ಕಬ್ಬು ಬೆಳೆಗಾರರಿಗೆ 50 ರೂ. ನೀಡಲು ಬಹುತೇಕ ಸಕ್ಕರೆ ಕಾರ್ಖಾನೆ ಮಾಲೀಕರು ಹಿಂದೇಟು
ಕೆಲವರು ವಿರೋಧ ಮಾಡಿಲ್ಲ, ಕೆಲವರು ವಿರೋಧ ಮಾಡಿದ್ದಾರೆ. ಆದರೆ, ಸರ್ಕಾರದ ನಿರ್ಧಾರವನ್ನು ಕೊಡಲೇಬೇಕು. ಇನ್ನೂ ಕಬ್ಬು ಅರೆಯುವ ಪ್ರಕ್ರಿಯೆ ನಡೆಯಬೇಕಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ
ರೈತರಿಂದ ಪಡೆಯುವ ಪ್ರತಿ ಟನ್ ಕಬ್ಬಿಗೆ 3200 ರೂ. ಜತೆಗೆ 50 ರೂ. ಹೆಚ್ಚುವರಿ ಹಣ ನೀಡುವುದಕ್ಕೆ ಬಹುತೇಕ ಸಕ್ಕರೆ ಕಾರ್ಖಾನೆ ಮಾಲೀಕರು ಹಿಂದೇಟು ಹಾಕುತ್ತಿರುವುದು ಹೊಸ ಸಂಕಷ್ಟ ತಂದೊಡ್ಡಿದೆ.
ಸ್ವತಃ ಸಕ್ಕರೆ ಕಾರ್ಖಾನೆ ಮಾಲೀಕರೂ ಆಗಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರೇ ಈ ವಿಷಯ ಬಹಿರಂಗಪಡಿಸಿದ್ದಾರೆ. ರೈತರಿಗೆ 50 ರೂ. ನೀಡುವಂತೆ ಸರ್ಕಾರವೇ ಸೂಚಿಸಿದೆ. ಇದಕ್ಕೆ ಕೆಲವರು ಒಪ್ಪಿದ್ದಾರೆ, ಇನ್ನು ಕೆಲವರು ಒಪ್ಪಿಕೊಂಡಿಲ್ಲ. ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿಯಾಗಿ 50 ರೂ. ನೀಡುವುದರಿಂದ ಕೆಲ ಕಾರ್ಖಾನೆಯವರು ನಷ್ಟವಾಗಲಿದೆ ಎಂದು ಅಲವತ್ತುಕೊಂಡಿದ್ದಾರೆ. ಇನ್ನು ಕೆಲವರು ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಸಕ್ಕರೆ ಕಾರ್ಖಾನೆ ಮಾಲೀಕರು ಪಾಲಿಸಲೇಬೇಕು. ಇನ್ನೂ ಕಬ್ಬು ಅರೆಯುವ ಪ್ರಕ್ರಿಯೆ ನಡೆಯಬೇಕಿದೆ. ಅದೆಲ್ಲಾ ಆದ ಮೇಲೆ ನೋಡೋಣ ಎಂದು ಸ್ಪಷ್ಟಪಡಿಸಿದ್ದಾರೆ.
ವಿದ್ಯುತ್ ಖರೀದಿ ದರದ ಕುರಿತು ಮಾತನಾಡಿದ ಅವರು, ಕಾರ್ಖಾನೆಗಳು ವಿದ್ಯುತ್ ಅನ್ನು 2-3 ರೂಪಾಯಿಗೆ ತೆಗೆದುಕೊಳ್ಳುತ್ತಾರೆ. ಮಹಾರಾಷ್ಟ್ರದಲ್ಲಿ ಪ್ರತಿ ಯೂನಿಟ್‌ಗೆ 6 ರೂ.ಕೊಡುತ್ತಾರೆ. ಇಲ್ಲೂ ಅದೇ ರೀತಿ ಕೊಡಿ ಎಂದು ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಏನು ಮಾಡುತ್ತಾರೆ ನೋಡೋಣ. ಮಹಾರಾಷ್ಟ್ರ, ಗುಜರಾತ್‌ನಲ್ಲಿ ದರ ನಿಗದಿಯಾಗಿದೆ. ರಾಜ್ಯದಲ್ಲಿ ನಿಗದಿಯಾಗಿಲ್ಲ. ಅದನ್ನು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
'ಯಾವ ಕ್ರಾಂತಿಯೂ ಇಲ್ಲ, ಏನೂ ಇಲ್ಲ' ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಕ್ರಾಂತಿ ಇಲ್ಲ ಎಂದು ಹೇಳಿದ್ದಾರಲ್ಲ. ರಾಮಲಿಂಗಾರೆಡ್ಡಿ ಹೇಳಿದ್ದಾರೆ, ಸುರೇಶ್ ಕೂಡ ಕ್ರಾಂತಿ ಇಲ್ಲ ಅಂತಿದ್ದಾರೆ. ಎಲ್ಲರೂ ಇಲ್ಲ ಅಂದಮೇಲೆ ಇನ್ನೇನಿದೆ...? ಯಾವ ಕ್ರಾಂತಿಯೂ ಇಲ್ಲ, ಏನೂ ಇಲ್ಲ. ನಾನು ಅದನ್ನೇ ಹೇಳುತ್ತಿದ್ದೇನೆ ಎಂದು ಸಚಿವ ಜಾರಕಿಹೊಳಿ ಹೇಳಿದ್ದಾರೆ.
ಕಾಂಗ್ರೆಸ್ ಸಾರಥ್ಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ನ ಸಾರಥ್ಯ ವಹಿಸಲು ಆಪ್ತರು ಸಿದ್ಧರಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಅದೆಲ್ಲ ಈಗ ಏನೂ ಆಗಲ್ಲ. ಹೈಕಮಾಂಡ್‌ನ ತೀರ್ಮಾನವೇ ಅಂತಿಮ. ಅವರು ಏನು ಮಾಡುತ್ತಾರೆ ನೋಡೋಣ ಎಂದು ಅವರು ತಿಳಿಸಿದ್ದಾರೆ.