Ernst & Young ಉದ್ಯೋಗಿ ಸೆಬಾಸ್ಟಿಯನ್ ಪೆರಾಯಿಲ್ ದುರಂತ ಸಾವು; ಯಾರಿಗೂ ಇಂಥ ನೋವು ಬರಬಾರದು ಎಂದು ರೋಧಿಸಿದ ಪೋಷಕರು

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಪತ್ರದಲ್ಲಿ, ಅನಿತಾ ಅಗಸ್ಟಿನ್ ಮಗಳ ಅಂತಿಮ ದಿನಗಳನ್ನು ವಿವರಿಸಿದ್ದಾರೆ. ಕೆಲಸದ ಹೊರೆ, ದೀರ್ಘ ಅವಧಿ ಮತ್ತು ಅಪಾರ ಒತ್ತಡಗಳು ಅನ್ನಾಳ ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದನ್ನು ವಿವರಿಸಿದ್ದಾರೆ.;

Update: 2024-09-19 11:05 GMT

ಅರ್ನ್ಸ್ಟ್ ಆಂಡ್‌ ಯೂಂಗ್(ಇವೈ) ಇಂಡಿಯಾದ ಪುಣೆ ಕಚೇರಿ ಉದ್ಯೋಗಿ ಅನ್ನಾ ಸೆಬಾಸ್ಟಿಯನ್ ಪೆರಾಯಿಲ್(26) ಅವರ ದುರಂತ ಸಾವು ಕಾರ್ಪೊರೇಟ್ ಜಗತ್ತಿನಲ್ಲಿರುವ ವಿಷಮಯ ಸ್ಪರ್ಧಾ ಸಂಸ್ಕೃತಿ ಮತ್ತು ಉದ್ಯೋಗಿಗಳ ಯೋಗಕ್ಷೇಮದ ಮೇಲೆ ಅದರ ಪ್ರಭಾವ ಕುರಿತು ಹೆಚ್ಚುತ್ತಿರುವ ಆತಂಕಗಳ ಮೇಲೆ ಬೆಳಕು ಚೆಲ್ಲಿದೆ.

ʻಯಾವ ಪೋಷಕರಿಗೂ ಇಂಥ ನೋವು ಬರಬಾರದು. ಬೇರೆ ಯಾರನ್ನೂ ಈ ರೀತಿ ನಡೆಸಿಕೊಳ್ಳಬಾರದು,ʼ ಎಂದು ಅನ್ನಾ ಅವರ ತಂದೆ ಸಿಬಿ ಜೋಸೆಫ್ ಪೆರಾಯಿಲ್ ದ ಫೆಡರಲ್ ಜೊತೆಗಿನ ಸಂವಾದದಲ್ಲಿ ಹೇಳಿದ್ದಾರೆ.

ಕೇರಳ ಸರ್ಕಾರದಲ್ಲಿ ಕೃಷಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸಿಬಿ ಜೋಸೆಫ್, ಸೇರಿಕೊಂಡ ನಾಲ್ಕು ತಿಂಗಳೊಳಗೆ ಕಂಪನಿಗಾಗಿ ಅಕ್ಷರಶಃ ಪ್ರಾಣ ನೀಡಿದ ಉದ್ಯೋಗಿಯ ಅಂತಿಮಸಂಸ್ಕಾರಕ್ಕೂ ಬಾರದ ಬಹುರಾಷ್ಟ್ರೀಯ ಕಂಪನಿಯನ್ನು ಎಂದಿಗೂ ಕ್ಷಮಿಸುವುದಿಲ್ಲ.

ಶೋಕತಪ್ತ ಪೋಷಕರು:

ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಪುಣೆಯಿಂದ ಆಕೆಯ ಸಹೋದ್ಯೋಗಿಗಳು ಅಥವಾ ಇವೈನ ಉನ್ನತ ಅಧಿಕಾರಿಗಳು ಬರಲಿಲ್ಲ. ನಾವು ನಮ್ಮ ಮಗಳನ್ನು ಕಳೆದುಕೊಂಡಿದ್ದೇವೆ ಮತ್ತು ಯಾವ ಪೋಷಕರಿಗೂ ಇಂಥ ನೋವು ಬರಬಾರದು. ಬೇರೆ ಯಾರನ್ನೂ ಈ ರೀತಿ ನಡೆಸಿಕೊಳ್ಳಬಾರದು' ಎಂದು ದುಃಖಿತ ಸಿಬಿ ಜೋಸೆಫ್ ಹೇಳಿದರು.

