ಕಬ್ಬು ಬೆಳೆಗಾರರಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಬೆಲೆ ನಿಗದಿ ಮಾಡಿ ಆದೇಶ
ಶೇ. 9.5 ಕ್ಕಿಂತ ಕಡಿಮೆ ಇಳುವರಿಗೆ ಕೇಂದ್ರ ಸರ್ಕಾರದ ಎಫ್‌ಆರ್‌ಪಿ ದರದಂತೆ (3290.50 ರೂ.) ಜೊತೆಗೆ, ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 100 ರೂ. ನೀಡಲು ತೀರ್ಮಾನಿಸಲಾಗಿದೆ.
2025-26ರ ಕಬ್ಬು ನುರಿಸುವ ಹಂಗಾಮಿನಲ್ಲಿ ಹೆಚ್ಚು ದರ ನೀಡುವಂತೆ , ರಾಜ್ಯದ ಕಬ್ಬು ಬೆಳೆಗಾರರ ತೀವ್ರ ಪ್ರತಿಭಟನೆಗೆ ಮಣಿದಿರುವ ಕರ್ನಾಟಕ ಸರ್ಕಾರವು, ಹೆಚ್ಚುವರಿ ಬೆಲೆ ನಿಗದಿಪಡಿಸಿ ಶನಿವಾರ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP) ಜೊತೆಗೆ, ರಾಜ್ಯ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳಿಂದ ಹೆಚ್ಚುವರಿ ಮೊತ್ತವನ್ನು ರೈತರಿಗೆ ನೀಡಲು ತೀರ್ಮಾನಿಸಲಾಗಿದೆ.
ನವೆಂಬರ್ 7ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಕ್ಕರೆ ಕಾರ್ಖಾನೆಗಳ ಮಾಲೀಕರು ಮತ್ತು ರೈತ ಮುಖಂಡರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು. ಕೇಂದ್ರ ಸರ್ಕಾರ ನಿಗದಿಪಡಿಸಿದ ಎಫ್‌ಆರ್‌ಪಿ ದರವು ರೈತರಿಗೆ ಅನ್ಯಾಯವಾಗಿದೆ ಎಂಬ ಕೂಗಿನ ಹಿನ್ನೆಲೆಯಲ್ಲಿ ಹಾಗೂ ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದಿದ್ದರಿಂದ ಸಿಎಂ ಸಮ್ಮುಖದಲ್ಲಿ ಸಭೆ ನಡೆಸಿದ ಬಳಿಕ ಬೆಲೆ ನಿಗದಿ ಮಾಡಲಾಗಿದೆ.
ಹೊಸ ಬೆಲೆ ನಿಗದಿ ಹೇಗೆ?
ಸರ್ಕಾರದ ಆದೇಶದ ಪ್ರಕಾರ, ಸಕ್ಕರೆ ಇಳುವರಿ (Recovery) ಆಧಾರದ ಮೇಲೆ ಕಬ್ಬಿನ ದರವನ್ನು ನಿಗದಿಪಡಿಸಲಾಗಿದೆ. ಶೇ. 11.25 ಇಳುವರಿಗೆ. ಪ್ರತಿ ಟನ್‌ಗೆ ಒಟ್ಟು 3,300 ರೂ. ನೀಡಲಾಗುತ್ತದೆ. ಇದರಲ್ಲಿ ಕಾರ್ಖಾನೆಗಳು ನೀಡುವ 3,200 ರೂ. ಮತ್ತು ಸರ್ಕಾರದ ಪ್ರೋತ್ಸಾಹಧನ 100 ರೂ. (ತಲಾ 50 ರೂ. ಎರಡು ಕಂತುಗಳಲ್ಲಿ) ಸೇರಿದೆ.
ಶೇ. 10.25 ಇಳುವರಿಯಂತೆ ಪ್ರತಿ ಟನ್‌ಗೆ ಒಟ್ಟು 3,200 ರೂ. ನಿಗದಿಪಡಿಸಲಾಗಿದೆ. ಇದರಲ್ಲಿ ಕಾರ್ಖಾನೆಗಳು 3,100 ರೂ. ಮತ್ತು ಸರ್ಕಾರ 100 ರೂ. ನೀಡಲಿದೆ.
ಶೇ. 9.5 ಕ್ಕಿಂತ ಕಡಿಮೆ ಇಳುವರಿಗೆ ಕೇಂದ್ರ ಸರ್ಕಾರದ ಎಫ್‌ಆರ್‌ಪಿ ದರದಂತೆ (3290.50 ರೂ.) ಜೊತೆಗೆ, ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 100 ರೂ. ನೀಡಲು ತೀರ್ಮಾನಿಸಲಾಗಿದೆ.
ಕಾರ್ಖಾನೆಗಳು ಮೊದಲ ಕಂತಿನ ಹಣವನ್ನು ಸಕ್ಕರೆ ನಿಯಂತ್ರಣ ಕಾಯ್ದೆಯ ಪ್ರಕಾರ, ಕಬ್ಬು ಪೂರೈಕೆಯಾದ 14 ದಿನಗಳೊಳಗೆ ರೈತರಿಗೆ ಪಾವತಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ರೈತರ ಬೇಡಿಕೆ ಮತ್ತು ಸರ್ಕಾರದ ಸ್ಪಂದನೆ
ಪ್ರತಿ ಟನ್‌ಗೆ 3,500 ರೂ. ಬೆಂಬಲ ಬೆಲೆ ನೀಡಬೇಕೆಂದು ರೈತ ಸಂಘಟನೆಗಳು ಒತ್ತಾಯಿಸಿದ್ದವು. ಉತ್ಪಾದನಾ ವೆಚ್ಚವನ್ನು ಪರಿಗಣಿಸದೆ, ಕೇವಲ ಇಳುವರಿ ಆಧಾರದ ಮೇಲೆ ಬೆಲೆ ನಿಗದಿಪಡಿಸುವುದು ಅವೈಜ್ಞಾನಿಕ ಮತ್ತು ಇಳುವರಿ ವರದಿಯಲ್ಲಿ ಪಾರದರ್ಶಕತೆ ಇಲ್ಲ ಎಂದು ರೈತರು ಆರೋಪಿಸಿದ್ದರು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಸರ್ಕಾರವು ಮಧ್ಯಪ್ರವೇಶಿಸಿ ರೈತರಿಗೆ ಆರ್ಥಿಕ ನೆರವು ನೀಡಲು ಮುಂದಾಗಿದೆ.