ಶಿರಡಿ ಸಾಯಿಬಾಬಾ ಅವರನ್ನು ಬಹಿಷ್ಕರಿಸುವುದೇ ಅಥವಾ ಎಲ್ಲರನ್ನೂ ಒಳಗೊಳ್ಳುವ ಹಿಂದುತ್ವದ ವಿರುದ್ಧದ ಸಮರವೇ?

ತಮಿಳುನಾಡಿನಲ್ಲಿರುವ ಶಿರಡಿ ಸಾಯಿಬಾಬಾ ವಿಗ್ರಹಗಳನ್ನು ಸರ್ಕಾರಿ ನಿರ್ವಹಣೆಯ ದೇವಾಲಯಗಳಿಂದ ತೆಗೆದುಹಾಕಬೇಕೆಂದು ಒತ್ತಾಯಿಸುತ್ತಿರುವವರು ದೆಹಲಿಯಲ್ಲಿ ಸಾಯಿಬಾಬಾ ವಿಗ್ರಹವನ್ನು ತೆರವು ಮಾಡಿದ ವ್ಯಕ್ತಿಗಳಿಗಿಂತ ಭಿನ್ನರಲ್ಲ. ಮದ್ರಾಸ್ ಹೈಕೋರ್ಟಿನಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ ಸಾಯಿಬಾಬಾ ಒಬ್ಬ ಮುಸ್ಲಿಂ ಮತ್ತು ಅವರು ಅಲ್ಲಾನನ್ನು ಉಲ್ಲೇಖಿಸಿದ್ದಾರೆ ಎಂದು ಹೇಳಿರುವುದರಲ್ಲಿ ಆಶ್ಚರ್ಯವೇನಿಲ್ಲ.

Update: 2024-07-01 13:25 GMT

ʼಮಾರ್ಚ್ 2021 ರಲ್ಲಿ ʻಸ್ಥಳೀಯವಾಗಿ ಪ್ರಬಲʼ ಎನ್ನಲಾದ ಗುಂಪೊಂದು ದಕ್ಷಿಣ ದೆಹಲಿಯ ಹಿಂದೂ ದೇವಾಲಯದಿಂದ ಶಿರಡಿ ಸಾಯಿ ಬಾಬಾರವರ ವಿಗ್ರಹವನ್ನು ತೆಗೆದು, ಗಣೇಶನ ಅಮೃತಶಿಲೆಯ ಪ್ರತಿಬಿಂಬವನ್ನು ಸ್ಥಾಪಿಸಿತು.

ಅವರು ಬೇರೆ ಯಾವುದೇ ವಿಗ್ರಹವನ್ನು ಮುಟ್ಟಲಿಲ್ಲ. ವೈರಲ್ ಆಗಿರುವ ವಿಡಿಯೋದಲ್ಲಿ ಪದಮ್ ಪನ್ವಾರ್ ಎಂಬುವರು ಹೇಳುತ್ತಾರೆ,ʻ ನಾವು ಸಾಯಿಬಾಬಾ ವಿಗ್ರಹವನ್ನು ತೆಗೆದುಹಾಕುತ್ತಿದ್ದೇವೆ. ಏಕೆಂದರೆ, ಅವರು ದೇವರಲ್ಲ ...ಅವರು ಮುಸ್ಲಿಂ ಆಗಿದ್ದರು.ʼ 

ತಾವು ಮತ್ತು ತಮ್ಮ ಗುಂಪು ಇದಕ್ಕೆ ಮೊದಲು ನೆರೆಹೊರೆಯವರು ಮತ್ತು ಭಕ್ತರ ಜತೆ ಸಮಾಲೋಚನೆ ನಡೆಸಿದ್ದೇವೆ ಎಂದು ಆ ಗುಂಪು ಹೇಳಿಕೊಂಡಿತು.