ʻಅನ್ನಾಳ ತಾಯಿ ಕಳೆದ ವಾರ ಇವೈ ಅಧ್ಯಕ್ಷರು ಮತ್ತು ಐವರು ಉನ್ನತ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ನಾವು ಅದನ್ನು ಸಾರ್ವಜನಿಕಗೊಳಿಸಬೇಕೆಂದುಕೊಂಡಿಲ್ಲ ಅಥವಾ ಅಧಿಕೃತ ದೂರು ನೀಡಲು ಅಥವಾ ಕಾನೂನು ಪ್ರಕ್ರಿಯೆ ಆರಂಭಿಸಲು ಉದ್ದೇಶಿಸಿಲ್ಲ.ಪತ್ರ ಸ್ವೀಕರಿಸಿದ ಪಟ್ಟಿಯಲ್ಲಿರುವ ಯಾರೋ ಅದನ್ನು ಸಾಮಾಜಿಕ ಮಾಧ್ಯಮಕ್ಕೆ ಸೋರಿಕೆ ಮಾಡಿರಬೇಕು.ಆದರೆ, ಇವೈ ಆಂತರಿಕ ವಿಚಾರಣೆ ನಡೆಸಲು ಯೋಜಿಸಿದೆ ಎಂದು ಕೇಳಿದ್ದೇವೆ. ನಮಗೆ ಖಚಿತವಾಗಿ ತಿಳಿದಿಲ್ಲʼ ಎಂದರು.

ಬಿಕ್ಕಟ್ಟಿನ ಮೊದಲ ಸುಳಿವು

ತಂದೆ ಪ್ರಕಾರ, ಜುಲೈ 7 ರಂದು ಅನ್ನಾಳ ಘಟಿಕೋತ್ಸವಕ್ಕಾಗಿ ಅವರು ಮತ್ತು ಪತ್ನಿ ಪುಣೆಯಲ್ಲಿದ್ದರು. ʻಅನ್ನಾಳ ಆರೋಗ್ಯ ಸರಿಯಿಲ್ಲ ಎಂದು ಗೊತ್ತಾಗಿ ನಾವು ಸಂಪರ್ಕಿಸಿದ ಹೃದ್ರೋಗ ತಜ್ಞರು ಇಸಿಜಿ ಸೇರಿದಂತೆ ಎಲ್ಲಾ ಪರೀಕ್ಷೆ ನಡೆಸಿ, ಅನ್ನಾ ಆರೋಗ್ಯವಾಗಿದ್ದಾರೆ ಎಂದು ಭರವಸೆ ನೀಡಿದರು. ಸರಿಯಾದ ನಿದ್ರೆ ಬಾರದೆ ಇರುವುದು ಅವಳ ಏಕೈಕ ಸಮಸ್ಯೆ ಎಂದು ಅವರು ಹೇಳಿದರು,ʼ ಎಂದು ವಿಷಯ ಹಂಚಿಕೊಂಡರು.

ʻಆಕೆ ತುಂಬ ಆರೋಗ್ಯವಾಗಿದ್ದಳು; ಮನೆಯಲ್ಲಿದ್ದಾಗ ನನ್ನೊಂದಿಗೆ ಬೆಳಗ್ಗೆ ನಡೆಯಲು ಬರುತ್ತಿದ್ದಳು. ತನ್ನ ಸಿವಿಗೆ ಇವೈ ನಲ್ಲಿನ ಕಾಲಾವಧಿ ನಿರ್ಣಾಯಕ ಎಂದು ನಂಬಿದ್ದರಿಂದ, ಕೆಲಸ ಬಿಡಲು ಬಯಸಲಿಲ್ಲ,ʼ ಎಂದು ಸಿಬಿ ಜೋಸೆಫ್ ಹೇಳಿದರು. ಇವೈ ವಿಶ್ವದ ಪ್ರಮುಖ ಲೆಕ್ಕಪತ್ರ ನಿರ್ವಹಣೆ ಮತ್ತು ಸಲಹಾ ಸೇವೆಗಳ ಸಂಸ್ಥೆಗಳಲ್ಲಿ ಒಂದು.

