ಬಿಜೆಪಿ: ಸಿಎಂ ಸ್ಥಾನಕ್ಕೆ 'ಅಜ್ಞಾತ'ರ ಆಯ್ಕೆ
-ನೀಲಾಂಜನ್ ಮುಖೋಪಾಧ್ಯಾಯ
ಹಲವು ದಿನಗಳಿಂದ 1982 ರಲ್ಲಿ ಟೈಮ್ಸ್ ಆಫ್ ಇಂಡಿಯಾದಲ್ಲಿ ಆರ್ ಕೆ ಲಕ್ಷ್ಮಣ್ ಚಿತ್ರಿಸಿದ ಕಾರ್ಟೂನ್ ಪದೇಪದೆ ನೆನಪಿಗೆ ಬರುತ್ತಿತ್ತು, ಅಂದಿನ ಪ್ರಧಾನಿ ಇಂದಿರಾ ಗಾಂಧಿ ಕೈಯಲ್ಲಿ ಛತ್ರಿ ಹಿಡಿದು ಧೋತಿ ಅಥವಾ ಪೈಜಾಮ, ಕುರ್ತಾ ಧರಿಸಿದ ವ್ಯಕ್ತಿಗಳ ಸಾಲಿನ ಮುಂದೆ ನಡೆಯುತ್ತಿರುವ ವ್ಯಂಗ್ಯಚಿತ್ರ ಅದು.
ನೆಲದ ಮೇಲೆ ಬಿದ್ದ ವೃತ್ತಪತ್ರಿಕೆಯಲ್ಲಿರುವ ಶೀರ್ಷಿಕೆ, ʻಆಂಧ್ರ ಸಿಎಂಗಾಗಿ ಹುಡುಕಾಟ ನಡೆಯುತ್ತಿದೆ'. ಇಂದಿರಾ ಅವರು ನಾಯಕರಲ್ಲಿ ಒಬ್ಬರತ್ತ ಬೆರಳು ತೋರಿಸುತ್ತ, ʼಸರಿ, ನೀವು, ನೀವೇ ಸಿಎಂ. ನಿಮ್ಮ ಹೆಸರು ಏನು?ʼ ಎನ್ನುತ್ತಿರುವ ಚಿತ್ರ ಅದು.
ಹೈದರಾಬಾದ್‌ನ ಬೇಗಂಪೇಟ್ ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಸ್ವಾಗತಿಸಿದ ರೀತಿಗೆ ಸಿಟ್ಟಿಗೆದ್ದ ಅಂದಿನ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಜೀವ್ ಗಾಂಧಿ, ಮುಖ್ಯಮಂತ್ರಿ ಟಿ. ಅಂಜಯ್ಯ ಅವರನ್ನು ಸಾರ್ವಜನಿಕವಾಗಿ ಅವಮಾನಿಸಿದ್ದರು. ದೆಹಲಿಗೆ ಹಿಂದಿರುಗಿದ ನಂತರ ಅಂಜಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಿದರು. ಆ ನಂತರ ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗಾಗಿ ನಡೆದ ಹುಡುಕಾಟದ ಹಿನ್ನೆಲೆಯಲ್ಲಿ ಮೂಡಿಬಂದ ಚಿತ್ರವದು.
ಇದರಿಂದ ತೆಲುಗು ಸ್ವಾಭಿಮಾನ ಆಂದೋಲನ ವೇಗಗೊಂಡಿತು; ಎನ್.ಟಿ. ರಾಮರಾವ್ ನಾಯಕರಾಗಿ ಹೊರಹೊಮ್ಮಿ,ತೆಲುಗು ದೇಶಂ ಪಕ್ಷ(ಟಿಡಿಪಿ) ಸ್ಥಾಪಿಸಿ, ಸಿಎಂ ಆದರು.
