ವೋಟ್ ಚೋರಿ ವಿರುದ್ಧ 1,12,14,000 ಕೋಟಿ ಸಹಿ ಸಂಗ್ರಹ; ದೆಹಲಿಯಲ್ಲಿ ಬೃಹತ್ ಪ್ರತಿಭಟನೆಗೆ ಸಿದ್ಧತೆ
ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಬೂತ್ ಮಟ್ಟದಲ್ಲಿ ಸಹಿ ಸಂಗ್ರಹ ಮಾಡಲಾಗಿದೆ. ವಿಮಾನದಲ್ಲಿ ಕೇವಲ 20 ಕೆ.ಜಿ. ಕಳುಹಿಸಲು ಮಾತ್ರ ಅವಕಾಶವಿದೆ. ಹಾಗಾಗಿ ತಮಿಳುನಾಡಿನಿಂದ ಟ್ರಕ್ ಮೂಲಕ ಸಹಿ ದಾಖಲೆಗಳನ್ನು ಕಳುಹಿಸಲಾಗುತ್ತಿದೆ.
ದೇಶದಲ್ಲಿ ಮತಗಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿವಿಗಾಗಿ ರಾಜ್ಯ ಕಾಂಗ್ರೆಸ್ ವತಿಯಿಂದ ಸಹಿ ಸಂಗ್ರಹ ಅಭಿಯಾನ ಕೈಗೊಳ್ಳಲಾಗಿದೆ. ಅಭಿಯಾನದಲ್ಲಿ ಒಂದು ಕೋಟಿ ಹನ್ನೆರಡು ಲಕ್ಷದ ನಲವತ್ತೊಂದು ಸಾವಿರ ಸಹಿಗಳನ್ನು ಸಂಗ್ರಹಿಸಲಾಗಿದೆ. ನ.10 ರಂದು ಸಹಿಗಳನ್ನು ರಾಷ್ಟ್ರಪತಿಗಳು, ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೂ ಕಳುಹಿಸಿಕೊಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಜಂಟಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಬೂತ್ ಮಟ್ಟದಲ್ಲಿ ಸಹಿ ಸಂಗ್ರಹ ಮಾಡಲಾಗಿದೆ. ವಿಮಾನದಲ್ಲಿ ಕೇವಲ 20 ಕೆ.ಜಿ. ಕಳುಹಿಸಲು ಮಾತ್ರ ಅವಕಾಶವಿದೆ. ಹಾಗಾಗಿ ತಮಿಳುನಾಡಿನಿಂದ ಟ್ರಕ್ ಮೂಲಕ ಸಹಿ ದಾಖಲೆಗಳನ್ನು ಕಳುಹಿಸಲಾಗುತ್ತಿದೆ ಎಂದು ಹೇಳಿದರು.
ಚುನಾವಣಾ ವ್ಯವಸ್ಥೆ ದುರ್ಬಳಕೆ
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮತದಾರರ ಪಟ್ಟಿಯಲ್ಲಿ ಅಕ್ರಮ, ಮತಗಳ್ಳತನ ಹಾಗೂ ಚುನಾವಣಾ ವ್ಯವಸ್ಥೆ ದುರ್ಬಳಕೆ ಕುರಿತಂತೆ ಗಂಭೀರ ಆರೋಪ ಮಾಡಿದರು.
ಬಿಜೆಪಿಯವರು ಸುಳ್ಳಿನ ಸರದಾರರು, ಸುಳ್ಳೇ ಅವರ ಮನೆ ದೇವರು. ಮತಗಳ್ಳತನ ಮಾಡುವುದರಲ್ಲಿ ನಿಸ್ಸೀಮರೆಂಬುದು ಸಾಬೀತಾಗಿದೆ. ಮತಗಳ್ಳತನದ ಮೂಲಕ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ದೂರಿದರು.
ಕರ್ನಾಟಕ, ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಮತಗಳ್ಳತನ ನಡೆದಿರುವ ಬಗ್ಗೆ ರಾಹುಲ್ ಗಾಂಧಿ ಅವರು ಸಾಕ್ಷಿಗಳ ಸಮೇತ ಬಯಲು ಮಾಡಿದ್ದಾರೆ. ದೆಹಲಿಯಲ್ಲಿ ಮತ ಹಾಕಿದವರು ಬಿಹಾರ ಚುನಾವಣೆಯಲ್ಲೂ ಮತ ಚಲಾಯಿಸಿದ್ದಾರೆ. ಒಬ್ಬರಿಗೆ ಒಂದು ಮತದ ಹಕ್ಕು ಇದೆ, ಆದರೆ, ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಎರಡು ಕಡೆ ಮತ ಹಾಕಿದ್ದಾರೆ. ಇದು ಸಂವಿಧಾನ ವಿರೋಧಿ, ಸಂವಿಧಾನ ಬಾಹಿರ ಕೆಲಸ ಎಂದರು.
