ರಾಜಧಾನಿಯಲ್ಲಿ ಹಣ್ಣುಗಳ ರಾಜನ ದರಬಾರಿಲ್ಲ! ಕಾರಣವೇನು?
ಆದರೆ ಈ ಬಾರಿ ಮಾವು ಪ್ರಿಯರಿಗೆ ಬಾರಿ ನಿರಾಸೆ ಉಂಟಾಗಿದೆ. ಕಾರಣ ಮಾವಿನ ಹಣ್ಣಿನ ದುಬಾರಿ ದರದಿಂದಾಗಿ ಹಣ್ಣು ಸಾಮಾನ್ಯ ಜನರ ಕೈಗೆಟಕುತ್ತಿಲ್ಲ.;
ಬೇಸಿಗೆ ಬಂತೆಂದರೆ ಸಾಕು ರಾಜಧಾನಿ ಬೆಂಗಳೂರಿನಲ್ಲಿ ಹಣ್ಣುಗಳ ರಾಜ ಮಾವಿನ ಹಣ್ಣುಗಳದ್ದೇ ದರ್ಬಾರು. ರಸ್ತೆಗಳಲ್ಲಿ ಸಾಗುವಾಗ ಮೂಗಿಗೆ ಘಮ್ಮನೆ ಬೀರುವ ಮಾವಿನ ಸುವಾಸನೆ , ಮಾವಿನ ವ್ಯಾಪಾರಿಗಳು ವಾಹನಗಳಲ್ಲಿ ಸಾಗಿಸುತ್ತಿರುವ ವೇಳೆ ಕಣ್ಮನ ಸೆಳೆಯುವ ತರಾವರಿ ಮಾವು!
ಜನರು ವರ್ಷಕ್ಕೊಮ್ಮೆ ಸಿಗುವ ಮಾವಿನ ಹಣ್ಣಿನ ರುಚಿಗಾಗಿ ಕಾಯುತ್ತಾರೆ. ಘಮಘಮಿಸುವ ಮಾವಿನ ಹಣ್ಣುಗಳ ಸುವಾಸನೆ ಮೂಗಿಗೆ ಬಡಿದಿದ್ದೇ ತಡ ಜನರು ಮಾರುಕಟ್ಟೆಗೆ ಹೋಗಿ ಹಣ್ಣನ್ನು ಕೊಳ್ಳಲು ಮುಗಿಬೀಳುತ್ತಾರೆ.
ಆದರೆ ಈ ಬಾರಿ ಮಾವು ಪ್ರಿಯರಿಗೆ ಬಾರಿ ನಿರಾಸೆ ಉಂಟಾಗಿದೆ. ಕಾರಣ ಮಾವಿನ ಹಣ್ಣಿನ ದುಬಾರಿ ದರದಿಂದಾಗಿ ಹಣ್ಣು ಸಾಮಾನ್ಯ ಜನರ ಕೈಗೆಟಕುತ್ತಿಲ್ಲ. ಹಣ್ಣಿನ ಸೀಸನ್‌ನಲ್ಲಿ ಬೇರೆ ಬೇರೆ ತಳಿಗಳ ಮಾವಿನ ಹಣ್ಣುಗಳಿಗೆ ಒಂದು ಕೆ.ಜಿ. ಮಾವು 60 ರೂ. ನಿಂದ 120 ರೂ.ವರೆಗೆ ಇರುತ್ತದೆ. ಆದರೆ ಈಗ 100-300 ರೂ. ತಲುಪಿದೆ. ಹೀಗಾಗಿ ಮಾರುವವರು, ಕೊಳ್ಳುವವವರ ಸಂಖ್ಯೆಯೂ ಕಡಿಮೆ ಇದೆ.
ರಾಜ್ಯದಲ್ಲಿ ಬಿಸಿ ಮತ್ತು ಶುಷ್ಕ ವಾತಾವರಣದಿಂದ ರಾಜಧಾನಿಗೆ ಮಾವಿನ ಹಣ್ಣುಗಳ ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಹೆಚ್ಚಿನ ಹಣ್ಣು ಮಾರಾಟಗಾರರು ಏಪ್ರಿಲ್ನಲ್ಲಿ ಮಾವಿನ ಋತುವಿನ ಪ್ರಾರಂಭವಾಗಿದೆ ಮತ್ತು ಮೇ ವೇಳೆಗೆ ಪೂರೈಕೆ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ ಮಾವು ಮಾರಾಟಗಾರರು.
