
Vote Chori | ರಾಹುಲ್ ಗಾಂಧಿ ಸ್ಫೋಟಿಸಿದ್ದ ʼಆಳಂದ ಮತಗಳ್ಳತನʼ ರಹಸ್ಯ ಬಯಲು ಮಾಡಿತೇ ಎಸ್‌ಐಟಿ?
ನಕಲಿ ಮತದಾರರ ಹೆಸರು ಅಳಿಸುವಂತೆ ಕೋರಿ ಚುನಾವಣಾ ಆಯೋಗದ (ಇಸಿ) ಪೋರ್ಟಲ್‌ಗೆ ಸೈಬರ್ ಸೆಂಟರ್ ನಿರ್ವಾಹಕರು ಅನಧಿಕೃತವಾಗಿ ಪ್ರವೇಶಿಸಿ ಅರ್ಜಿ ಸಲ್ಲಿಸಿದ್ದು ಹೇಗೆ ಎಂಬುದರ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದೆ. ವೋಟರ್ ಹೆಸರು ಅಳಿಸಲು ಪ್ರತಿ ಅರ್ಜಿಗೆ 80 ರೂ.ಪಾವತಿಸಿದ್ದ ವಿಚಾರವೂ ತನಿಖೆಯಿಂದ ಬಯಲಾಗಿದೆ.
ಕಲಬುರಗಿ ಜಿಲ್ಲೆ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ʼವೋಟ್ ಚೋರಿʼ ಪ್ರಕರಣದ ತನಿಖೆ ತೀವ್ರಗೊಳಿಸಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಹಲವು ಅಕ್ರಮಗಳನ್ನು ಬಯಲಿಗೆಳೆದಿದೆ.
ಮತದಾರರ ಪಟ್ಟಿಯಿಂದ ಹೆಸರು ಅಳಿಸಲು ಕೋರಿ ಸಲ್ಲಿಸಿದ್ದ ಪ್ರತಿ ಅರ್ಜಿಗೆ 80 ರೂ. ಪಾವತಿಸಲಾಗಿತ್ತು. 2022 ಡಿಸೆಂಬರ್ ತಿಂಗಳಿಂದ 2023 ಫೆಬ್ರವರಿವರೆಗೆ ಒಟ್ಟು 6,000ಕ್ಕೂ ಹೆಚ್ಚು ಮತದಾರರ ಹೆಸರನ್ನು ಡಿಲೀಟ್ ಮಾಡುವಂತೆ ಕೋರಿ ಸೈಬರ್ ಸೆಂಟರ್‌ವೊಂದರಿಂದ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ದಂಧೆಯಲ್ಲಿ ಭಾಗಿಯಾಗಿದ್ದ ಆರೋಪಿಗಳು ಈ ರೀತಿ ಸಲ್ಲಿಸಿದ್ದ ಪ್ರತಿ ಅರ್ಜಿಗೆ 80 ರೂ.ಗಳಂತೆ ಒಟ್ಟು 4.8 ಲಕ್ಷ ರೂ. ಪಾವತಿಸಿದ್ದರು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಚುನಾವಣಾ ಆಯೋಗದ (EC) ಪೋರ್ಟಲ್‌ಗೆ ಅನಧಿಕೃತವಾಗಿ ಪ್ರವೇಶಿಸಿದ ಸೈಬರ್ ಸೆಂಟರ್ ನಿರ್ವಾಹಕರು ನಕಲಿ ಮತದಾರರ ಪಟ್ಟಿ ಅಳಿಸಲು ಕೋರಿ ಅರ್ಜಿ ಸಲ್ಲಿಸಿದ್ದು ಹೇಗೆ ಎಂಬ ಬಗ್ಗೆಯೂ ಎಸ್‌ಐಟಿ ಪರಿಶೀಲನೆ ನಡೆಸುತ್ತಿದೆ. ಅಲ್ಲದೇ, ವೋಟ್ ಚೋರಿಗೆ ಬಳಸಿರುವ ಹಣದ ಮೂಲದ ಬಗ್ಗೆಯೂ ತನಿಖೆ ತೀವ್ರಗೊಳಿಸಿದೆ.
