ನವದೆಹಲಿ, ಮಾ.1-ʻನಾವು ಈ ಸ್ಥಳದಿಂದ ಕದಲುವುದಿಲ್ಲʼ ಎಂದಿರುವ ಸಿಲ್ಕ್ಯಾರಾ ಸುರಂಗ ರಕ್ಷಣಾ ಕಾರ್ಯಾಚರಣೆಯ ಭಾಗವಾಗಿದ್ದ ಗಣಿಗಾರ ವಕೀಲ್ ಹಸನ್, ತಮ್ಮ ಎರಡನೇ ರಾತ್ರಿಯನ್ನು ಫುಟ್‌ಪಾತ್‌ನಲ್ಲಿ ಕಳೆದರು.
ʻಕುಟುಂಬ ಮತ್ತು ನಾನು ರಾತ್ರಿಯನ್ನು ಬಯಲಿನಲ್ಲಿ ಕಳೆಯುತ್ತಿದ್ದೇವೆ. ಕೆಲವು ಸ್ಥಳೀಯರು ನಮಗೆ ಆಹಾರ ಮತ್ತು ನೀರು ಇತ್ಯಾದಿ ಒದಗಿಸುತ್ತಿದ್ದಾರೆʼ ಎಂದು ಹಸನ್ ಶುಕ್ರವಾರ ಹೇಳಿದರು. ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ನೀಡಿದ ನರೇಲಾದಲ್ಲಿರುವ ಇಡಬ್ಲ್ಯುಎಸ್ ಫ್ಲಾಟ್‌ಗೆ ಸ್ಥಳಾಂತರಗೊಳ್ಳುವ ಪ್ರಸ್ತಾಪವನ್ನು ತಿರಸ್ಕರಿಸಿದರು. ʻನಾವು ಈಗ ರಾತ್ರಿಯನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಕುಟುಂಬಕ್ಕೆ ಇದುವರೆಗೆ ಸರ್ಕಾರದಿಂದ ಯಾವುದೇ ಸಹಾಯ ಸಿಕ್ಕಿಲ್ಲʼ ಎಂದು ಹೇಳಿದರು.
ಕಳೆದ ನವೆಂಬರ್‌ನಲ್ಲಿ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನುರಕ್ಷಿಸಿದ ಗಣಿಗಾರರ ತಂಡದಲ್ಲಿ ಹಸನ್ ಇದ್ದರು. ಈಶಾನ್ಯ ದೆಹಲಿಯ ಖಜೂರಿ ಖಾಸ್‌ನಲ್ಲಿರುವ ಅವರ ಮನೆಯನ್ನು ಡಿಡಿಎ ನೆಲಸಮಗೊಳಿಸಿತು.ಡಿಡಿಎ ಅಧಿಕಾರಿಗಳು ಮನೆ ನೀಡುವುದಾಗಿ ಹೇಳಿದ್ದರು. ಆದರೆ, ಅದು ಕೇವಲ ಮೌಖಿಕ ಭರವಸೆಯಾದ್ದರಿಂದ ನಿರಾಕರಿಸಿದೆ ಎಂದು ಅವರು ಗುರುವಾರ ಹೇಳಿದ್ದರು. ಅದೇ ಸ್ಥಳದಲ್ಲಿ ಮನೆ ನಿರ್ಮಿಸಿಕೊಡುವಂತೆ ಒತ್ತಾಯಿಸಿ, ಬೇಡಿಕೆ ಈಡೇರಿಸದಿದ್ದರೆ ನಿರಶನ ನಡೆಸುವುದಾಗಿ ಬೆದರಿಕೆ ಹಾಕಿದ್ದರು.