ದುರದೃಷ್ಟಕರ ಸಾವು

ಜುಲೈ 20 ರಂದು ಸ್ವಿಗ್ಗಿ ಡೆಲಿವರಿಯಿಂದ ಆಹಾರ ತೆಗೆದುಕೊಳ್ಳುವಾಗ ಅನ್ನಾ ಇದ್ದಕ್ಕಿದ್ದಂತೆ ವಾಂತಿ ಮಾಡಿ, ಮೂರ್ಛೆ ಹೋದರು. ಆಕೆಯ ಜೊತೆಯವರು ಆಸ್ಪತ್ರೆಗೆ ಕರೆದೊಯ್ದರೂ, ಬದುಕಿಸಲು ಸಾಧ್ಯವಾಗಲಿಲ್ಲ,ʼ ಎಂದು ಹೇಳಿದರು.

ಇವೈ ಇಂಡಿಯಾ ಅಧ್ಯಕ್ಷ ರಾಜೀವ್ ಮೆಮಾನಿ ಅವರಿಗೆ ಬರೆದ ಹೃದಯವಿದ್ರಾವಕ ಪತ್ರದಲ್ಲಿ ಕೊಚ್ಚಿ ಮೂಲದ ಮಾಜಿ ಬ್ಯಾಂಕ್ ಅಧಿಕಾರಿ, ಅನ್ನಾಳ ತಾಯಿ ಅನಿತಾ ಅಗಸ್ಟಿನ್, ತಮ್ಮ ಮಗಳ ಕಥೆಯನ್ನು ಹಂಚಿಕೊಂಡಿದ್ದಾರೆ. ಮಗಳ ಸಾವಿಗೆ ಕಾರಣವಾದ ವ್ಯವಸ್ಥಿತ ಸಮಸ್ಯೆಗಳನ್ನು ಪರಿಹರಿಸಲು ಕೋರಿದ್ದಾರೆ.

ಅನ್ನಾ ಅಕೌಂಟೆನ್ಸಿಯಲ್ಲಿ ಪ್ರಥಮ ಶ್ರೇಣಿ ಗಳಿಸಿದ್ದ ಮಹತ್ವಾಕಾಂಕ್ಷಿ ಯುವತಿ. ಚಾರ್ಟರ್ಡ್ ಅಕೌಂಟೆನ್ಸಿ ಪರೀಕ್ಷೆ ಮುಗಿಸಿ ಮಾರ್ಚ್ 2024 ರಲ್ಲಿ ಇವೈ ಇಂಡಿಯಾದಲ್ಲಿ ಕಾರ್ಯನಿರ್ವಾಹಕಿಯಾಗಿ ಸೇರಿಕೊಂಡರು.ಆದರೆ, ಕೆಲಸಕ್ಕೆ ಸೇರಿದ ನಾಲ್ಕು ತಿಂಗಳೊಳಗೆ ನಿಧನರಾದರು. ಅವರ ಕುಟುಂಬ ಮತ್ತು ಪ್ರೀತಿಪಾತ್ರರನ್ನು ಶೋಕಸಾಗರದಲ್ಲಿ ಮುಳುಗಿಸಿದರು.

ಸಾವಿನಿಂದ ತೀವ್ರ ದುಃಖವಾಗಿದೆ: ಇವೈ

ಯುವತಿ ಮರಣ ಹೊಂದಿದ ವಾರಗಳ ನಂತರ ಮತ್ತು ಜಾಗತಿಕವಾಗಿ ಟೀಕೆಗೆ ಒಳಗಾದ ನಂತರ, ಕುಟುಂಬದ ಕಳವಳವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಕಂಪನಿ ಹೇಳಿತು.

