
ಎಲ್ಲಿ ಹೋದರು ವೋಟ್ ಚೋರಿಗೆ ಕಡಿವಾಣ ಹಾಕುತ್ತಿದ್ದ ತಳಮಟ್ಟದ ಚುನಾವಣಾ ಪ್ರಚಾರಕರ್ತರು?
ಮತದಾರರ ಪಟ್ಟಿ ಪರಿಷ್ಕರಣೆ ಚರ್ಚೆಗಳು ಚುನಾವಣಾ ಆಡಳಿತದ ದುರ್ಬಲತೆಗೆ ಕನ್ನಡಿ ಹಿಡಿದಿದೆ. ವಾಸ್ತವದಲ್ಲಿ ರಾಜಕೀಯ ಪಕ್ಷಗಳು ನಾಗರಿಕರೊಂದಿಗೆ ನಿರಂತರ ಸಂಬಂಧ ಕಾಯ್ದುಕೊಳ್ಳಬೇಕಾಗಿದೆ.
ಬಿಹಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಇತ್ತೀಚಿನ ವರ್ಷಗಳಲ್ಲಿ ಭಾರೀ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.
ವಿರೋಧ ಪಕ್ಷದ ನಾಯಕರು, ಅದರಲ್ಲೂ ಪ್ರಮುಖವಾಗಿ ರಾಹುಲ್ ಗಾಂಧಿ ಅವರು, ಈ ಪ್ರಕ್ರಿಯೆಯನ್ನು "ಮತ ಚೋರಿ" (ಮತಗಳವು) ಮತ್ತು ದುರ್ಬಲ ಸಮುದಾಯಗಳನ್ನು ವ್ಯವಸ್ಥಿತವಾಗಿ ಮತದಾನದ ಹಕ್ಕಿನಿಂದ ಹೊರಗಿಡುವ ಪ್ರಯತ್ನ ಎಂದು ಕರೆದಿದ್ದಾರೆ.
ಚುನಾವಣಾ ಆಯೋಗ ಈ ಪರಿಷ್ಕರಣೆಯನ್ನು ಕಾನೂನುಬದ್ಧ ಮತ್ತು ಮತದಾರ ಸ್ನೇಹಿ ಎಂದು ಸಮರ್ಥಿಸಿಕೊಂಡಿದೆ. ಆದರೆ, ಈ ಪ್ರಕ್ರಿಯೆಯನ್ನು ತಡೆಯಲು ನಿರಾಕರಿಸಿದ ಸುಪ್ರೀಂ ಕೋರ್ಟ್, ಈ ಪ್ರಕ್ರಿಯೆಯು ಕರಡು ಪಟ್ಟಿ ಹಂತದಲ್ಲಿದ್ದಾಗ ರಾಜಕೀಯ ಪಕ್ಷಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದೆ.
ಆ ಹೇಳಿಕೆಯು ಈ ಬಿಕ್ಕಟ್ಟಿನ ಮೂಲವನ್ನು ಸ್ಪಷ್ಟವಾಗಿ ಹೇಳುತ್ತದೆ; ಇದು ಕೇವಲ ಒಂದು ಪ್ರತ್ಯೇಕ ಅಧಿಕಾರಶಾಹಿ ಘಟನೆಯಲ್ಲ, ಬದಲಾಗಿ ಭಾರತೀಯ ರಾಜಕಾರಣದಲ್ಲಿ ನಡೆಯುತ್ತಿರುವ ರಚನಾತ್ಮಕ ಬದಲಾವಣೆಗಳ ಸಂಕೇತ ಎನ್ನುವುದು ನಿಶ್ಚಿತ.