ಆದರೆ, ನಿವಾಸಿಗಳಿಗೆ ತಿಳಿದಿತ್ತು: ಆದರೆ, ಸತ್ಯವು ಬೇರೆಯಾಗಿತ್ತು. ಮಧ್ಯಮ ವರ್ಗದವರು ಹೆಚ್ಚು ಸಂಖ್ಯೆಯಲ್ಲಿರುವ ಶಹಾಪುರ ಜಾಟ್‌ ನ ನಿವಾಸಿಗಳು ನಿಜವಾಗಿ ನಡೆದಿದ್ದೇನು ಎಂದು ಗೊತ್ತಾದಾಗ ಆಘಾತಕ್ಕೊಳಗಾದರು.

ಪ್ರತಿದಿನ ನೂರಾರು ಭಕ್ತರು, ಹೆಚ್ಚಾಗಿ ಮಹಿಳೆಯರು, ಭಗವಾನ್ ಶಿವನ ದೇವಾಲಯಕ್ಕೆ ಭೇಟಿ ನೀಡುತ್ತಿದ್ದರು ಮತ್ತು ಶಿರಡಿ ಸಾಯಿಬಾಬಾ ಅವರರಿಗೂ ಪ್ರಾರ್ಥನೆ ಸಲ್ಲಿಸುತ್ತಿದ್ದರು.  ಬಾಬಾ,  ಅವರನ್ನು ಆಶೀರ್ವದಿಸುವ, ರಕ್ಷಿಸುವ ಸಂತನಾಗಿದ್ದ. ವಿಗ್ರಹಕ್ಕೆ ಆದ ಅನ್ಯಾಯದ ಬಗ್ಗೆ ಹೆಚ್ಚು ಅಸಮಾಧಾನಗೊಂಡವರು ಹಿಂದೂಗಳು.

ಈ ಕೋಮು ದುಷ್ಕೃತ್ಯದ ಹಿಂದೆ ಇರುವವರು ಯಾರೆಂದು ನಿವಾಸಿಗಳಿಗೆ ತಿಳಿದಿತ್ತು. ಆದರೆ, ಅವರ ಮೇಲೆ ಆ ವ್ಯಕ್ತಿಗಳು ಪ್ರಭಾವ ಬೀರಿದ್ದರು.

ಪತ್ರಕರ್ತರು ಶಹಾಪುರ ಜಾಟ್‌ಗೆ ಭೇಟಿ ನೀಡಿದಾಗ, ಜನರ ಅಸಮಾಧಾನ ಎದ್ದು ಕಾಣುತ್ತಿತ್ತು. ಆದರೆ, ಕೃತ್ಯಕ್ಕೆ ಅಸಹ್ಯಪಟ್ಟ ಬಹುತೇಕರು ಪತ್ರಕರ್ತರ ಜತೆ ಖಾಸಗಿಯಾಗಿ ಮನೆಯಲ್ಲೇ ಮಾತನಾಡುವ ಬಗ್ಗೆ  ಆದ್ಯತೆ ನೀಡಿದರು. ಯಾಕೆಂದರೆ ತಮ್ಮ ಪರವಾಗಿ ಕಾರ್ಯನಿರ್ವಹಿಸಿದ್ದೇವೆ ಎಂದು ಹೇಳಿಕೊಂಡ  ಅ ವ್ಯಕ್ತಿಗಳ ಬಗ್ಗೆ ಜನ ಹೆದರುತ್ತಿದ್ದರು ಎಂಬುದು ಇದರಿಂದ ಸ್ಪಷ್ಟವಾಗಿದೆ.

ಆದಾಗ್ಯೂ, ಅಂತಿಮವಾಗಿ, ಕೆಲವು ನಿವಾಸಿಗಳು ಧೈರ್ಯ ಮಾಡಿ  ಪೊಲೀಸರಿಗೆ ಆ ಘಟನೆಯ ಬಗ್ಗೆ ದೂರು ನೀಡಿದರು.

