ಚಿತ್ರನಟ ದರ್ಶನ್‌ ಮತ್ತು ಇತರ 16 ಮಂದಿ ವಿರುದ್ಧ ಕೊಲೆ ಆರೋಪಪಟ್ಟಿ; ಆರೋಪಿಗಳ ಬಿಡುಗಡೆ ಸಾಧ್ಯವೇ?

ರೇಣುಕಾಸ್ವಾಮಿ ದೇಹದ ಮೇಲಾಗಿರುವ 39 ಭೀಕರ ಗಾಯಗಳು ದರ್ಶನ್‌ ಮತ್ತು ತಂಡ ಎಸಗಿದ ಕ್ರೌರ್ಯವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುತ್ತವೆ. ಫೋಸ್ಟ್ ಮಾರ್ಟಂ ವರದಿಯು ಕೊಲೆ ನಡೆದ ವೇಳೆಯನ್ನು ಪುಷ್ಟೀಕರಿಸುತ್ತದೆ.

Update: 2024-09-06 00:30 GMT

ದೇಶದಾದ್ಯಂತ ಸುದ್ಧಿ ಮಾಡಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರು ನಗರ ಪೊಲೀಸರು ಸುಮಾರು ನಾಲ್ಕು ಸಾವಿರ ಪುಟಗಳ ಸುದೀರ್ಘ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮೂಲಕ ಪ್ರಕರಣದ ತನಿಖೆಯ ಒಂದು ಹಂತ ಮುಗಿದಿದೆ. ಇನ್ನೂ ಕೆಲವು ದಾಖಲೆಗಳು ಬಂದ ಬಳಿಕ ಪೂರಕ ಆರೋಪಪಟ್ಟಿಯನ್ನು ಸಲ್ಲಿಸುವುದಾಗಿ ಪೊಲೀಸರು ಹೇಳಿದ್ದಾರೆ. ಮುಂದೆ ಈ ಪ್ರಕರಣದಲ್ಲಿ ಏನಾಗುತ್ತದೆ ಎನ್ನುವುದೇ ಸಾರ್ವಜನಿಕರ ಮನದಲ್ಲಿರುವ ಪ್ರಶ್ನೆಯಾಗಿದೆ.

ಮೊದಲಿಗೆ ಈ ಪ್ರಕರಣ ಯಾವ ರೀತಿ ಬೆಳಕಿಗೆ ಬಂದಿತು ಎನ್ನುವುದನ್ನು ಪರಿಶೀಲಿಸೋಣ. 2024ರ ಜೂನ್ 9ರಂದು ಬೆಂಗಳೂರಿನ ಸುಮನಹಳ್ಳಿಯ ಮೋರಿಯ ಬಳಿ ಅಪರಿಚಿತ ಶವವೊಂದನ್ನು ಬೀದಿ ನಾಯಿಗಳು ಎಳೆದಾಡುತ್ತಿರುವುದನ್ನು ಕಂಡ ಸೆಕ್ಯೂರಿಟಿ ಗಾರ್ಡ್ ಒಬ್ಬ ಈ ಬಗ್ಗೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಬಂದು ನೋಡಿದಾಗ ಶವದ ಮೇಲೆ ಹಲವಾರು ಗಾಯಗಳಿದ್ದದ್ದನ್ನು ಕಂಡರು. ಮೇಲ್ನೋಟಕ್ಕೇ ಇದು ಕೊಲೆಯ ಪ್ರಕರಣ ಎಂದು ತಿಳಿದ ಕಾರಣ ಠಾಣೆಯಲ್ಲಿ ಕೊಲೆ ಮತ್ತು ಸಾಕ್ಷ್ಯ ನಾಶದ ಪ್ರಕರಣವೊಂದನ್ನು ದಾಖಲು ಮಾಡಲಾಯಿತು. ಪ್ರಕರಣವು ದಾಖಲಾಗುವ ಸಮಯದಲ್ಲಿ ಮೃತ ವ್ಯಕ್ತಿ ಯಾರು, ಆತನನ್ನು ಇಷ್ಟು ಭೀಕರವಾಗಿ ಯಾರು ಕೊಲೆ ಮಾಡಿದರು, ಆತನ ಮೈಮೇಲೆ ಇದ್ದ ಗಾಯಗಳು ಹೇಗಾದವು ಎನ್ನುವ ವಿಷಯಗಳೇ ಪೊಲೀಸರಿಗೆ ತಿಳಿದಿರಲಿಲ್ಲವಾದ್ದರಿಂದ ಆ ನಿಟ್ಟಿನಲ್ಲಿ ತನಿಖೆ ಪ್ರಾರಂಭವಾಯಿತು.

ವಾಡಿಕೆಯಂತೆ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ವರದಿಗಾಗಿ ಕಾಯತೊಡಗಿದರು. ಮಾರನೆಯ ಸಂಜೆ 7 ಗಂಟೆಗೆ ನಾಲ್ಕು ಜನರು, ರಾಘವೇಂದ್ರ, ಕಾರ್ತಿಕ್, ನಿಖಿಲ್ ನಾಯಕ್ ಮತ್ತು ಕೇಶವಮೂರ್ತಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಬಂದರು. ತಾವು ರೇಣುಕಾಸ್ವಾಮಿ ಎನ್ನುವ ವ್ಯಕ್ತಿಯನ್ನು ಹಣಕಾಸು ವ್ಯವಹಾರದ ವ್ಯಾಜ್ಯದ ಸಂಬಂಧ ಕೊಲೆ ಮಾಡಿ ಆತನ ದೇಹವನ್ನು ಸುಮನಹಳ್ಳಿ ಬಳಿಯಿರುವ ಮೋರಿಯಲ್ಲಿ ಎಸೆದಿದ್ದಾಗಿ ಮಾಹಿತಿಯಿತ್ತರು. ಹಿಂದಿನ ದಿನ ಪೊಲೀಸರಿಗೆ ಸಿಕ್ಕ ಶವವೇ ರೇಣುಕಾಸ್ವಾಮಿಯದು ಎಂದ ಅವರು ಅವನ ಕೊಲೆಯ ಸಂಬಧ ದಾಖಲಾದ ಪ್ರಕರಣದಲ್ಲಿ ತಾವು ಶರಣಾಗುತ್ತಿರುವುದಾಗಿ ಹೇಳಿದರು. ಆಗಲೇ ಮೃತ ವ್ಯಕ್ತಿಯ ಗುರುತು ಚಿತ್ರದುರ್ಗದ ರೇಣುಕಾಸ್ವಾಮಿ ಎಂದು ಗೊತ್ತಾಯಿತು.

