
ಆಳಂದದಲ್ಲಿ ಮತದಾರರ ಹೆಸರು ಕೈಬಿಡುವ ಷಡ್ಯಂತ್ರ? ಸಿಐಡಿಯಿಂದ18 ಪತ್ರ, ಪ್ರತಿಕ್ರಿಯಿಸದ ಚುನಾವಣಾ ಆಯೋಗ
ಪ್ರಕರಣದಲ್ಲಿ ಯಾವುದೇ ತಾರ್ಕಿಕ ಅಂತ್ಯ ಕಾಣದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರವು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು. ಮತದಾರರ ಹೆಸರು ಕೈಬಿಟ್ಟಿರುವ ಕುರಿತಂತೆ ಮಾಹಿತಿ ಕೇಳಿದರೂ ಚುನಾವಣಾ ಆಯೋಗ ಮಾಹಿತಿ ಒದಗಿಸಿರಲಿಲ್ಲ ಎಂದು ದೂರಲಾಗಿದೆ.
ಕಲಬುರಗಿ ಜಿಲ್ಲೆ ಆಳಂದ ಕ್ಷೇತ್ರದಲ್ಲಿ ಆರು ಸಾವಿರಕ್ಕೂ ಹೆಚ್ಚು ಮತದಾರರನ್ನು ಪಟ್ಟಿಯಿಂದ ಕೈ ಬಿಡಲು ಪ್ರಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದ್ದ ಅಪರಾಧ ತನಿಖಾ ದಳಕ್ಕೆ (ಸಿಐಡಿ) ಕೇಂದ್ರ ಚುನಾವಣಾ ಆಯೋಗವು ಮಾಹಿತಿ ನೀಡಲು ನಿರಾಕರಿಸಿತ್ತು ಎಂಬ ಆರೋಪ ಕೇಳಿಬಂದಿದೆ.
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮತಕಳವು ಆರೋಪ ಮಾಡಿ, ಆಳಂದ ವಿಧಾನಸಭಾ ಕ್ಷೇತ್ರದಲ್ಲಾದ ಮತದಾರರ ಹೆಸರುಗಳನ್ನು ಕೈಬಿಟ್ಟ ಪ್ರಕರಣವನ್ನು ಬೆಟ್ಟು ಮಾಡಿರುವ ಹಿನ್ನೆಲೆಯಲ್ಲಿ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಆಳಂದ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಮಮತಾ ಕುಮಾರಿ ಅವರು 2023 ಫೆ.21ರಂದು ಆಳಂದ ಪೊಲೀಸ್ ಠಾಣೆಗೆ ದೂರು ನೀಡಿ, ಮತದಾರರ ಹೆಸರನ್ನು ಅನಧಿಕೃತವಾಗಿ ಕೈಬಿಡಲು ನಡೆಸಿದ್ದ ಷಡ್ಯಂತ್ರದ ತನಿಖೆಗೆ ಕೋರಿದ್ದರು. ಫೆ.23 ರಂದು ಈ ಸಂಬಂಧ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಯಾವುದೇ ತಾರ್ಕಿಕ ಅಂತ್ಯ ಕಾಣದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರವು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು. ಮತದಾರರ ಹೆಸರು ಕೈಬಿಟ್ಟಿರುವ ಕುರಿತಂತೆ ಮಾಹಿತಿ ಕೇಳಿದರೂ ಚುನಾವಣಾ ಆಯೋಗ ಮಾಹಿತಿ ಒದಗಿಸಿರಲಿಲ್ಲ ಎಂದು ದೂರಲಾಗಿದೆ.