ಘಟನೆ ಸುದ್ದಿಯಾದ ಬಳಿಕ ಮತ್ತು ಪೊಲೀಸರು ತಪ್ಪಿತಸ್ಥರನ್ನು ಠಾಣೆಗೆ ಕರೆಸಿಕೊಂಡ ಬಳಿಕ, ಅವರ ರಾಗ ಬದಲಾಯಿಯಿತು. ವಿಗ್ರಹ ಭಗ್ನಗೊಂಡಿ ದ್ದರಿಂದ ಅದನ್ನು ತೆಗೆದಿದ್ದೇವೆ; ಭಗ್ನಗೊಂಡ ವಿಗ್ರಹಕ್ಕೆ ಪ್ರಾರ್ಥಿಸುವುದು ಸರಿಯಲ್ಲ ಎಂದು ಸಮಜಾಯಿಷಿ ನೀಡಿದರು. 

ಆದರೆ, ಸ್ಥಳೀಯರಿಗೆ ಗೊತ್ತಿತ್ತು. ಪನ್ವಾರ್ ಮತ್ತು ಅವರ ಗುಂಪು ಶಿರಡಿ ಸಾಯಿಬಾಬಾ ಅವರನ್ನು ಮುಸ್ಲಿಮರು ಎಂದು ಹೇಳಿರುವುದಕ್ಕೆ ವಿಡಿಯೋ ಸಾಕ್ಷಿ ಇದೆ ಹಾಗೂ  ಇವರೆಲ್ಲರೂ ದೆಹಲಿಯ ಹೊರ ಪ್ರದೇಶದಲ್ಲಿರುವ ಸ್ವಯಂಘೋಷಿತ ದೇವಮಾನವನ ಆಶ್ರಮದಲ್ಲಿ ನೀರು ಕುಡಿದ ಆರೋಪದ ಮೇಲೆ ಮುಸ್ಲಿಂ ಬಾಲಕನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದವರು ಎಂದು ಸ್ಥಳೀಯ ನಿವಾಸಿಗಳಿಗೆ  ಗೊತ್ತಿತ್ತು.

'ವಿಲನ್' ಎಂದು ಬಿಂಬಿಸಲಾಗಿದೆ:

ತಮಿಳುನಾಡಿನಲ್ಲಿರುವ ಶಿರಡಿ ಸಾಯಿಬಾಬಾ ವಿಗ್ರಹಗಳನ್ನು ಸರ್ಕಾರಿ ನಿರ್ವಹಣೆಯ ದೇವಾಲಯಗಳಿಂದ ತೆಗೆದುಹಾಕಬೇಕೆಂದು ಒತ್ತಾಯಿಸುತ್ತಿರುವವರು ದೆಹಲಿಯಲ್ಲಿ ಸಾಯಿಬಾಬಾ  ವಿಗ್ರಹವನ್ನು ತೆರವು ಮಾಡಿದಗೆದ ವ್ಯಕ್ತಿಗಳಿಗಿಂತ ಭಿನ್ನರಲ್ಲ. ಮದ್ರಾಸ್ ಹೈಕೋರ್ಟಿನಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ ಸಾಯಿಬಾಬಾ ಒಬ್ಬ ಮುಸ್ಲಿಂ ಮತ್ತು ಅವರು ಅಲ್ಲಾನನ್ನು ಉಲ್ಲೇಖಿಸಿದ್ದಾರೆ ಎಂದು ಹೇಳಿರುವುದರಲ್ಲಿ ಆಶ್ಚರ್ಯವೇನಿಲ್ಲ.

ವಿಶಾಲ ಮನೋಭಾವದ ಹಿಂದುಗಳಿಗೆ ಅನುಕೂಲಕರ ಸನ್ನಿವೇಶ ಇಲ್ಲದೆ ಇರುವಾಗ, ಹಲವರಿಗೆ ಶಿರಡಿ ಸಾಯಿಬಾಬಾ 'ವಿಲನ್' ಎಂಬಂತೆ ತೋರುತ್ತಾರೆ. ವ್ಯಾಪಕವಾಗಿ ಪೂಜಿಸಲ್ಪಡುವ ಈ ಸಂತ, ಹುಟ್ಟಿನಿಂದಲೇ ಮುಸ್ಲಿಂ ಎಂದು ಕೆಲವರು ಹೇಳುತ್ತಾರೆ.

