ಬಾಂಗ್ಲಾ: ನಿರ್ಣಾಯಕ ಘಟ್ಟ ತಲುಪಿದ ವಾಕರ್-ಯೂನಸ್ ಮುಸುಕಿನ ಗುದ್ದಾಟ

ಬಾಂಗ್ಲಾದೇಶದಲ್ಲಿ ಚುನಾವಣೆ ನಡೆಸಿ ಜನಪ್ರಿಯ ಸರ್ಕಾರವನ್ನು ಜಾರಿಗೆ ತರಲು ಸೇನೆ ಮುಂದಾಗಿದ್ದರೆ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರು ತಮ್ಮ ಸುಧಾರಣೆಗಳನ್ನು ಜಾರಿಗೆ ತರಲು ಇನ್ನಷ್ಟು ಅವಧಿಗೆ ಅಧಿಕಾರವನ್ನು ಬಯಸಿದ್ದಾರೆ. ಇದು ಸೇನೆ ಮತ್ತು ಯೂನಸ್ ನಡುವೆ ಅಸಮಾಧಾನ ಭುಗಿಲೇಳುವಂತೆ ಮಾಡಿದೆ.;

Update: 2025-05-25 00:30 GMT

ಬಾಂಗ್ಲಾದಲ್ಲಿ ಹಂಗಾಮಿ ಸರ್ಕಾರದ ನಿಬಂಧನೆಗಳನ್ನು ಮರುಸ್ಥಾಪನೆ ಮಾಡಲು ಶೀಘ್ರ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜನರಲ್ ವಾಕರ್-ಉಜ್-ಜಮಾನ್ ಅವರು ಯೂನಸ್ ಬ್ರಿಗೇಡ್ ಗೆ ಕಡಿವಾಣ ವಿಧಿಸಲು ಪ್ರಯತ್ನ ನಡೆಸಬಹುದು.

ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಬೆಂಬಲಿಗರು ಆಂದೋಲನ ನಡೆಸುವ ಸಾಧ್ಯತೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಸೇನೆಯು ತನ್ನ ಕಮಾಂಡರ್ ಜನರಲ್ ವಾಕರ್ ಅವರ ನಿವಾಸದ ಬಳಿ ಪ್ರತಿಭಟನೆ ನಡೆಸದಂತೆ ನಿಷೇಧ ಹೇರಿದೆ.

ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರವನ್ನು ಪದಚ್ಯುತಗೊಳಿಸಿದ ಬಳಿಕ ನೊಬೆಲ್ ಪ್ರಶಸ್ತಿ ವಿಜೇತ ಯೂನಸ್ ಅವರ ನೇತೃತ್ವದಲ್ಲಿ ಮಧ್ಯಂತರ ಸರ್ಕಾರವನ್ನು ಅಧಿಕಾರಕ್ಕೆ ತರಲಾಗಿತ್ತು. ಈಗ ಯೂನಸ್ ಮತ್ತು ಸೇನೆಯ ನಡುವಿನ ಸಂಬಂಧ ಹದಗೆಡುತ್ತಿರುವ ಲಕ್ಷಣಗಳು ಕಾಣುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಶೀಘ್ರ ಚುನಾವಣೆಗೆ ಮುಂದಾಗುವಂತೆ ಸೇನಾ ಮುಖ್ಯಸ್ಥರು ಒತ್ತಡ ಹೇರುತ್ತಿದ್ದಾರೆ. ಆದರೆ ದೇಶದಲ್ಲಿ ವ್ಯಾಪಕ ಸುಧಾರಣೆಗಳನ್ನು ಜಾರಿಗೆ ತರುವ ಉದ್ದೇಶ ಹೊಂದಿರುವ ಯೂನಸ್ ಅವರಿಗೆ ಇದು ಅಸಮಾಧಾನ ತಂದಿರುವುದು ಸ್ಪಷ್ಟ.

ಆದರೆ ಇತ್ತೀಚಿನ ಕೆಲವು ಬೆಳವಣಿಗೆಗಳು ಸೇನಾ ಮುಖ್ಯಸ್ಥರನ್ನು ಕೆರಳಿಸಿದೆ ಎಂದು ಜನರಲ್ ವಾಕರ್-ಉಜ್-ಜಮಾನ್ ಅವರ ನಿಕಟವರ್ತಿಗಳು ತಿಳಿಸಿದ್ದಾರೆ.