ಶರಣಾದವರಲ್ಲ ಕೊಲೆಗಾರರು

ಶರಣಾದ ನಾಲ್ಕೂ ಜನರನ್ನು ಪೊಲೀಸರು ಬೇರೆ ಬೇರೆಯಾಗಿ ಮತ್ತು ಒಟ್ಟಾರೆಯಾಗಿ ವಿಚಾರಣೆ ನಡೆಸಿದಾಗ ಅವರ ಹೇಳಿಕೆಗಳಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬಂದು ಅವರ ಹೇಳಿಕೆಗಳ ಮೇಲೆ ತೀವ್ರ ಅನುಮಾನ ಮೂಡಿ ಬಂದಿತು. ಮುಂದೆ ಅವರ ಕೂಲಂಕಷ ವಿಚಾರಣೆ ಮಾಡಿದಾಗ ಮೃತ ರೇಣುಕಾಸ್ವಾಮಿ ಕನ್ನಡದ ಸಿನಿಮಾ ನಟ ದರ್ಶನ್ನ ಅಭಿಮಾನಿಯಾಗಿದ್ದಾಗಿಯೂ ಆತ ದರ್ಶನ್ನ ಸ್ನೇಹಿತೆ ಪವಿತ್ರಾ ಗೌಡ ಇವಳಿಗೆ ಅಶ್ಲೀಲ ಚಿತ್ರಗಳನ್ನು ಕಳಿಸಿದ್ದ ಕಾರಣ ದರ್ಶನ್ ಮತ್ತಿತರರು ಅವನನ್ನು ಕೊಲೆ ಮಾಡಿದ್ದಾಗಿ ತಿಳಿಯಿತು. ಕೊಲೆಯ ಆರೋಪವನ್ನು ತಮ್ಮ ಮೇಲೆ ಹೊರಿಸಿಕೊಳ್ಳಲು ತಮಗೆ ತಲಾ ಐದು ಲಕ್ಷ ರೂಪಾಯಿಗಳನ್ನು ಕೊಡಲಾಗುವುದೆಂದು ದರ್ಶನ್ನ ಸಹಚರ ನಿಖಿಲ್ ಎನ್ನುವವನು ಹೇಳಿದ್ದನೆಂದೂ ಅವರು ತಿಳಿಸಿದ್ದು ತಮ್ಮಲ್ಲಿ ಇಬ್ಬರಿಗೇ ಆಗಲೇ ಹಣ ಸಂದಾಯವಾಗಿರುವುದಾಗಿ ತಿಳಿಸಿದರು. ತಾವು ರೇಣುಕಾಸ್ವಾಮಿಯ ಶವವನ್ನು ಕೊಲೆ ನಡೆದ ಸ್ಥಳದಿಂದ ವಾಹನವೊಂದರಲ್ಲಿ ಹಾಕಿಕೊಂಡು ಸುಮನಹಳ್ಳಿಯವರೆಗೆ ಬಂದಿದ್ದಾಗಿ ಹೇಳಿದ ಅವರು ವಾಹನದ ವಿವರಗಳನ್ನು ನೀಡಿದರು.

ಆ ನಾಲ್ಕು ಜನರ ಹೇಳಿಕೆಯ ಮೇರೆಗೆ ಪೊಲೀಸರು ಕೊಲೆ ನಡೆಯಿತೆನ್ನಲಾದ ಬೆಂಗಳೂರು ರಾಜರಾಜೇಶ್ವರಿ ನಗರ ಬಡಾವಣೆಯ ಪಟ್ಟಣಗೆರೆ ಶೆಡ್ಗೆ ವಿಧಿವಿಜ್ಞಾನಿಗಳ ತಂಡದ ಜೊತೆ ಹೋಗಿ ಸಾಕ್ಷಾö್ಯದಾರಗಳನ್ನು ಸಂಗ್ರಹಿಸಿದರು. ಮುಂದೆ ತಿಳಿದುಬಂದದ್ದೇನೆಂದರೆ ಮೃತ ರೇಣುಕಾಸ್ವಾಮಿ (33) ಚಿತ್ರದುರ್ಗದ ಫಾರ್ಮಸಿಯೊಂದರ ನೌಕರನಾಗಿದ್ದು ನಟ ದರ್ಶನ್ನ ಕಟ್ಟಾ ಅಭಿಮಾನಿಯಾಗಿದ್ದ. ಮದುವೆಯಾಗಿದ್ದ ತನ್ನ ಹೀರೋ ದರ್ಶನ್, ನಟಿ ಪವಿತ್ರಾ ಗೌಡ ಎನ್ನುವವಳ ಜತೆ ಸಂಬಂಧವನ್ನಿಟ್ಟುಕೊಂಡಿದ್ದು ಆತನಿಗೆ ಇಷ್ಟವಿರಲಿಲ್ಲ. ತನ್ನ ಹೀರೋನ ವೈವಾಹಿಕ ಜೀವನವು ಪವಿತ್ರಾಳಿಂದ ಹಾಳಾಗುತ್ತಿದೆ ಎನ್ನುವ ಭಾವನೆ ಅವನ ಮನದಲ್ಲಿ ಮೂಡಿತ್ತು. ಹೀಗಾಗಿ ಆತ ಪವಿತ್ರಾಳಿಗೆ ಸಾಮಾಜಿಕ ಜಾಲತಾಣವೊಂದರ ಮುಖಾಂತರ 2024ರ ಫೆಬ್ರವರಿ ತಿಂಗಳಿನಿಂದಲೇ ನಕಲಿ ಹೆಸರಿನಲ್ಲಿ ಸಂದೇಶಗಳನ್ನು ಕಳುಹಿಸತೊಡಗಿದ. ದರ್ಶನ್ನ ಸಂಗಬಿಡಲು ಅವಳಿಗೆ ತಾಕೀತು ಮಾಡಿದ್ದಲ್ಲದೆ ಆಕೆಗೆ ಪದೇಪದೆ ಅಶ್ಲೀಲ ಸಂದೇಶಗಳನ್ನು ಕಳುಹಿಸತೊಡಗಿದ. ಇದಲ್ಲದೆ ಬೆತ್ತಲೆ ಫೋಟೋಗಳನ್ನೂ ಕಳಿಸಿದ. ಇದರಿಂದ ಕ್ರೋಧಗೊಂಡ ಪವಿತ್ರಾ ಈ ವಿಷಯವನ್ನು ತನ್ನ ಮ್ಯಾನೇಜರ್ ಪವನ್ ಹಾಗೂ ದರ್ಶನ್ಗೆ ತಿಳಿಸಿದಳು.