ವಾಸ್ತವವೆಂದರೆ, ಅವರ ಮೂಲ ಯಾರಿಗೂ ಖಚಿತವಾಗಿ ತಿಳಿದಿಲ್ಲ. ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಅವರು ಮಹಾರಾಷ್ಟ್ರದ ಶಿರಡಿಯಲ್ಲಿ ಕಾಣಿಸಿಕೊಳ್ಳುವ ಮುಂಚೆಯೇ ಹಿಂದೂ ದಂಪತಿಗಳು ಬೆಳೆಸಿದರು ಎಂದು ಹಲವರು ಭಾವಿಸುತ್ತಾರೆ. ಸಾಯಿಬಾಬಾ ಎಂದು ಕರೆಯಲ್ಪಡುವ ಇವರು ಜನಿಸಿದ್ದು ʼಹರಿಭಾವು ಭೂಸಾರಿʼಯಾಗಿ ಎಂದು ಇತರರು ಹೇಳುತ್ತಾರೆ.

ಅವರ ಮೂಲ ಯಾವುದೇ ಆಗಿರಲಿ, ಶಿರಡಿ ಸಾಯಿಬಾಬಾ ಅವರನ್ನು ದೇಶ ಮತ್ತು ಹೊರ ದೇಶದ ಲಕ್ಷಾಂತರ ಭಾರತೀಯರು ಒಬ್ಬ ಅತ್ಯುತ್ತಮ ಸಂತ ಎಂದು ಪೂಜಿಸುತ್ತಾರೆ. ಧಾರ್ಮಿಕ ವಿಭಜನೆಗಳನ್ನು ಮೀರಿದ ಅಸಂಖ್ಯಾತ ಪುರುಷರು ಮತ್ತು ಮಹಿಳಾ ಭಕ್ತರಿದ್ದು, ಬಹುಪಾಲು ಭಕ್ತರು ಹಿಂದುಗಳು.

ಬಾಬಾಗೆ ಸಮರ್ಪಿತವಾದ ಅಸಂಖ್ಯಾತ ಸಣ್ಣ ಮತ್ತು ದೊಡ್ಡ ದೇಗುಲಗಳು ದೇಶಾದ್ಯಂತ ಇವೆ ಮತ್ತು ಸಂಖ್ಯೆ ಬೆಳೆಯುತ್ತಲೇ ಇದೆ. ಸಾಯಿಬಾಬಾ ಆಗಮನಕ್ಕೆ ಮೊದಲು ಒಂದು ಕುಗ್ರಾಮವಾಗಿದ್ದ ಶಿರಡಿಯಲ್ಲಿನ ಅವರ ಸಮಾಧಿ ದೇಶದ ಅತಿ ದೊಡ್ಡ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ.

ಆಡಂಬರರಹಿತ ಸಂತ:

1868 ಮತ್ತು 1872 ರ ನಡುವೆ ಮೊದಲ ಬಾರಿಗೆ ಶಿರಡಿಗೆ ಬಂದಾಗ, ಅವರಿಗೆ 25 ರಿಂದ 30 ವಯಸ್ಸು. ಸುಮಾರು 22 ವರ್ಷಗಳ ಕಾಲ ಗ್ರಾಮದ ಹೊರವಲಯದಲ್ಲಿದ್ದ ಅವರು ಆನಂತರ ನಾಲ್ಕೈದು ವರ್ಷ ಕಾಲ ಬೇವಿನ ಮರದ ಕೆಳಗೆ ವಾಸಿಸಿ, ಶಿಥಿಲಗೊಂಡ ಮಸೀದಿಗೆ ಸ್ಥಳಾಂತರಗೊಂಡರು. ನಾರಾಯಣ ತೇಲಿಯವರ ಪತ್ನಿ ಬಯಾಜಾಬಾಯಿ ಅವರನ್ನು ಆರಂಭಿಕ ದಿನಗಳಲ್ಲಿ ಆಹಾರ ನೀಡಿ ಪೋಷಿಸಿದರು.