ಹವಾಮಾನ ವೈಪರೀತ್ಯ ದಿಂದ ಇಳುವರಿ ಕಡಿಮೆ
ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡುತ್ತಾ, ಬೀದರ್ ತೋಟಗಾರಿಕೆ ಇಲಾಖೆಯ ಫಾರ್ಮರ್ ಪ್ರೊಡ್ಯೂಸರ್ ಕಂಪೆನಿಯ ಅಧ್ಯಕ್ಷ ಚೇತನ್ ಡಾಕೆ, ಹವಾಮಾನ ಪೈಪರೀತ್ಯ ದಿಂದ ಈ ಬಾರಿ ಕೇವಲ 30% ಇಳುವರಿ ಬಂದಿದೆ. ಹವಾಮಾನದ ಕೊರತೆಯಿಂದಾಗಿ ಹೂವು ಉದುರಿ ಹೋಗಿದೆ. ನೀರಿನ ಕೊರತೆಯಿಂದಾಗಿ ಬೆಳೆ ಕಡಿಮೆಯಾಗಿದೆ ಎಂದು ಹೇಳಿದರು.
ಎರಡು ಬಾರಿ ಚಿಗುರು ಇಳುವರಿಗೆ ಹೊಡೆತ
ಈ ಬಾರಿ ಮಾವಿನ ಇಳುವರಿ ಬಹಳಷ್ಟು ಕಡಿಮೆ ಇದೆ. ಕೇವಲ 30% ಮಾತ್ರ ಇಳುವರಿ ಇದೆ. ಕರ್ನಾಟಕದಲ್ಲಿ ಒಟ್ಟು 1.49 ಲಕ್ಷ ಹೆಕ್ಟರ್ ಮಾವಿನ ಹಣ್ಣುಗಳನ್ನು ಬೆಳೆಸಲಾಗುತ್ತದೆ. 12 ರಿಂದ 15 ಲಕ್ಷ ಮೆಟ್ರಿಕ್ ಟನ್ ಮಾವಿನ ಹಣ್ಣಿನ ಇಳುವರಿಯನ್ನು ಕೊಡುತ್ತದೆ. ಆದರೆ ಈ ಬಾರಿ ಮಳೆಯ ಕೊರತೆ, ಹವಮಾನದ ಕೊರತೆಯಿಂದ ಕೇವಲ 5 ಲಕ್ಷ ಮೆಟ್ರಿಕ್ ಟನ್ ಸಿಕ್ಕರೆ ಹೆಚ್ಚು. ‘ಮಾವು ಮಳೆಯಾಶ್ರಿತ ಬೆಳೆ. ಈ ಬಾರಿ ಮಳೆ ಕೈಕೊಟ್ಟಿತು. ಹೀಗಾಗಿ, ವಾತಾವರಣದಲ್ಲಿ ಶುಷ್ಕತೆಯ ಪ್ರಮಾಣವೂ ಹೆಚ್ಚಾಯಿತು. ಭೂಮಿಯಲ್ಲಿ ತೇವಾಂಶವಿಲ್ಲದೆ, ಅತಿಯಾದ ಬಿಸಿಲಿನಿಂದಾಗಿ ಮಾವು ಎರಡು ಬಾರಿ ಚಿಗುರೊಡೆಯಿತು. ಹೂ ಬಿಟ್ಟ ನಂತರ ಚಳಿಯ ವಾತಾವರಣವಿದ್ದರೆ ಕಾಯಿಗಳು ಬರುತ್ತವೆ. ಆದರೆ, ಈ ಬಾರಿ ಚಳಿಯ ವಾತಾವರಣ ಅಷ್ಟಾಗಿ ಕಂಡು ಬರಲಿಲ್ಲ. ಬಿಸಿಯ ವಾತಾವರಣವಿದ್ದುದರಿಂದ ಹೂ ಬಿಟ್ಟಿದ್ದ ಮಾವು ನಂತರ ಚಿಗುರೊಡೆಯಲು ಆರಂಭಿಸಿತು. ಇದರಿಂದ ಹೂಗಳಿಗೆ ತಲುಪಬೇಕಾದ ಸಾರವೆಲ್ಲಾ ಚಿಗುರು ಎಲೆಗಳ ಪಾಲಾಗಿ ಹೂವು, ಕಾಯಿ ಉದುರುವುದು ಸಾಮಾನ್ಯ. ಹೀಗಾದಾಗ ಇಳುವರಿ ಕಡಿಮೆಯಾಗುತ್ತದೆ ’ ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಸಿ.ಜಿ.ನಾಗರಾಜ್ ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದ್ದಾರೆ.