ಆನಂತರ ಪವನ್ ಇಂಟರ್ನೆಟ್ ಮೂಲಕವೇ ಪತ್ತೇದಾರಿ ಕೆಲಸವನ್ನು ನಡೆಸಿ ಅಶ್ಲೀಲ ಸಂದೇಶಗಳನ್ನು ಕಳಿಹಿಸುತ್ತಿದ್ದವನು ಚಿತ್ರದುರ್ಗದ ರೇಣುಕಾ ಸ್ವಾಮಿಯೇ ಎಂದು ಪತ್ತೆ ಮಾಡಿದ್ದಲ್ಲದೆ ಆತ ದರ್ಶನ್ನ ಕಟ್ಟಾ ಅಭಿಮಾನಿ ಎಂದೂ ಅರಿತ. ಇದನ್ನು ಆತ ದರ್ಶನ್ ಮತ್ತು ಪವಿತ್ರಾಗೆ ತಿಳಿಸಿದಾಗ ರೇಣುಕಾಸ್ವಾಮಿಗೆ ಬುದ್ದಿ ಕಲಿಸಬೇಕೆಂದು ಅವರಿಬ್ಬರೂ ತೀರ್ಮಾನಿಸಿದರು. ನಂತರ ದರ್ಶನ್ನ ಆದೇಶದ ಮೇರೆಗೆ 2024ರ ಜೂನ್ 7ರಂದು ಚಿತ್ರದುರ್ಗ ಜಿಲ್ಲೆಯ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ (ಇವನು ಪೊಲೀಸರ ಮುಂದೆ ಸರೆಂಡರ್ ಆದವರಲ್ಲಿ ಒಬ್ಬ) ಎನ್ನುವವವನು ರೇಣುಕಾಸ್ವಾಮಿಯನ್ನು ತನ್ನ ಕೆಲವು ಸ್ನೇಹಿತರೊಡನೆ ಚಿತ್ರದುರ್ಗದಿಂದ ಅಪಹರಿಸಿಕೊಂಡು ಬೆಂಗಳೂರಿಗೆ ಕರೆತಂದ. ಬೆಂಗಳೂರಿನ ಪಟ್ಟಣಗೆರೆ ಶೆಡ್ಗೆ ರೇಣುಕಾಸ್ವಾಮಿಯನ್ನು ಕರೆತಂದ ಬಳಿಕ ಆತ ಮತ್ತಿತರರು ರೇಣುಕಾಸ್ವಾಮಿಯನ್ನು ಥಳಿಸಿ ಆತನನ್ನು ಬೆಂಗಳೂರಿಗೆ ಕರೆತಂದಿರುವ ಮಾಹಿತಿಯನ್ನು ದರ್ಶನ್ಗೆ ನೀಡಿದರು. ಕೆಲ ಸಮಯದ ನಂತರ ಸ್ಥಳಕ್ಕೆ ಬಂದ ದರ್ಶನ್, ಪವಿತ್ರಾ ಗೌಡ ಮತ್ತ್ತಿತರರು ರೇಣುಕಾಸ್ವಾಮಿಯನ್ನು ಅಮಾನುಷವಾಗಿ ಥಳಿಸಿದರು. ಆ ಏಟುಗಳನ್ನು ತಡೆಯಲಾರದೆ ರೇಣುಕಾಸ್ವಾಮಿ ಸತ್ತುಹೋದ. ಆಗ ತಾನು ಮಾಡಿದ ಕೊಲೆಯನ್ನು ಮುಚ್ಚಿಡಲು ದರ್ಶನ್ ರೇಣುಕಾಸ್ವಾಮಿಯ ದೇಹವನ್ನು ಎಲ್ಲಾದರೂ ಎಸೆದುಬಿಡಲು ತನ್ನ ಜತೆಗಾರರಿಗೆ ಆದೇಶಿಸಿದ. ಅಂತೆಯೇ ದೇಹವನ್ನು ಮೋರಿಯಲ್ಲಿ ಎಸೆಯಲಾಯಿತು.