ಅವರ ಯೋಗ್ಯತೆಯನ್ನು ಗುರುತಿಸಿ ಮತ್ತು ಚಿಂತಾಮಣಿ (ರತ್ನ) ಎಂದು ಕರೆದವರು ವೈಷ್ಣವ ಪಂಥದ ಸಂತ ಗಂಗಾಗಿರ್ ಬುವಾ. ಸ್ವಲ್ಪ ಸಮಯದಲ್ಲೇ ಧರ್ಮನಿಷ್ಠೆ, ಸ್ವಯಂ ಸಾಕ್ಷಾತ್ಕಾರ ಮತ್ತು ಅಧ್ಯಾತ್ಮಿಕ ಶಕ್ತಿಗಳಿಂದ ಭಾರಿ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದರು. 1918 ರಲ್ಲಿ ನಿಧನರಾದಾಗ ಅವರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು. ಅವರು ನಿಧನರಾಗುವ ಒಂದು ವರ್ಷದ ಹಿಂದೆ ಅವರನ್ನು ಭೇಟಿಯಾದ ಪ್ರಮುಖ ಭಾರತೀಯರೆಂದರೆ, ಬಾಲಗಂಗಾಧರ ತಿಲಕ್.

ಅಸಂಖ್ಯಾತ ಅನುಯಾಯಿಗಳು:

ಸಾಯಿಬಾಬಾ ಇಷ್ಟೊಂದು ಅನುಯಾಯಿಗಳನ್ನು ಹೇಗೆ ಮತ್ತು ಏಕೆ ಹೊಂದಿದರು? ಅವರು ನಿಸ್ಸಂದೇಹವಾಗಿ ಅನನ್ಯ ಮತ್ತು ಆಡಂಬರವಿಲ್ಲದ ಸಂತರು. ಯಾವುದೇ ಸಂಪ್ರದಾಯಗಳನ್ನು ಅನುಸರಿಸಲಿಲ್ಲ. ಪವಿತ್ರ ಗ್ರಂಥಗಳ ಬಗ್ಗೆ ವಿಮರ್ಶೆ ಬರೆಯಲಿಲ್ಲ, ಓದಲಿಲ್ಲ, ಅಧ್ಯಾತ್ಮಿಕ ಪ್ರವಚನ ನೀಡಲಿಲ್ಲ. ಪಾಂಡಿತ್ಯದ ಯಾವುದೇ ಸೋಗು ಹೊಂದಿರಲಿಲ್ಲ ಮತ್ತು ಆಗಾಗ ದೃಷ್ಟಾಂತಗಳಲ್ಲಿ ಮಾತನಾಡುತ್ತಿದ್ದರು. ಯಾವುದೇ ಆಶ್ರಮವನ್ನು ಸ್ಥಾಪಿಸಲಿಲ್ಲ.

ಆದರೆ, ಹಿಂದೂ ಮತ್ತು ಮುಸ್ಲಿಂ ಧರ್ಮಗ್ರಂಥಗಳ ಬಗ್ಗೆ ಉತ್ತಮ ಒಳನೋಟವನ್ನು ಹೊಂದಿದ್ದರು. ಅವರು ಇಸ್ಲಾಂ ಧರ್ಮವನ್ನು ಬೋಧಿಸಲಿಲ್ಲ; ಮತ್ತು, ಅನುಯಾಯಿಗಳನ್ನು ಯಾವುದೇ ನಿರ್ದಿಷ್ಟ ದೇವರು ಅಥವಾ ಪ್ರವಾದಿ ಕಡೆಗೆ ನಿರ್ದೇಶಿಸಲಿಲ್ಲ.

