HPPL PROJECT | ಚುನಾವಣಾ ಬಾಂಡ್‌: ಜಿವಿಪಿಆರ್‌ ಸಂಸ್ಥೆಯಿಂದ ಬಿಜೆಪಿ-ಕಾಂಗ್ರೆಸ್‌ಗೂ ದೇಣಿಗೆ

ಸ್ಥಳೀಯ ಪರಿಸರಕ್ಕೆ, ಮೀನುಗಾರರ ಬದುಕಿಗೆ ಕಂಟಕವಾಗಬಹುದು ಎಂದು ಹೇಳಲಾಗಿರುವ ಹೊನ್ನಾವರ ಬಂದರು ಯೋಜನೆಯನ್ನು ಕೈಗೆತ್ತಿಕೊಂಡಿರುವ HPPL ಸಂಸ್ಥೆಯ ಮಾತೃ ಸಂಸ್ಥೆಯಿಂದ ಬಿಜೆಪಿಗೂ, ಕಾಂಗ್ರೆಸ್‌ಗೂ ಚುನಾವಣಾ ಬಾಂಡ್‌ ಮೂಲಕ ದೇಣಿಗೆ ಸಂದಾಯವಾಗಿದೆ.;

Update: 2024-03-23 06:29 GMT

ಹೊನ್ನಾವರದಲ್ಲಿ ಸ್ಥಳೀಯ ಮೀನುಗಾರರ ವಿರೋಧದ ನಡುವೆಯೂ ಬಂದರು ನಿರ್ಮಾಣ ಮಾಡುತ್ತಿರುವ ಹೊನ್ನಾವರ ಖಾಸಗಿ ಬಂದರು ಲಿಮಿಟೆಡ್ (HPPL) ಸಂಸ್ಥೆಯ ಮಾತೃ ಸಂಸ್ಥೆ ಚುನಾವಣಾ ಬಾಂಡ್ ಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿಗೆ ತಲಾ ಐದು ಕೋಟಿ ರೂ.ಗಳನ್ನು ದೇಣಿಗೆ ನೀಡಿದೆ.

ಇದನ್ನೂ ಓದಿ: HPPL Project | ಆಲಿವ್‌ ರಿಡ್ಲೆ ಕಡಲಾಮೆ ಸಂತತಿಗೆ ಮಾರಕವಾದ ಯೋಜನೆ

ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ತಲಾ ಒಂದು ಕೋಟಿಗಳ ಒಟ್ಟು 10 ಬಾಂಡ್ ಗಳನ್ನು ಜಿವಿಪಿಆರ್ ಇಂಜಿನಿಯರ್ಸ್ (GVPR Engineers Limited) ಕಂಪೆನಿಯು ಖರೀದಿಸಿದ್ದು, ಅಕ್ಟೋಬರ್ 2023 ರಲ್ಲಿ ಬಿಜೆಪಿಗೆ ದೇಣಿಗೆ ನೀಡಿದ್ದರೆ, ಜನವರಿ 2024 ರಲ್ಲಿ ಎಐಸಿಸಿ ಅಧ್ಯಕ್ಷರ ಖಾತೆಗೆ ದೇಣಿಗೆ ನೀಡಲಾಗಿದೆ.

ಈ ಹಿಂದೆ ಚುನಾವಣಾ ಬಾಂಡ್‌ಗಳ ಸಂಖ್ಯೆ ವಿವರಗಳನ್ನು ಎಸ್‌ಬಿಐ ನೀಡದೇ ಇರುವುದರಿಂದ ಕಂಪೆನಿಯು ಯಾವೆಲ್ಲಾ ಪಕ್ಷಕ್ಕೆ ದೇಣಿಗೆ ನೀಡಿದೆ ಎಂಬ ಮಾಹಿತಿ ಬಹಿರಂಗವಾಗಿರಲಿಲ್ಲ. ಇದೀಗ, ಸುಪ್ರೀಂ ಕೋರ್ಟ್‌ ಕಟ್ಟು ನಿಟ್ಟಾಗಿ ಮಾಹಿತಿ ನೀಡುವಂತೆ ತಿಳಿಸಿದ ಬಳಿಕ ಯಾವೆಲ್ಲಾ ಪಕ್ಷಗಳಿಗೆ ದೇಣಿಗೆ ಸಂದಾಯವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜಿವಿಪಿಆರ್‌ ಸಂಸ್ಥೆಯು ದೇಣಿಗೆ ನೀಡಿರುವ ಬಗ್ಗೆ ಸ್ಥಳೀಯರ, ಹೋರಾಟಗಾರರ ಅಭಿಪ್ರಾಯಗಳನ್ನು ಪಡೆದು ದಿ ಫೆಡೆರಲ್‌ ವರದಿ ಮಾಡಿತ್ತು. 