18 ತಿಂಗಳಲ್ಲಿ 18 ಪತ್ರ ಬರೆದರೂ ಆಯೋಗ ಸ್ಪಂದಿಸಿಲ್ಲ
ಪ್ರಕರಣದ ತನಿಖೆ ಆರಂಭಿಸಿದ ಸಿಐಡಿ ಅಧಿಕಾರಿಗಳು ಮತದಾರರ ಹೆಸರು ಕೈಬಿಡಲು ನಡೆಸಿದ ಪ್ರಯತ್ನ ಕುರಿತಂತೆ ಅಗತ್ಯ ಅಂಕಿ ಅಂಶ ಕೋರಿದರೂ ಕೇಂದ್ರ ಚುನಾವಣಾ ಆಯೋಗ ನೀಡಿರಲಿಲ್ಲ. ಕಳೆದ 18 ತಿಂಗಳಲ್ಲಿ 18 ಬಾರಿ ಪತ್ರ ಬರೆದರೂ ಪ್ರತಿಕ್ರಿಯೆ ನೀಡಿರಲಿಲ್ಲ. ಬಳಿಕ ಪ್ರಕರಣವನ್ನು ಸರ್ಕಾರ ಸೈಬರ್ ಪೊಲೀಸರಿಗೆ ಒಪ್ಪಿಸಿತ್ತು. ಆದರೂ, ಚುನಾವಣಾ ಆಯೋಗ ತಲೆಕೆಡಿಸಿಕೊಂಡಿರಲಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನವದೆಹಲಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಆಳಂದ ಕ್ಷೇತ್ರದ ಮತಗಟ್ಟೆಗಳಲ್ಲಿ 2022 ಡಿ. 9 ರಿಂದ 2023 ಫೆ.20 ರವರೆಗೆ ನಮೂನೆ 07 ರಡಿ ಒಟ್ಟು 6,018 ಮತದಾರರನ್ನು ಪಟ್ಟಿಯಿಂದ ಕೈ ಬಿಡಲು ಕೋರಿದ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಕುರಿತು ತನಿಖೆ ನಡೆಸುವಂತೆ ಸ್ಥಳೀಯ ಶಾಸಕ ಬಿ.ಆರ್. ಪಾಟೀಲ್ ಕೋರಿದ್ದರು.
ಅನಧಿಕೃತವಾಗಿ ಅರ್ಜಿ ಸಲ್ಲಿಸಿದ್ದ ಅಂಶ ಬಹಿರಂಗ
ಶಾಸಕರ ದೂರು ಆಧರಿಸಿ ಜಿಲ್ಲಾಧಿಕಾರಿ ಸೂಚನೆಯ ಮೇರೆಗೆ ಸಹಾಯಕ ಚುನಾವಣಾಧಿಕಾರಿ ಮಮತಾ ಕುಮಾರಿ ಅವರು ಮತದಾರರ ಪಟ್ಟಿಯಿಂದ ಹೆಸರು ಕೈ ಬಿಡುವಂತೆ ಕೋರಿದ್ದ ಅರ್ಜಿಗಳನ್ನು ಪರಿಶೀಲಿಸಿದ್ದರು.
ಮತದಾರರ ಪಟ್ಟಿಯಿಂದ ಹೆಸರು ಕೈ ಬಿಡುವಂತೆ ಕೋರಿ ವಿವಿಧ ಆ್ಯಪ್ ಗಳಾದ NVSP, VHA, GARUDA App ಮೂಲಕ ಒಟ್ಟು 6,018 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿ 24 ಅರ್ಜಿಗಳನ್ನು ಮಾತ್ರ ಪರಿಗಣಿಸಿ ಪಟ್ಟಿಯಿಂದ ಕೈಬಿಡಲಾಗಿತ್ತು. ಉಳಿದ 5,994 ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು.
5994 ಮತದಾರರ ಹೆಸರನ್ನು ಪಟ್ಟಿಯಿಂದ ಕೈ ಬಿಡಲು ಕೋರಿ ಅರ್ಜಿ ಸಲ್ಲಿಸಲು ಕಿಡಗೇಡಿಗಳು ವಿವಿಧ ಮೊಬೈಲ್ ನಂಬರ್ ಬಳಸಿದ್ದರು. ಮೂಲ ಮತದಾರರ ಗಮನಕ್ಕೆ ಬಾರದಂತೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿರುವುದು ದೃಢಪಟ್ಟಿತ್ತು.