ಅ.17 ರಂದು ಎಸ್‌ಐಟಿ ಅಧಿಕಾರಿಗಳು ಆಳಂದದಲ್ಲಿ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಅವರ ಪುತ್ರರಾದ ಹರ್ಷಾನಂದ, ಸಂತೋಷ್ ಹಾಗೂ ಅವರ ಲೆಕ್ಕಾಧಿಕಾರಿ ಮಲ್ಲಿಕಾರ್ಜುನ್ ಮಹಾಂತಗೋಳ್ ನಿವಾಸಗಳ ಮೇಲೆ ದಾಳಿ ನಡೆಸಿ, ಶೋಧ ನಡೆಸಿದ್ದರು. ಈ ವೇಳೆ ಕೋಳಿ ಸಾಕಣೆ ಕೇಂದ್ರದ ಕೆಲಸಗಾರರು, ಸಂಬಂಧಿಕರ ಮೊಬೈಲ್ ಹಾಗೂ ಏಳು ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಿದ್ದರು. ಅಲ್ಲದೇ ಮತದಾರರ ಹೆಸರು ಡಿಲೀಟ್ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಲು ಬಳಸಿದ್ದ 75 ಮೊಬೈಲ್ ಸಂಖ್ಯೆಗಳನ್ನು ಪತ್ತೆ ಮಾಡಿದ್ದರು.
ಪ್ರಮುಖ ಆರೋಪಿ ದುಬೈಗೆ ಪರಾರಿ
ವೋಟ್ ಚೋರಿ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಸ್ಥಳೀಯ ನಿವಾಸಿ ಮೊಹಮ್ಮದ್ ಅಶ್ಫಾಕ್ ದುಬೈಗೆ ಪರಾರಿಯಾಗಿದ್ದು, ಆತನನ್ನು ವಶಕ್ಕೆ ಪಡೆಯಲು ಬ್ಲ್ಯೂ ಕಾರ್ನರ್ ನೋಟಿಸ್ ನೀಡಲು ಎಸ್‌ಐಟಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
2023 ಫೆಬ್ರವರಿ ತಿಂಗಳಲ್ಲಿ ಮತಗಳ್ಳತನ ಪ್ರಕರಣ ಬೆಳಕಿಗೆ ಬಂದಾಗ ಸೈಬರ್ ಸೆಂಟರ್ ಮಾಲೀಕನಾದ ಆರೋಪಿ ಅಶ್ಫಾಕ್ ನನ್ನು ಪೊಲೀಸರು ಹಾಗೂ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ತಾನು ನಿರಪರಾಧಿ, ನನ್ನ ಬಳಿ ಇರುವ ಎಲೆಕ್ಟ್ರಾನಿಕ್ ಸಾಧನಗಳನ್ನು ಒಪ್ಪಿಸುವುದಾಗಿ ಭರವಸೆ ನೀಡಿದ ಬಳಿಕ ಆತನನ್ನು ಬಿಟ್ಟು ಕಳುಹಿಸಲಾಗಿತ್ತು. ಆ ಬಳಿಕ ಅಶ್ಫಾಕ್ ದುಬೈಗೆ ಪರಾರಿಯಾಗಿದ್ದ. ಪ್ರಸ್ತುತ, ಎಸ್‌ಐಟಿ ಅಧಿಕಾರಿಗಳು ಅಶ್ಪಾಕ್‌ನಿಂದ ವಶಪಡಿಸಿಕೊಂಡ ಎಲೆಕ್ಟ್ರಾನಿಕ್ ಸಾಧನೆಗಳನ್ನು ಪರಿಶೀಲಿಸಿದ್ದು, ಇಂಟರ್‌ನೆಟ್ ಪ್ರೋಟೋಕಾಲ್ ವಿವರ, ಇಂಟರ್‌ನೆಟ್ ಕರೆಗಳ ಮೂಲಕ ಎಂ.ಡಿ.