Electric Bike Taxi | ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧಿಸಿದ ಸರ್ಕಾರ

ನಗರದ ಆರ್.ಟಿ.ಒ ಕಚೇರಿಗಳ ವ್ಯಾಪ್ತಿಯಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳು ಒಳಗೊಂಡಂತೆ ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

Update: 2024-07-05 12:30 GMT
ಗುರುವಾರ ಶಾಂತಿನಗರ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಖಾಸಗಿ ಸಾರಿಗೆ ಸಂಘಟನೆಗಳ ಪ್ರತಿಭಟನೆ ನಡೆಯಿತು.
Click the Play button to listen to article

Electric Bike Taxi Ban | ರಾಜ್ಯಾದ್ಯಂತ ಜು.5ರಿಂದ ಕಡ್ಡಾಯವಾಗಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಒಂದು ವೇಳೆ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ಕಂಡುಬಂದಲ್ಲಿ ಕೂಡಲೇ ಅವುಗಳನ್ನು ಜಪ್ತಿ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. 

ಅಲ್ಲದೆ, ಬೆಂಗಳೂರು ಮಹಾನಗರದ 11 ಆರ್.ಟಿ.ಒ ಕಚೇರಿಗಳ ವ್ಯಾಪ್ತಿಯಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳು ಒಳಗೊಂಡಂತೆ ಅನಧಿಕೃತ ಬೈಕ್ ಟ್ಯಾಕ್ಸಿಗಳನ್ನು ರದ್ದುಪಡಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. 

ಆದೇಶದಲ್ಲಿ ಏನಿದೆ?

“ಸರ್ಕಾರದ 14-07-2021ರ ಸೂಚನೆಯನ್ವಯ ಸಾರ್ವಜನಿಕ ಸಾರಿಗೆಗಾಗಿ ಮೊದಲ ಮತ್ತು ಕೊನೆಯ ಹಂತದ ಸಾರಿಗೆ ಸಂಪರ್ಕವನ್ನು ಕಲ್ಪಿಸುವ ಮತ್ತು ಸ್ವಯಂ ಉದ್ಯೋಗ ಅವಕಾಶವನ್ನು ಒದಗಿಸುವ ಉದ್ದೇಶದಿಂದ, ಮೋಟಾರು ವಾಹನ ಕಾಯ್ದೆ 1988ರ (1998ರ ಕೇಂದ್ರ ಅಧಿನಿಯಮ 59)ರ ಕಲಂ 2ರ ಉಪಕಲಂ (1) ಕ್ರಮ ಸಂಖ್ಯೆ: 38(ಎ) ರಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಕರ್ನಾಟಕ ರಾಜ್ಯದಲ್ಲಿನ ಎಲ್ಲಾ ನಗರ ಪ್ರದೇಶಗಳಿಗೆ ಅನ್ವಯಿಸುವಂತೆ “ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ 2021″ನ್ನು ಜಾರಿಗೆ ತರಲಾಗಿತ್ತು.

ಕರ್ನಾಟಕ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಯ ಅಗತ್ಯತೆ ಮತ್ತು ಜಾರಿಯ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರು, BMRCL ರವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯ ವರದಿಯಲ್ಲಿ ಬೈಕ್ ಟ್ಯಾಕ್ಸಿ ಯೋಜನೆಗೆ ಸಂಬಂಧಿಸಿದಂತೆ ವರದಿಯು ಪೂರಕವಾಗಿರುವುದಿಲ್ಲವೆಂದು ತಿಳಿಸಿದೆ. ಪ್ರಸ್ತುತ ಕೆಲವು ಖಾಸಗಿ ಆಪ್ ಆಧಾರಿತ ಸಂಸ್ಥೆಗಳು ಮೋಟಾರು ವಾಹನ ಕಾಯ್ದೆ ಮತ್ತು ಅದರಡಿ ರಚಿತವಾದ ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಸಾರಿಗೆಯೇತರ (Non-transport) ದ್ವಿಚಕ್ರ ವಾಹನಗಳನ್ನು ಸಾರಿಗೆ (Transport) ವಾಹನಗಳನ್ನಾಗಿ ಉಪಯೋಗಿಸುತ್ತಿರುವುದು ಕಂಡುಬಂದಿರುತ್ತದೆ. ಖಾಸಗಿ ಸಾರಿಗೆ ಕ್ಷೇತ್ರಗಳಲ್ಲಿನ ಇತರೆ ಆಟೋರಿಕ್ಷಾ, ಮ್ಯಾಕ್ಸಿ ಕ್ಯಾಬ್ ಮತ್ತು ಟ್ಯಾಕ್ಸಿ ಸಂಘಗಳು / ಚಾಲಕರುಗಳು, ಬೈಕ್ ಟ್ಯಾಕ್ಸಿ ಚಾಲಕರ ವಿರುದ್ಧ ಹಲವಾರು ಬಾರಿ ಸಂಘರ್ಷಣೆಗಳು ನಡೆದು, ಮೊಕದ್ದಮೆಗಳು ದಾಖಲಾಗುತ್ತಿರುವುದನ್ನು ಮತ್ತು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಹಾಗೂ ಮಹಿಳೆಯರಿಗೆ ಈ ಯೋಜನೆ ಅಸುರಕ್ಷಿತವಾಗಿರುವುದನ್ನು ಸಹ ಗಮನಿಸಲಾಗಿದೆ. ಸಾರಿಗೆ ಇಲಾಖೆಯ ರಾಜಸ್ವ ಸಂಗ್ರಹಣೆಗೆ ಮತ್ತು ಪವರ್ತನ ಚಟುವಟಿಕೆಯ ಸಮರ್ಥ ಕಾರ್ಯನಿರ್ವಹಣೆಗೆ ಈ ಯೋಜನೆಯಿಂದ ಕಷ್ಟವಾಗುತ್ತಿದೆ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ, “ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ 2021″ ನ್ನು ಜಾರಿಗೊಳಿಸಿ ಹೊರಡಿಸಲಾದ ಸರ್ಕಾರದ ಅಧಿಸೂಚನೆ ಸಂಖ್ಯೆ: ಟಿಡಿ 160 ಟಿಡಿಓ 2020, ದಿನಾಂಕ:14-07-2021ನ್ನು ಈ ಮೂಲಕ ರದ್ದುಗೊಳಿಸಿ ಆದೇಶಿಸಿದೆ.”

