Dengue Outbreak | ಡೆಂಗ್ಯೂ ಪರೀಕ್ಷೆ ದರ ನಿಗದಿ ಮಾಡಿದ ರಾಜ್ಯ ಸರ್ಕಾರ

ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುವ ಡೆಂಗ್ಯೂ‌ ಜ್ವರ ಜನಸಾಮಾನ್ಯರಿಗೆ ಹೊರೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

Update: 2024-07-04 07:37 GMT
600 ರೂ. ದರ ನಿಗದಿಪಡಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
Click the Play button to listen to article

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಡೆಂಗ್ಯೂ ಟೆಸ್ಟಿಂಗ್‌ಗೆ ಹೆಚ್ಚಿನ ದರ ವಿಧಿಸುತ್ತಿದ್ದ ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಕಡಿವಾಣ ಹಾಕಿದೆ. ಡೆಂಗ್ಯೂ ಎರಡೂ ಪರೀಕ್ಷೆಗಳಿಗೆ ತಲಾ 300 ರೂ. ದರ ನಿಗದಿಪಡಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುವ ಡೆಂಗ್ಯೂ‌ ಜ್ವರ ಜನಸಾಮಾನ್ಯರಿಗೆ ಹೊರೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಜ್ವರಕ್ಕೆ ಉಚಿತ ಚಿಕಿತ್ಸೆ ಲಭ್ಯವಿದೆ. ಆದರೆ ಖಾಸಗಿ ಆಸ್ಪತ್ರೆಗಳು ಮನಬಂದಂತೆ ಡೆಂಗ್ಯೂ ಟೆಸ್ಟಿಂಗ್‌ಗೆ ದರ ವಿಧಿಸದಂತೆ ಕ್ರಮ ಕೈಗೊಳ್ಳಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಸಚಿವರ ಸೂಚನೆ ಮೇರೆಗೆ ಖಾಸಗಿ ಆಸ್ಪತ್ರೆಗಳಿಗೆ ಅನ್ವಯವಾಗುವಂತೆ ಆದೇಶ ಹೊರಡಿಸಿರುವ ಆರೋಗ್ಯ ಇಲಾಖೆ, ಡೆಂಗ್ಯೂ ಟೆಸ್ಟಿಂಗ್‌ಗೆ ದರ ನಿಗದಿಪಡಿಸಿದೆ.

ಎರಡು ರೀತಿಯ ಟೆಸ್ಟಿಂಗ್ ಗಳಿಗೆ ತಲಾ 300 ರೂ.ನಂತೆ ಒಟ್ಟು 600 ರೂ. ದರ ನಿಗದಿ ಮಾಡಿ ಆದೇಶಿಸಿದೆ. NS1 ಹಾಗೂ Igm ಎರಡು ಟೆಸ್ಟಿಂಗ್ ಗಳಿಗೆ ತಲಾ 300 ರೂ ಗಳನ್ನು ನಿಗದಿಪಡಿಸಲಾಗಿದೆ. ಖಾಸಗಿ ಆಸ್ಪತ್ರೆಗಳು ಹಾಗೂ ಲ್ಯಾಬ್ ರೋಟರಿಗಳು ಡೆಂಗ್ಯೂ ಟೆಸ್ಟಿಂಗ್ ಮಾಡಲು ಒಟ್ಟು 600 ರೂಪಾಯಿಗಿಂತ ಹೆಚ್ಚು ವಿಧಿಸುವಂತಿಲ್ಲ.

ಡೆಂಗ್ಯೂ ನಿಯಂತ್ರಣ ಮುಂಜಾಗೃತಾ ಕ್ರಮಗಳ ಕುರಿತು ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚನೆ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗುರುವಾರ ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳ ವಿಡಿಯೋ ಕಾನ್ಫರೆನ್ಸ್ ಸಭೆ ಕರೆದಿದ್ದಾರೆ.

ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒ, ನಗರ ಸ್ಥಳೀಯ ಸಂಸ್ಥೆಗಳು, ಡೆಂಗ್ಯೂಕಾರಕ ಈಡಿಸ್ ಈಜಿಪ್ಟಿ ಸೊಳ್ಳೆಯ ಲಾರ್ವಾ ನಾಶಪಡಿಸುವ ಕ್ರಮಗಳತ್ತ ಹೆಚ್ಚಿನ ಗಮನ ಹರಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಮಹತ್ವದ ಸಭೆ ಕರೆದಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಡೆಂಗ್ಯೂ ನಿಯಂತ್ರಣ ಕುರಿತು ಅಧಿಕಾರಿಗಳೊಂದಿಗೆ ಕೈಗೊಂಡಿರುವ ಮುಂಜಾಗೃತಾ ಕ್ರಮಗಳ ಕುರಿತು ಪರಾಮರ್ಶೆ ನಡೆಸಲಿದ್ದಾರೆ.

Tags:    

Similar News