Monkeypox Menace| ಎಂಪಾಕ್ಸ್‌ ಮುಂದಿನ ಕೋವಿಡ್‌ ಆಗುವುದೇ?

ವಿಶ್ವ ಆರೋಗ್ಯ ಸಂಸ್ಥೆಯು ಎಂಪಾಕ್ಸ್ ಅನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿಲ್ಲ. ಆದರೆ, ಅದು ಘೋಷಿಸಿರುವ ಕ್ರಮಗಳು ಸಾಂಕ್ರಾಮಿಕವಾಗುವುದನ್ನು ತಡೆಯಲು ರೂಪಿಸಲಾಗಿದೆ.

Update: 2024-09-10 10:34 GMT

1958 ರಲ್ಲಿ ಎಂಪಾಕ್ಸ್‌ ನ್ನು ಸೆರೆಯಲ್ಲಿರುವ ಮಂಗಗಳಲ್ಲಿ ಕಂಡುಹಿಡಿಯಲಾಯಿತು. ಆದ್ದರಿಂದ, ಅದರ ಮೂಲ ಹೆಸರು 'ಮಂಕಿಪಾಕ್ಸ್'. ಮನುಷ್ಯರಲ್ಲಿ ಮೊದಲ ಪ್ರಕರಣ 1970 ರಲ್ಲಿ ಪತ್ತೆಯಾಯಿತು. ದಶಕಗಳ ಕಾಲ ವೈಜ್ಞಾನಿಕ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರದಿಂದ ನಿರ್ಲಕ್ಷಿತಗೊಂಡು, ಉಷ್ಣವಲಯದ ಆಫ್ರಿಕದ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಇರುವ ಪ್ರಪಂಚದ ಉಳಿದ ಭಾಗಗಳಿಗೆ ಪ್ರಸ್ತುತವಾಗದ ಸೋಂಕು ಎಂದು ಪರಿಗಣಿಸಲ್ಪಟ್ಟಿತು.

ಆದರೆ, 2022 ರಲ್ಲಿ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಎಂಪಾಕ್ಸ್‌ ಏಕಾಏಕಿ ಭಾರಿಯಾಗಿ ಹರಡಿದಾಗ, ಅನುದಾನ ಹೆಚ್ಚಳದಿಂದ ವೈಜ್ಞಾನಿಕ ಅಧ್ಯಯನಗಳು ಹೆಚ್ಚಿದವು.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯು ಮಧ್ಯ ಆಫ್ರಿಕದಲ್ಲಿ ಎಂಪಾಕ್ಸ್‌ ಹಾವಳಿಯವನ್ನು ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ(ಪಿಎಚ್‌ ಇಐಸಿ) ಎಂದು ಘೋಷಿಸಿದೆ. ಇದು ಇತರ ದೇಶಗಳಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ಅಪಾಯದ ಅತ್ಯುನ್ನತ ಎಚ್ಚರಿಕೆಯಾಗಿದೆ ಮತ್ತು ನಿವಾರಣೆಗೆ ಸಂಘಟಿತ ಅಂತಾರಾಷ್ಟ್ರೀಯ ಪ್ರತಿಕ್ರಿಯೆ ಅಗತ್ಯವಿರುತ್ತದೆ. 

ಎಂಪಾಕ್ಸ್‌ ಲಕ್ಷಣಗಳು: ಎಂಪಾಕ್ಸ್‌ ಸಿಡುಬಿಗೆ ನಿಕಟ ಸಂಬಂಧ ಹೊಂದಿರುವ ವೈರಸ್ ಸೋಂಕು. ಆರಂಭಿಕ ರೋಗಲಕ್ಷಣಗಳಲ್ಲಿ ಜ್ವರ, ತಲೆನೋವು, ದುಗ್ಧರಸ ಗ್ರಂಥಿಗಳ ಊತ ಮತ್ತು ಸ್ನಾಯು ನೋವು ಸೇರಿವೆ. ಬಳಿಕ ಮುಖ, ಕೈಗಳು ಮತ್ತು ಪಾದಗಳ ಮೇಲೆ ಗುಳ್ಳೆಗಳು ಮೂಡುತ್ತವೆ. 