ಅಜ್ಞಾತರ ಆಯ್ಕೆ:
ಮೂರು ಹಿಂದಿ ಭಾಷಿಕ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದ ಚುನಾವಣೆ ತೀರ್ಪು ಬಂದ ಒಂದು ವಾರದ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಮೋಹನ್ ಯಾದವ್, ಭಜನ್ ಲಾಲ್ ಶರ್ಮಾ ಮತ್ತು ವಿಷ್ಣು ದೇವ್ ಸಾಯಿ ಅವರ ಹೆಸರು ಘೋಷಿಸಲಾಯಿತು. ರಾಜೇಂದ್ರ ಶುಕ್ಲಾ, ಜಗದೀಶ್ ದೇವದಾ, ದಿಯಾ ಕುಮಾರಿ, ಪ್ರೇಮ್ ಚಂದ್ ಬೈರ್ವಾ, ವಿಜಯ್ ಶರ್ಮಾ ಮತ್ತು ಅರುಣ್ ಸಾವೊ ಮತ್ತಿತರ ರಾಜಕೀಯವಾಗಿ ಸಕ್ರಿಯವಾಗಿದ್ದವರನ್ನು ಕೈ ಬಿಡಲಾಯಿತು.
ಸಿಎಂ ಆಯ್ಕೆಗಾಗಿ ಆ ರಾಜ್ಯಗಳಿಗೆ ಹೋಗಿದ್ದ ಬಿಜೆಪಿಯ ಕೇಂದ್ರ ಸಮಿತಿಯ ವೀಕ್ಷಕರಿಗೆ ಹೆಚ್ಚೇನೂ ಆಯ್ಕೆಗಳಿರಲಿಲ್ಲ. ಚೌಹಾಣ್ ಮತ್ತು ರಾಜೇ ಮತ್ತು ಸ್ವಲ್ಪ ಮಟ್ಟಿಗೆ ರಮಣ್ ಸಿಂಗ್ ತಮ್ಮ ಹಕ್ಕು ಮಂಡಿಸಿದ್ದರು.
ಪ್ರಮುಖ ಪ್ರಶ್ನೆ ಎಂದರೆ, ಆಯ್ಕೆಯಾದ ಮೂವರು ಪಕ್ಷದೊಳಗೆ ಸಹ ಹೆಚ್ಚು ಎತ್ತರದ ವ್ಯಕ್ತಿಗಳಾಗಿರಲಿಲ್ಲ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನಾಯಕರು-ಕಾರ್ಯಕರ್ತರಿಗೆ ಯಾವ ಸಂದೇಶ ನೀಡುತ್ತಿದ್ದಾರೆ?
ಕ್ಷಮಿಸುವುದಿಲ್ಲ, ಮರೆಯುವುದಿಲ್ಲ:
ಈ ಪ್ರಶ್ನೆಗೆ ಉತ್ತರಿಸುವ ಮೊದಲು ಸುಮಾರು ಒಂದು ದಶಕದಷ್ಟು ಹಳೆಯ ಇನ್ನೊಂದು ನೆನಪು. 2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು. ನಾನು ಬರೆದ ಅವರ ಜೀವನಚರಿತ್ರೆ ಹಲವು ತಿಂಗಳು ಮೊದಲು ಪ್ರಕಟಗೊಂಡಿತ್ತು ಮತ್ತು ವ್ಯಾಪಕವಾಗಿ ಗಮನಿಸಲ್ಪಟ್ಟಿತ್ತು. ಪತ್ರಕರ್ತರು ಮೋದಿ ಅವರ ಬಗ್ಗೆ ನನ್ನ ಅಭಿಪ್ರಾಯ ಮತ್ತು ಸಂದರ್ಶನಗಳಿಗಾಗಿ ಆಗಾಗ ನನ್ನೊಂದಿಗೆ ಮಾತನಾಡುತ್ತಿದ್ದರು.