ಪಕ್ಷದ ನಿಷ್ಠೆ ಕಡಿಮೆಯಾಗುತ್ತಿರುವುದು, ಯಾವುದೇ ವಿಷಯವನ್ನು ರಾಜಕೀಯವಾಗಿ ಪರಿವರ್ತಿಸುವ ವಿಧಾನಗಳಲ್ಲಿ ಬದಲಾವಣೆ ಕಾಣುತ್ತಿರುವುದು ಮತ್ತು ಮತದಾರರ ಜೊತೆ ನೇರ ಸಂಪರ್ಕ ಹೊಂದುವವರ ನಡವಳಿಕೆಗಳಲ್ಲಿ ಪರಿವರ್ತನೆ ಉಂಟಾಗುತ್ತಿರುವುದು, ಹಿಂದೆ ಮತದಾರರ ಪಟ್ಟಿಯನ್ನು ರಕ್ಷಿಸುತ್ತಿದ್ದ ಜಾಲಗಳನ್ನು ದುರ್ಬಲಗೊಳಿಸಿದೆ. ಇದರ ಪರಿಣಾಮವಾಗಿ, ಪಕ್ಷಗಳು ವೃತ್ತಿಪರ ಸಲಹೆಗಾರರು ಮತ್ತು ಡಿಜಿಟಲ್ ತಂತ್ರಗಳ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಇವರು ಕಥೆಗಳನ್ನು ರೂಪಿಸುವುದರಲ್ಲಿ ನಿಪುಣರಾಗಿದ್ದರೂ, ಮತದಾರರ ಪಟ್ಟಿಯ ಸೂಕ್ಷ್ಮ ಪರಿಶೀಲನೆಗೆ ಸಮರ್ಥರಾಗಿಲ್ಲ.
ಸಮಸ್ಯೆಯ ಮೂಲ: ಮತಗಟ್ಟೆ ಮಟ್ಟದ ನಿಗಾ Vs ಡಿಜಿಟಲ್ ರಾಜಕಾರಣ
• ಪಕ್ಷದ ನಿಷ್ಠೆ ಮತ್ತು ಕಾರ್ಯಕರ್ತರ ಜಾಲಗಳು ವೇಗವಾಗಿ ದುರ್ಬಲಗೊಳ್ಳುತ್ತಿವೆ.
• ಸ್ಥಳೀಯ ಕಾರ್ಯಕರ್ತರು ಈ ಹಿಂದೆ ನಿಖರ ಮತ್ತು ಎಲ್ಲರನ್ನೂ ಒಳಗೊಂಡ ಮತದಾರರ ಪಟ್ಟಿಯನ್ನು ಖಾತರಿಪಡಿಸುತ್ತಿದ್ದರು.
• ಈಗ ಪಕ್ಷಗಳು ವೃತ್ತಿಪರ ಸಲಹೆಗಾರರು ಮತ್ತು ಡಿಜಿಟಲ್ ಕಾರ್ಯತಂತ್ರಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಬಂದಿದೆ.
• ಈ ಹೊಸ ತಂತ್ರಜ್ಞಾನಗಳಿಗೆ ಮತದಾರರ ಪಟ್ಟಿಯನ್ನು ಪರಿಶೀಲಿಸುವ ಸಾಮರ್ಥ್ಯವಿಲ್ಲ.
• ಈ ಬದಲಾವಣೆಯು ಮತದಾರರ ಪಟ್ಟಿಯಲ್ಲಿನ ದೋಷಗಳಿಗೆ ಮತ್ತು ವ್ಯವಸ್ಥೆಯ ಮೇಲಿನ ಅಪನಂಬಿಕೆಗೆ ಕಾರಣವಾಗುತ್ತಿದೆ.
ಇವೆಲ್ಲದರ ಪರಿಣಾಮವಾಗಿ, ಮತದಾರರ ಪಟ್ಟಿಗೆ ಸೇರಿಸುವ ಹಂತದಲ್ಲಿಯೇ ದೋಷಗಳನ್ನು ಪತ್ತೆಹಚ್ಚಿ ಸರಿಪಡಿಸುವ ಸಾಂಸ್ಥಿಕ ಸಾಮರ್ಥ್ಯವು ದುರ್ಬಲಗೊಂಡಿದ್ದರೂ, ಪ್ರಜಾಪ್ರಭುತ್ವದಲ್ಲಿ ಕುಶಲ ನಿರ್ವಹಣೆಯ ಆರೋಪದ ಕೂಗಿಗೇ ಹೆಚ್ಚು ಮಹತ್ವ ದೊರೆಯುತ್ತಿದೆ.