ಹೇಳಿಕೆಯಲ್ಲಿ,ʼಕುಟುಂಬದ ನಷ್ಟವನ್ನು ಯಾವುದೇ ಕ್ರಮದಿಂದ ಸರಿದೂಗಿಸಲು ಸಾಧ್ಯವಿಲ್ಲ.ಇಂಥ ಸಂಕಷ್ಟದ ಸಮಯದಲ್ಲಿ ಎಲ್ಲಾ ಸಹಾಯ ಒದಗಿಸಿದ್ದೇವೆ ಮತ್ತು ಅದನ್ನು ಮುಂದುವರಿಸುತ್ತೇವೆ. ಅನ್ನಾ ಸೆಬಾಸ್ಟಿಯನ್ ಅವರ ದುರಂತಮಯ ಮತ್ತು ಅಕಾಲಿಕ ಮರಣದಿಂದ ನಾವು ತೀವ್ರ ದುಃಖಿತರಾಗಿದ್ದೇವೆ.ಅವರ ಕುಟುಂಬಕ್ಕೆ ನಮ್ಮ ಸಂತಾಪ ಸಲ್ಲಿಸುತ್ತೇವೆ .ಅವರ ಭರವಸೆಯ ವೃತ್ತಿಜೀವನ ದುರಂತ ರೀತಿಯಲ್ಲಿ ಮೊಟಕುಗೊಂಡಿರುವುದರಿಂದ ನಮಗೆಲ್ಲರಿಗೂ ತುಂಬಲಾರದ ನಷ್ಟವಾಗಿದೆ,ʼ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಅನುಕೂಲಕರ ಕೆಲಸದ ವಾತಾವರಣವನ್ನು ಸೃಷ್ಟಿಸುವ ಬದಲಾವಣೆಗಳ ಬಗ್ಗೆ ಸುಳಿವು ನೀಡಿ, ʻಕುಟುಂಬದ ಪತ್ರವ್ಯವಹಾರವನ್ನು ಗಂಭೀರ ಮತ್ತು ನಮ್ರತೆಯಿಂದ ತೆಗೆದುಕೊಳ್ಳುತ್ತಿದ್ದೇವೆ. ಎಲ್ಲಾ ಉದ್ಯೋಗಿಗಳ ಯೋಗಕ್ಷೇಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇವೆ ಮತ್ತು ಭಾರತದಲ್ಲಿನ ಇವೈ ಸದಸ್ಯ ಸಂಸ್ಥೆಗಳಾದ್ಯಂತ ನಮ್ಮ 1,00,000 ಉದ್ಯೋಗಿಗಳಿಗೆ ಆರೋಗ್ಯಕರ ಕೆಲಸದ ಸ್ಥಳ ಒದಗಿಸಲು ಪ್ರಯತ್ನಿಸುತ್ತೇವೆ,ʼ ಎಂದಿದೆ.

ಪತ್ರದಿಂದ ಬೆಚ್ಚಿ ಬಿದ್ದ ಕಾರ್ಪೊರೇಟ್ ಜಗತ್ತು

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಪತ್ರದಲ್ಲಿ, ಅನಿತಾ ಅಗಸ್ಟಿನ್ ಮಗಳ ಅಂತಿಮ ದಿನಗಳನ್ನು ವಿವರಿಸಿದ್ದಾರೆ. ಕೆಲಸದ ಹೊರೆ, ದೀರ್ಘ ಅವಧಿ ಮತ್ತು ಅಪಾರ ಒತ್ತಡಗಳು ಅನ್ನಾಳ ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದನ್ನು ವಿವರಿಸಿದ್ದಾರೆ.

ಆತಂಕ, ನಿದ್ರಾಹೀನತೆ ಮತ್ತು ಒತ್ತಡದಿಂದ ಬಳಲುತ್ತಿದ್ದರೂ, ಕಠಿಣ ಪರಿಶ್ರಮ ಮತ್ತು ದೃಢತೆ ಯಶಸ್ಸಿನ ಕೀಲಿ ಎಂದು ಅನ್ನಾ ನಂಬಿದ್ದರು. ಇವೈನಲ್ಲಿ ಅನ್ನಾಳ ತಂಡ ಅತಿಯಾದ ಕೆಲಸದ ಹೊರೆಯ ಇತಿಹಾಸ ಹೊಂದಿತ್ತು ಎಂದು ಪತ್ರ ಬಹಿರಂಗಪಡಿಸುತ್ತದೆ.

 

 

 

ಕ್ರೂರಿ ವ್ಯವಸ್ಥಾಪಕ

ಅನ್ನಾ ನಿರ್ದಿಷ್ಟ ತಂಡಕ್ಕೆ ಸೇರಿದಾಗ, ಅತಿಯಾದ ಕೆಲಸದ ಹೊರೆಯಿಂದ ಅನೇಕ ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಲಾಯಿತು. ತಂಡದ ವ್ಯವಸ್ಥಾಪಕರು ʻಕೆಲಸ ಬಿಡಬಾರದು ಮತ್ತು ತಂಡದ ಬಗ್ಗೆ ಪ್ರತಿಯೊಬ್ಬರ ಅಭಿಪ್ರಾಯವನ್ನು ಬದಲಿಸಬೇಕುʼ ಎಂದು ಹೇಳಿದ್ದರು. ಇದಕ್ಕಾಗಿ ತಾನು ಜೀವ ತೆರಬೇಕಾಗುತ್ತದೆ ಎಂದು ನನ್ನ ಮಗಳಿಗೆ ಗೊತ್ತಿರಲಿಲ್ಲ.