ರುಚಿ, ಗುಣಮಟ್ಟ ಕಡಿಮೆ
ಈ ಬಾರಿ ಮಾರುಕಟ್ಟೆಗಳಲ್ಲಿ ಸಣ್ಣ ಗಾತ್ರದ ಮಾವಿನ ಹಣ್ಣುಗಳನ್ನು ಕಾಣಬಹುದು. ಆ ಹಣ್ಣುಗಳಲ್ಲಿ ಕೆಲವು ಹಣ್ಣುಗಳು ಅರ್ಧ ಕೊಳೆತವಾಗಿದೆ. ಈ ವರ್ಷ ಮಾವಿನ ಮಾರಾಟವು 2023 ರಿಂದ 5-7% ರಷ್ಟು ಕುಸಿದಿದೆ. ಕಡಿಮೆ ಇಳುವರಿ, ಕಳಪೆ ಗುಣಮಟ್ಟ ಹಾಗೂ ಹೆಚ್ಚಿನ ಬೆಲೆ ಇದಕ್ಕೆ ಕಾರಣ ಎಂದು ದೂರುತ್ತಾರೆ ಮಾವಿನ ಮಾರಾಟಗಾರರು. ಜತೆಗೆ ಈವರೆಗೆ ಬಂದಿರುವ ಮಾವು ಹಿಂದಿನ ವರ್ಷಗಳ ಗುಣಮಟ್ಟಕ್ಕೆ ಸರಿಸಾಟಿಯಾಗಿಲ್ಲ ಎನ್ನುತ್ತಾರೆ.
ರಾಸಾಯನಿಕ ಬಳಕೆ
"ನೀರಿನ ಕೊರತೆ ಮತ್ತು ವಿಪರೀತ ಶಾಖವು ಮಾವಿನ ಇಳುವರಿಯ ಮೇಲೆ ಪರಿಣಾಮ ಬೀರಿದೆ. ಅನೇಕ ರೈತರು ತಮ್ಮ ಮಾವನ್ನು ಕೃತಕವಾಗಿ ವೇಗವಾಗಿ ಹಣ್ಣಾಗಲು ರಾಸಾಯನಿಕಗಳನ್ನು ಬಳಸಬೇಕಾಯಿತು. ಇದರಿಂದ ಮಾವಿನ ಹಣ್ಣಿನಲ್ಲಿ ಸಿಹಿ ಕೊರತೆ ಉಂಟಾಗಿದೆ. ಅವುಗಳಲ್ಲಿ ತಿರುಳಿಗಿಂತ ಹೆಚ್ಚಿನ ಬೀಜಗಳಿವೆ ಎನ್ನುವುದು ಮಾವಿನ ಮಾರಾಟಗಾರ ಅಬ್ದುಲ್ ರೆಹಮಾನ್ ಅವರ ಅಭಿಪ್ರಾಯ.
ವಿಪರೀತ ಶಾಖದಿಂದ ದೂರ ಉಳಿಯುತ್ತಿರುವ ಮಾವುಪ್ರಿಯರು
ಇನ್ನು ಕೆಲವು ಮಾವಿನ ವ್ಯಾಪಾರಿಗಳ ಅಭಿಪ್ರಾಯವೆಂದರೆ ರಾಜ್ಯದಲ್ಲಿ ವಿಪರೀತ ಶಾಖದ ವಾತಾವರಣವಿದೆ. ಮಾವಿನ ಹಣ್ಣುಗಳು ಶಾಖವನ್ನು ಉಂಟು ಮಾಡುವ ಹಣ್ಣುಗಳು. ಈಗಾಗಲೇ ಶಾಖದ ಅಲೆಯನ್ನು ಅನುಭವಿಸುತ್ತಿರುವ ಜನರು ಹಣ್ಣಿನಿಂದ ದೂರ ಉಳಿಯುತ್ತಿದ್ದಾರೆ ಎನ್ನುವುದು ಇನ್ನು ಕೆಲ ಮಾವು ಮಾರಾಟಗಾರರ ಅಭಿಪ್ರಾಯ.