ಈಗ ಪ್ರಕಟಣೆ ಸ್ಥಗಿತಗೊಂಡಿರುವ ನಿಯತಕಾಲಿಕೆ ʻಸೊಸೈಟಿʼಗೆ ಕೆಲಸ ಮಾಡುತ್ತಿದ್ದ ಪತ್ರಕರ್ತರೊಬ್ಬರು ನನ್ನೊಟ್ಟಿಗೆ ಮಾತನಾಡಿ ದರು. ಒಂದೆರಡು ವಾರಗಳ ನ್ಯೂಸ್‌ಸ್ಟ್ಯಾಂಡ್‌ನಲ್ಲಿ ಪತ್ರಿಕೆಯನ್ನು ನೋಡಿದೆ. ಮೋದಿಯವರ ಚಿತ್ರದೊಂದಿಗೆ, ʻಮೋದಿ ಎಂದಿಗೂ ಕ್ಷಮಿಸುವುದಿಲ್ಲ ಮತ್ತು ಮರೆತುಬಿಡುವುದಿಲ್ಲʼ ಎಂದು ಜೀವನಚರಿತ್ರೆಕಾರ ನಿಲಂಜನ್ ಮುಖೋಪಾಧ್ಯಾಯ ಹೇಳುತ್ತಾರೆ ಎಂದು ಪ್ರಕಟವಾಗಿತ್ತು. ನಿಂತ ನೆಲ ಕುಸಿಯುವಂತೆ ಆಯಿತು.
ಈ ಅವಲೋಕನವನ್ನು ಮಾಡಿದವರಲ್ಲಿ ನಾನು ಮೊದಲಿಗನಲ್ಲ ಮತ್ತು ಕೊನೆಯವನೂ ಅಲ್ಲ. ಮೋದಿ ಕೂಡ ಈ ವಿಶೇಷಣವನ್ನು ಗಳಿಸಿದ ಮೊದಲ ಅಥವಾ ಕೊನೆಯವರಲ್ಲ. ಮೂರು ರಾಜ್ಯಗಳು ಹೊಸ ಮುಖ್ಯಮಂತ್ರಿಗಳ ಆಯ್ಕೆ ಬಳಿಕ ಶಿವರಾಜ್ ಸಿಂಗ್ ಚೌಹಾಣ್ ಮತ್ತು ವಸುಂಧರಾ ರಾಜೇ ಅವರು ವನವಾಸಕ್ಕೆ ತೆರಳಬೇಕಾಗುತ್ತದೆ ಎಂಬುದು ಸ್ಪಷ್ಟವಾಗುತ್ತಿದ್ದಂತೆ, ನನಗೆ ಪ್ರಧಾನಿಯವರ ಈ ಗುಣ ನೆನಪಾಯಿತು.
ಈ ಇಬ್ಬರನ್ನು ಬದಿಗೆ ಸರಿಸುವ ನಿರ್ಧಾರ ಸಂಪೂರ್ಣವಾಗಿ ವೈಯಕ್ತಿಕ. 2011-12ರಲ್ಲಿ ಪಕ್ಷದ ಪ್ರಧಾನಿ ಅಭ್ಯರ್ಥಿ ಆಯ್ಕೆ ಮುಕ್ತವಾಗಿದ್ದಾಗ ಮತ್ತು 2013 ರ ಆರಂಭದಲ್ಲಿ ಆರ್‌ಎಸ್‌ಎಸ್ ಅನಿಶ್ಚಿತತೆ ಎದುರಿಸುತ್ತಿದ್ದಾಗ, ಇಬ್ಬರೂ ಅಖಾಡಕ್ಕೆ ಇಳಿದಿದ್ದಕ್ಕೆ ಇದು ಪ್ರತೀಕಾರ.