ದರ್ಶನ್ ಬಂಧನ

ಪೊಲೀಸ್ ಠಾಣೆಗೆ ಸರೆಂಡರ್ ಆಗಿದ್ದ ನಾಲ್ಕು ಜನರಿಂದ ಈ ಮಾಹಿತಿಯನ್ನು ಸಂಗ್ರಹಿಸಿದ ನಂತರ ಪೊಲೀಸರು 2024ರ ಜೂನ್ 11ರಂದು, ಮೈಸೂರಿಗೆ ಹೋಗಿ ನಟ ದರ್ಶನ್ನನ್ನು ಬಂಧಿಸಿದರು.ಆನಂತರ ಪ್ರಕರಣದ ಉಳಿದ ಎಲ್ಲ ಆರೋಪಿಗಳನ್ನೂ ಬಂಧಿಸಿದರು. ಆನಂತರದ ತನಿಖೆಯಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲ ಸಾಕ್ಷಾö್ಯಧಾರಗಳನ್ನೂ ಸಂಗ್ರಹಿಸಲಾಗಿದ್ದು ಇದೀಗ 17 ಜನರ ವಿರುದ್ಧ ಆರೋಪಪಟ್ಟಿಯನ್ನು ಸಲ್ಲಿಸಲಾಗಿದೆ.

ಈ ಪ್ರಕರಣವು ಹೊಸ ಕ್ರಿಮಿನಲ್ ಕಾನೂನುಗಳು ಜಾರಿಯಾಗುವ ಮೊದಲೇ ದಾಖಲಾಗಿರುವ ಕಾರಣ ಪ್ರಕರಣವು ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರೊಸೀಜರ್ ಕೋಡ್ ಹಾಗೂ ಇಂಡಿಯನ್ ಎವಿಡೆನ್ಸ್ ಆಕ್ಟ್ ಕಾನೂನುಗಳ ಅಡಿಯಲ್ಲಿಯೇ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲ್ಪಡುತ್ತದೆ. ಎಲ್ಲ ಆರೋಪಿಗಳೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈ ಪ್ರಕರಣದಲ್ಲಿ ಅಳವಡಿಸಿರುವ ಅಪರಾಧಗಳು ಯಾವುವೆಂದರೆ ಕೊಲೆ, ಸಾಕ್ಷ್ಯ ನಾಶ, ಪಿತೂರಿ, ಅಪಹರಣ, ಸುಲಿಗೆ, ಅಕ್ರಮ ಕೂಟವನ್ನು ಮಾಡಿಕೊಂಡು ಮಾರಕಾಸ್ತ್ರಗಳನ್ನು ಬಳಸಿರುವುದು, ಮತ್ತು ಆರೋಪಿಗಳು ಸಮಾನ ಉದ್ದೇಶದಿಂದ ಕೃತ್ಯವನ್ನು ಮಾಡಿರುವುದು. ವಿವಿಧ ಆರೋಪಿಗಳ ಮೇಲೆ ಮಾಡಿರುವ ಆರೋಪಗಳು ಇಂತಿವೆ:

ಆರೋಪ ಪಟ್ಟಿ

ಆರೋಪಿ ನಂ.1 ಪವಿತ್ರಾ ಗೌಡ: ರೇಣುಕಾಸ್ವಾಮಿಯ ಕೊಲೆ ಮಾಡಬೇಕೆನ್ನುವ ಒಳಸಂಚಿಗೆ ಈಕೆಯೇ ಮೂಲ ಕಾರಣ. ಆಕೆಗೆ ರೇಣುಕಾಸ್ವಾಮಿ ಸಾಮಾಜಿಕ ಜಾಲತಾಣಗಳಲ್ಲಿ ಕಳಿಸಿದ್ದ ಸಂದೇಶಗಳು ಮತ್ತು ಆನಂತರ ಆ ಸಂದೇಶಗಳನ್ನು ಕಳಿಸಿದ್ದು ಯಾರೆಂದು ಪತ್ತೆಮಾಡಲು ಪವಿತ್ರಾಳ ಮ್ಯಾನೇಜರ್ ಪವನ್ ಅವಳ ಹೆಸರಿನಲ್ಲಿ ರೇಣುಕಾಸ್ವಾಮಿಯ ಜತೆ ನಡೆಸಿದ ಸಂಪರ್ಕ, ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಎತ್ತಿಹಾಕಿಕೊಂಡು ಬರಲು ದರ್ಶನ್ ತನ್ನ ಅನುಯಾಯಿಗಳಿಗೆ ಕೊಟ್ಟ ಸೂಚನೆಗಳು ಮುಂತಾದವು ಒಳಸಂಚು ಆರೋಪವನ್ನು ಸಾಬೀತುಪಡಿಸಲು ಬೇಕಾಗುತ್ತವೆ. ಅಲ್ಲದೆ ರೇಣುಕಾಸ್ವಾಮಿಗೆ ದರ್ಶನ್ ಮತ್ತಿತರರು ಥಳಿಸುವಾಗ ಪವಿತ್ರಾ ಅವರೆಲ್ಲರಿಗೂ ಇನ್ನಷ್ಟು ಹೊಡೆಯಲು ಪ್ರಚೋದಿಸಿ ತಾನೂ ಚಪ್ಪಲಿಯೇಟು ಕೊಟ್ಟಿರುವುದು ಅವಳನ್ನು ಒಂದನೆಯ ಆರೋಪಿಯ ಸ್ಥಾನಕ್ಕೆ ತಂದು ನಿಲ್ಲಿಸಿದೆ.