ಹವಾಮಾನದ ಏರುಪೇರು
ಮಾವು ಹೂಬಿಡುವ ಅವಧಿಯು ಸಾಮಾನ್ಯವಾಗಿ ಡಿಸೆಂಬರ್ನಿಂದ ಫೆಬ್ರವರಿ ವರೆಗೆ ಪ್ರಾರಂಭವಾಗುತ್ತದೆ. ಹೂವಿನ ಪ್ರಾರಂಭದ ಸಮಯವನ್ನು ಅವಲಂಬಿಸಿ ಹಣ್ಣಿನ ಬೆಳವಣಿಗೆಯು ಜನವರಿಯಿಂದ ಮೇ ವರೆಗೆ ಪ್ರಾರಂಭವಾಗುತ್ತದೆ. ತಂಪಾದ ತಾಪಮಾನಗಳು (ಹಗಲಿನ ಸಮಯದಲ್ಲಿ 15-20 ° C ಮತ್ತು ರಾತ್ರಿಯ ಸಮಯದಲ್ಲಿ 10-15 ° C) ಪ್ರಕಾಶಮಾನವಾದ ಸೂರ್ಯನ ಬೆಳಕು ಮಾವಿನ ಹೂವಿನ ಪ್ರಾರಂಭಕ್ಕೆ ಪ್ರಮುಖ ಅವಶ್ಯಕತೆಯಾಗಿದೆ. ಹೂಬಿಡುವ ಅವಧಿಯಲ್ಲಿ ಹೆಚ್ಚಿನ ಆರ್ದ್ರತೆ, ಹಿಮ ಅಥವಾ ಮಳೆಯು ಹೂವಿನ ರಚನೆಯ ಮೇಲೆ ಪರಿಣಾಮ ಬೀರುತ್ತದೆ. ಹೂಬಿಡುವ ಸಮಯದಲ್ಲಿ ಮೋಡ ಕವಿದ ವಾತಾವರಣವು ಮಾವಿನ ಹಾಪರ್ಗಳು ಮತ್ತು ರೋಗಗಳ ಹರಡುವಿಕೆಗೆ ಕಾರಣವಾಗುತ್ತದೆ. ಇದು ಮಾವಿನ ಬೆಳವಣಿಗೆ ಮತ್ತು ಹೂಬಿಡುವಿಕೆಯನ್ನು ಅಡ್ಡಿಪಡಿಸುತ್ತದೆ. ಹಾಗಾಗಿ ಈ ಬಾರಿ ಸರಿಯಾದ ಮಳೆ, ಚಳಿ ಇಲ್ಲದಿದ್ದರಿಂದ ಈ ಒಂದು ಕಾರಣವೂ ಮಾವಿನ ಇಳುವರಿ ಕುಂಟಿತಕ್ಕೆ ಕಾರಣವಾಗಿವೆ.
ಕೀಟಗಳ ಕಾಟ
ಮಾವಿನ ಹಣ್ಣುಗಳ ಸೀಸನ್ ಸಮಯದಲ್ಲಿ ಕೀಟಗಳ ಕಾಟ ವರ್ಷವೂ ಇದ್ದಿದ್ದೆ. ಹೂವು ಮತ್ತು ಹಣ್ಣುಗಳ ರಚನೆಯ ಸಮಯದಲ್ಲಿ, ಕೀಟಗಳು ಮತ್ತು ರೋಗಗಳ ಮುತ್ತಿಕೊಳ್ಳುತ್ತದೆ. ಇದರಿಂದ ಹೂವುಗಳು ಮತ್ತು ಅಕಾಲಿಕ ಹಣ್ಣುಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಮಾವಿನ ಹಾಪರ್ಗಳು, ಹೂ ಪಿತ್ತದ ಮಿಡ್ಜ್, ಮೀಲಿ ಬಗ್ ಮತ್ತು ಲೀಫ್ ವೆಬರ್ ಮಾವಿನ ಹೂವುಗಳನ್ನು ಬಾಧಿಸುವ ಪ್ರಮುಖ ಕೀಟಗಳಾಗಿವೆ. ಮಾವಿನ ಸೂಕ್ಷ್ಮ ಶಿಲೀಂಧ್ರ, ಮಾವಿನ ವಿರೂಪ ಮತ್ತು ಆಂಥ್ರಾಕ್ನೋಸ್ ಮಾವಿನ ಹೂವುಗಳ ಮೇಲೆ ಪರಿಣಾಮ ಬೀರುವ ರೋಗಗಳು ಹಣ್ಣಿನ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ. ಈ ಬಾರಿ ಮಾವು ಬೆಳೆಗೆ ಸಾಕಷ್ಟು ಕೀಟ ಬಾಧೆಯಿದ್ದರಿಂದ ಕೂಡ ಮಾವು ಇಳುವರಿ ಕಡಿಮೆಯಾಗಿದೆ ಎನ್ನುತ್ತಾರೆ ಸಿ.ಜಿ.ನಾಗರಾಜ್ ಅವರು.