ಅಕ್ರಮ್ ಮತ್ತು ಇತರ ಮೂವರೊಂದಿಗೆ ಸಂಪರ್ಕದಲ್ಲಿದ್ದ ಸಂಗತಿ ಬಯಲಾಗಿತ್ತು. ಹಾಗಾಗಿ ಆತನನ್ನು ದುಬೈನಿಂದ ಕರೆತರಲು ಎಸ್‌ಐಟಿ ಅಧಿಕಾರಿಗಳು ಬ್ಲ್ಯೂ ಕಾರ್ನರ್ ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡೇಟಾ ಸೆಂಟರ್ ಅನ್ನು ಎಂ.ಡಿ.ಅಕ್ರಮ್ ಮತ್ತು ಅಶ್ಫಾಕ್ ನಿರ್ವಹಿಸುತ್ತಿದ್ದರು. ಮತದಾರರ ಹೆಸರು ಅಳಿಸಲು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಇನ್ನೂ ಕೆಲ ಡೇಟಾ ಎಂಟ್ರಿ ಆಪರೇಟರ್ ಗಳಿದ್ದರು. ಅವರ ಪತ್ತೆಗೂ ಎಸ್‌ಐಟಿ ಅಧಿಕಾರಿಗಳು ಬಲೆ ಬೀಸಿದ್ದಾರೆ ಎನ್ನಲಾಗಿದೆ.
ಏನಿದು ವೋಟ್ ಚೋರಿ ಪ್ರಕರಣ ?
2023ರ ವಿಧಾನಸಭಾ ಚುನಾವಣೆಗೂ ಮುನ್ನ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಿಂದ ಸುಮಾರು 6,018 ಮತದಾರರ ಹೆಸರನ್ನು ಅಕ್ರಮವಾಗಿ ತೆಗೆದುಹಾಕಲು ಪ್ರಯತ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಚುನಾವಣಾ ಆಯೋಗವು ಒಬ್ಬ ಬೂತ್ ಮಟ್ಟದ ಅಧಿಕಾರಿ ತನ್ನ ಸಂಬಂಧಿಯೊಬ್ಬರ ಹೆಸರು ತೆಗೆದುಹಾಕುವ ಅರ್ಜಿಯನ್ನು ಗಮನಿಸಿದ ನಂತರ ಈ ಅಕ್ರಮವು ಬೆಳಕಿಗೆ ಬಂದಿತ್ತು. ಪರಿಶೀಲನೆ ನಡೆಸಿದಾಗ ಹೆಸರು ಅಳಿಲು ಕೋರಿದ್ದ 6,018 ಅರ್ಜಿಗಳು ಪತ್ತೆಯಾಗಿದ್ದವು. ಇವುಗಳನ್ನು ಪರಿಶೀಲಿಸಿದ ಬಳಿಕ ಕೇವಲ 24 ಮಂದಿಯ ಹೆಸರನ್ನು ಮಾತ್ರ ಪಟ್ಟಿಯಿಂದ ಕೈ ಬಿಡಲಾಗಿತ್ತು. ಉಳಿದ 5,994 ಅರ್ಜಿಗಳು ನಕಲಿ ಎಂಬುದು ದೃಢಪಟ್ಟಿತ್ತು.
ಮತದಾರರ ಅರಿವಿಗೆ ಬಾರದೇ ನಕಲಿ ದಾಖಲೆಗಳನ್ನು ಸಲ್ಲಿಸಿ ಹೆಸರು ಅಳಿಸುವ ಪ್ರಯತ್ನ ನಡೆದಿದೆ ಎಂದು ಸಹಾಯಕ ಚುನಾವಣಾಧಿಕಾರಿ ಮಮತಾ ಕುಮಾರಿ ದೂರು ನೀಡಿದ್ದರು. ಹೆಚ್ಚಿನ ಹೆಸರುಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತ ಸಮುದಾಯದವರ ಹೆಸರನ್ನು ತೆಗೆದುಹಾಕಲು ಉದ್ದೇಶಿಸಲಾಗಿತ್ತು ಎಂಬ ಆರೋಪವೂ ಕೇಳಿ ಬಂದಿತ್ತು. ಮತಗಳ್ಳತನದ ಕುರಿತು ಶಾಸಕ ಬಿ.ಆರ್. ಪಾಟೀಲ್ ಕೂಡ ಗಂಭೀರ ಆರೋಪ ಮಾಡಿದ್ದರು.