ಅಂತಿಮವಾಗಿ, ಮೋದಿ ಪ್ರಧಾನಿಯಾದರು; ಚೌಹಾಣ್ ಮತ್ತು ರಾಜೇ 2018 ರವರೆಗೆ ಮುಖ್ಯಮಂತ್ರಿಗಳಾದರು. ಪ್ರಚಾರಗಳಲ್ಲಿ ಪಕ್ಷವನ್ನು ಮುನ್ನಡೆಸಲು ವಿಫಲರಾದರು. ಮಾರ್ಚ್ 2020 ರಲ್ಲಿ ಚೌಹಾಣ್ ಸಿಎಂ ಆಗಿ ಮರಳಿದಾಗಲೂ, ರಾಜಸ್ಥಾನದ ಮಾಜಿ ಸಿಎಂ ಪಕ್ಷದ ಗಮನದಲ್ಲಿ ಇರಲಿಲ್ಲ.
ವೈಯಕ್ತಿಕ ದ್ವೇಷಕ್ಕಿಂತ ಹೆಚ್ಚು:
ಇದರ ಹೊರತಾಗಿಯೂ, ಎರಡು ದಶಕಗಳಿಂದ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿಯ ಚುಕ್ಕಾಣಿ ಹಿಡಿದ ಇಬ್ಬರು ನಾಯಕರನ್ನು ಬದಿಗೆ ಸರಿಸಲು ಬೇರೆ ಕಾರಣಗಳೂ ಇವೆ. ನವೆಂಬರ್ 2005 ರಲ್ಲಿ ಉಮಾಭಾರತಿ ಸ್ಥಾನಕ್ಕೆ ಚೌಹಾಣ್ ಮತ್ತು 2002 ರಲ್ಲಿ ಭೈರೋನ್ ಸಿಂಗ್ ಶೇಖಾವತ್ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಿದ ನಂತರ ರಾಜೆ ಮುನ್ನೆಲೆಗೆ ಬಂದರು.
ರಮಣ್ ಸಿಂಗ್ ಅವರನ್ನು ಮತ್ತೊಮ್ಮೆ ಚತ್ತೀಸ್‌ಗಢದ ಸಿಎಂ ಆಗಿ ನೇಮಿಸದಿರಲು ಅವರು ಹಿಂದಿನ ತಲೆಮಾರಿನ ಬಿಜೆಪಿ ನಾಯಕತ್ವದ ಆಯ್ಕೆಯಾಗಿರುವುದು ಕಾರಣ. ರಾಜಸ್ಥಾನ ಮತ್ತು ಚತ್ತೀಸ್‌ಗಢದಲ್ಲಿ ರಾಜಕೀಯ ಅಧಿಕಾರ ಕಷ್ಟ ಎಂದು ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಹೆಸರಿಸದಿರಲು ನಿರ್ಧಾರ ತೆಗೆದುಕೊಳ್ಳಲಾಯಿತು.
ಮೂರು ರಾಜ್ಯಗಳಲ್ಲಿ ಹೊಸ ತಲೆಮಾರಿನ ನಾಯಕರನ್ನು ಪ್ರತಿಷ್ಠಾಪಿಸಲು ಪರಿಸ್ಥಿತಿ ಅವಕಾಶ ಒದಗಿಸಿದೆ ಎಂದು ಮೋದಿ-ಶಾ ನಿರ್ಧರಿಸಿದರು ಎನ್ನಬಹುದು. ಈ ರಾಜ್ಯಗಳಲ್ಲಿ ಬಿಜೆಪಿ ಸ್ಪಷ್ಟ ಜನಾದೇಶ ಪಡೆದುಕೊಂಡಿದ್ದರೂ, ಮೋದಿ-ಶಾ ಜೋಡಿ ಚೌಹಾಣ್ ಮತ್ತು ರಾಜೇ ಅವರ ಶಕ್ತಿ ಪ್ರದರ್ಶನಕ್ಕೆ ಮಣಿಯಲಿಲ್ಲ. ಮುಖ್ಯಮಂತ್ರಿಯಾಗಿ ಆಯ್ಕೆಯಾದವರು ಜನರು ಮತ್ತು ಪಕ್ಷದಲ್ಲಿ ಅನುಯಾಯಿಗಳನ್ನು ಹೊಂದಿಲ್ಲದಿದ್ದರೂ, ನಿಸ್ಸಂದೇಹವಾಗಿ ಮೋದಿ ಮತ್ತು ಷಾ ಅವರಿಗೆ ಬದ್ಧರಾಗಿರುತ್ತಾರೆ.