ಇದನ್ನೂ ಓದಿ: HPPL PROJECT | ಹೊನ್ನಾವರ ಒಣಮೀನು ಉದ್ಯಮಕ್ಕೆ ಬೆಂಕಿ ಇಟ್ಟ ಬಂದರು

GVPR Engineers ಲಿಮಿಟೆಡ್ ಸಂಸ್ಥೆ ೨೦೨೪ ರ ಜನವರಿಯಲ್ಲಿ ನೀಡಿದ 16996, 16994, 16998, 16992, 16990, ಬಾಂಡ್‌ ಸಂಖ್ಯೆಯ ದೇಣಿಗೆಗಳು ಕಾಂಗ್ರೆಸ್ ಅಧ್ಯಕ್ಷರ ಖಾತೆಗೆ ಸೇರಿವೆ. ಇದೇ ಸಂಸ್ಥೆ 2023 ರ ಅಕ್ಟೋಬರ್‌ನಲ್ಲಿ ನೀಡಿರುವ 15936, 15928, 15932, 15930, 15934, ಬಾಂಡ್‌ ಸಂಖ್ಯೆಯ ದೇಣಿಗೆಗಳು ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಗೆ ಖಾತೆಗೆ ಸೇರಿವೆ ಅನ್ನುವುದು ಚುನಾವಣಾ ಆಯೋಗ ಪ್ರಕಟಿಸಿರುವ ಬಾಂಡ್‌ ವಿವರಗಳಲ್ಲಿ ತಿಳಿದು ಬಂದಿದೆ. 

ಇದನ್ನೂ ಓದಿ: HPPL PROJECT | ಹೊನ್ನಾವರದ ಕಡಲಮಕ್ಕಳ ಬದುಕನ್ನೇ ಮುಳುಗಿಸಿದ ಬಂದರು ಯೋಜನೆ

ಸಾಗರ್ ಮಾಲಾ ಅಭಿವೃದ್ಧಿ ಯೋಜನೆಯ ಭಾಗವಾಗಿ ನಡೆಯುತ್ತಿರುವ ಬಂದರು ಯೋಜನೆಗೆ ಸ್ಥಳೀಯ ಮೀನುಗಾರರು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಸ್ಥಳೀಯರ ದನಿಯನ್ನು ಯಾವುದೇ ಸರ್ಕಾರಗಳೂ ಕೇಳುವ ಪರಿಸ್ಥಿತಿಯಲ್ಲಿಲ್ಲ.

ಕುತೂಹಲಕಾರಿ ಅಂಶವೆಂದರೆ, ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡಿದ ಬಳಿಕ ಅಂದರೆ 2024 ರ ಜನವರಿ 31 ರಂದು ಕಂಪೆನಿ ಪರವಾಗಿ ಸರ್ವೆ ನಡೆಸುವುದನ್ನು ವಿರೋಧಿಸಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಸ್ಥಳೀಯರ ಮೇಲೆ ಆಡಳಿತವು ಪೊಲೀಸ್ ಪಡೆ ಮೂಲಕ ಬಲ ಪ್ರಯೋಗ ನಡೆಸಿ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಿದೆ. ಬಂದರು ಕಂಪೆನಿ ಪರವಾಗಿ ಕಂದಾಯ ಅಧಿಕಾರಿಗಳು ಭೂಮಿ ಸರ್ವೆಗೆ ಬಂದಾಗ ತಮ್ಮ ಮನೆಗಳನ್ನು ಸರ್ವೇ ನಕಾಶೆಯಲ್ಲಿ ಗುರುತಿಸುವಂತೆ ಸ್ಥಳೀಯರು ಒತ್ತಾಯಿಸಿದ್ದರು. ಆದರೆ, ಹೋರಾಟದ ಮುಂಚೂಣಿಯಲ್ಲಿದ್ದ 20 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿರುವ ಪೊಲೀಸರು, ಮಹಿಳೆಯರು-ಪುರುಷರೆನ್ನದೇ 18 ಮಂದಿಯನ್ನು 5 ದಿನಗಳ ಕಾಲ ಕಾರವಾರ ಜೈಲಿನಲ್ಲಿ ಬಂಧಿಸಿಟ್ಟಿದ್ದರು.