ಮತದಾರರ ಪಟ್ಟಿಯ ಅನೌಪಚಾರಿಕ ಲೆಕ್ಕ ಪರಿಶೋಧಕರು
ಭಾರತದ ಸ್ವಾತಂತ್ರ್ಯಾನಂತರದ ಬಹುಪಾಲು ಅವಧಿಯಲ್ಲಿ, ಸ್ಥಳೀಯ ಕಾರ್ಯಕರ್ತರ ದೊಡ್ಡ ಜಾಲವೇ ರಾಜಕೀಯ ಪಕ್ಷಗಳ ಪಾಲಿಗೆ ಜೀವಾಳವಾಗಿತ್ತು. ಇಂತಹ ಕಾರ್ಯಕರ್ತರಲ್ಲಿದ್ದ ನಿಷ್ಠೆಯ ಫಲವಾಗಿ ಉತ್ತಮ ನೆರೆಹೊರೆಯ ಸಂಬಂಧಗಳನ್ನು ಹೊಂದಿದ್ದರು, ಮಾಹಿತಿಗಳು ವಿನಿಮಯವಾಗುತ್ತಿದ್ದವು. ಈ ಕಾರ್ಯಕರ್ತರು ಕೇವಲ ಪ್ರಚಾರಕರಾಗಿರಲಿಲ್ಲ, ಬದಲಿಗೆ ಮತದಾರರ ಪಟ್ಟಿಯ ಅನೌಪಚಾರಿಕ ಲೆಕ್ಕ ಪರಿಶೋಧಕರೂ ಆಗಿದ್ದರು. ಅವರು ಪ್ರತಿಯೊಂದು ಮನೆಯ ಆಗುಹೋಗುಗಳನ್ನು ತಿಳಿದಿದ್ದರು. ಯಾವುದೇ ರೀತಿಯಲ್ಲಿ ನಕಲು ಉಂಟಾಗುತ್ತಿದ್ದರೆ ಪತ್ತೆಹಚ್ಚುತ್ತಿದ್ದರು ಮತ್ತು ತಮ್ಮ ಬೆಂಬಲಿಗರನ್ನು ಅಧಿಕಾರಶಾಹಿ ಪ್ರಕ್ರಿಯೆಗಳ ಮೂಲಕ ಮುನ್ನಡೆಸುತ್ತಿದ್ದರು.
ಇಂದು, ಅಂತಹ ಮೂಲ ಸೌಕರ್ಯ, ಜನಮಟ್ಟದಲ್ಲಿ ಬೇರು ಬಿಟ್ಟಿದ್ದ ಕಾರ್ಯಕರರ್ತರ ಜಾಲ ಎಲ್ಲಿದೆ? ಅವೆಲ್ಲೆವೂ ಗಣನೀಯವಾಗಿ ದುರ್ಬಲಗೊಂಡಿದೆ. ಮತದಾರರಲ್ಲಿ ಪಕ್ಷ ನಿಷ್ಠೆ ಕಡಿಮೆಯಾಗುತ್ತಿದೆ. ಜೊತೆಗೆ ಹೆಚ್ಚುತ್ತಿರುವ ರಾಜಕೀಯ ಚಲನಶೀಲತೆ, ದೀರ್ಘಾವಧಿಯ ಕಾರ್ಯಕರ್ತರ ಜಾಲಗಳನ್ನು ನಿರ್ವಹಿಸುವ ಪ್ರೇರಣೆಗಳನ್ನು ಕಡಿಮೆ ಮಾಡಿವೆ. ಬದಲಾಗಿ, ಪಕ್ಷಗಳು ಚುನಾವಣಾ ನಿರ್ವಹಣೆಯನ್ನು ವೃತ್ತಿಪರ ಸಲಹೆಗಾರರಿಗೆ ಹೊರಗುತ್ತಿಗೆ ನೀಡುತ್ತಿವೆ. ಈ ಸಲಹೆಗಾರರು ದೊಡ್ಡ ಮಟ್ಟದ ಸಂದೇಶ ಪ್ರಚಾರ, ಡಿಜಿಟಲ್ ಗುರಿ ನಿರ್ಧಾರ ಮತ್ತು ಸಾರ್ವಜನಿಕರ ಅಭಿಪ್ರಾಯ ರೂಪಿಸುವುದರಲ್ಲಿ ಹೆಚ್ಚು ಪರಿಣತರಾಗಿದ್ದಾರೆಯೇ ಹೊರತು, ಮತದಾರರ ಪಟ್ಟಿಯ ಸೂಕ್ಷ್ಮ ಪರಿಶೀಲನೆಯಲ್ಲಿ ಅಲ್ಲ ಎಂಬುದು ಗಮನಾರ್ಹ.