ಜಾತಿ ಸಮೀಕರಣ:
ಉತ್ತರ ಭಾರತದ ಜಾತಿ ಸಂಯೋಜನೆಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಲಾಗಿದೆ. ಮೇಲ್ಜಾತಿ, ಒಬಿಸಿ, ದಲಿತ ಮತ್ತು ಬುಡಕಟ್ಟು ಜನಾಂಗದವರನ್ನು ಸಮಾಧಾನಪಡಿಸುವ ಪ್ರಯತ್ನ ನಡೆದಿದೆ. 2014 ರ ವಿಜಯದ ಬಳಿಕ ಮಹಾರಾಷ್ಟ್ರ, ಜಾರ್ಖಂಡ್ ಮತ್ತು ಹರ್ಯಾಣದಲ್ಲಿ ಜನಪ್ರಿಯ ನಾಯಕರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿಲ್ಲ. ದೇವೇಂದ್ರ ಫಡ್ನವಿಸ್ ಮರಾಠರಲ್ಲ, ರಘುಬೀರ್ ದಾಸ್ ಬುಡಕಟ್ಟು ಅಲ್ಲ ಮತ್ತು ಮನೋಹರ್ ಲಾಲ್ ಖಟ್ಟರ್ ಜಾಟ್ ಅಲ್ಲ.
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಚತ್ತೀಸ್‌ಗಢದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದೆ. ದೆಹಲಿಯಿಂದ ರಿಮೋಟ್ ಕಂಟ್ರೋಲ್ ಮೂಲಕ ಸರ್ಕಾರ ಮತ್ತು ಪಕ್ಷದ ಉಸ್ತುವಾರಿ ಮಾಡುವ ಸಾಧ್ಯತೆಯಿದೆ. ಇದು ಲೋಕಸಭೆ ಚುನಾವಣೆ ಸಮಯದಲ್ಲಿ ಪ್ರಚಾರವನ್ನು ನಿರ್ವಹಿಸಲು ಮೋದಿ-ಶಾ ಜೋಡಿಗೆ ಸುಲಭವಾಗುತ್ತದೆ.
ಆದರೆ, ಕಾಂಗ್ರೆಸ್ ಹಳೆಯ ತಲೆಮಾರಿನ ನಾಯಕರನ್ನು ಬದಲಿಸಲು ಮತ್ತು ಸಂಸತ್ತಿನ ಚುನಾವಣೆಗೆ ಉತ್ಸಾಹಿ ಹೊಸ ಮುಖಗಳನ್ನು ಬಿಂಬಿಸಲು ಯಾವುದೇ ಪ್ರಯತ್ನ ಮಾಡಿಲ್ಲ. ಮೂವರು ಮುಖ್ಯಮಂತ್ರಿಗಳ ಆಯ್ಕೆ ಮೂಲಕ ಮೋದಿ ಮತ್ತು ಷಾ ಅವರು ತಮ್ಮ ರಾಜಕೀಯ ಚಾಣಾಕ್ಷತೆಯನ್ನು ಪ್ರದರ್ಶಿಸಿದ್ದಾರೆ.
(Cartoon:https://yousaidit-rklaxman.blogspot.com/)(ಲೇಖನದಲ್ಲಿನ ಮಾಹಿತಿ, ಆಲೋಚನೆಗಳು ಅಥವಾ ಅಭಿಪ್ರಾಯಗಳು ಲೇಖಕರವು. ಅವು ಫೆಡರಲ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿ ಸುವುದಿಲ್ಲ)
………………………………………………………