Sugarcane crisis|ನಮ್ಮ ಪಕ್ಷದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರಿಲ್ಲ, ನಾವು ರೈತರ ಪರ ; ಹೆಚ್.ಡಿ. ಕುಮಾರಸ್ವಾಮಿ
ಬೆಳಗಾವಿಯ ಜಿಲ್ಲೆಯಲ್ಲಿ ಎಲ್ಲಾ ಪಕ್ಷಗಳ ನಾಯಕರು ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದಾರೆ. ಆದರೆ ಜೆಡಿಎಸ್‌ನ ಯಾವ ನಾಯಕ ಕೂಡ ಕಬ್ಬು ಕಾರ್ಖಾನೆ ಹೊಂದಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ
ತಮ್ಮ ಪಕ್ಷವು ಯಾವುದೇ ಸಕ್ಕರೆ ಲಾಬಿಯ ಭಾಗವಾಗಿಲ್ಲ ಮತ್ತು ಸಂಪೂರ್ಣವಾಗಿ ರೈತರ ಪರವಾಗಿದೆ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. "ಜೆಡಿಎಸ್‌ನ ಯಾವುದೇ ನಾಯಕರೂ ಸಕ್ಕರೆ ಕಾರ್ಖಾನೆಗಳನ್ನು ಹೊಂದಿಲ್ಲ, ಹೀಗಾಗಿ ನಮ್ಮದು ಲಾಬಿಗೆ ಮಣಿಯುವ ಪ್ರಶ್ನೆಯೇ ಇಲ್ಲ" ಎಂದು ಅವರು ಖಡಾಖಂಡಿತವಾಗಿ ಹೇಳಿದ್ದಾರೆ.
ಬೆಳಗಾವಿ ಭಾಗದಲ್ಲಿನ ಕಬ್ಬಿನ ದರ ನಿಗದಿ ಹೋರಾಟದ ಹಿಂದೆ ಸಕ್ಕರೆ ಲಾಬಿಯ ಪ್ರಭಾವವಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, "ಬೆಳಗಾವಿ ಭಾಗದಲ್ಲಿ ಎಲ್ಲಾ ಪಕ್ಷಗಳ ನಾಯಕರು ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಆದರೆ, ಜೆಡಿಎಸ್‌ನ ಯಾವುದೇ ನಾಯಕನೂ ಕಬ್ಬು ಕಾರ್ಖಾನೆಯ ಮಾಲೀಕರಲ್ಲ," ಎಂದು ತಿಳಿಸಿದರು.
"ನಮ್ಮ ಪಕ್ಷದ ಹಿರಿಯ ನಾಯಕ ಬಂಡೆಪ್ಪ ಕಾಶೆಂಪೂರ ಅವರ ಬಳಿ ಒಂದು ಕಾರ್ಖಾನೆ ಇತ್ತು. ಆದರೆ, ಕೆಲವೇ ದಿನಗಳ ಹಿಂದೆ ಅವರು ಅದನ್ನು ಮಾರಾಟ ಮಾಡಿದ್ದಾರೆ. ಹೀಗಾಗಿ, ಪ್ರಸ್ತುತ ನಮ್ಮ ಪಕ್ಷದಲ್ಲಿ ಯಾರೊಬ್ಬರ ಬಳಿಯೂ ಸಕ್ಕರೆ ಕಾರ್ಖಾನೆ ಇಲ್ಲ," ಎಂದು ಅವರು ಸ್ಪಷ್ಟಪಡಿಸಿದರು. ಈ ಮೂಲಕ, ತಮ್ಮ ಪಕ್ಷವು ಯಾವುದೇ ಕಾರ್ಖಾನೆ ಮಾಲೀಕರ ಹಿತಾಸಕ್ತಿಗಿಂತ ಹೆಚ್ಚಾಗಿ ರೈತರ ಹಿತಾಸಕ್ತಿಗೆ ಬದ್ಧವಾಗಿದೆ ಎಂಬ ಸಂದೇಶವನ್ನು ಅವರು ರವಾನಿಸಿದ್ದಾರೆ.
