ಚಂದ್ರನ ಮೇಲೆ ಗುಹೆ ಪತ್ತೆ

ಚಂದ್ರನ ಮೇಲೆ ಅಪೊಲೊ 11 ಇಳಿದ ಸ್ಥಳಕ್ಕೆ ಹತ್ತಿರವಿರುವ ಗುಹೆಯು ಗಗನಯಾತ್ರಿಗಳಿಗೆ ನೈಸರ್ಗಿಕ ಆಶ್ರಯದಂತೆ ಕಾರ್ಯನಿರ್ವಹಿಸುತ್ತದೆ. ಅವರನ್ನು ಕಾಸ್ಮಿಕ್ ಕಿರಣಗಳು, ಸೌರ ವಿಕಿರಣ ಮತ್ತು ಸೂಕ್ಷ್ಮ ಆಕಾಶಕಾಯಗಳ ಆಘಾತದಿಂದ ರಕ್ಷಿಸುತ್ತದೆ.

Update: 2024-07-16 08:15 GMT

ಭೂಮಿಯ ಉಪಗ್ರಹವಾದ ಚಂದ್ರನ ಮೇಲ್ಮೈಯಲ್ಲಿ ಗುಹೆಯ ಉಪಸ್ಥಿತಿಯನ್ನು ವಿಜ್ಞಾನಿಗಳು ದೃಢಪಡಿಸಿದ್ದಾರೆ. ಅಪೊಲೊ 11 ಇಳಿದ ಸ್ಥಳದ ಸಮೀಪದಲ್ಲಿರುವ ಗುಹೆಯು ಭವಿಷ್ಯದಲ್ಲಿ ಸಂಶೋಧಕರಿಗೆ ಆಶ್ರಯತಾಣವಾಗುವ ಸಾಧ್ಯತೆಯಿದೆ. 

ಗುಹೆಯು 55 ವರ್ಷಗಳ ಹಿಂದೆ ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಬಜ್ ಆಲ್ಡ್ರಿನ್ ಇಳಿದ ಸ್ಥಳಕ್ಕೆ ಅತ್ಯಂತ ಸಮೀಪದಲ್ಲಿದೆ ಎಂದು ಇಟಲಿಯ ವಿಜ್ಞಾನಿ ನೇತೃತ್ವದ ತಂಡ ಸೋಮವಾರ (ಜುಲೈ 15) ಹೇಳಿದೆ. ಇಂಥ ನೂರಾರು ಗುಹೆಗಳು ಇರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. 

ಗುಹೆಗೆ ಪ್ರವೇಶ: ಚಂದ್ರನ ಮೇಲಿನ ಆಳವಾದ ಕುಹರದಿಂದ ಈ ಗುಹೆಯನ್ನು ಪ್ರವೇಶಿಸಬಹುದು ಎಂಬುದಕ್ಕೆ ಪುರಾವೆಗಳಿವೆ ಎಂದು ತಂಡ ಹೇಳಿದೆ. ಅಪೊಲೊ 11 ಚಂದ್ರನ ಮೇಲ್ಮೈ ಮೇಲೆ ಇಳಿದ ಸ್ಥಳದಿಂದ ಕೇವಲ 250 ಮೈಲಿ ದೂರದಲ್ಲಿದೆ. ಅಲ್ಲಿ 200 ಕ್ಕೂ ಹೆಚ್ಚು ಕುಹರಗಳಿದ್ದು, ಅವು ಲಾವಾದ ಕುಸಿತದಿಂದ ರಚನೆಯಾಗಿವೆ. 

ಸಂಶೋಧಕರು ನಾಸಾದ ಲೂನಾರ್‌ ಆರ್ಬಿಟರ್‌ನ ರೇಡಾರ್ ಕಳಿಸಿದ ಅಂಕಿಅಂಶಗಳನ್ನು ವಿಶ್ಲೇಷಿಸಿದ್ದು, ಫಲಿತಾಂಶವನ್ನು ಭೂಮಿ ಮೇಲಿನ ಲಾವಾ ಕೊಳವೆಗಳೊಂದಿಗೆ ಹೋಲಿಸಿ ನೋಡಿದ್ದಾರೆ. ಈ ಅನ್ವೇಷಣೆ ವಿವರಗಳು ನೇಚರ್ ಆಸ್ಟ್ರಾನಮಿ ಜರ್ನಲ್‌ನಲ್ಲಿ ಪ್ರಕಟವಾಗಿವೆ. 