ಇದರಿಂದಾಗುವ ಪರಿಣಾಮಗಳು ಕೇವಲ ಮತದಾರರ ಪಟ್ಟಿಯ ದೋಷಗಳನ್ನು ಮೀರಿವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಸೈದ್ಧಾಂತಿಕ ಗುರುತಿಸುವಿಕೆಯಿಂದ ವಿಷಯಾಧಾರಿತ ಸಜ್ಜುಗೊಳಿಸುವಿಕೆಗೆ ರಾಜಕೀಯದ ವಿಧಾನಗಳು ಬದಲಾದಾಗ ಪಕ್ಷದ ಪ್ರಾಧಾನ್ಯತೆಯನ್ನು ಕಡಿಮೆ ಮಾಡುತ್ತದೆ.
ಮತದಾರರೊಂದಿಗೆ ಕಳಚುತ್ತಿರುವ ನಂಟು
ಮತದಾರರು ಚುನಾವಣೆಯಿಂದ ಚುನಾವಣೆಗೆ ತಮ್ಮ ಆದ್ಯತೆಗಳನ್ನು ಬದಲಾಯಿಸುತ್ತಾರೆ. ಸ್ಥಳೀಯ ಕಾರ್ಯಕರ್ತರು ಕೂಡ ಮೊದಲಿನಂತೆ ಒಂದೇ ಪಕ್ಷದ ಚೌಕಟ್ಟಿನಲ್ಲಿ ಅಷ್ಟಾಗಿ ತೊಡಗಿಸಿಕೊಳ್ಳುವುದಿಲ್ಲ. ಒಂದು ಕಾಲದಲ್ಲಿ ಕುಟುಂಬಗಳಿಗೆ ಮತ್ತು ನೆರೆಹೊರೆಗೆ ನಿರಂತರವಾಗಿ ಸೇವೆ ಸಲ್ಲಿಸುವುದಕ್ಕೆ ಸಂಬಂಧಿಸಿದ್ದ ಗ್ರಾಹಕ ಸಂಗತಿಗಳೂ ಬದಲಾಗಿವೆ. ಈಗ ಅವು ಕಲ್ಯಾಣ ಯೋಜನೆಗಳು, ನಗದು ಪ್ರೋತ್ಸಾಹಗಳು ಅಥವಾ ಕೊನೆಯ ಕ್ಷಣದ ಸಜ್ಜುಗೊಳಿಸುವಿಕೆಗಳಂತಹ ಘಟನಾ-ಆಧಾರಿತ ವರ್ಗಾವಣೆಗಳಾಗಿ ರೂಪಾಂತರಗೊಂಡಿವೆ.