ಸಿಎಂ ಪತ್ರಕ್ಕೆ ಅಕ್ಷೇಪ
ರಾಜ್ಯದಲ್ಲಿನ ಕಬ್ಬು ಬೆಳೆಗಾರರ ಸಮಸ್ಯೆಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆದಿರುವುದಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. "ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಮತ್ತು ಸಮಸ್ಯೆಯನ್ನು ಬಗೆಹರಿಸಲಾಗದ ತಮ್ಮ ಅಸಮರ್ಥತೆಯನ್ನು ಮರೆಮಾಚಲು ಮುಖ್ಯಮಂತ್ರಿಗಳು ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ," ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯದಲ್ಲಿನ ಕಬ್ಬು ಬೆಳೆಗಾರರ ಸಮಸ್ಯೆಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆದಿರುವುದಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. "ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಮತ್ತು ಸಮಸ್ಯೆಯನ್ನು ಬಗೆಹರಿಸಲಾಗದ ತಮ್ಮ ಅಸಮರ್ಥತೆಯನ್ನು ಮರೆಮಾಚಲು ಮುಖ್ಯಮಂತ್ರಿಗಳು ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ," ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಕೇಂದ್ರದ ಮೇಲೆ ಗೂಬೆ ಕೂರಿಸುವ ಚಾಳಿ
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, "ರೈತರ ಕಷ್ಟಕ್ಕೆ ಸ್ಪಂದಿಸಬೇಕೆಂಬ ಇಚ್ಛಾಶಕ್ತಿ ಈ ಸರ್ಕಾರಕ್ಕೆ ಇಲ್ಲ. ಪ್ರತಿಯೊಂದು ವಿಷಯಕ್ಕೂ ಕೇಂದ್ರದ ಮೇಲೆ ಗೂಬೆ ಕೂರಿಸಿ ತಪ್ಪಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಮನಸ್ಸು ಮಾಡಿದ್ದರೆ ಇದು ಕೆಲವೇ ನಿಮಿಷಗಳಲ್ಲಿ ಬಗೆಹರಿಯುವ ಅತ್ಯಂತ ಚಿಕ್ಕ ವಿಚಾರ. ಆದರೆ, ಅವರು ಪ್ರತಿಯೊಂದರಲ್ಲೂ ರಾಜಕೀಯ ಮಾಡುತ್ತಿದ್ದಾರೆ. ದೇಶದ ಯಾವ ರಾಜ್ಯದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಪ್ರಧಾನಿ ಮಧ್ಯಪ್ರವೇಶಿಸಿದ ಉದಾಹರಣೆ ಇದೆ?," ಎಂದು ಖಾರವಾಗಿ ಪ್ರಶ್ನಿಸಿದರು.
ಸಕ್ಕರೆ ಲಾಬಿಗೆ ಮಣಿದಿದ್ದಾರೆ ಸಿಎಂ
"ಈ ಸಮಸ್ಯೆಯನ್ನು ಬಗೆಹರಿಸಲು ಜನಪ್ರತಿನಿಧಿಗಳನ್ನು ಕರೆದು ಮಾತನಾಡುವ ಅಗತ್ಯವೇನಿದೆ? ಮುಖ್ಯಮಂತ್ರಿಗಳೇ ನೇರವಾಗಿ ನಿರ್ಧಾರ ತೆಗೆದುಕೊಳ್ಳಬಹುದು. ಬೆಳೆಗಾರರ ಜೊತೆ ಚರ್ಚಿಸಿ ಬಿಕ್ಕಟ್ಟನ್ನು ಬಗೆಹರಿಸಬಹುದು. ಅದನ್ನು ಮಾಡದೆ, ಕೇವಲ ರಾಜಕೀಯ ಮಾಡುತ್ತಾ ಸರ್ಕಾರ ಕಾಲಹರಣ ಮಾಡುತ್ತಿದೆ. ಬೆಳಗಾವಿಯ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಕ್ಕರೆ ಲಾಬಿಯ ಒತ್ತಡಕ್ಕೆ ಮುಖ್ಯಮಂತ್ರಿಗಳು ಮಣಿದಿರುವ ಸಾಧ್ಯತೆಯಿದೆ," ಎಂದು ಕುಮಾರಸ್ವಾಮಿ ಶಂಕೆ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನಲ್ಲಿ ನವೆಂಬರ್‌ನಲ್ಲಿ ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ. ಸಿದ್ದರಾಮಯ್ಯನವರ ಗುಣ ನಮಗೆ ಅವರು ನಮ್ಮ ಪಕ್ಷದಲ್ಲಿದ್ದಾಗಲೇ ಗೊತ್ತಿದೆ," ಎಂದು ನಾಯಕತ್ವ ಬದಲಾವಣೆ ಚರ್ಚೆಯನ್ನು ಕುಮಾರಸ್ವಾಮಿ ಅವರು ತಳ್ಳಿಹಾಕಿದರು
"ಡಿಸಿಎಂ ಡಿ.ಕೆ. ಶಿವಕುಮಾರ್ ಯಾವಾಗಲೂ ದೇವರ ಜೊತೆ ಮಾತನಾಡುತ್ತಾರೆ. 2028ಕ್ಕೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎನ್ನುತ್ತಿದ್ದಾರೆ. ಆದರೆ, ಹತ್ತು ವರ್ಷ ನಾವೇ ಅಧಿಕಾರದಲ್ಲಿರುತ್ತೇವೆ ಎಂದವರ ಗತಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ," ಎಂದು ಲೇವಡಿ ಮಾಡಿದರು. "ಡಿಕೆಶಿಯವರ 'ಗ್ರೇಟರ್ ಬೆಂಗಳೂರು' ಘೋಷಣೆಗೆ ಪೈಪೋಟಿ ನೀಡಲು ಸಿಎಂ 'ಗ್ರೇಟರ್ ಮೈಸೂರು' ಎಂದು ಘೋಷಿಸಿದ್ದಾರೆ. ಯಾವ ಗ್ರೇಟರ್ ಕೂಡ ಆಗುವುದಿಲ್ಲ, ಇವೆಲ್ಲ ಕೇವಲ ಕಾಲಹರಣ," ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.