ಅವರ ವ್ಯಾಪಕವಾಗಿ ಮೆಚ್ಚುಗೆ ಪಡೆದ ಜೀವನಚರಿತ್ರೆ ʻಶಿರಡಿಯ ಸಾಯಿ ಬಾಬಾʼ (2012 ರ ಹೊತ್ತಿಗೆ ಅದರ 23 ಆವೃತ್ತಿ ಮುದ್ರಣಗೊಂಡಿತ್ತು). ಲೇಖಕರಾದ ಎಂ.ವಿ. ಕಾಮತ್ ಮತ್ತು ವಿ.ಬಿ. ಖೇರ್ ಅವರ ಇಸ್ಲಾಮಿಕ್ ಮೂಲದ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. ಆದರೆ, ಅವರು ತಮ್ಮ ಸರಳತೆಯಿಂದ ಎಲ್ಲಾ ಧರ್ಮದ ಜನರನ್ನು ಆಕರ್ಷಿಸಿದರು ಎಂದು ಹೇಳುತ್ತಾರೆ. ವಾಸ್ತವವಾಗಿ, ಅವರು ಬೋಧಿಸಿದ ಅಂಶಗಳು ಯಾವುದೂ ವಿವಾದಾತ್ಮಕವಾಗಿರಲಿಲ್ಲ.

ಸಾಯಿಬಾಬಾ ಬೋಧನೆಗಳು:

ಅವರ ಬೋಧನೆಗಳು ಹೀಗಿವೆ: ಕ್ರಿಯೆಯ ಫಲವನ್ನು ಅವನಿಗೆ ಒಪ್ಪಿಸಿ. ಇದರಿಂದ ಕ್ರಿಯೆಯು ನಿಮ್ಮನ್ನು ಹಾನಿಗೊಳಿಸುವುದಿಲ್ಲ ಅಥವಾ ಬಂಧಿಸುವುದಿಲ್ಲ; ವಿವಾದದಲ್ಲಿ ತೊಡಗಬೇಡಿ; ಇತರರ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ; ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕಾರ್ಯಗಳಿಗೆ ಜವಾಬ್ದಾರನಾಗಿರುವುದರಿಂದ ದ್ವೇಷಕ್ಕೆ ಪ್ರತಿಯಾಗಿ ದ್ವೇಷವನ್ನು ಕೊಡಬೇಡಿ; ಪವಿತ್ರ ಗ್ರಂಥಗಳನ್ನು ಓದಿ; ನಿಮ್ಮ ಆಹಾರ ಮತ್ತು ಮನರಂಜನೆಯಲ್ಲಿ ಮಿತವಾಗಿರಿ; ನಿಮ್ಮ ಭಾಗಕ್ಕೆ ಬಂದಿದ್ದರಿಂದ ತೃಪ್ತರಾಗಿರಿ; ಒಳ್ಳೆಯದನ್ನು ಮಾಡಿ ಮತ್ತು ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ; ಅಚಲವಾದ ನಂಬಿಕೆ ಮತ್ತು ತಾಳ್ಮೆ ಇಲ್ಲದೆ, ನೀವು ಅವನನ್ನು ನೋಡುವುದಿಲ್ಲ; ಅವನ ಕೃಪೆಯನ್ನು ಹೊಂದಿರುವವನು ಮೌನವಾಗಿರುತ್ತಾನೆ, ಕೃಪೆ ಕಳೆದುಕೊಳ್ಳುವವನು ತುಂಬ ಮಾತನಾಡುತ್ತಾನೆ; ಇತರರ ಸಂಪತ್ತನ್ನು ವಶಪಡಿಸಿಕೊಳ್ಳಬೇಡಿ; ವಿನಮ್ರರಾಗಿರಿ; ನೀವು ಒಳ್ಳೆಯದನ್ನು ಮಾಡಿದರೆ, ಒಳ್ಳೆಯದು ಅನುಸರಿಸುತ್ತದೆ; ಇತರರ ಭಾವನೆಗಳನ್ನು ಘಾಸಿಗೊಳಿಸಿದರೆ, ನೀವು ಬಳಲುತ್ತೀರಿ; ಕುಟುಂಬದಲ್ಲಿನ ಸದಸ್ಯರು ಭಿನ್ನಾಭಿಪ್ರಾಯ ಹೊಂದಿರುತ್ತಾರೆ. ಆದರೆ, ಜಗಳವಾಡಬೇಡಿ; ಸೇವೆಯ ಆರಂಭ ಮೌನ ಮತ್ತು ಧ್ಯಾನ; ನಿಮ್ಮ ಬಳಿಗೆ ಬರುವ ಯಾರಿಗಾದರೂ ಅತಿಥಿ ಸತ್ಕಾರ ಮಾಡಿರಿ; ನಾನು ಭಕ್ತಿಯನ್ನು ಪ್ರೀತಿಸುತ್ತೇನೆ- ನನ್ನ ಕಡೆಗೆ ನೋಡಿ ಮತ್ತು ನಾನು ನಿಮ್ಮನ್ನು ನೋಡಿಕೊಳ್ಳುತ್ತೇನೆ… ಹೀಗೆ ಹೇಳುತ್ತಲೇ ಹೋಗಬಹುದು.