ಮೊದಲ ಬೆಳವಣಿಗೆ ಏನೆಂದರೆ ಯೂನಸ್ ಅವರು ಸೇನಾ ಮುಖ್ಯಸ್ಥರನ್ನೇ ಬದಲಾವಣೆ ಮಾಡಲು ಹೊರಟಿರುವುದು. ವಾಕರ್ ಅವರ ಬದಲಿಗೆ ಪ್ರಧಾನ ಮಂತ್ರಿ ಕಚೇರಿಯ ಸಶಸ್ತ್ರ ಪಡೆಗಳ ವಿಭಾಗದ ಹೊಸ ಪ್ರಧಾನ ಸಿಬ್ಬಂದಿ ಅಧಿಕಾರಿ ಲೆಫ್ಟಿನೆಂಟ್ ಜನರಲ್ ಕಮರುಲ್ ಹಸನ್ ಅವರನ್ನು ನೇಮಕ ಉದ್ದೇಶವನ್ನು ಯೂನಸ್ ಹೊಂದಿದ್ದಾರೆ. ಇಂತಹ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿರುವುದು ವಾಕರ್ ಅವರ ಗಮನಕ್ಕೂ ಬಂದಿದೆ.

ಎರಡನೆಯದಾಗಿ, 2009ರಲ್ಲಿ 57 ಸೇನಾಧಿಕಾರಿಗಳು ಮತ್ತು ಅವರ ಪತ್ನಿಯರ ಮಾರಣಹೋಮ ಸಂಭವಿಸಿದಾಗ ದಂಗೆ ಮತ್ತು ಕೊಲೆ ಪ್ರಕರಣಗಳಲ್ಲಿ ತಪ್ಪಿತಸ್ಥರಾಗಿದ್ದ ಗಡಿ ಕಾವಲುಗಾರರನ್ನು ಯೂನಸ್ ಆಡಳಿತ ಬಿಡುಗಡೆ ಮಾಡಲು ಪ್ರಾರಂಭಿಸಿದ್ದು ವಾಕರ್ ಮತ್ತು ಇನ್ನೂ ಅನೇಕ ಸೇನಾಧಿಕಾರಿಗಳನ್ನು ಕೆರಳಿಸುವಂತೆ ಮಾಡಿದೆ.

ಈ ದಂಗೆಕೋರರನ್ನು ಉದ್ದೇಶಪೂರ್ವಕವಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ನಿಷೇಧಿತ ಹಿಜ್ಬ್ ಉತ್ ತಹ್ರೀರ್ ನಂತಹ ಇಸ್ಲಾಮಿಕ್ ಉಗ್ರ ಸಂಘಟನೆಗಳು ವಾದಿಸಿ ಅವರ ಬಿಡುಗಡೆಗೆ ಒತ್ತಾಯಿಸಿದ್ದವು. ಆದರೆ ಸೇನಾ ಮುಖ್ಯಸ್ಥರು ಇದಕ್ಕೆ ವಿರುದ್ಧವಾಗಿದ್ದು. ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಅವರು ಪೂರ್ಣ ಶಿಕ್ಷೆಯನ್ನು ಅನುಭವಿಸಬೇಕು ಎಂಬುದು ಅವರ ನಿಲುವಾಗಿತ್ತು.

ಈ ವರ್ಷದ ಆರಂಭದಿಂದ ಇಂತಹ ಸುಮಾರು ಮುನ್ನೂರು ದಂಗೆಕೋರರನ್ನು ಬಿಡುಗಡೆ ಮಾಡಲಾಗಿದೆ. ಇದು ಇಸ್ಲಾಮಿಕ್ ಉಗ್ರಗಾಮಿಗಳನ್ನು ಸಂತೈಸುವ ಪ್ರಯತ್ನ ಎಂದು ಬಿಂಬಿಸಲಾಗಿದೆ.

ಮೂರನೆಯದಾಗಿ ತಪ್ಪಿತಸ್ಥರಾದ ಇಸ್ಲಾಮಿಕ್ ಭಯೋತ್ಪಾದಕರನ್ನು ಬಿಡುಗಡೆ ಮಾಡಿರುವುದು ಸೇನಾ ಮುಖ್ಯಸ್ಥ ಮತ್ತು ಅವರ ಸಹೋದ್ಯೋಗಿಗಳಲ್ಲಿ ಅಸಮಾಧಾನ ತಂದಿದೆ. ಹೀಗೆ ಬಿಡುಗಡೆಗೊಂಡವರಲ್ಲಿ ಜಾಶಿಮುದ್ದಿನ್ ರಹಮಾನಿಯಂತಹ ಕಟ್ಟಾ ನಾಯಕರೂ ಸೇರಿದ್ದಾರೆ.