ಈ ಹೊಸ ಮಾದರಿಯು, ಹಿಂದಿನ ಗ್ರಾಹಕತ್ವದ ವ್ಯವಸ್ಥೆಗಳು ಕಾಯ್ದುಕೊಂಡಿದ್ದ ಶ್ರಮದಾಯಕ ಮತ್ತು ನಿರಂತರವಾದ ಸಂಪರ್ಕಗಳಿಗಿಂತ, ಸರ್ಕಾರಿ-ಮಧ್ಯಸ್ಥಿಕೆಯಲ್ಲಿ ನಡೆಯುವ ಪೋಷಕತ್ವ ಮತ್ತು ಸಲಹೆಗಾರರ ಮಧ್ಯಸ್ಥಿಕೆಯ ಪ್ರಚಾರಗಳಿಗೆ ಆದ್ಯತೆ ನೀಡುತ್ತದೆ.
ಈ ಪರಿಣಾಮವು ಬಿಹಾರದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಿದ ಮತ್ತು ತಿರುಚುವ ಆರೋಪಗಳು ಬಂದಾಗ, ರಾಜಕೀಯ ಪಕ್ಷಗಳು ಮತಗಟ್ಟೆ ಮಟ್ಟದಲ್ಲಿ ಮತದಾರರನ್ನು ಹೊರಗಿಡುವುದನ್ನು ತಡೆಯುವ ಬದಲು, ಕೇವಲ ಗಂಟಲು ಹರಿಯುವ ಹಾಗೆ ಪ್ರತಿಭಟನೆಗಳನ್ನು ಆಯೋಜಿಸುತ್ತಾ, "ಮತ ಚೋರಿ"ಯ ಆರೋಪಗಳನ್ನು ಮಾಡುತ್ತಾ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿವೆ.
ವಾರ್-ರೂಮ್‌ಗಳನ್ನು ನಂಬುವ ಪಕ್ಷಗಳು
ಒಂದು ಕಾಲದಲ್ಲಿ ಮತದಾರರ ಪಟ್ಟಿಯ ಮೇಲೆ ಸಾರ್ವಜನಿಕ ನಂಬಿಕೆಯನ್ನು ಮೂಡಿಸಲು ನೆರವಾಗಿದ್ದ ಕಾರ್ಯಕರ್ತರನ್ನು ಆಧಾರಿಸಿದ ಪರಿಶೀಲನೆಯ ಸಾಂಪ್ರದಾಯಿಕ ಶಕ್ತಿಯು ಈಗ ಕಳೆಗುಂದಿದೆ ಎಂಬುದು ನಮಗೆ ನಿಚ್ಚಳವಾಗಿ ಗೋಚರಿಸುತ್ತಿದೆ. ಪ್ರತಿ ಮೊಹಲ್ಲಾದಲ್ಲಿಯೂ ಸ್ವಯಂಸೇವಕರು ಕರಡು ಪಟ್ಟಿಯನ್ನು ಪರಿಶೀಲಿಸುವ ಬದಲು, ರಾಜಕೀಯ ಪಕ್ಷಗಳು ಈಗ ಕೇಂದ್ರೀಕೃತ ಡೇಟಾ ಡ್ಯಾಶ್ಬೋರ್ಡ್ಗಳು ಮತ್ತು ವಾರ್ ರೂಮ್ಗಳನ್ನು ಅವಲಂಬಿಸಿವೆ. ಇವು ತಪ್ಪು ತಪ್ಪೇ ಬರೆದ ಹೆಸರುಗಳು, ವಲಸಿಗರ ಮನೆಗಳು ಅಥವಾ ಅತಿಕ್ರಮಿಸಿದ ವಿಳಾಸಗಳಂತಹ ಸೂಕ್ಷ್ಮ ವ್ಯತ್ಯಾಸಗಳನ್ನು ಪತ್ತೆ ಮಾಡಲು ಹೆಣಗಾಡುತ್ತಿವೆ.