ಪ್ರಕರಣದ ಎರಡನೆಯ ಆರೋಪಿಯೇ ದರ್ಶನ್. ಆತ ತನ್ನ ಅಭಿಮಾನಿ ಬಳಗದ ಸದಸ್ಯರಲ್ಲದೆ ತನ್ನ ಸ್ನೇಹಿತರನ್ನೂ ಕೊಲೆ ಮತ್ತು ಸಾಕ್ಷ್ಯನಾಶಕ್ಕಾಗಿ ಬಳಸಿಕೊಂಡಿದ್ದಾನೆ. ದರ್ಶನ್ ಖುದ್ದಾಗಿ ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ಒದ್ದು ಅವನನ್ನು ಮೇಲಕ್ಕೆತ್ತಿ ಬೀಸಿ ಎಸೆದು ಅವನ ತಲೆಗೆ ಗಾಯವುಂಟುಮಾಡಿದ್ದಾನೆ ಎಂದು ಹೇಳಲಾಗಿದೆ. ತನ್ನ ಕೃತ್ಯಗಳ ಮೂಲಕ ತನ್ನ ಸಹಚರರಿಗೂ ಮೃತನಿಗೆ ಇನ್ನಷ್ಟು ಹೊಡೆಯಲು ಪ್ರೇರೇಪಿಸಿದ್ದಾನೆ. ತನ್ನ ಸ್ನೇಹಿತೆ ಪವಿತ್ರಾ ಗೌಡಳಿಗೆ ಅಶ್ಲೀಲ ಸಂದೇಶಗಳನ್ನು ಕಳಿಸುತ್ತಿದ್ದವನು ಯಾರು ಎಂದು ತನ್ನ ಸ್ನೇಹಿತರು, ಗೆಳೆಯರ ಮೂಲಕ ಪತ್ತೆ ಮಾಡಿದ್ದಲ್ಲದೇ ಆತ ಯಾವ ಊರಿನಲ್ಲಿದ್ದಾನೆ ಎಂದು ತಿಳಿದು ಆತನನ್ನು ಚಿತ್ರದುರ್ಗದಿಂದ ಬೆಂಗಳೂರಿನವರೆಗೆ ಅಪಹರಿಸಿಕೊಂಡು ಬರಲು ನಿರ್ದೇಶನ ಕೊಟ್ಟಿದ್ದಾನೆ. ಕೊಲೆ ಮಾಡಿದ ನಂತರ ದರ್ಶನ್ ಈ ಕೊಲೆಯನ್ನು ಮುಚ್ಚಿಟ್ಟು ಸಾಕ್ಷ್ಯವನ್ನ್ಷು ನಾಶ ಮಾಡಲು ಪ್ರಯತ್ನ ಪಟ್ಟಿದ್ದಾನೆ. ತಾನು ಕೊಲೆ ಆರೋಪದಿಂದ ಬಚಾವಾಗಲು ಇತರ ನಾಲ್ಕು ಜನರಿಗೆ ಹಣಕೊಟ್ಟು ಅವರನ್ನು ಪೊಲೀಸರ ಮುಂದೆ ಸರೆಂಡರ್ ಮಾಡಿಸಿದ್ದಾನೆ. ತನಿಖೆಯ ಜಾಡು ತಪ್ಪಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಿದ್ದಾನೆ. ಈ ಆರೋಪಗಳಿಗೆ ಎಲೆಕ್ಟಾçನಿಕ್ ಮತ್ತು ನೇರ ಸಾಕ್ಷ್ಯವನ್ನು ಸಂಗ್ರಹಿಸಲಾಗಿದೆಯೆಂದು ಪೊಲೀಸರು ಹೇಳಿದ್ದಾರೆ.

ಪ್ರಕರಣದ ಮೂರನೆಯ ಅರೋಪಿಯೇ ಪವಿತ್ರಾಗೌಡಳ ಮ್ಯಾನೇಜರ್ ಪವನ್. ಈತ ಅಪಹರಣ ಮತ್ತು ಕೊಲೆಯ ಸಂಚಿನ ರೂಪುಗಾರರಲ್ಲಿ ಒಬ್ಬ. ನಾಲ್ಕನೆಯ ಆರೋಪಿ ರಾಘವೇಂದ್ರ ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಪದಾಧಿಕಾರಿಯಾಗಿದ್ದು ಈತನ ಸಹಾಯದಿಂದಲೇ ರೇಣುಕಾಸ್ವಾಮಿ ಎಲ್ಲಿದ್ದಾನೆ ಎಂದು ದರ್ಶನ್ ಪತ್ತೆಮಾಡಿದ್ದು. ರಾಘವೇಂದ್ರನೇ ರೇಣುಕಾಸ್ವಾಮಿಯನ್ನು ಮೊದಲಿಗೆ ಪುಸಲಾಯಿಸಿ ಆನಂತರ ಬಲವಂತದಿಂದ ಅಪಹರಿಸಿ ಬೆಂಗಳೂರಿಗೆ ಕರೆತಂದವನು. ಈತನೇ ರೇಣುಕಾಸ್ವಾಮಿ ಧರಿಸಿದ್ದ ಚಿನ್ನಾಭರಣಗಳನ್ನು ದೋಚಿದ್ದ ಎಂದು ಆರೋಪಿಸಲಾಗಿದೆ. ಈತನೇ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಸರೆಂಡರ್ ಆದವನು.

ಐದನೆಯ ಆರೋಪಿಯಾಗಿರುವ ನಂದೀಶ್, ಮೆಗ್ಗರ್ ಎನ್ನುವ ಮಷೀನಿನಿಂದ ರೇಣುಕಾಸ್ವಾಮಿಯ ದೇಹಕ್ಕೆ ಕರೆಂಟ್ ಶಾಕ್ ಕೊಟ್ಟಿದ್ದಲ್ಲದೆ, ಅವನ ಮೃತದೇಹದ ವಿಲೇವಾರಿಯಲ್ಲಿಯೂ ಪಾತ್ರವನ್ನು ವಹಿಸಿದ್ದನೆನ್ನಲಾಗಿದೆ. ಆರನೆಯ ಆರೋಪಿ ಜಗದೀಶ್, ರಾಘವೇಂದ್ರನ ಜತೆಗೂಡಿ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಿಕೊಂಡು ಬಂದದ್ದಲ್ಲದೆ ಆನಂತರ ಮೃತದೇಹದ ಸಾಗಾಣಿಕೆಯಲ್ಲೂ ಭಾಗಿ. ಆರೋಪಿ ನಂ.7 ಅನು ಎನ್ನುವವನು ರೇಣುಕಾಸ್ವಾಮಿ ಮೈಮೇಲಿದ್ದ ಒಡವೆ ದೋಚಿದ್ದ. ಆರೋಪಿ ನಂ.8 ರವಿ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತರುವಲ್ಲಿ ಸಹಾಯ ಮಾಡಿದ್ದನಲ್ಲದೆ ರೇಣುಕಾಸ್ವಾಮಿಯ ಮೃತ ದೇಹವನ್ನು ಎಸೆಯುವಲ್ಲಿ ಭಾಗವಹಿಸಿದ್ದ. ಆರೋಪಿ ನಂ.9 ಧನರಾಜ್ ರೇಣುಕಾಸ್ವಾಮಿಗೆ ಎಲೆಕ್ಟಿçಕ್ ಶಾಕ್ ಕೊಟ್ಟ ಮೆಗ್ಗರ್ ಮಷೀನನ್ನು ಖರೀದಿಸಿದ್ದೇ ಅಲ್ಲದೆ ಅದರಿಂದ ಮೃತನಿಗೆ ಷಾಕ್ ಕೊಟ್ಟಿದ್ದ. ದರ್ಶನ್ನ ಸ್ನೇಹಿತನೂ ಪಬ್ ಒಂದರ ಮಾಲೀಕನೂ ಆಗಿರುವ ಆರೋಪಿ ನಂ.10 ವಿನಯ್ ಎಲೆಕ್ಟಿçಕ್ ಷಾಕ್ ಕೊಡಲು ಸೂಚಿಸಿದ್ದ. ಆರೋಪಿ ನಂ.11 ನಾಗರಾಜು ರೇಣುಕಾಸ್ವಾಮಿಗೆ ಹೊಡೆದ. ಆರೋಪಿ ನಂ.12 ಲಕ್ಷ್ಮಣ್ ಕೊಲೆಯಾದ ಸ್ಥಳದಲ್ಲಿದ್ದು ಮೃತ ದೇಹವನ್ನು ಎಸೆಯಲು ಸಹಾಯ ಮಾಡಿದ್ದ. ಆರೋಪಿ ನಂ.14 ಪ್ರದೋಶ್ನ ಸೂಚನೆಯಂತೆ ಆರೋಪಿ ನಂ.13 ದೀಪಕ್ ಕೆಲವು ಆರೋಪಿಗಳಿಗೆ ಹಣ ನೀಡಿದ್ದ. ಇದಲ್ಲದೆ ಪ್ರದೋಶ್ ಕೊಲೆ ಮಾಡಿದವರ ಖರ್ಚಿಗೆ 30 ಲಕ್ಷ ರೂ. ಹಣದ ವ್ಯವಸ್ಥೆ ಮಾಡಿದ್ದ. ಆರೋಪಿ ನಂ. ೧೫ ಕಾರ್ತಿಕ್, ಆರೋಪಿ ನಂ.೧೬ ಕೇಶವ ಮೂರ್ತಿ, ಆರೋಪಿ ನಂ.17 ನಿಖಿಲ್, ಹಣವನ್ನು ಪಡೆದು ರೇಣುಕಾಸ್ವಾಮಿಯ ಮೃತ ದೇಹವನ್ನು ಸಾಗಿಸಿದ್ದರು, ಆದರೆ ಇವರು ಕೊಲೆಯಲ್ಲಿ ಭಾಗಿಯಾಗಿರಲಿಲ್ಲ. ಉಳಿದ ಎಲ್ಲ ಆರೋಪಿಗಳೂ ರೇಣುಕಾಸ್ವಾಮಿಯನ್ನು ಒಂದಲ್ಲ ಒಂದು ರೀತಿಯಲ್ಲಿ ಥಳಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ದರ್ಶನ್‌ ಬಿಡುಗಡೆ ಸಾಧ್ಯವೇ?

ಆರೋಪಪಟ್ಟಿಯನ್ನು ಪಡೆದಿರುವ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟರು  ಪ್ರಕರಣದ ಬಗ್ಗೆ ಆರಂಭಿಕ ವಿಚಾರಣೆಯನ್ನು ನಡೆಸಿ ಮುಂದೆ ಈ ಪ್ರಕರಣವನ್ನು ಸೆಷನ್ಸ್ ನ್ಯಾಯಾಲಯಕ್ಕೆ ಹಸ್ತಾಂತರಿಸುತ್ತಾರೆ. ಈಗಾಗಲೇ ಆರೋಪಪಟ್ಟಿಯನ್ನು ಸಲ್ಲಿಸಿರುವ ಕಾರಣ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳು, ಅದರಲ್ಲಿಯೂ ದರ್ಶನ್ ಜಾಮಿನಿನ ಮೇಲೆ ಬಿಡುಗಡೆಯಾಗುವುದು ಸರಿಸುಮಾರು ಅಸಾಧ್ಯವೇ.

ಯಾವುದೇ ಅಪರಾಧವಾಗಬೇಕಾದರೂ ಅದಕ್ಕೊಂದು ಮೋಟಿವ್ ಅಥವಾ ಕಾರಣವು ಇರಲೇಬೇಕು. ಈ ಪ್ರಕರಣದಲ್ಲಿ ಪವಿತ್ರಾಳಿಗೆ ತೊಂದರೆಕೊಟ್ಟಿರುವವನಿಗೆ ಬುದ್ದಿ ಕಲಿಸಬೇಕೆನ್ನುವುದೇ ಆರೋಪಿಗಳ ಮೋಟಿವ್ ಆಗಿತ್ತು. ಇದನ್ನು ಸಾಕ್ಷಿಗಳ ಮೂಲಕ ನ್ಯಾಯಾಲಯಕ್ಕೆ ಸಾಬೀತುಪಡಿಸಬೇಕಾಗಿದೆ. ದರ್ಶನ್ ಮತ್ತು ಪವಿತ್ರಾ ನಡುವಿನ ಸಂಬಂಧವನ್ನೂ ತೋರಿಸಬೇಕಾಗಿದೆ.