ರಾಶಿ ರಾಶಿ ಮತಪತ್ರ ಪತ್ತೆ
ಅ.17 ರಂದು ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಹಾಗೂ ಅವರ ಪುತ್ರರ ಮನೆಗಳ ಮೇಲೆ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ ಮತಪತ್ರ ಹಾಗೂ ವೋಟರ್ ಐಡಿ ಕಾರ್ಡ್‌ಗಳನ್ನು ಸುಟ್ಟು ಹಾಕಿದ್ದ ಸಂಗತಿ ಬಯಲಾಗಿತ್ತು. ಮತಪತ್ರ ಸೇರಿ ಹಲವು ಕಾಗದ ಪತ್ರಗಳಿಗೆ ಬೆಂಕಿ ಬಿದ್ದಿರುವ ವಿಡಿಯೋ ವೈರಲ್ ಕೂಡ ಆಗಿತ್ತು. ಸೊಲ್ಲಾಪುರ ಮಾರ್ಗದ ರಾಜ್ಯ ಹೆದ್ದಾರಿಯ ಶಖಾಪುರ ಸೇತುವೆ ಬಳಿ ಮತಪಟ್ಟಿ ಸುಟ್ಟು ಕರಕಲಾಗಿದ್ದ ಮತಪತ್ರಗಳನ್ನು ವಶಪಡಿಸಿಕೊಂಡು, ಪರಿಶೀಲನೆ ನಡೆಸಿದ್ದರು. ಈ ಎಲ್ಲಾ ದಾಖಲೆಗಳನ್ನು ಮಿನಿ ಗೂಡ್ಸ್ ವಾಹನದಲ್ಲಿ ಹೊರವಲಯಕ್ಕೆ ಸಾಗಿಸಿ ಅವುಗಳನ್ನು ರಾತ್ರಿ ವೇಳೆ ಸುಟ್ಟು ನೀರಿಗೆ ಎಸೆದಿರಬಹುದು ಎಂದು ಶಂಕಿಸಲಾಗಿತ್ತು.
ರಾಷ್ಟ್ರಮಟ್ಟದಲ್ಲಿ ಪ್ರತಿಧ್ವನಿಸಿದ್ದ ಪ್ರಕರಣ
ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ಪ್ರಯತ್ನ ನಡೆದಿತ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ದಾಖಲೆ ಬಿಡುಗಡೆ ಮಾಡಿದ್ದರು. ಇದು ರಾಷ್ಟ್ರಮಟ್ಟದಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು. ಹೈದರಾಬಾದ್‌ನಲ್ಲಿ ಕುಳಿತು ಕೆಲ ದುಷ್ಕರ್ಮಿಗಳು ಕಾಂಗ್ರೆಸ್ ಪಕ್ಷದ ಮತಗಳು ಹೆಚ್ಚಿರುವ ಗ್ರಾಮಗಳನ್ನೇ ಆಯ್ಕೆ ಮಾಡಿಕೊಂಡು ಮತ ಅಳಿಸುವ ಪ್ರಯತ್ನ ಮಾಡಿದ್ದರು. ಪ್ರತಿ ಹಳ್ಳಿಯಲ್ಲಿಯೂ 20 ರಿಂದ 40 ಮತಗಳನ್ನು ಅಳಿಸಿ ಹಾಕಲಾಗಿದೆ. 60ಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ಮತಗಳನ್ನು ಡಿಲೀಟ್ ಮಾಡಲಾಗಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು.