ಲೈಂಗಿಕ ಕ್ರಿಯೆ ಸೇರಿದಂತೆ ಸೋಂಕಿತ ಜನರೊಂದಿಗೆ ಸಂಪರ್ಕದಿಂದ ಎಂಪಾಕ್ಸ್ ಹರಡುತ್ತದೆ. ಎದೆ, ಕೈ ಮತ್ತು ಪಾದಗಳ ಮೇಲೆ ಕೀವು ತುಂಬಿದ ಗಾಯ ಆಗುತ್ತದೆ ಮತ್ತು ಸೋಂಕಿನಿಂದ ಜನನಾಂಗಗಳ ಮೇಲೆ ಗಾಯವಾಗುತ್ತದೆ. ಜ್ವರದಂಥ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. 

ಎರಡು ವಿಧಗಳು: ಎಂಪಾಕ್ಸ್‌ನಲ್ಲಿ ಎರಡು ವಿಧಗಳು ಅಥವಾ ಕ್ಲಾಡ್‌ಗಳಿವೆ. ಪಶ್ಚಿಮ ಆಫ್ರಿಕದ ಮೂಲದ ಕ್ಲಾಡ್ 2, ತೀವ್ರತೆ ಕಡಿಮೆ ಇರುತ್ತದೆ. ಶೇ.1 ರಷ್ಟು ಸಾವಿನ ಪ್ರಮಾಣ ಹೊಂದಿದೆ. ಆದರೆ ಮಧ್ಯ ಆಫ್ರಿಕಾ ಮೂಲದ ಕ್ಲಾಡ್ 1, ಶೇ.10 ರಷ್ಟು ಸಾವಿಗೆ ಕಾರಣವಾಗುತ್ತದೆ( 10 ರಲ್ಲಿ ಒಬ್ಬರು ಸಾಯುತ್ತಾರೆ).

ಕ್ಲಾಡ್‌ 1 ಕೋವಿಡ್‌ಗೆ ಕಾರಣವಾಗುವ ವೈರಸ್ SARS-CoV-2 ನ ಓಮಿಕ್ರಾನ್ ರೂಪಾಂತರದ ಮರಣ ಪ್ರಮಾಣವಾದ ಶೇ.0.7ವನ್ನು ಹೋಲು ತ್ತದೆ. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಕ್ಲಾಡ್ 1 ಭಾರಿ ಪ್ರಮಾಣದಲ್ಲಿ ಹಬ್ಬಿದೆ.

ಇದು ಎಲ್ಲಿ ಸ್ಥಳೀಯ?: ಮಧ್ಯ ಮತ್ತು ಪಶ್ಚಿಮ ಆಫ್ರಿಕದ ಕೆಲವು ಭಾಗಗಳಲ್ಲಿ ಎಂಪಾಕ್ಸ್‌ ಸ್ಥಳೀಯವಾಗಿದೆ. ಇಲ್ಲಿ ವೈರಸ್ ಪ್ರಾಣಿಗಳಲ್ಲಿ ಅಸ್ತಿತ್ವದಲ್ಲಿದ್ದು, ಮನುಷ್ಯರಿಗೆ ಹರಡುವ ಸಾಧ್ಯತೆಯಿದೆ. 2017 ರಿಂದ ಮನುಷ್ಯರಿಂದ ಮನುಷ್ಯರಿಗೆ ಹರಡುವಿಕೆ ಏಕಾಏಕಿ ಹೆಚ್ಚಾಗಿದೆ.

ಡಬ್ಲ್ಯುಎಚ್‌ಒ ಪ್ರಕಾರ, ಜನವರಿ 2022 ರಿಂದ ಆಗಸ್ಟ್ 2024 ರವರೆಗೆ 120 ದೇಶಗಳಲ್ಲಿ ಎಂಪಾಕ್ಸ್‌ ಪ್ರಕರಣಗಳು ವರದಿಯಾಗಿವೆ. 1 ಲಕ್ಷ ಪ್ರಯೋಗಾಲಯ ದೃಢಪಡಿಸಿದ ಪ್ರಕರಣಗಳು ಮತ್ತು ಸುಮಾರು 220 ಸಾವುಗಳು ಸಂಭವಿಸಿವೆ.

