ನಕಲಿ ಜಾತಿ ಪ್ರಮಾಣ ಪತ್ರ ಪ್ರಶ್ನಿಸಲು ಕಾಲಮಿತಿ ಬೇಕಿಲ್ಲ: ಕರ್ನಾಟಕ ಹೈಕೋರ್ಟ್‌

ಡಾ. ಗುಡ್ಡದೇವ ಅವರು ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಉದ್ಯೋಗ ಪಡೆದಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್‌ ಈ ಮಹತ್ವದ ಹೇಳಿಕೆಯನ್ನು ದಾಖಲಿಸಿದೆ.;

Update: 2024-04-14 13:40 GMT

ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಪಡೆದ ಅನುಕೂಲಗಳನ್ನು ಪ್ರಶ್ನಿಸಲು ಕಾಲಮಿತಿ ಬೇಕಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ. 

ಮೈಸೂರಿನ ಸರ್ಕಾರಿ ಆಯುರ್ವೇದಿಕ್‌ ಕಾಲೇಜಿನ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಗುಡ್ಡದೇವ ಅವರು ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂಬ ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್‌ ಈ ಮಹತ್ವದ ಹೇಳಿಕೆ ದಾಖಲಿಸಿದೆ. 

ತಮ್ಮ ಜಾತಿ ಪ್ರಮಾಣ ಪತ್ರವನ್ನು ಪರಿಶಿಷ್ಟ ಪಂಗಡಗಳ (ಎಸ್‌ ಟಿ) ಕಲ್ಯಾಣ ಮತ್ತು ಮೇಲ್ಮನವಿ ಪ್ರಾಧಿಕಾರ ರದ್ದುಗೊಳಿಸಿರುವುದರ ವಿರುದ್ಧ ಡಾ. ಗುಡ್ಡದೇವ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. 

ಗುಡ್ಡದೇವ ಅವರ ಅರ್ಜಿಯನ್ನು ಆಲಿಸಿದ ವಿ. ಶ್ರೀಶಾನಂದ ಅವರ ಏಕಸದಸ್ಯ ಪೀಠವು, "ಅರ್ಜಿದಾರರು ನ್ಯಾಯಮಂಡಳಿಯ ಆದೇಶವನ್ನು ಅನೂರ್ಜಿತಗೊಳಿಸಿ, ತಮ್ಮನ್ನು ಮರಳಿ ಕೆಲಸಕ್ಕೆ ಸೇರಿಸಿಕೊಳ್ಳಲು ಮನವಿ ಮಾಡಿದ್ದಾರೆ. ಆದರೆ, ಅವರು ವಿಜಯಪುರ ಕಾಲೇಜಿಗೆ ಸೇರುವಾಗ ಅರ್ಜಿ ನಮೂನೆಯಲ್ಲಿ ಹಿಂದೂ (ಕುರುಬ) ಎಂದು ಉಲ್ಲೇಖಿಸಿದ್ದರು. ಆದರೆ, ಉದ್ಯೋಗಕ್ಕೆ ಸೇರುವಾಗ ಗೊಂಡ ಜಾತಿಯ ಪರಿಶಿಷ್ಠ ವರ್ಗಕ್ಕೆ ಸೇರಿದವನು ಎಂದು ಬದಲಾಯಿಸಿದ್ದಾರೆ. ಹೀಗೆ ಬದಲಾಗಲು ಹೇಗೆ ಸಾಧ್ಯವಾಯಿತು?" ಎಂದು ಪ್ರಶ್ನಿಸಿದೆ. 

ಗುಡ್ಡದೇವ ಅವರು ಎಸ್‌ ಟಿ ಆಗಿದ್ದರೆ ಕಾಲೇಜು ಸೇರುವಾಗ ಕುರುಬ ಎಂದು ನಮೂದಿಸುತ್ತಿರಲಿಲ್ಲ. ಉದ್ಯೋಗಕ್ಕೆ ಸೇರುವಾಗ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ, ಪ್ರಯೋಜನಗಳನ್ನು ಪಡೆದಿದ್ದಾರೆ. ಹಾಗಾಗಿ, ಅರ್ಜಿಯನ್ನು ರದ್ದುಗೊಳಿಸಲಾಗುವುದು ಎಂದು ಹೈಕೋರ್ಟ್‌ ಹೇಳಿದೆ. 

ಪ್ರಕರಣದ ಹಿನ್ನೆಲೆ

ಎಸ್‌ಟಿ ವರ್ಗಕ್ಕೆ ಸೇರಿದ 'ಗೊಂಡ' ಜಾತಿಯ ಪ್ರಮಾಣಪತ್ರ ನೀಡಿ ಡಾ. ಗುಡ್ಡದೇವ ಅವರು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಆಯುಷ್ ವೈದ್ಯಾಧಿಕಾರಿ ಹುದ್ದೆಗೆ 1995ರ ಏಪ್ರಿಲ್ 9ರಂದು ನೇಮಕಗೊಂಡಿದ್ದರು. ಸೇವೆ ಕಾಯಂಗೊಂಡು ರಾಜ್ಯದ ವಿವಿಧೆಡೆ ಆರೋಗ್ಯಾಧಿಕಾರಿಯಾಗಿ ಸೇವೆಯನ್ನೂ ಸಲ್ಲಿಸಿದ್ದರು.

ಆದರೆ, ನಂತರ ಗುಡ್ಡದೇವ ಅವರು ನಕಲಿ ಜಾತಿ ಪ್ರಮಾಣಪತ್ರ ಪಡೆದು ಉದ್ಯೋಗ ಪಡೆದಿದ್ದಾರೆ ಎಂದು ಅರಸೀಕೆರೆ ತಾಲ್ಲೂಕು ಹಾರನಹಳ್ಳಿಯ ಕೃಷ್ಣಮೂರ್ತಿ ನಾಯಕ್‌ ಮತ್ತು ಹಾಸನ ಜಿಲ್ಲೆಯ ಆಯುರ್ವೇದಿಕ್‌ ಮತ್ತು ಹೋಮಿಯೋಪಥಿ ಆಸ್ಪತ್ರೆಯ ಜಿಲ್ಲಾ ಆಯುಷ್‌ ಅಧಿಕಾರಿಯಾಗಿದ್ದ ಸಿ.ವಿ.ನಂಜರಾಜು ದೂರು ನೀಡಿದ್ದರು. ಈ ಆರೋಪವನ್ನು ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ವಿಚಾರಣೆ ನಡೆಸಿದಾಗ ಗುಡ್ಡದೇವ ನಕಲಿ ಜಾತಿ ಪ್ರಮಾಣಪತ್ರ ಪಡೆದಿರುವುದು ಸಾಬೀತಾಗಿದ್ದು, ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಈ ವಜಾ ಆದೇಶವನ್ನು ರದ್ದುಗೊಳಿಸುವಂತೆ ಗುಡ್ಡದೇವ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

Tags:    

Similar News