ಅವಳ ಮ್ಯಾನೇಜರ್ ಕ್ರಿಕೆಟ್ ಪಂದ್ಯಗಳ ಸಮಯದಲ್ಲಿ ಮೀಟಿಂಗ್‌ ಗಳನ್ನು ಬದಲಿಸುತ್ತಿದ್ದರು ಮತ್ತು ದಿನದ ಕೊನೆಯಲ್ಲಿ ಕೆಲಸ ಕೊಡುತ್ತಿದ್ದರು. ಇದರಿಂದ ಅವಳ ಮೇಲೆ ಒತ್ತಡ ಹೆಚ್ಚಿತು. ಕಚೇರಿಯ ಪಾರ್ಟಿಯಲ್ಲಿ ಹಿರಿಯ ಉದ್ಯೋಗಿ ಯೊಬ್ಬರು ʻನಿಮ್ಮ ಮ್ಯಾನೇಜರ್ ಜೊತೆ ಕೆಲಸ ಮಾಡುವುದು ಬಹಳ ಕಠಿಣʼ ಎಂದು ತಮಾಷೆ ಮಾಡಿದ್ದರು. ಆದರೆ, ದುರದೃಷ್ಟವಶಾತ್ ಅವಳಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಇವೈನಲ್ಲಿ ನಿರಂತರ ಕೆಲಸ

ಅನ್ನಾಳ ವ್ಯವಸ್ಥಾಪಕ ಅಧಿಕೃತ ಕಾರ್ಯಭಾರವನ್ನು ಮೀರಿ, ಹೆಚ್ಚುವರಿ ಕಾರ್ಯಗಳನ್ನು ಮೌಖಿಕವಾಗಿ  ನಿಯೋಜಿಸುತ್ತಿದ್ದರು ಎಂಬುದನ್ನು ಅನಿತಾ ಅಗಸ್ಟಿನ್ ವಿವರಿಸುತ್ತಾರೆ. ʻಅವಳು ಸಂಪೂರ್ಣವಾಗಿ ದಣಿದು ಕೋಣೆಗೆ ಹಿಂದಿರುಗುತ್ತಿದ್ದಳು. ಕೆಲವೊಮ್ಮೆ ಬಟ್ಟೆಯನ್ನೂ ಬದಲಿಸದೆ, ಹಾಸಿಗೆ ಮೇಲೆ ಕುಸಿದು ಬೀಳುತ್ತಿದ್ದಳು. ಹೀಗಿದ್ದರೂ, ಇನ್ನಷ್ಟು ಕೆಲಸದ ಸಂದೇಶಗಳು ಬರುತ್ತಿದ್ದವು.

ಅನ್ನಾಳ ಸಹಾಯಕ ಮ್ಯಾನೇಜರ್ ರಾತ್ರಿಯಲ್ಲಿ ಅವಳನ್ನು ಕರೆದ ಘಟನೆಯನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ; ಅದು ಮರುದಿನ ಬೆಳಗ್ಗೆ ಪೂರ್ಣಗೊಳಿಸಬೇಕಾದ ಕೆಲಸ. ಇದರಿಂದ ವಿಶ್ರಾಂತಿ ಅಥವಾ ಚೇತರಿಸಿಕೊಳ್ಳಲೂ ಅವಳಿಗೆ ಸಮಯ ಇರಲಿಲ್ಲ. ಅವಳು ಹಿಂಜರಿದಾಗ, ವಜಾಗೊಳಿಸುವ ಬೆದರಿಕೆ ಎದುರಿಸಿದಳು; 'ನೀವು ರಾತ್ರಿ ಕೆಲಸ ಮಾಡಬಹುದು; ಅದನ್ನೇ ನಾವೆಲ್ಲರೂ ಮಾಡುತ್ತೇವೆʼ ಎಂಬ ಉತ್ತರ ಬಂದಿತು.