ಕಡಿಮೆ ರೋಗನಿರೋಧಕತೆ : ಸಿಡುಬಿನ ವಿರುದ್ಧ ಸಾಮೂಹಿಕ ಲಸಿಕೆ ನೀಡುವಿಕೆ 40 ವರ್ಷಗಳ ಹಿಂದೆ ಸ್ಥಗಿತಗೊಂಡಿತು. ಇದರಿಂದಾಗಿ, ಎಂಪಾಕ್ಸ್‌ ಗೆ ರೋಗನಿರೋಧಕತೆ ಕಡಿಮೆ ಇದೆ.ಎಂಪಾಕ್ಸ್‌ಗೆ ರೋಗನಿರೋಧಕ ಶಕ್ತಿ ಕೊರತೆ ಮತ್ತು ಜನರ ನಡುವೆ ಹರಡುವಿಕೆಯನ್ನು ಹೆಚ್ಚಿಸುವ ಹೊಸ ರೂಪಾಂತರಗಳಿಂದ ಜನರು ವೈರಸ್‌ಗೆ ಗುರಿಯಾಗುತ್ತಿದ್ದಾರೆ.

ನಿಯಂತ್ರಣ ಕ್ರಮಗಳು: ಮೂಲದಲ್ಲಿ ಅದನ್ನು ನಿಯಂತ್ರಿಸುವುದು ಉತ್ತಮ ಆಯ್ಕೆ. ಡಬ್ಲ್ಯುಎಚ್‌ಒನ ಇತ್ತೀಚಿನ ಘೋಷಣೆಯು ಅಗತ್ಯವಿರುವ ಸಂಪನ್ಮೂಲಗಳನ್ನು ಸಜ್ಜುಗೊಳಿಸಲು ಸಹಾಯ ಮಾಡುತ್ತದೆ.ವಿಶ್ವ ಆರೋಗ್ಯ ಸಂಸ್ಥೆಯು ರೋಗ ತಡೆಗಟ್ಟುವಿಕೆ, ರೋಗನಿರ್ಣಯ ಮತ್ತು ಎಲ್ಲರಿಗೂ ಲಸಿಕೆ ಲಭ್ಯವಾಗುವಂತೆ ಮಾಡಲು ನೆರವಾಗುತ್ತದೆ. ದೇಶಗಳು ಅಂತಾರಾಷ್ಟ್ರೀಯ ಆರೋಗ್ಯ ನಿಯಮಗಳು ಮತ್ತು ಜಾಗತಿಕ ತುರ್ತು ಪರಿಸ್ಥಿತಿಯ ನಿರ್ವಹಣೆಗೆ ಶಿಷ್ಟಾಚಾರವನ್ನು ಅನುಸರಿಸುವ ಮೂಲಕ ತಮ್ಮ ಕೈ ಜೋಡಿಸಬೇಕು. 

ಎಂಪಾಕ್ಸ್‌ ಮತ್ತು ಕೋವಿಡ್‌ ನಡುವಿನ ವ್ಯತ್ಯಾಸ: ಎರಡೂ ರೋಗಗಳು ವಿಭಿನ್ನ ವೈರಸ್‌ಗಳಿಂದ ಉಂಟಾಗುತ್ತವೆ.