ಇದು ಕೇವಲ ತಾಂತ್ರಿಕ ಕೊರತೆಯಲ್ಲ, ಆದರೆ ಭಾರತೀಯ ಪ್ರಜಾಪ್ರಭುತ್ವ ಕಾರ್ಯನಿರ್ವಹಿಸುವ ವಿಧಾನದಲ್ಲಿಯೂ ರಚನಾತ್ಮಕ ಬದಲಾವಣೆಯಾಗಿದೆ ಎಂಬುದನ್ನು ಗಮನಿಸಬೇಕು. ಮತದಾರರನ್ನು ನೇರವಾಗಿ ಭೇಟಿಯಾಗಿ ಮಾಡಿಕೊಳ್ಳುವ ವೈಯಕ್ತಿಕ ವಿನಿಮಯದ ಅನುಕೂಲಗಳಿಂದ, ಯೋಜನಾಬದ್ಧ ಅಥವಾ ಸಲಹೆಗಾರರ ನೇತೃತ್ವದ ಸ್ವರೂಪಗಳಿಗೆ ಬದಲಾಗುತ್ತಿದ್ದಂತೆ, ಆಗಿರುವ ಅಡ್ಡ ಪರಿಣಾಮ ಏನೆಂದರೆ ಮತದಾರ ಮತ್ತು ಪಕ್ಷದ ಕಾರ್ಯಕರ್ತರ ನಡುವಿನ ಪರಸ್ಪರ ಜವಾಬ್ದಾರಿಗಳು ದುರ್ಬಲಗೊಳ್ಳುತ್ತಿರುವುದು.
ತಮ್ಮ ನೆರೆಹೊರೆಯನ್ನು ಸುಲಭವಾಗಿ ತಲುಪುವ ಜಾಲಗಳ ನಂಟು ಕಳೆದುಕೊಂಡ ರಾಜಕೀಯ ಪಕ್ಷಗಳು, ಎಸ್ಐಆರ್ನಂತಹ ವ್ಯವಸ್ಥಿತ ಪ್ರಕ್ರಿಯೆಗಳು ನೆಲಮಟ್ಟದಲ್ಲಿ ಎಷ್ಟರ ಮಟ್ಟಿಗೆ ಸಾಮರ್ಥ್ಯ ಹೊಂದಿವೆ ಎಂದು ಪರೀಕ್ಷಿಸಲು ಶುರುಹಚ್ಚಿಕೊಂಡಾಗ ದುರ್ಬಲಗೊಳ್ಳುತ್ತವೆ. ಈ ಪ್ರಕ್ರಿಯೆಯು ಮತದಾರ-ಸ್ನೇಹಿಯಾಗಿದ್ದು ಮತ್ತು ಸರಿಪಡಿಸಲು ಯೋಗ್ಯ ಎಂದು ಚುನಾವಣಾ ಅಧಿಕಾರಿಗಳು ಹೇಳಬಹುದು, ಆದರೆ ಸರಿಪಡಿಸುವ ಪ್ರಕ್ರಿಯೆಯು ನಾಗರಿಕರು ಆಕ್ಷೇಪಣೆಗಳನ್ನು ಸಲ್ಲಿಸಲು, ವಿಚಾರಣೆಗಳಲ್ಲಿ ಭಾಗವಹಿಸಲು ಮತ್ತು ಮರುಸ್ಥಾಪನೆ ಖಚಿತಪಡಿಸಿಕೊಳ್ಳಲು ಪ್ರೇರೇಪಿಸುವ ಸಾಮಾಜಿಕ ಮಧ್ಯವರ್ತಿಗಳಿಂದ ಮಾತ್ರ ಪರಿಣಾಮಕಾರಿಯಾಗಿರುತ್ತದೆ.
