ಮೋದಿ ಯುವಕರನ್ನು ರೀಲ್ಸ್ ವ್ಯಸನಿಗಳನ್ನಾಗಿ ಮಾಡುತ್ತಿದ್ದಾರೆ : ರಾಹುಲ್ ಗಾಂಧಿ ಆರೋಪ

ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟವು ಈ ಬಾರಿ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂಬುದು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ತಿಳಿದಿದೆ ಎಂದು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ತಿಳಿಸಿದರು.

Update: 2025-11-04 11:27 GMT
ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಮಾತನಾಡಿದರು.
Click the Play button to listen to article

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಯುವಕರನ್ನು ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಲ್ಲಿ ರೀಲ್ಸ್ ಮಾಡುವ ವ್ಯಸನಿಗಳನ್ನಾಗಿ ಮಾಡುತ್ತಿದ್ದಾರೆ. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದಂತಹ ಗಂಭೀರ ವಿಷಯಗಳಿಂದ ಅವರ ಗಮನವನ್ನು ಬೇರೆಡೆಗೆ ಸೆಳೆದು, ತಮ್ಮ ಸರ್ಕಾರದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಪ್ರಧಾನಿ ಈ ತಂತ್ರ ಬಳಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ಮಂಗಳವಾರ ಔರಂಗಾಬಾದ್‌ನಲ್ಲಿ ನಡೆದ ಬೃಹತ್ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, "ಸಾಮಾಜಿಕ ಜಾಲತಾಣಗಳು 21ನೇ ಶತಮಾನದ ಹೊಸ ವ್ಯಸನ ('ನಶಾ'). ಯುವಕರು ಇದರಲ್ಲಿ ಮುಳುಗಿದ್ದರೆ, ಅವರು ತಮ್ಮ ಸಮಸ್ಯೆಗಳ ಬಗ್ಗೆ ಸರ್ಕಾರವನ್ನು ಪ್ರಶ್ನಿಸುವುದಿಲ್ಲ ಎಂಬುದು ಮೋದಿಯವರ ಉದ್ದೇಶ," ಎಂದು ವಾಗ್ದಾಳಿ ನಡೆಸಿದರು.

ಮತ ಕಳ್ಳತನ, ಅದಾನಿಗೆ ಭೂಮಿ

ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟವು ಈ ಬಾರಿ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂಬುದು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ತಿಳಿದಿದೆ. ಹಾಗಾಗಿಯೇ ಅವರು 'ಮತ ಕಳ್ಳತನ'ಕ್ಕೆ (ವೋಟ್ ಚೋರಿ) ಇಳಿದಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಒಂದು ವೇಳೆ 'ಇಂಡಿಯಾ' ಒಕ್ಕೂಟವು ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ, ಅದು ಅತ್ಯಂತ ಹಿಂದುಳಿದ ವರ್ಗಗಳು, ಸಾಮಾಜಿಕವಾಗಿ ತುಳಿತಕ್ಕೊಳಗಾದವರು ಮತ್ತು ದಲಿತರ ಸರ್ಕಾರವಾಗಿರುತ್ತದೆ ಎಂದು ಅವರು ಭರವಸೆ ನೀಡಿದರು.

ನಂತರ ಕುಟುಂಬಾದಲ್ಲಿ ನಡೆದ ಮತ್ತೊಂದು ರ‍್ಯಾಲಿಯಲ್ಲಿ ಮಾತನಾಡಿದ ಅವರು, "ಬಡ ರೈತರಿಂದ ಎಕರೆಗೆ 1 ರೂಪಾಯಿಯಂತೆ ಭೂಮಿ ಕಿತ್ತುಕೊಂಡು, ಅದನ್ನು ಅದಾನಿಯವರಿಗೆ ನೀಡಲಾಗಿದೆ. ಈ ಸತ್ಯವನ್ನು ಪ್ರಧಾನಿ ಮೋದಿಯವರು ಮರೆಮಾಚುತ್ತಿದ್ದಾರೆ. ಬಿಹಾರದಲ್ಲಿ ಕಾರ್ಖಾನೆ ಕಟ್ಟಲು ಜಾಗವಿಲ್ಲ ಎನ್ನುವ ಅಮಿತ್ ಶಾ ಅವರಿಗೆ, ಅದಾನಿಯವರಿಗೆ ನೀಡಲು ಭೂಮಿ ಹೇಗೆ ಲಭ್ಯವಾಯಿತು?" ಎಂದು ಖಾರವಾಗಿ ಪ್ರಶ್ನಿಸಿದರು.

'ಮೇಡ್ ಇನ್ ಚೈನಾ' ಬದಲು 'ಮೇಡ್ ಇನ್ ಬಿಹಾರ'

ರಾಜ್ಯದ ಎನ್‌ಡಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ರಾಹುಲ್, "ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಹಾರದ ಯುವಕರನ್ನು ಕಾರ್ಮಿಕರನ್ನಾಗಿ ಮಾಡಿದ್ದಾರೆ. ಇಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಗಳು ಸಾಮಾನ್ಯವಾಗಿದ್ದು, ಇದರಿಂದ ಶ್ರೀಮಂತ ವಿದ್ಯಾರ್ಥಿಗಳಿಗೆ ಮಾತ್ರ ಅನುಕೂಲವಾಗುತ್ತಿದೆ," ಎಂದು ಆರೋಪಿಸಿದರು. ಇದಕ್ಕೂ ಮುನ್ನ ಬೇಗುಸರಾಯಿಯಲ್ಲಿ ಮಾತನಾಡಿದ್ದ ಅವರು, "ಪ್ರಧಾನಿ ಮೋದಿಯವರು ಅಂಬಾನಿ ಮತ್ತು ಅದಾನಿಯಂತಹ ಕಾರ್ಪೊರೇಟ್‌ಗಳಿಂದ 'ರಿಮೋಟ್ ಕಂಟ್ರೋಲ್' ಆಗಿದ್ದಾರೆ. 'ಮೇಡ್ ಇನ್ ಚೈನಾ' ಬದಲಿಗೆ 'ಮೇಡ್ ಇನ್ ಬಿಹಾರ' ಎಂಬುದು ನಮ್ಮ ಕನಸಾಗಿದ್ದು, ನಾವು ಅಧಿಕಾರಕ್ಕೆ ಬಂದರೆ ಸ್ಥಳೀಯ ಕೈಗಾರಿಕೆಗಳನ್ನು ಸಬಲೀಕರಣಗೊಳಿಸುತ್ತೇವೆ," ಎಂದು ಹೇಳಿದರು.

Tags:    

Similar News