ಇವು ಅವರ ಬೋಧನೆಗಳ ಭಾಗವಾಗಿದ್ದು, ಅವರ ಬಳಿಗೆ ಹೋಗುವವರಿಗೆ ಪದೇ ಪದೇ ಪುನರಾವರ್ತಿಸಲಾಗುತ್ತದೆ. ಇದು ಹಳ್ಳಿಗಾಡಿನ ಮನುಷ್ಯನನ್ನು ಸಂತನಾಗಿ ಪರಿವರ್ತಿಸಿತು.

ಭಕ್ತರ ಸಂಕಟಗಳನ್ನು ತೆಗೆದುಕೊಂಡು ಅವರಿಗೆ ಸಾಂತ್ವನ ನೀಡುತ್ತಿದ್ದರು. ಮನೆದೇವರನ್ನು ಪೂಜಿಸುವಂತೆ ಜನರಿಗೆ ಮನವಿ ಮಾಡಿದರು. ಸ್ವಯಂ ನಿಯಂತ್ರಣ, ನಿರ್ಲಿಪ್ತತೆಯಿಂದ ಬದುಕಲು, ದೇವರನ್ನು ನಂಬಲು ಮತ್ತು ತಂದೆ-ತಾಯಿ, ಗುರು ಮತ್ತು ದೀನದಲಿತರನ್ನು ಪ್ರೀತಿಸಲು ಕಲಿಸಿದರು. ಇಂತಹ ಪುಣ್ಯಾತ್ಮರು ಹಿಂದೂ ಭಾವನೆಗಳಿಗೆ ಹೇಗೆ ಧಕ್ಕೆ ತರುತ್ತಾರೆ?

ಸತ್ಯದ ವಿಡಂಬನೆ:

ಸಾಯಿಬಾಬಾರವರ ಯಾವುದೇ ಬೋಧನೆಯೊಂದಿಗೆ ಯಾರಾದರೂ ಜಗಳವಾಡಬಹುದೇ? ವಾಸ್ತವವಾಗಿ, ಅವರು ಹಿಂದೂ ಸಂತರು ಮಾಡದ ಯಾವುದನ್ನೂ ಹೇಳಲಿಲ್ಲ ಅಥವಾ ಬೋಧಿಸಲಿಲ್ಲ. ಕೆಲ ಹಿಂದೂಗಳು ಶಿರಡಿ ಸಾಯಿಬಾಬಾ ಬಗ್ಗೆ ಅತೃಪ್ತಿ ಹೊಂದಲು ಕಾರಣವೆಂದರೆ, ಅವರು ಮುಸ್ಲಿಂ ಫಕೀರರನ್ನು ಹೋಲುತ್ತಾರೆ ಮತ್ತು ಒಳಗೊಳ್ಳುವಿಕೆಯನ್ನು ಬೋಧಿಸಿದರು.

ಹೀಗೆ ಮಾಡುವ ಮೂಲಕ ಅವರು ಧರ್ಮ ಅಥವಾ ಇನ್ನಿತರ ಸಾಮಾಜಿಕ ವರ್ಗಗಳ ಆಧಾರದ ಮೇಲೆ ಜನರ ನಡುವೆ ತಾರತಮ್ಯ ಮಾಡದಂತೆ ಭಕ್ತರನ್ನು ಕೇಳಿಕೊಂಡ ಶೃಂಗೇರಿ ಮತ್ತು ಕಾಂಚೀಪುರಂನ ಕೆಲವು ಶಂಕರಾಚಾರ್ಯರಿಗೆ ಸಮಾನರಾಗಿದ್ದರು.