ಗುಹೆಗಳ ರಹಸ್ಯ: ವಿಜ್ಞಾನಿಗಳ ಪ್ರಕಾರ, ರೇಡಾರ್ ದತ್ತಾಂಶಗಳು ಭೂಗತ ಕುಹರದ ಆರಂಭ ಭಾಗವನ್ನು ಮಾತ್ರ ತೋರಿಸುತ್ತವೆ. ಕನಿಷ್ಠ 40 ಮೀಟರ್ ಅಗಲ ಮತ್ತು ಹತ್ತಾರು ಮೀಟರ್ ಉದ್ದವಿದೆ ಎಂದು ಅಂದಾಜಿಸಿದ್ದಾರೆ. 

ʻಚಂದ್ರನ ಗುಹೆಗಳು 50 ವರ್ಷಗಳಿಂದಲೂ ರಹಸ್ಯವಾಗಿಯೇ ಉಳಿದಿವೆ. ಗುಹೆಯೊಂದರ ಅಸ್ತಿತ್ವವನ್ನು ಸಾಬೀತುಪಡಿಸಲು ಸಾಧ್ಯವಾಗು ವುದು ರೋಮಾಂಚಕ ಅನುಭವ,ʼ ಎಂದು ಟ್ರೆಂಟೊ ವಿಶ್ವವಿದ್ಯಾನಿಲಯದ ಲಿಯೊನಾರ್ಡೊ ಕ್ಯಾರರ್ ಮತ್ತು ಲೊರೆಂಜೊ ಬ್ರೂಜೋನ್ ಹೇಳಿದ್ದಾರೆ. 

ವಿಜ್ಞಾನಿಗಳ ಪ್ರಕಾರ, ಹೆಚ್ಚಿನ ಕುಹರಗಳು ಚಂದ್ರನ ಪ್ರಾಚೀನ ಲಾವಾ ಬಯಲು ಪ್ರದೇಶದಲ್ಲಿವೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಕೂಡ ಕೆಲವು ಇರಬಹುದು.

ಹೆಪ್ಪುಗಟ್ಟಿದ ನೀರು, ಇಂಧನ ಶೇಖರಣೆ: ಈ ಕುಹರಗಳು ಕುಡಿಯುವ ನೀರು ಮತ್ತು ರಾಕೆಟ್ ಇಂಧನವನ್ನು ಒದಗಿಸಬಲ್ಲವು ಎಂದು ನಂಬಲಾಗಿದೆ. ಜುಲೈ 20, 1969 ರಂದು ಆರ್ಮ್‌ಸ್ಟ್ರಾಂಗ್ ಮತ್ತು ಆಲ್ಡ್ರಿನ್ ಚಂದ್ರನ ಮೇಲೆ ಇಳಿದ ಬಳಿಕ, ನಾಸಾದ ಅಪೊಲೋ ಕಾರ್ಯಕ್ರಮದಲ್ಲಿ 12 ಗಗನಯಾತ್ರಿಗಳು ಚಂದ್ರನ ಮೇಲೆ ಇಳಿದರು. 

ಚಂದ್ರನ ಮೇಲೆ ನೂರಾರು ಕುಹರಗಳು ಮತ್ತು ಸಾವಿರಾರು ಲಾವಾ ಕೊಳವೆಗಳು ಇರಬಹುದೆಂದು ನಂಬಲಾಗಿದೆ. ಅಂತಹ ಸ್ಥಳಗಳು ಗಗನಯಾತ್ರಿಗಳನ್ನು ಕಾಸ್ಮಿಕ್ ಕಿರಣಗಳು, ಸೌರ ವಿಕಿರಣ ಮತ್ತು ಸೂಕ್ಷ್ಮ ಆಕಾಶಕಾಯಗಳ ಆಘಾತದಿಂದ ರಕ್ಷಿಸುವ ನೈಸರ್ಗಿಕ ಆಶ್ರಯತಾಣವಾಗಿ ಕಾರ್ಯನಿರ್ವಹಿಸುತ್ತವೆ. ಚಂದ್ರನ ಮೇಲೆ ಆಶ್ರಯತಾಣಗಳ ನಿರ್ಮಾಣಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಅದು ಸವಾಲಿನ ಕೆಲಸ ಎಂದು ತಂಡ ಹೇಳಿದೆ.

ಈ ಗುಹೆಗಳೊಳಗಿನ ಬಂಡೆಗಳು ಮತ್ತು ಇತರ ವಸ್ತುಗಳು ಚಂದ್ರ ಹೇಗೆ ವಿಕಾಸಗೊಂಡಿತು ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಬಹುದು.

Tags:    

Similar News