ಪೋಲೀಸರು ಆರೋಪಪಟ್ಟಿಯಲ್ಲಿ ಮಾಡಿರುವ ಪ್ರತಿಯೊಂದು ಆರೋಪವನ್ನು ನ್ಯಾಯಾಲಯದಲ್ಲಿ ಸಾಬೀತು ಪಡಿಸಬೇಕಾಗುತ್ತದೆ. ಈಗ ಮಾಧ್ಯಮಗಳ ಮೂಲಕ ಲಭ್ಯವಿರುವ ಮಾಹಿತಿಯಂತೆ ಪ್ರಕರಣಕ್ಕೆ ಎಂಟು ಪ್ರತ್ಯಕ್ಷ ಸಾಕ್ಷಿಗಳಿದ್ದಾರೆ. ಇವರು ಹಲ್ಲೆ ನಡೆದ ಬಗ್ಗೆ ಹೇಳುತ್ತಾರೋ, ಅಪಹರಣದದ ಬಗ್ಗೆ ಹೇಳುತ್ತಾರೋ ಇಲ್ಲವೇ ರೇಣುಕಾಸ್ವಾಮಿಯ ಮೈಮೇಲಿನ ಆಭರಣಗಳನ್ನು ಕದ್ದ ಬಗ್ಗೆ ಸಾಕ್ಷ್ಯ ಕೊಡುತ್ತಾರೋ ಇಲ್ಲವೇ ಅವನ ದೇಹದ ವಿಲೇವಾರಿಯ ಬಗ್ಗೆ ಸಾಕ್ಷ್ಯ ಕೊಡುತ್ತಾರೋ ತಿಳಿಯದು. ಏನೇ ಸಾಕ್ಷ್ಯ ನೀಡಿದರೂ ಅವರ ಸಾಕ್ಷ್ಯಕ್ಕೆ ಬೆಲೆ ಹೆಚ್ಚು.

ವೈಜ್ಞಾನಿಕ ಸಾಕ್ಷಿ

ಈ ಪ್ರಕರಣದಲ್ಲಿ ಅಧಿಕ ಪ್ರಮಾಣದ ವೈಜ್ಞಾನಿಕ ಸಾಕ್ಷಾö್ಯಧಾರಗಳನ್ನು ಸಂಗ್ರಹಿಸಿರುವುದಾಗಿ ವರದಿಯಾಗಿದೆ. ಮೃತನ ರಕ್ತವು ಕೆಲವು ಆರೋಪಿಗಳ ಬಟ್ಟೆಗಳು ಹಾಗೂ ಪಾದರಕ್ಷೆಗಳ ಮೇಲೆ, ಆರೋಪಿಗಳು ಬಳಸಿದ ಆಯುಧಗಳ ಮೇಲೆ, ಕೃತ್ಯ ನಡೆದ ಸ್ಥಳದ ಗೋಡೆ ಮತ್ತು ವಾಹನಗಳ ಮೇಲೆ ಸಿಕ್ಕಿವೆ ಎನ್ನಲಾಗಿದೆ. ಆರೋಪಿಗಳ ಬೆರಳಚ್ಚುಗಳೂ ಸಿಕ್ಕಿರುವುದು ಆರೋಪಕ್ಕೆ ಪುಷ್ಟಿಯನ್ನು ನೀಡುತ್ತವೆ.

ಮೃತನ ದೇಹದ ಮೇಲಾಗಿರುವ 39 ಭೀಕರ ಗಾಯಗಳು ಆರೋಪಿಗಳು ಎಸಗಿದ ಕ್ರೌರ್ಯವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುತ್ತವೆ. ಫೋಸ್ಟ್ ಮಾರ್ಟಂ ವರದಿಯು ಕೊಲೆ ನಡೆದ ವೇಳೆಯನ್ನು ಪುಷ್ಟೀಕರಿಸುತ್ತದೆ. ಕೊಲೆಗಾಗಿ ಬಳಸಿರುವ ಎಲ್ಲ ಆಯುಧಗಳನ್ನೂ ಆರೋಪಿಗಳ ವಶದಿಂದ ಜಪ್ತು ಮಾಡಿರುವುದು ಆರೋಪಿಗಳ ಕೃತ್ಯವನ್ನು ಸಾಬೀತುಪಡಿಸುವಲ್ಲಿ ಫಲಕಾರಿಯಾಗುತ್ತದೆ.

ಆರೋಪಿಗಳ ಮೊಬೈಲ್ ಫೋನ್ಗಳ ಲೊಕೇಷನ್, ಅವುಗಳಲ್ಲಿ ಕೃತ್ಯಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಚಿತ್ರಗಳು, ವಿಡಿಯೋಗಳು, ಆಡಿಯೋ ಸಂಭಾಷಣೆಗಳು, ಆರೋಪವನ್ನು ಸಾಬೀತು ಪಡಿಸಲು ಅತಿ ಮುಖ್ಯವಾಗಿ ನೆರವಾಗುತ್ತವೆ. ಇವೇ ಅಲ್ಲದೆ ಸಿಸಿಟಿವಿ ಫುಟೇಜುಗಳು ನಡೆದ ಘಟನೆಗಳ ಪಕ್ಕಾ ದಾಖಲೆಗಳಾಗಿ ಪರಿಗಣಿತವಾಗುತ್ತದೆ. ಪೊಲೀಸರು ಈ ಪ್ರಕರಣದಲ್ಲಿ ಬಹಳ ಮುತುವರ್ಜಿ ವಹಿಸಿ ವೈಜ್ಞಾನಿಕ ಸಾಕ್ಷ್ಯಗಳನ್ನು ಸಂಗ್ರಹಿಸಿರುವುದರಿಂದ ಒಂದು ವೇಳೆ ಹಲ್ಲೆಗೆ ಪ್ರತ್ಯಕ್ಷ್ಯದರ್ಶಿಗಳು ಇರದೇ ಹೋದರೂ ಇವೇ ಸಾಕ್ಷ್ಯಗಳ ಮೇರೆಗೆ ಪ್ರಕರಣವನ್ನು ಸಾಬೀತು ಮಾಡಬಹುದು.