ಇಂತಹ 300ಕ್ಕೂ ಅಧಿಕ ಉಗ್ರರ ಬಿಡುಗಡೆಯಿಂದ ದೇಶದಲ್ಲಿ ಇಸ್ಲಾಮಿಕ್ ಮೂಲಭೂತವಾದ ತೀವ್ರಗೊಂಡಿದೆ. ಇದು ಅಲ್ಲಿನ ಮಹಿಳೆಯರತ್ತ ತಿರುಗಿದ್ದು ಅವರು ಫುಟ್ಬಾಲ್ ಮತ್ತು ಕ್ರಿಕೆಟ್ ಆಡುವುದನ್ನು ತಡೆಯಲೂ ಮುಂದಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

ಬಾಂಗ್ಲಾದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗಡೆತ್ತಿರುವುದಕ್ಕೆ, ಅದನ್ನು ನಿಯಂತ್ರಿಸಲಾಗದೇ ಇರುವುದಕ್ಕೆ ಸೇನೆಯ ಕಡೆಗೆ ಬೊಟ್ಟುಮಾಡಲಾಗುತ್ತಿದೆ. ಆದರೆ ಹಿಂಸೆಗೆ ಕಾರಣರಾದವರ ಬಗ್ಗೆಯೇ ಸರ್ಕಾರ ಮೃದು ಧೋರಣೆ ತಾಳಿದರೆ ನಾವಾದರೂ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಲು ಸಾಧ್ಯ ಎಂದು ಸೇನಾ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಅಂತಿಮವಾಗಿ, ದೇಶದ ಅತಿದೊಡ್ಡ ರಾಜಕೀಯ ಪಕ್ಷವಾದ ಅವಾಮಿ ಲೀಗ್ ನ್ನು ನಿಷೇಧಿಸಿದ ನಂತರ ದೇಶದಲ್ಲಿ ಮುಕ್ತ, ನ್ಯಾಯಯುತ ಹಾಗೂ ಎಲ್ಲರನ್ನೂ ಒಳಗೊಂಡ ಚುನಾವಣೆ ನಡೆಸುವ ತನ್ನ ಆಶಯಕ್ಕೆ ಧಕ್ಕೆಯಾಗಿದೆ ಎಂದು ಜನರಲ್ ವಾಕರ್ ಅವರು ಹೇಳಿದ್ದಾರೆ. ಇದು ಅವರ ನಿರಾಶೆಗೆ ಕಾರಣವಾಗಿದೆ.

ಕೊಲೆಯಂತಹ ಅಪರಾಧಗಳಲ್ಲಿ ಶಾಮೀಲಾಗಿರುವ ಅವಾಮಿ ಲೀಗ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ವಿಚಾರಣೆಗೆ ಗುರಿಪಡಿಸುವುದೇನೋ ಸರಿ. ಆದರೆ ಆ ಪಕ್ಷವನ್ನೇ ಸಂಸತ್ ಚುನಾವಣೆಯಲ್ಲಿ ಭಾಗವಹಿಸದಂತೆ ತಡೆಯುವುದು ಸರಿಯಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ.

ಅಷ್ಟಕ್ಕೂ ಯೂನಸ್ ಮೂಲಭೂತವಾದಿಗಳ ಬಗ್ಗೆ ಮೃದು ಧೋರಣೆ ತಾಳಲು ಕಾರಣವೇನು? ಅವರೆಲ್ಲ ಹಸೀನಾ ವಿರೋಧಿ ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿದ್ದರು ಎಂಬುದು ಮಾತ್ರ ಇದಕ್ಕೆ ಕಾರಣವಲ್ಲ. ಬದಲಾಗಿ ಯೂನಸ್ ಅವರಿಗೆ ದೇಶದಲ್ಲಿ ತಮ್ಮದೇ ಆದ ರಾಜಕೀಯ ನೆಲೆ ಇಲ್ಲ ಎಂಬುದೂ ಮುಖ್ಯ ಕಾರಣವಾಗಿದೆ.

ಈ ಎಲ್ಲ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ರಾಜಕೀಯ ಇನ್ನೊಂದು ಸಂಘರ್ಷಕ್ಕೆ ಸಜ್ಜಾದಂತೆ ಕಾಣುತ್ತಿದೆ.

(ಮೂಲ ಲೇಖನ The Federal ನಲ್ಲಿ ಪ್ರಕಟವಾಗಿದೆ. ಲೇಖನದಲ್ಲಿನ ಮಾಹಿತಿ, ಆಲೋಚನೆಗಳು ಅಥವಾ ಅಭಿಪ್ರಾಯಗಳು ಲೇಖಕರದ್ದು. ಅವು 'ದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸಬೇಕೆಂದಿಲ್ಲ)

Tags:    

Similar News