ಪಾಕಿಸ್ತಾನ: ಪಿಟಿಐ ಬೆಂಬಲಿತ ಸ್ವತಂತ್ರರು ಸುನ್ನಿ ಇತ್ತೆಹಾದ್ ಕೌನ್ಸಿಲ್‌ಗೆ ಸೇರ್ಪಡೆ

Update: 2024-02-20 05:18 GMT

ಇಸ್ಲಾಮಾಬಾದ್, ಫೆ 19- ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷ ಬೆಂಬಲಿತ 92 ಸ್ವತಂತ್ರ ಅಭ್ಯರ್ಥಿಗಳು ಬಲಪಂಥೀಯ ಸುನ್ನಿ ಇತ್ತೆಹಾದ್‌ ಕೌನ್ಸಿಲ್‌ ಸೇರಲಿದ್ದಾರೆ. 

ರಾಷ್ಟ್ರೀಯ ಅಸೆಂಬ್ಲಿ ಮತ್ತು ಪಂಜಾಬ್ ಪ್ರಾಂತೀಯ ಅಸೆಂಬ್ಲಿಗೆ ಚುನಾಯಿತರಾದ ಪಿಟಿಐ ಸದಸ್ಯರು ಶಿಯಾ ಪಕ್ಷವಾದ ಮಜ್ಲಿಸ್ ವಹ್ದತ್-ಇ-ಮುಸ್ಲಿಮೀನ್ (ಎಂಡಬ್ಲ್ಯುಎಂ) ಸೇರುತ್ತಾರೆ ಹಾಗೂ ಖೈಬರ್-ಪಖ್ತುಂಖ್ವಾ (ಕೆಪಿ) ಯಲ್ಲಿ ಚುನಾಯಿತರಾದವರು ಜಮಾತಿ-ಎ-ಇಸ್ಲಾಮಿ (ಜೆಐ) ಯ ಭಾಗವಾಗುತ್ತಾರೆ ಎಂದು ಪಕ್ಷ ಹೇಳಿತ್ತು. ಸುನ್ನಿ ಇತ್ತೆಹಾದ್ ಕೌನ್ಸಿಲ್ (ಎಸ್‌ಐಸಿ) ಇಸ್ಲಾಮಿಕ್ ರಾಜಕೀಯ ಮತ್ತು ಧಾರ್ಮಿಕ ಪಕ್ಷಗಳ ಮೈತ್ರಿಯಾಗಿದ್ದು, ಸುನ್ನಿ ಇಸ್ಲಾಂ ಅನುಯಾಯಿಗಳನ್ನು ಪ್ರತಿನಿಧಿಸುತ್ತದೆ. 

ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಅಧ್ಯಕ್ಷ ಗೋಹರ್ ಖಾನ್, ಎಂಡಬ್ಲ್ಯುಎಂ ಮತ್ತು ಎಸ್‌ಐಸಿ ನಾಯಕರೊಂದಿಗೆ ನಡೆಸಿಕೊಟ್ಟ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಪಕ್ಷದ ಚುನಾವಣೆ ಚಿಹ್ನೆಯಾದ ಕ್ರಿಕೆಟ್ ಬ್ಯಾಟ್ ಅನ್ನು ಹಂಚಿಕೆ ಮಾಡದ ಕಾರಣ ಖಾನ್ ಅವರ ಪಕ್ಷವು ಸಮಾನ ಮನಸ್ಕ ಪಕ್ಷಗಳ ವೇದಿಕೆಯನ್ನು ಬಳಸಿಕೊಂಡು ಸ್ಪರ್ಧಿಸಿದೆ. ಪಿಟಿಐ ಸುನ್ನಿ ಇತ್ತೆಹಾದ್ ಕೌನ್ಸಿಲ್‌ನೊಂದಿಗೆ ʻಔಪಚಾರಿಕ ಒಪ್ಪಂದʼ ಮಾಡಿಕೊಂಡಿದೆ. ನಮ್ಮ ಅಭ್ಯರ್ಥಿಗಳು ಪಕ್ಷಕ್ಕೆ ಸೇರಿದ್ದಾರೆ ಮತ್ತು ನಾವು ಈ ದಾಖಲೆಯನ್ನು ಚುನಾವಣೆ ಆಯೋಗಕ್ಕೆ ಸಲ್ಲಿಸುತ್ತೇವೆ ಎಂದು ಅವರು ಹೇಳಿದರು. ಮೀಸಲು ಸ್ಥಾನಗಳನ್ನು ಪಡೆಯಲು ರಾಜಕೀಯ ಪಕ್ಷ ಸೇರುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಿಟಿಐ ಪ್ರಧಾನಿ ಹುದ್ದೆ ಅಭ್ಯರ್ಥಿ ಓಮರ್ ಅಯೂಬ್ ಖಾನ್ ಹೇಳಿದ್ದಾರೆ.

ಇಮ್ರಾನ್ ಖಾನ್, ಅವರ ಪತ್ನಿ ಬುಶ್ರಾ ಬೀಬಿ, ಶಾ ಮಹಮೂದ್ ಖುರೇಷಿ, ಪರ್ವೇಜ್ ಇಲಾಹಿ ಮುಂತಾದ ಬಂಧಿತ ನಾಯಕರನ್ನು ಬಿಡುಗಡೆ ಮಾಡುವುದು ಪಕ್ಷದ ಆದ್ಯತೆ ಎಂದು ಖಾನ್ ಹೇಳಿದರು. ಎಸ್‌ಐಸಿ ಮುಖ್ಯಸ್ಥ ರಝಾ ಮತ್ತು ಎಂಡಬ್ಲ್ಯುಎಂ ನಾಯಕ ಅಬ್ಬಾಸ್ ಪಿಟಿಐ ಬೆಂಬಲಿಸುವುದಾಗಿ ವಾಗ್ದಾನ ಮಾಡಿದರು.

ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷದ ಬೆಂಬಲಿತರು 93, ಪಿಎಂಎಲ್-ಎನ್ 75, ಪಿಪಿಪಿ 54 ಹಾಗೂ ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್ ಪಾಕಿಸ್ತಾನ್ 17 ಸ್ಥಾನ ಗೆದ್ದಿವೆ. ಸರ್ಕಾರ ರಚಿಸಲು 133 ಸ್ಥಾನ ಅಗತ್ಯವಿದೆ. 

Tags:    

Similar News