ಸತ್ಯಾಸತ್ಯತೆ ಪರಿಶೀಲನೆಗೆ ಬೂತ್ ಮಟ್ಟದ ಅಧಿಕಾರಿಗಳು ಹಾಗೂ ಮೇಲ್ವಿಚಾರಕರನ್ನೂ ಹೆಸರು ಕೈ ಬಿಡಲು ಕೋರಿದ ಮತದಾರರ ಮನೆಗಳಿಗೆ ಕಳುಹಿಸಲಾಗಿತ್ತು. ಈ ವೇಳೆ ಅಧಿಕಾರಿಗಳಿಗೆ ಸ್ಫೋಟಕ ಮಾಹಿತಿ ಸಿಕ್ಕಿತ್ತು. ಹೆಸರು ಕೈ ಬಿಡುವಂತೆ ಕೋರಿ ನಾವು ಅರ್ಜಿಯನ್ನೇ ಸಲ್ಲಿಸಿರಲಿಲ್ಲ ಎಂದು ತಿಳಿಸಿದ್ದರಿಂದ ಷಡ್ಯಂತ್ರ ಬಹಿರಂಗವಾಗಿತ್ತು. ಹಾಗಾಗಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸ್ ಠಾಣೆಗೆ ಮಮತಾ ಕುಮಾರು ಅವರು ದೂರು ನೀಡಿದ್ದರು.
ಷಡ್ಯಂತ್ರದ ಆರೋಪ ಮಾಡಿದ್ದ ಶಾಸಕ
ಸೆ.9 ರಂದು ಆಳಂದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಆಳಂದ ಬಿ.ಆರ್. ಪಾಟೀಲ್ ಅವರು ತಮ್ಮ ಕ್ಷೇತ್ರದಲ್ಲಿ 6,018 ಬೆಂಬಲಿಗರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಲು ನಕಲಿ ಫಾರಂ-7 ಬಳಸಿದ್ದರು. ರಾಹುಲ್ ಗಾಂಧಿ ಅವರು ನಡೆಸುತ್ತಿರುವ 'ವೋಟ್ ಚೋರಿ' ಅಭಿಯಾನಕ್ಕೆ ಆಳಂದ ಕ್ಷೇತ್ರದ ಪ್ರಕರಣವೇ ದೊಡ್ಡ ಜೀವಂತ ಸಾಕ್ಷಿ ಎಂದು ಆರೋಪಿಸಿದ್ದರು.
ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತು. ಆದರೆ, ಚುನಾವಣಾ ಆಯೋಗವು ನಕಲಿ ಅರ್ಜಿಗಳನ್ನು ಸಲ್ಲಿಸಿದ ಸಾಧನಗಳನ್ನು ಗುರುತಿಸಲು ಅಗತ್ಯವಾದ ಡೆಸ್ಟಿನೇಷನ್ ಐಪಿಗಳು ಹಾಗೂ ಪೋರ್ಟ್ ವಿವರ ನೀಡಲು ಹಿಂದೇಟು ಹಾಕಿದೆ ಎಂದು ದೂರಿದ್ದರು.
ಮತದಾರರ ಪಟ್ಟಿಯಿಂದ ತಮ್ಮ ಆರು ಸಾವಿರ ಬೆಂಬಲಿಗರನ್ನು ತೆಗೆದುಹಾಕುವ ಷಡ್ಯಂತ್ರ, ಇದರ ಹಿಂದಿರುವವರ ಪತ್ತೆಗೆ ಚುನಾವಣಾ ಆಯೋಗ ಸುತಾರಾಂ ಸಹಕರಿಸುತ್ತಿಲ್ಲ, ಬಿಜೆಪಿಯನ್ನು ಅಧಿಕಾರದಲ್ಲಿ ಕೂರಿಸಲು ಪ್ರಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು.