಎಂದು ಭಾರತ ಒಪ್ಪಿಕೊಂಡಿರುವುದು ವಿಚಿತ್ರ.

ಗಡಿಯಾಚೆಗಿನ ಭಯೋತ್ಪಾದನೆ ಎಂದರೆ, ಒಂದು ನೆರೆಯ ದೇಶ ಇನ್ನೊಂದು ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮುಕ್ಕು ನೀಡುವುದು ಅಥವಾ ಪಾಕಿಸ್ತಾನ ಭಾರತದಲ್ಲಿ ಮಾಡುತ್ತಿರುವಂತೆ ತಾನೇ ನಡೆಸುವುದು. ಚೀನಾ ತನ್ನ ದಮನಕಾರಿ ನೀತಿಗಳಿಂದಾಗಿ ಉಗ್ರವಾದವನ್ನು ಅನುಭವಿಸಬಹುದು. ಆದರೆ ಅದು ಗಡಿಯಾಚೆಗಿನ ಭಯೋತ್ಪಾದನೆಯನ್ನು ಅನುಭವಿಸುವುದಿಲ್ಲ. ಭಾರತ ಹೀಗೆ ಹೇಳಿರುವುದು ಬಹುಶಃ ಇದೇ ಮೊದಲು. ಹೀಗೆ ಮಾಡಿದ್ದಾದರೂ ಯಾಕೆ? ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಇದಕ್ಕೆ ಸ್ಪಷ್ಟನೆ ನೀಡುವುದು ಅಗತ್ಯವಾಗಿದೆ.


Tags:    

Similar News