ಇದನ್ನೂ ಓದಿ: HPPL PROJECT | 10 ಕೋಟಿ ರೂ. ಚುನಾವಣಾ ಬಾಂಡ್ ಖರೀದಿಸಿದ ಕಂಪೆನಿ

ಕಾಂಗ್ರೆಸ್ ಪಕ್ಷಕ್ಕೆ ಬಂದರು ಕಂಪೆನಿಯ ಮಾತೃ ಸಂಸ್ಥೆಯಿಂದ ದೇಣಿಗೆ ಹೋಗಿರುವ ಸಂದರ್ಭವನ್ನೂ, ಕಾಂಗ್ರೆಸ್ ಸರ್ಕಾರ ಹೋರಾಟಗಾರರ ಮೇಲೆ ಪೊಲೀಸ್ ದಬ್ಬಾಳಿಕೆ ನಡೆಸಿರುವ ಸಂದರ್ಭವನ್ನೂ ತಾಳೆ ಹಾಕಿ ನೋಡುವಾಗ ಕಾಂಗ್ರೆಸ್ ಸರ್ಕಾರದ ಮೇಲೆ ಅನುಮಾನ ವ್ಯಕ್ತವಾಗುತ್ತಿದೆ ಎಂದು ಸ್ಥಳೀಯ ಹೋರಾಟಗಾರರೊಬ್ಬರು ಹೇಳಿದ್ದಾರೆ.

“ಅಧಿಕಾರಕ್ಕೆ ಬರುವ ಮುನ್ನ ನಮ್ಮ ಪರವಾಗಿ ಹೋರಾಟ ನಡೆಸುತ್ತಿದ್ದ ಸಚಿವ ಮಂಕಾಳ್ ವೈದ್ಯ ಅವರು ಇತ್ತೀಚೆಗೆ ಮೌನವಾಗಿದ್ದಾರೆ. ಅವರ ಮೌನದ ಬಗ್ಗೆ ಮೊದಲೇ ಸಂದೇಹವಿತ್ತು. ಇದೀಗ ಅವರ ಮೇಲಿನ ಅನುಮಾನಗಳು ದಟ್ಟವಾಗುತ್ತಿದೆ. ನಮ್ಮ ಪರವಾಗಿ ನಿಲ್ಲುತ್ತಾರೆ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದರು, ಆದರೆ, ಈಗ ಅವರದೇ ಸರ್ಕಾರ ಇದೆ. ಅಧಿಕಾರಿಗಳು ಬಂದರಿನ ಪರವಾಗಿ ಕೆಲಸ ಮಾಡುತ್ತಿದ್ದಾರೆ, ವಿರೋಧಿಸುವ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ” ಎಂದು ಸ್ಥಳೀಯ ಮೀನುಗಾರರೂ, ಬಂದರು ವಿರೋಧಿ ಹೋರಾಟಗಾರರೂ ಆಗಿರುವ ರಾಜೇಶ್ ಗೋವಿಂದ್ ತಾಂಡೇಲ್ ಅವರು ʼದಿ ಫೆಡೆರಲ್ʼಗೆ ತಿಳಿಸಿದ್ದಾರೆ.

ಇದನ್ನೂ ಓದಿ: HPPL PROJECT | ಹೋರಾಟಗಾರರ ಮೇಲೆ ಪೊಲೀಸ್‌ ದೌರ್ಜನ್ಯ ಸರಣಿಗೆ ಕೊನೆ ಇಲ್ಲ!

ಹೋರಾಟಗಾರರ ಅನುಮಾನದ ಬಗ್ಗೆ ಹಾಗೂ ಕಂಪೆನಿ ನೀಡಿರುವ ದೇಣಿಗೆ ಕುರಿತು ಸಚಿವ ಮಂಕಾಳ್ ವೈದ್ಯ ಅವರನ್ನು ದಿ ಫೆಡೆರಲ್ ಸಂಪರ್ಕಿಸಲು ಪ್ರಯತ್ನಿಸಿದೆಯಾದರೂ, ಅವರ ಪ್ರತಿಕ್ರಿಯೆಯನ್ನು ಪಡೆಯಲು ಸಾಧ್ಯವಾಗಿಲ್ಲ.(ಸಚಿವರು ಪ್ರತಿಕ್ರಿಯೆ ನೀಡಿದಾಗ ಅದನ್ನು ಇಲ್ಲಿ ಸೇರಿಸಲಾಗುವುದು)

ಸ್ಥಳೀಯರು ವರ್ಷಗಳಿಂದ ವಿರೋಧಿಸುತ್ತಾ ಬಂದಿದ್ದರೂ ಬಂದರು ಯೋಜನೆಯ ಕಾಮಗಾರಿಗಳು ಅನಾಯಾಸವಾಗಿ ನಡೆಯುತ್ತಿರುವುದಕ್ಕೂ ಪಕ್ಷ ಬೇಧವಿಲ್ಲದೇ ರಾಜಕೀಯ ಪಕ್ಷಗಳಿಗೆ ಕಂಪೆನಿಯಿಂದ ದೇಣಿಗೆ ಸಂದಾಯವಾಗುತ್ತಿರುವುದಕ್ಕೂ ಒಂದಕ್ಕೊಂದು ಸಂಬಂಧ ಇದೆಯೇ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ.  

Tags:    

Similar News