ಮಂಡ್ಯದಲ್ಲಿ ಸ್ಪರ್ಧಿಸಲು ನಿಖಿಲ್‌ ಒಪ್ಪಿಸುತ್ತೇನೆ: ಎಚ್‌ ಡಿ ಕುಮಾರಸ್ವಾಮಿ

2019ರ ಲೋಕಸಭಾ ಚುನಾವಣೆಯಲ್ಲಿ ಮತ್ತು 2023 ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ನಿಖಿಲ್‌ ಕುಮಾರಸ್ವಾಮಿ ಅವರು ಮುಂದಿನ ಐದು ವರ್ಷಗಳ ತನಕ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಘೊಷಿಸಿದ್ದರು.;

Update: 2024-03-15 14:19 GMT

ಮಂಡ್ಯ: 2024 ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧಿಸುವ ಸಾಧ್ಯತೆ ಇದೆ. ಈ ಬಗ್ಗೆ ಸ್ವತಃ ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಅವರೇ ಸುಳಿವು ಬಿಟ್ಟು ಕೊಟ್ಟಿದ್ದಾರೆ.

ಮಂಡ್ಯದಲ್ಲಿ ಆಯೋಜಿಸಿದ್ದ ಲೋಕಸಭಾ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಎಚ್‌ ಡಿಕೆ, ಲೋಕಸಭಾ ಚುನಾವಣೆಗೆ ಮತ್ತೆ ಸ್ಪರ್ಧಿಸುವಂತೆ ನಿಖಿಲ್‌ ಕುಮಾರಸ್ವಾಮಿಯನ್ನು ಒಪ್ಪಿಸುತ್ತೇನೆ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದ್ದಾರೆ.

ಇದೇ ವೇಳೆ ಸುಮಲತಾ ಅವರೊಂದಿಗೆ ಯಾವುದೇ ದ್ವೇಷ ಇಲ್ಲ ಎಂದು ಹೇಳಿದ ಹೆಚ್‌ಡಿಕೆ, ಸುಮಲತಾ ಅವರು ನನ್ನ ಸ್ವಂತ ಅಕ್ಕ ಇದ್ದಂತೆ ಎಂದು ಹೇಳಿದ್ದಾರೆ.

ಅಂಬರೀಷ್‌ ಅವರ ಸಮಾಧಿ ನಿರ್ಮಾಣಕ್ಕೆ ಕಂಠೀರವ ಸ್ಟುಡಿಯೋದಲ್ಲಿ ಸ್ಥಳ ನೀಡಿದ್ದೇನೆ. ಸುಮಲತಾ ಅವರು ಸ್ವಂತ ಅಕ್ಕ ಅಂತ ಹೇಳ್ತೀನಿ. ರಾಜಕಾರಣದಲ್ಲಿ ಸಂಘರ್ಷ ಬರುತ್ತದೆ, ಅದನ್ನು ಮುಂದುವರಿಸಿಕೊಂಡು ಹೋಗುವುದು ಇಷ್ಟ ಇಲ್ಲ ಎಂದು ಅವರು ಹೇಳಿದ್ದಾರೆ.

ʼಬಿಜೆಪಿ - ಜೆಡಿಎಸ್‌ ಮೈತ್ರಿ ಅಭ್ಯರ್ಥಿಯನ್ನು ಮಾರ್ಚ್‌ 25ಕ್ಕೆ ಅಧಿಕೃತ ಘೋಷಣೆ ಮಾಡುತ್ತೇವೆ. ನಿಮ್ಮ ಭಾವನೆಗಳಿಗೆ ಯಾವುದೇ ಕಾರಣಕ್ಕೂ ಧಕ್ಕೆ ತರುವುದಿಲ್ಲ. ನಿಮ್ಮ ಆಸೆಯನ್ನು ನೆರವೇರಿಸಿಕೊಡುತ್ತೇವೆ. ಲೋಕಸಭಾ ಚುನಾವಣೆಗೆ ಮತ್ತೆ ಸ್ಪರ್ಧಿಸುವಂತೆ ನಿಖಿಲ್‌ ಕುಮಾರಸ್ವಾಮಿ ಅವರನ್ನು ನಾನು ಒಪ್ಪಿಸುತ್ತೇನೆʼ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಮಾರ್ಚ್‌ 21 ರಂದು ಶಸ್ತ್ರ ಚಿಕಿತ್ಸೆ ಮುಗಿಸಿ ಮಾರ್ಚ್‌ 25ಕ್ಕೆ ಇಲ್ಲಿಗೆ ಬಂದು ನಾನು ಮೈತ್ರಿ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡುವುದಾಗಿ ಅವರು ತಿಳಿಸಿದ್ದಾರೆ.

ಮಂಡ್ಯದಲ್ಲಿ ಜೆಡಿಎಸ್‌ನಿಂದ ಮಾಜಿ ಸಚಿವರಾದ ಸಿಎಸ್‌ ಪುಟ್ಟಸ್ವಾಮಿ ಅಥವಾ ಡಿಸಿ ತಮ್ಮಣ್ಣ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಬಗ್ಗೆ ಚರ್ಚೆ ನಡೆದಿತ್ತು. ಇದೀಗ ನಿಖಿಲ್‌ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಸ್ವತಃ ಹೆಚ್‌ಡಿಕೆ ಅವರೇ ಮುತುವರ್ಜಿ ವಹಿಸಿರುವುದರಿಂದ ನಿಖಿಲ್‌ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ.

2019ರ ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಮತ್ತು 2023 ರ ವಿಧಾನಸಭೆ ಚುನಾವಣೆಗೆ ರಾಮನಗರದಿಂದ ಸ್ಪರ್ಧಿಸಿದ್ದ ನಿಖಿಲ್‌ ಕುಮಾರಸ್ವಾಮಿ ಅವರು ಸೋಲನುಭವಿಸಿದ್ದರು. ಇದರ ಬಳಿಕ ತಾನು ಇನ್ನು ಐದು ವರ್ಷಗಳ ತನಕ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ನಿಖಿಲ್‌ ಕುಮಾರಸ್ವಾಮಿ ಅವರು ಘೊಷಿಸಿದ್ದರು.

Tags:    

Similar News