ಸಾಂದರ್ಭಿಕ ಸಾಕ್ಷ್ಯಗಳ ಮೇಲೆ ಪ್ರಕರಣವನ್ನು ಸಾಬೀತು ಮಾಡುವಾಗ ಚೈನ್ ಆಫ್ ಇವೆಂಟ್ಸ್, ಎಂದರೆ ಒಂದು ಘಟನೆಯಾದ ನಂತರ ನಡೆದ ಇನ್ನೊಂದು ಘಟನೆಗೆ ಇರುವ ಸಂಬಂಧವನ್ನು ತೋರಿಸಬೇಕಾಗುತ್ತದೆ. ಇದನ್ನು ತೋರಿಸಿದಾಗ ಪ್ರತ್ಯಕ್ಷದರ್ಶಿಗಳು ಇರದೇ ಹೋದರೂ ಪ್ರಕರಣಕ್ಕೆ ಯಾವುದೇ ರೀತಿಯ ಮಾರಕವಾಗುವುದಿಲ್ಲ.

ಒಂದು ವೇಳೆ ಈ ಅಪರಾಧದಲ್ಲಿ ಆರೋಪಿಯಾಗಿರುವ ಯಾರಾದರೂ ಒಬ್ಬರು ಅಥವಾ ಇಬ್ಬರು ಅಪ್ರೂವರ್, ಅಥವಾ ಮಾಫಿ ಸಾಕ್ಷಿದಾರರಾದರೆ ಪ್ರಕರಣ ಇನ್ನಷ್ಟು ಬಿಗಿಯಾಗುತ್ತದೆ. ಆಗ ಉಳಿದ ಆರೋಪಿಗಳು ಬಚಾವಾಗಲು ಬಹಳ ಕಷ್ಟವಾಗುತ್ತದೆ. ಈ ಪ್ರಕರಣದಲ್ಲಿ ಮೃತನ ಮೈಮೇಲೆ ಇದ್ದ ಆಭರಣಗಳನ್ನು ಕೆಲವು ಆರೋಪಿಗಳು ದೋಚಿದ್ದು ಅವನ್ನು ಆರೋಪಿಗಳಿಂದ ವಶಪಡಿಸಿಕೊಂಡಿರುವುದು ಹೆಚ್ಚಿನ ಗಂಭೀರತೆಯನ್ನು ಪಡೆಯುತ್ತದೆ. ಜಬರಿ ಕಳವಿಗಾಗಿ ಕೊಲೆ ಮಾಡಿದರೆ ಅಂತಹ ಅಪರಾಧ ಮರಣದಂಡನೆಗೂ ಅರ್ಹವಾಗುತ್ತದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಏನಾಗುತ್ತದೆ ಎಂದು ನಾವು ಕಾದು ನೋಡಬೇಕಾಗಿದೆ.

ಸಾಮಾನ್ಯವಾಗಿ ಇಂತಹ ಪ್ರಕರಣಗಳ ವಿಚಾರಣೆ ಬಹಳ ದಿನಗಳು ಹಿಡಿಯುತ್ತಿದ್ದು ಒಂದು ವೇಳೆ ವಿಚಾರಣೆ ತಡವಾದರೆ ಸಾಕ್ಷಿಗಳು ಪ್ರತಿಕೂಲ ಸಾಕ್ಷ್ಯ ಕೊಡಬಹುದು. ಪ್ರಕರಣದ ಶೀಘ್ರ ವಿಚಾರಣೆಗಾಗಿ ತ್ವರಿತ ನ್ಯಾಯಾಲಯವೊಂದನ್ನು ಸ್ಥಾಪಿಸಿದರೆ ಪ್ರಕರಣದ ವಿಚಾರಣೆ ಬೇಗನೇ ಮುಗಿಯುತ್ತದೆ.

ಈ ಪ್ರಕರಣದಲ್ಲಿ ಮೌಖಿಕ ಸಾಕ್ಷಿಗಳಿಗಿಂತ ವೈಜ್ಞಾನಿಕ ಆಧಾರದ ಮೇಲೆ ತನಿಖಾಧಿಕಾರಿ ಸಾಕ್ಷ್ಯ ಗಳನ್ನು ಸಂಗ್ರಹಿಸುವುದರಿಂದ ನನ್ನ ಅನಿಸಿಕೆಯಂತೆ ಈ ಪ್ರಕರಣದಿಂದ ತಪ್ಪಿಸಿಕೊಳ್ಳುವುದು ಆರೋಪಿಗಳಿಗೆ ಬಹಳ ಕಠಿಣವಾಗುತ್ತದೆ.

(ಲೇಖನದಲ್ಲಿನ ಮಾಹಿತಿ, ಆಲೋಚನೆಗಳು ಅಥವಾ ಅಭಿಪ್ರಾಯಗಳು ಲೇಖಕರದ್ದು. ಅವು 'ದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸಬೇಕೆಂದಿಲ್ಲ)

Tags:    

Similar News