ಟ್ಯಾಕ್ಸಿ- ಕ್ಯಾಬ್‌ ಚಾಲಕರ ಹೋರಾಟ

ಅನಧಿಕೃತ ಬೈಕ್‌ ಟ್ಯಾಕ್ಸಿಗಳ ವಿರುದ್ಧ ರೊಚ್ಚಿಗೆದ್ದ ಆಟೋ ಮತ್ತು ಕ್ಯಾಬ್‌ ಚಾಲಕರು ಗುರುವಾರ ಶಾಂತಿನಗರ ಸಾರಿಗೆ ಆಯುಕ್ತರ ಕಚೇರಿ ಎದುರು ಸಾವಿರಾರು ಸಂಖ್ಯೆಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಕಬ್ಬಿಣದ ತಡೆಗಳನ್ನು ಮುರಿದು ಕಚೇರಿ ಒಳಗೆ ನುಗ್ಗಿದರು. ಪೋಲಿಸರು ತಡೆಯಲು ಪ್ರಯತ್ನಿಸಿದರೂ ಅವರನ್ನು ತಳ್ಳಿ ಪ್ರತಿಭಟನಕಾರರು ಕಚೇರಿಗೆ ಲಗ್ಗೆ ಇಟ್ಟು ಆಕ್ರೋಶ ವ್ಯಕ್ತಪಡಿಸಿದ್ದರು.

ಸಂಘಟನೆಗಳ ಒತ್ತಾಯದ ಬಳಿಕ ಕಾರ್ಯಾಚರಣೆಗೆ ಇಳಿಯಲಿರುವ ಸಾರಿಗೆ ಇಲಾಖೆ ಅಧಿಕಾರಿಗಳು, ಎಲೆಕ್ಟ್ರಿಕ್ ಬೈಕ್‌ ಟ್ಯಾಕ್ಸಿಗಳ ವಿರುದ್ಧ ಮತ್ತು ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಿದ್ದಾರೆ. ಈ ಬಗ್ಗೆ 11 ತಂಡಗಳನ್ನು ರಚಿಸಿ ಕಾರ್ಯಾಚರಣೆಗೆ ಸಾರಿಗೆ ಇಲಾಖೆ ಆಯುಕ್ತರು ಸೂಚಿಸಿದ್ದು, ನಗರದ ನಾನಾ ಭಾಗಗಳಲ್ಲಿರುವ ಅನಧಿಕೃತ ಬೈಕ್ ಟ್ಯಾಕ್ಸಿಗಳಿಗೆ ಬಿಸಿ ಮುಟ್ಟಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಬೈಕ್ ಟ್ಯಾಕ್ಸಿಯಿಂದಾಗಿ ರಾಜ್ಯದಲ್ಲಿ ಆಟೋ, ಟ್ಯಾಕ್ಸಿ, ಕ್ಯಾಬ್‌ಗಳು ಸೇರಿದಂತೆ ಎಲ್ಲಾ ಮಾದರಿಯ ಪ್ರಯಾಣಿಕರ ಬಾಡಿಗೆ ವಾಹನಗಳಿಗೆ ಭಾರಿ ಹೊಡೆತ ಬೀಳುತ್ತಿತ್ತು. ವಿರೋಧದ ನಡುವೆಯೂ, ರ‍್ಯಾಪಿಡೋ ಸೇರಿದಂತೆ ವಿವಿಧ ಕಂಪನಿಗಳ ಬೈಕ್ ಟ್ಯಾಕ್ಸಿಗಳು ಸಂಚಾರ ಮಾಡುತ್ತಿವೆ. ಆದರೆ, ಕಳೆದ 2021ರಲ್ಲಿ ಆಟೋ, ಟ್ಯಾಕ್ಸಿ ವಾಹನಗಳ ಚಾಲಕರು ಮತ್ತು ಮಾಲೀಕರ ಸಂಘಟನೆಯ ವತಿಯಿಂದ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸುವಂತೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಲಾಗಿತ್ತು. ಈ ವೇಳೆ ಸರ್ಕಾರದಿಂದ ಎಲ್ಲ ಮಾದರಿಯ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಆದರೂ, ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂಬ ಆರೋಪ ಖಾಸಗಿ ಸಾರಿಗೆ ವಾಹನಗಳ ಸಂಘಟನೆಯಿಂದ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಸಾರಿಗೆ ಅಧಿಕಾರಿಗಳು ನಗರದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೀಜ್‌ ಮಾಡಲು ಮುಂದಾಗಿದ್ದಾರೆ. 

Tags:    

Similar News