ನಿರಂತರ ಸಂವಹನದ ಅಗತ್ಯತೆ
ಆದ್ದರಿಂದ, ಬಿಹಾರದ ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತಾದ ಚರ್ಚೆಗಳು ಚುನಾವಣಾ ಆಡಳಿತದ ದುರ್ಬಲತೆಯನ್ನು ಮಾತ್ರವಲ್ಲದೆ, ಭಾರತೀಯ ರಾಜಕೀಯದ ಬದಲಾಗುತ್ತಿರುವ ಸಮಾಜಶಾಸ್ತ್ರವನ್ನು ಸಹ ಬಹಿರಂಗಪಡಿಸುತ್ತಿದೆ. ವಾಸ್ತವದಲ್ಲಿ ರಾಜಕೀಯ ಪಕ್ಷಗಳು ನಾಗರಿಕರೊಂದಿಗೆ ನಿರಂತರ ಸಂವಹನ ನಡೆಸುವ, ಸಂಬಂಧವನ್ನು ಕಾಯ್ದುಕೊಳ್ಳುವ ಅಗತ್ಯ ಹೆಚ್ಚಾಗಿದೆ ಎಂಬುದು ಇದರಿಂದ ವೇದ್ಯವಾಗುತ್ತದೆ. ಹಾಗಿಲ್ಲದೆ ಹೋದಾಗ ಮತದಾರರ ಹೆಸರುಗಳನ್ನು ಅಳಿಸಿಹಾಕುವುದು ತಾಂತ್ರಿಕ ವಿವಾದದಂತೆ ಕಾಣಿಸುತ್ತದೆ.
ಸ್ಥಳೀಯ ಮಧ್ಯವರ್ತಿಗಳ ಪಾತ್ರ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವುದು ಚುನಾವಣಾ ಪ್ರಕ್ರಿಯೆಗಳನ್ನು ಅಧಿಕಾರಶಾಹಿ ಮತ್ತು ರಾಜಕೀಯ ಅಪನಂಬಿಕೆ ಎರಡರ ಕಡೆಗೂ ಬೊಟ್ಟುಮಾಡಿದೆ. ಈ ಹಿನ್ನೆಲೆಯಲ್ಲಿ ಸಾಂಸ್ಥಿಕವಾಗಿ ನಿಗಾ ಇರಿಸದೆ ಹೋದಾಗ 'ವೋಟ್ ಚೋರಿ'ಯಂತಹ ಪ್ರಕರಣಗಳು ಹುಟ್ಟಿಕೊಳ್ಳುತ್ತವೆ. ಈ ದೃಷ್ಟಿಯಿಂದ ಗಮನಿಸಿದಾಗ, ಎಸ್ಐಆರ್ ವಿವಾದವು ಪಕ್ಷಪಾತದ ಮೇಲಾಟಕ್ಕೆ ಬದಲಾಗಿ ಒಮ್ಮೆ ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆಯನ್ನು ಕಾಪಾಡಿದ್ದ ರಚನೆಗಳು ದುರ್ಬಲಗೊಳ್ಳುತ್ತಿವೆ ಎಂಬುದಕ್ಕೆ ಸಾಕ್ಷಿ ಹೇಳುತ್ತವೆ.
ಆ ವಿಶ್ವಾಸಾರ್ಹತೆಯನ್ನು ಮರು ನಿರ್ಮಾಣಮಾಡುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳ ಮೇಲೆ ಹೊಸ ಜವಾಬ್ದಾರಿಯನ್ನು ಹೊರಿಸಲಾಗಿದೆ. ಹಾಗೆಂದ ಮಾತ್ರಕ್ಕೆ ಹಳೆಯ ಪೋಷಕ-ಗ್ರಾಹಕ ಸಂಬಂಧಗಳಿಗೆ ಮರಳುವುದಲ್ಲ, ಬದಲಾಗಿ ಡಿಜಿಟಲ್ ಪ್ರಚಾರ ಮತ್ತು ಕೇಂದ್ರೀಕೃತ ಕಲ್ಯಾಣ ರಾಜಕಾರಣದೊಂದಿಗೆ ಸಹಬಾಳ್ವೆ ನಡೆಸಬಲ್ಲ, ತಳಮಟ್ಟದ ಹೊಣೆಗಾರಿಕೆಯನ್ನು ಹೊಂದಿರುವ ನವ ನವೀನ ವಿಧಾನಗಳನ್ನು ಕಂಡುಕೊಳ್ಳುವುದು.