ಅವರಲ್ಲಿ ಕೆಲವರು ಹಿಂದೂ ಆಗಲು ಬಯಸುವ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಸ್ವಂತ ಧರ್ಮಕ್ಕೆ ನಿಷ್ಠರಾಗಿರಲು ಸಲಹೆ ನೀಡಿದರು. ಅವರ ಅಧ್ಯಾತ್ಮಿಕ ಮೋಕ್ಷ ಅವರು ಜನಿಸಿದ ನಂಬಿಕೆಯಲ್ಲಿದೆ ಎಂದು ಒತ್ತಿಹೇಳಿದರು.

ಒಳಗೊಳ್ಳುವಿಕೆಯೇ ಸಮಸ್ಯೆ:

ಈ ʼಎಲ್ಲರನ್ನೂ ಒಳಗೊಳ್ಳುವಿಕೆʼ ಕೆಲವು ಹಿಂದೂಗಳಿಗೆ ಸಮಸ್ಯೆಯಾಗಿದೆ. ಶಿರಡಿ ಸಾಯಿಬಾಬಾ ಅವರ ಇಸ್ಲಾಮಿಕ್ ಹಿನ್ನೆಲೆಯನ್ನು ತೋರಿಸುವುದು ಸುಲಭ ಮತ್ತು ಅವರ ಆರಂಭಿಕ ದಿನಗಳು ನಿಗೂಢವಾಗಿದ್ದರೆ, ಹೆಚ್ಚು ವಿವಾದಾತ್ಮಕವಾಗಿಸಬಹುದು. ಲಕ್ಷಾಂತರ ಹಿಂದೂಗಳು ಅವರನ್ನು ತಮ್ಮವರೆಂದು ಸ್ವೀಕರಿಸಿದ್ದಾರೆ ಎಂಬುದನ್ನು ಹೆಚ್ಚು ಪರಿಗಣಿಸಲಾಗಿಲ್ಲ.

ನಂಬಿಕೆ ಕುರಿತು ಸಹಿಷ್ಣುತೆ ಮತ್ತು ಒಳಗೊಳ್ಳುವಿಕೆಯನ್ನು ಪ್ರತಿಪಾದಿಸುವ ಹಿಂದೂಗಳು ಹಾಗೂ 'ನಮ್ಮ' ಮತ್ತು 'ಅವರ' ನಡುವೆ ಗೆರೆ ಎಳೆಯಲು ಪ್ರಯತ್ನಿಸುವ ಮತಾಂಧರ ನಡುವಿನ ವ್ಯತ್ಯಾಸ ಇದು.

ಇದರಿಂದಾಗಿಯೇ ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಂ ಅವರು ಕಾಂಚಿಪುರಂ ಮಠದಿಂದ ಆಕರ್ಷಿತರಾದರು. ಮಠದ ಪ್ರವೇಶದಲ್ಲಿ ಒಂದು ಸಣ್ಣ ಮಸೀದಿ ಇದೆ ಮತ್ತು ಅದರ ಉಪಸ್ಥಿತಿ ಕಾಮಕೋಟಿ ಪೀಠದ ಯಾವುದೇ ಸ್ವಾಮೀಜಿಗಳಿಗೆ ಎದೆಯುರಿ ತರಲಿಲ್ಲ.

ವ್ಯಕ್ತಿಯೊಬ್ಬ ಶಿರಡಿ ಸಾಯಿಬಾಬಾ ಅವರನ್ನು ಪ್ರಾರ್ಥಿಸಲು ಬಯಸದೇ ಇರಬಹುದು. ಆದರೆ, ದೇವಸ್ಥಾನ, ಅದು ಯಾವುದೇ ಆಗಿರಲಿ, ಅವರಿಗೆ ಪ್ರಾರ್ಥನೆ ಸಲ್ಲಿಸುವುದು ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂಬುದು ಸತ್ಯದ ಅಪಹಾಸ್ಯ.

Tags:    

Similar News