ಕೋವಿಡ್ : ಕೋವಿಡ್ ಆರ್‌ಎನ್‌ಎ( ರೈಬೋನ್ಯೂಕ್ಲಿಕ್ ಆಸಿಡ್) ಆನುವಂಶಿಕ ವಸ್ತುವಾಗಿರುವ ವೈರಸ್. ಆರ್‌ಎನ್‌ಎ ವೈರಸ್‌ಗಳು ವೇಗವಾದ ವಿಕಸನ ಹೊಂದುವುದರಿಂದ, ಸೋಂಕು ತಗಲುವ ಸಂಭವನೀಯತೆ ಹೆಚ್ಚು ಇರುತ್ತದೆ. ಈ ವೈರಸ್ ಏಕ ಎಳೆಯ ಜೀನೋಮ್ ಹೊಂದಿರುವುದರಿಂದ, ಹೆಚ್ಚು ರೂಪಾಂತರಗೊಳ್ಳುತ್ತದೆ. ಇದರಿಂದ ಕೋವಿಡ್‌ ನ ಆಲ್ಫಾ, ಡೆಲ್ಟಾ ಮತ್ತು ಓಮಿಕ್ರಾನ್‌ನಂತಹ ಬಹು ರೂಪಾಂತರಗಳು ಸೃಷ್ಟಿಯಾದವು.

ಎಂಪಾಕ್ಸ್: ಆರ್ಥೋಪಾಕ್ಸ್ ವೈರಸ್ ಕುಲದ ಸದಸ್ಯ;‌ ಈ ಗುಂಪಿನಲ್ಲಿ ಸಿಡುಬಿಗೆ ಕಾರಣವಾಗುವ ವೇರಿಯೊಲಾ ವೈರಸ್ ಇದೆ. ಎಂಪಾಕ್ಸ್‌ ಎರಡು ಎಳೆಗಳ ಜೀನೋಮ್ ಹೊಂದಿರುವ ಡಿಎನ್‌ಎ ವೈರಸ್. ಆರ್‌ಎನ್‌ಎ ವೈರಸ್‌ಗಳಿಗೆ ಹೋಲಿಸಿದರೆ ಹೆಚ್ಚು ಸ್ಥಿರವಾಗಿರು ವುದರಿಂದ, ಎಂಪಾಕ್ಸ್‌ ವೈರಸ್ ನಿಧಾನಗತಿಯಲ್ಲಿ ರೂಪಾಂತರಗೊಳ್ಳುತ್ತದೆ.

ಎಂಪಾಕ್ಸ್‌ ಮುಂದಿನ ಕೋವಿಡ್ ಆಗಬಹುದೇ?; ವಿಶ್ವ ಆರೋಗ್ಯ ಸಂಸ್ಥೆಯು ಎಂಪಾಕ್ಸ್ ಅನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿಲ್ಲ. ಆದರೆ, ಅದು ಘೋಷಿಸಿರುವ ಕ್ರಮಗಳು ಸಾಂಕ್ರಾಮಿಕವಾಗುವುದನ್ನು ತಡೆಯಲು ರೂಪಿಸಲಾಗಿದೆ. 

ಡಬ್ಲ್ಯುಎಚ್‌ಒ ಅಧಿಕಾರಿಯೊಬ್ಬರು ಹೇಳಿದಂತೆ ʻಎಂಪಾಕ್ಸ್‌ ನೂತನ ಕೋವಿಡ್‌ ಅಲ್ಲʼ. ಅಂದರೆ, ಕೋವಿಡ್-19 ನಂತಹ ಸಾಂಕ್ರಾಮಿಕ ರೋಗಗಳು ಹೆಚ್ಚು ಅಸಂಭವ.ಈ ಎರಡರ ನಡುವಿನ ಪ್ರಮುಖ ವ್ಯತ್ಯಾಸವೆಂದರೆ, ಅವುಗಳ ವಿಕಾಸದ ಸ್ವರೂಪ ಮತ್ತು ವೇಗ. ಎಂಪಾಕ್ಸ್‌ ನಿಧಾನವಾದ ಬದಲಾವಣೆಗಳು ಮತ್ತು ಕಡಿಮೆ ರೂಪಾಂತರಗಳನ್ನು ಹೊಂದಿದೆ. ಆದರೆ ಕೋವಿಡ್-19 ವೇಗವಾಗಿ ವಿಕಸನಗೊಳ್ಳುತ್ತದೆ ಮತ್ತು ವಿಭಿನ್ನ ಗುಣಲಕ್ಷಣಗಳೊಂದಿಗೆ ಹೆಚ್ಚಿನ ರೂಪಾಂತರಗಳು ಹೊರಹೊಮ್ಮುತ್ತವೆ. 

Tags:    

Similar News