ತನ್ನ ಮಗಳು ವ್ಯವಸ್ಥಾಪಕರನ್ನು ದೂಷಿಸಲಾರದಷ್ಟು ಕರುಣಾಮಯಿಯಾಗಿದ್ದಳು ಎಂದು ಅನಿತಾ ಹೇಳುತ್ತಾರೆ. ಆದರೆ, ತಾಯಿಯಾಗಿ ಮೌನವಾಗಿರಲು ಸಾಧ್ಯವಿಲ್ಲ.ಭಾನುವಾರವೂ ಹಗಲು ರಾತ್ರಿ ಕೆಲಸ ಮಾಡಿಸುತ್ತಾರೆ. ಹೊಸಬರಿಗೆ ಇಂತಹ ಬೆನ್ನುಮುರಿಯುವ ಕೆಲಸ ಕೊಡುವುದನ್ನು ಇವೈ ಹೇಗೆ ಸಮರ್ಥಿಸುತ್ತದೆ ಎಂದು ಪ್ರಶ್ನಿಸುತ್ತಾರೆ.

ಮಾಜಿ ಉದ್ಯೋಗಿಯ ಹೇಳಿಕೆ

ದಿ ಫೆಡರಲ್‌ನೊಂದಿಗೆ ಮಾತನಾಡಿದ ಇವೈ ಮಾಜಿ ಉದ್ಯೋಗಿಯ ಕುಟುಂಬದ ಪ್ರಭಾಕರನ್ (ಹೆಸರು ಬದಲಿಸಲಾಗಿದೆ), ಅನ್ನಾ ಏನು ಅನುಭವಿಸಿದರು ಎಂಬುದು ನನಗೆ ಗೊತ್ತಿದೆ ಎಂದರು.

ʻಬೆಂಗಳೂರಿನಲ್ಲಿ ಭಯಾನಕ ಅನುಭವದ ನಂತರ ನನ್ನ ಮಗ ಕಳೆದ ವರ್ಷ ಆ ಕಂಪನಿಯನ್ನು ತೊರೆದ. ನಾನು ಅವನಿಂದ ಕೇಳಿದ ಪ್ರಕಾರ, ಹೆಚ್ಚಿನ ಉದ್ಯೋಗಿಗಳಿಗೆ ಜೀವನವನ್ನು ಶೋಚನೀಯವಾಗಿಸುವುದು ಮ್ಯಾನೇಜರ್‌ಗಳೇ ಹೊರತು ಕಂಪನಿಯಲ್ಲ. ಆದರೆ, ಕಂಪನಿ ತನ್ನ ಜವಾಬ್ದಾರಿಯಿಂದ ಕೈತೊಳೆದುಕೊಳ್ಳುವುದು ಸಾಧ್ಯವಿಲ್ಲ. ಸಾಕಷ್ಟು ತಪಾಸಣೆ ಮತ್ತು ಸಮತೋಲ ಇರಬೇಕು.ತಮಾಷೆಯೆಂದರೆ, 12 ಗಂಟೆಗಳ ಶಿಫ್ಟ್‌ಗಳನ್ನು ಸರ್ಕಾರ ಬೆಂಬಲಿಸುತ್ತದೆʼ.

ʻಇವೈ ಅಮೆರಿಕ ಸೇರಿದಂತೆ ಇತರ ದೇಶಗಳಲ್ಲಿ ವಿಭಿನ್ನ ನೀತಿಯನ್ನು ಹೊಂದಿದೆ. ಅಲ್ಲಿ ಕೆಲಸದ ವಾತಾವರಣ ಹೆಚ್ಚು ಉತ್ತಮವಾಗಿದೆ. ಅದಕ್ಕಾಗಿಯೇ ಹೆಚ್ಚಿನವರು ಅವಕಾಶ ಸಿಕ್ಕರೆ ವಿದೇಶಕ್ಕೆ ಹಾರಲು ಬಯಸುತ್ತಾರೆ. ನನ್ನ ಮಗ ಕಚೇರಿಯಲ್ಲಿ 40 ಗಂಟೆ ಕಳೆದ ದಿನಗಳಿವೆ. ಇದು ಭಾರತದ ಅನೇಕ ಉನ್ನತ ಕಂಪನಿಗಳಲ್ಲಿ ಮಾಮೂಲಿಯಾಗಿದೆ.ʼ

ಇವೈ ಅಮಾನವೀಯ ನಡವಳಿಕೆ

ಅನ್ನಾಳ ಅಂತ್ಯಕ್ರಿಯೆಯಲ್ಲಿ ಕಂಪನಿಯಿಂದ ಯಾರೂ ಭಾಗವಹಿಸಲಿಲ್ಲ. ಇದು ತಮಗೆ ʻಆಳವಾದ ನೋವುಂಟು ಮಾಡಿದೆʼ ಎಂದು ಅನಿತಾ ಹೇಳುತ್ತಾರೆ.