ಡಿಲೀಟ್ ಮಾಡಲು ಬೇರೆ ರಾಜ್ಯಗಳ ಫೋನ್ ಸಂಖ್ಯೆ ಬಳಕೆ ಮಾಡಲಾಗಿದೆ. ಸೂರ್ಯಕಾಂತ್ ಹೆಸರು ಬಳಸಿ 14 ನಿಮಿಷದಲ್ಲಿ 12 ವೋಟ್ ಡಿಲೀಟ್ ಮಾಡಲಾಗಿದೆ. ಕಾಂಗ್ರೆಸ್ ಬಲವಿರುವ ಬೂತ್‌ಗಳನ್ನೇ ಗುರಿ ಮಾಡಿ ಮತಗಳ್ಳತನ ಮಾಡಲಾಗಿದೆ ಎಂದು ದಾಖಲೆ ಬಹಿರಂಗಪಡಿಸಿದ್ದರು.
ಚುನಾವಣಾ ಆಯೋಗ ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದೆ. ಒಂದೇ ಹೆಸರಿನಲ್ಲಿ ಹಲವು ಮತದಾರರ ಹೆಸರನ್ನು ಕೈಬಿಡಲಾಗಿದೆ. ಬೆಂಗಳೂರಿನ ಮಹದೇವಪುರದಲ್ಲಿ ಮತದಾರರ ಪಟ್ಟಿಯಲ್ಲಿ ಹೆಚ್ಚುವರಿ ಹೆಸರು ಸೇರ್ಪಡೆ ಮಾಡಿದರೆ, ಆಳಂದ ಕ್ಷೇತ್ರದಲ್ಲಿ ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ. ಕೇಂದ್ರ ಚುನಾವಣಾ ಆಯೋಗದ ಗಮನಕ್ಕೆ ಬಂದರೂ ಸರಿಯಾದ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದೆ ಎಂದು ಗಂಭೀರ ಆರೋಪ ಮಾಡಿದ್ದರು.
ಆಳಂದ ಮತಗಳ್ಳತನದ ಬಗ್ಗೆ ಕಾಂಗ್ರೆಸ್ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿತ್ತು. ಆದರೆ, ಪ್ರಕರಣದ ಮಹತ್ವದ ಸಾಕ್ಷ್ಯಗಳನ್ನು ಕೇಂದ್ರ ಚುನಾವಣಾ ಆಯೋಗವು ತನಿಖಾ ಸಂಸ್ಥೆ ಜತೆ ಮಾಹಿತಿ ಹಂಚಿಕೊಂಡಿಲ್ಲ ಎಂದು ರಾಹುಲ್ ಗಾಂಧಿ ದೂರಿದ್ದರು.
ಆರೋಪ ನಿರಾಕರಿಸಿದ್ದ ಆಯೋಗ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಚುನಾವಣಾ ಆಯೋಗದ ಅಂದಿನ ಮುಖ್ಯ ಆಯುಕ್ತ ಎನ್.ಗೋಪಾಲಸ್ವಾಮಿ, ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರನ್ನು ಅಳಿಸಿ ಹಾಕಲಾಗಿದೆ ಎಂಬುದು ಸುಳ್ಳು. ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕೈಬಿಡಬೇಕೆಂದು ಒಟ್ಟು 6,015 ಮಂದಿ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಪೈಕಿ ಕೇವಲ 24 ಮಂದಿಯ ಹೆಸರನ್ನು ಮಾತ್ರವೇ ಕೈಬಿಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದರು.
ಚುನಾವಣಾ ಆಯೋಗ ಮತ್ತು ಬಿಜೆಪಿಯ ವಿರುದ್ಧ ವೋಟ್ ಚೋರಿ ಆರೋಪ ಮಾಡಿದ್ದರು. ಆದರೆ, ಬಿಜೆಪಿ ನಾಯಕರು ಈ ಆರೋಪವನ್ನು ತಳ್ಳಿ ಹಾಕಿದ್ದರು. ಸ್ಥಳೀಯ ಬಿಜೆಪಿ ಮುಖಂಡ ಸುಭಾಷ್ ಗುತ್ತೇದಾರ್ ಕೂಡ ಆರೋಪ ನಿರಾಕರಿಸಿ, ರಾಜಕೀಯ ಪ್ರೇರಿತ ಎಂದು ಹೇಳಿದ್ದರು. ಈ ಪ್ರಕರಣದ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿತ್ತು.