ಪಕ್ಷ ನೋಡಬೇಡಿ, ಬಿಲ್ಲವ ಅಭ್ಯರ್ಥಿಗೆ ಬೆಂಬಲಿಸಿ: ಬಿಜೆಪಿ ಶಾಸಕ ಕೋಟ್ಯಾನ್ ಬಹಿರಂಗ ಕರೆ

ಬಿಜೆಪಿ ಯಾರಿಗೆ ಟಿಕೆಟ್‌ ನೀಡುತ್ತದೆ ಎಂಬ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ, ಕೋಟ್ಯಾನ್‌ ಅವರು ಸಮುದಾಯದ ಅಭ್ಯರ್ಥಿಗಳು ಯಾವುದೇ ಪಕ್ಷದಿಂದ ನಿಂತರೂ ಅವರಿಗೇ ಬೆಂಬಲ ನೀಡಿ ಎಂದು ಬಿಲ್ಲವರಿಗೆ ಕರೆ ನೀಡಿದ್ದಾರೆ;

Update: 2024-03-11 12:12 GMT
ಉಮಾನಾಥ್‌ ಕೋಟ್ಯಾನ್

ಮಂಗಳೂರು: ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ದಕ್ಷಿಣಕನ್ನಡ ಕ್ಷೇತ್ರದಿಂದ ಬಿಜೆಪಿ ಯಾರಿಗೆ ಟಿಕೆಟ್‌ ನೀಡುತ್ತದೆ ಎಂಬ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ, ಆ ಪಕ್ಷದ ಶಾಸಕ ಉಮಾನಾಥ್ ಕೋಟ್ಯಾನ್‌ ಅವರು ಯಾವುದೇ ಪಕ್ಷ, ಸಂಘಟನೆಯಲ್ಲಿದ್ದರೂ ಸಮುದಾಯದ ಅಭ್ಯರ್ಥಿಗಳಿಗೇ ಬೆಂಬಲ ನೀಡಿ ಎಂದು ಬಿಲ್ಲವರಿಗೆ ಕರೆ ನೀಡಿದ್ದಾರೆ.

ಮಾರ್ಚ್ 10ರಂದು ಮೂಲ್ಕಿಯಲ್ಲಿ ನಡೆದ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಸಮಾವೇಶದಲ್ಲಿ ಮಾತನಾಡಿದ ಉಮಾನಾಥ್ ಕೋಟ್ಯಾನ್, "ದಕ್ಷಿಣಕನ್ನಡದಲ್ಲಿ ಬಿಲ್ಲವರೇ ಅಧಿಕ ಸಂಖ್ಯೆಯಯಲ್ಲಿದ್ದಾರೆ. ಹಾಗಿದ್ದರೂ ಬೆಳ್ತಂಗಡಿಯಲ್ಲಿ ರಕ್ಷಿತ್‌ ಶಿವರಾಂ (ಕಾಂಗ್ರೆಸ್‌ ಅಭ್ಯರ್ಥಿ) ಸೋತರು. ಉಳ್ಳಾಲದಲ್ಲಿ ಸತೀಶ್‌ ಕುಂಪಲ ಸೋತರು. ಯಾಕೆ ಹೀಗಾಯಿತು?" ಎಂದು ಪ್ರಶ್ನಿಸಿದ್ದಾರೆ.

"ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬಹು ಸಂಖ್ಯಾತ ಬಿಲ್ಲವರೇ ಇರುವಾಗ ರಕ್ಷಿತ್ ಯಾಕೆ ಸೋತಿದ್ದಾರೆ? ಬಿಲ್ಲವ ಅಭ್ಯರ್ಥಿಗಳಿಗೆ ಬೆಂಬಲ ಕೊಡೋದಕ್ಕೆ ನಿಮಗೆ ಧೈರ್ಯ ಬರೋದಿಲ್ಲ. ಉಮಾನಾಥ್ ಕೋಟ್ಯಾನ್ ಬಳಿ ಮಾತನಾಡಿದರೆ ನನ್ನ ಪಕ್ಷದವರು ಏನಾದ್ರೂ ಹೇಳ್ತಾರಾ ಎಂಬ ಭಯ. ಕಾಂಗ್ರೆಸ್ಸಿನ ವಿನಯ ಕುಮಾರ್ ಸೊರಕೆ ಬಳಿ ಮಾತನಾಡಿದ್ರೆ ಏನಾದರೂ ತೊಂದರೆಯಾಗುತ್ತೆ ಎಂಬ ಭಯ. ಇಂತಹ ಹಿಂಜರಿಕೆ ಇಟ್ಟುಕೊಂಡರೆ ಬಿಲ್ಲವ ಸಮಾಜ ಕಟ್ಟಲು ಹೇಗೆ ಸಾಧ್ಯ? ಬೇರೆ ಯಾವುದೇ ಸಮುದಾಯಕ್ಕೆ ಇಲ್ಲದ ಭಯ ಬಿಲ್ಲವ ಸಮಾಜದವರಿಗೆ ಯಾಕೆ?" ಎಂದು ಅವರು ಪ್ರಶ್ನಿಸಿದ್ದಾರೆ.

"ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆವರೆಗೆ ಬಿಲ್ಲವ ಅಭ್ಯರ್ಥಿಗಳು ಎಲ್ಲೇ ಸ್ಪರ್ಧಿಸಲಿ. ಅವರಿಗೆ ಆರ್ಥಿಕ, ನೈತಿಕ ಬೆಂಬಲವನ್ನು ಸಮಾಜ ನೀಡಬೇಕು. ನಮ್ಮ ನಾಯಕರು ಹಿಂಜರಿಯಬಾರದು, ಯಾವುದೇ ರಾಜಕೀಯ ಪಕ್ಷವಿರಲಿ, ಬಿಲ್ಲವ ಅಭ್ಯರ್ಥಿಗಳಿಗೆ ಬೆಂಬಲ ನೀಡಿ" ಎಂದು ಶಾಸಕ ಉಮಾನಾಥ್ ಕೋಟ್ಯಾನ್ ಕರೆ ನೀಡಿದ್ದಾರೆ.

ಬಿಜೆಪಿಯ ಶಾಸಕರಾಗಿ ಕೋಟ್ಯಾನ್‌ ಅವರು ಪಕ್ಷ, ಸಂಘಟನೆ ಬಿಟ್ಟು ಸಮುದಾಯದ ವ್ಯಕ್ತಿಗಳಿಗೆ ಬೆಂಬಲಿಸಬೇಕು ಎಂದು ಹೇಳಿರುವುದು ದಕ್ಷಿಣ ಕನ್ನಡ ಬಿಲ್ಲವ ಸಮುದಾಯದ ವಲಯದಲ್ಲಿ ಮಾತ್ರವಲ್ಲದೆ, ಬಿಜೆಪಿ ಮತ್ತು ಸಂಘಪರಿವಾರದ ವಲಯದಲ್ಲಿಯೂ ಭಾರೀ ಚರ್ಚೆಗೆ ಕಾರಣವಾಗಿದೆ.

Tags:    

Similar News