ಅಂತ್ಯಕ್ರಿಯೆ ನಂತರ ಅವರು ಅನ್ನಾಳ ವ್ಯವಸ್ಥಾಪಕರನ್ನು ಸಂಪರ್ಕಿಸಿದರು. ಆದರೆ, ಯಾವುದೇ ಉತ್ತರ ಬರಲಿಲ್ಲ. ಮೌಲ್ಯಗಳು ಮತ್ತು ಮಾನವ ಹಕ್ಕುಗಳ ಬಗ್ಗೆ ಮಾತನಾಡುವ ಕಂಪನಿ, ಅದನ್ನು ಅಳವಡಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಹೇಳಿದರು.

ಅನಿತಾ ಆಗಸ್ಟಿನ್ ಅವರ ಪತ್ರ ಇವೈ ಮತ್ತು ಕಾರ್ಪೊರೇಟ್ ಜಗತ್ತಿಗೆ ಎಚ್ಚರಿಕೆಯ ಗಂಟೆಯಾಗಿದೆ. ಅನ್ನಾಳ ಅನುಭವ ಉದ್ಯೋಗಿಗಳ ಯೋಗಕ್ಷೇಮವನ್ನು ನಿರ್ಲಕ್ಷಿಸಿ, ಅತಿ ಕೆಲಸವನ್ನು ವೈಭವೀಕರಿಸುವ ಸಂಸ್ಕೃತಿ ಮೇಲೆ ಬೆಳಕು ಚೆಲ್ಲುತ್ತದೆ ಎಂದು ಹೇಳುತ್ತಾರೆ.

ತಾಯಿಯ ಮನವಿ

ಇವೈ ತನ್ನ ಕೆಲಸದ ಸಂಸ್ಕೃತಿಯನ್ನು ಬದಲಿಸಬೇಕು; ಉದ್ಯೋಗಿಗಳ ಆರೋಗ್ಯ ಮತ್ತು ಕ್ಷೇಮಕ್ಕೆ ಆದ್ಯತೆ ನೀಡಲು ಅರ್ಥಪೂರ್ಣ ಕ್ರಮ ತೆಗೆದುಕೊಳ್ಳಬೇಕೆಂದು ಅನಿತಾ ಒತ್ತಾಯಿಸಿದ್ದಾರೆ. ಉದ್ಯೋಗಿಗಳು ಮಾತನಾಡಲು ಸುರಕ್ಷಿತ ವಾತಾವರಣವನ್ನು ಸೃಷ್ಟಿಸಬೇಕು ಮತ್ತುಉತ್ಪಾದಕತೆಗೆ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮವನ್ನು ತ್ಯಾಗ ಮಾಡಬಾರದು.

ʻಇದು ಒಬ್ಬ ವ್ಯವಸ್ಥಾಪಕ ಅಥವಾ ತಂಡವನ್ನು ಮೀರಿದ ಸಾಂಸ್ಥಿಕ ಸಮಸ್ಯೆ. ಅತಿಯಾದ ಬೇಡಿಕೆ ಮತ್ತು ಅವಾಸ್ತವಿಕ ನಿರೀಕ್ಷೆಗಳಿರುವ ಒತ್ತಡ ಸಮರ್ಥನೀಯವಲ್ಲ. ಇದರಿಂದ ತುಂಬು ಸಾಮರ್ಥ್ಯವಿರುವ ಯುವತಿ ಜೀವವನ್ನು ಕಳೆದುಕೊಂಡಳು,ʼ ಎಂದು ಅನಿತಾ ಆಗಸ್ಟಿನ್ ಪತ್ರದಲ್ಲಿ ಬರೆದಿದ್ದಾರೆ. ಕಾರ್ಪೊರೇಟ್‌ ಜಗತ್ತಿನಲ್ಲಿ ಕೆಲಸದ ಸಂಸ್ಕೃತಿ ಸುಧಾರಣೆಯ ಅಗತ್ಯದ ಬಗ್ಗೆ ಸಂವಾದವನ್ನು ಹುಟ್ಟುಹಾಕಿದ್ದಾರೆ. 

Tags:    

Similar News