ತನಿಖೆ ಮಾಡದ ಚುನಾವಣಾ ಆಯೋಗ
ಬೆಂಗಳೂರು ಸೆಂಟ್ರಲ್ ಕ್ಷೇತ್ರ ವ್ಯಾಪ್ತಿಯ ಮಹದೇವಪುರ ಕ್ಷೇತ್ರದಲ್ಲಿ ನಡೆದ ಮತಗಳ್ಳತನ ಪ್ರಕರಣವನ್ನು ರಾಹುಲ್ ಗಾಂಧಿ ಅವರು ಬಹಿರಂಗಪಡಿಸಿದರು. ಆದರೆ, ಈವರೆಗೂ ಚುನಾವಣಾ ಆಯೋಗ ತನಿಖೆ ಮಾಡಲಿಲ್ಲ, ಉತ್ತರ ಕೊಡಲಿಲ್ಲ ಎಂದು ಸಿಎಂ ಸಿದ್ಧರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಪ್ರಭಾವಕ್ಕೆ ಒಳಪಟ್ಟಿದೆ. ಮೋದಿ ಪ್ರಧಾನಿಯಾದ ನಂತರ ಸ್ವಾಯತ್ತ ಸಂಸ್ಥೆಗಳ ಸ್ವಾತಂತ್ರ್ಯ ಹರಣ ಮಾಡಿದ್ದಾರೆ. ಸಿಬಿಐ, ಐಟಿ ಬಳಿಕ ಚುನಾವಣಾ ಆಯೋಗವೂ ಕೇಂದ್ರ ಸರ್ಕಾರದ ಆಣತಿಯಂತೆ ನಡೆಯುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಎಚ್ಚರಿಸಿದರು.
ಸ್ವತಂತ್ರ ಚುನಾವಣೆ ಅಗತ್ಯ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನವೇ ಅದರ ಬುನಾದಿ. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಚುನಾವಣಾ ಆಯೋಗವನ್ನು ಸ್ವತಂತ್ರ ಸಂಸ್ಥೆ ಎಂದು ಗುರುತಿಸಿದ್ದಾರೆ. ಸರ್ಕಾರವು ಚುನಾವಣಾ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶ ಮಾಡಬಾರದು. ಫ್ರೀ ಅಂಡ್ ಫೇರ್ ಎಲೆಕ್ಷನ್ ಎನ್ನುವುದು ಪ್ರಜಾಪ್ರಭುತ್ವ ಅಸ್ತಿತ್ವದ ಮೂಲ ಎಂದು ಸಿಎಂ ಹೇಳಿದರು.
ಚುನಾವಣಾ ಆಯೋಗದ ವಿರುದ್ಧ ಡಿಕೆಶಿ ಕಿಡಿ
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ.
ರಾಹುಲ್ ಗಾಂಧಿ ಅವರು ಮತಗಳ್ಳತನದ ಬಗ್ಗೆ ದಾಖಲೆ ಬಹಿರಂಗಪಡಿಸಿ ರಾಷ್ಟ್ರದ ಗಮನ ಸೆಳೆದಿದ್ದಾರೆ. ಬೆಂಗಳೂರು ಸೆಂಟ್ರಲ್ ಮತ್ತು ಗಾಂಧಿನಗರ ಕ್ಷೇತ್ರಗಳಲ್ಲಿಯೂ ಇದೇ ರೀತಿಯ ಅಕ್ರಮ ನಡೆದಿದೆ. ಗಾಂಧಿನಗರದಲ್ಲಿ 2.40 ಲಕ್ಷ ಮತಗಳು ದಾಖಲಾಗಿದ್ದವು, ಅದರಲ್ಲಿ ಕಾಂಗ್ರೆಸ್ ಪರ ಮತ ಹಾಕುವವರನ್ನು ಗುರುತಿಸಿ ಮತ ದೋಚುವ ದೊಡ್ಡ ಪ್ರಯತ್ನ ನಡೆದಿದೆ ಎಂದು ಹೇಳಿದರು.
ಮಹಿಳೆಯೊಬ್ಬರ ಸಹೋದರನ ಮತವನ್ನೇ ಡಿಲೀಟ್ ಮಾಡಿದ ಉದಾಹರಣೆ ನೀಡಿದ ಅವರು, ಜನರು ದೂರು ಕೊಟ್ಟರೆ ತನಿಖೆ ಪ್ರಾರಂಭವಾಗುತ್ತದೆ. ಸರ್ಕಾರದ ಅಧಿಕಾರಿಗಳು ತಮ್ಮ ಹಕ್ಕು ಹಾಗೂ ಜವಾಬ್ದಾರಿ ನಿರ್ವಹಿಸಬೇಕು. ಚಿಲುಮೆ ಸಂಸ್ಥೆಯಲ್ಲಿ ನಡೆದ ಅಕ್ರಮದಲ್ಲಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದರು.
ಅಳಂದದಲ್ಲಿ ಆರು ಸಾವಿರ ಮತಗಳನ್ನು ಡಿಲೀಟ್ ಮಾಡುವ ಪ್ರಯತ್ನ ನಡೆದಿದ್ದು, ಈಗ ಎಸ್ಐಟಿ ತನಿಖೆ ನಡೆಸುತ್ತಿದೆ. ಮತದಾರರ ಹೆಸರು ಅಳಿಸಲು ಹೊರ ರಾಜ್ಯದವರನ್ನು ಹೈರ್ ಮಾಡಲಾಗಿತ್ತು. ಒಟ್ಟು 1. 3 ಲಕ್ಷ ಮತಗಳ ನಕಲು ಮಾಡಲಾಗಿದೆ. ಫಾರಂ-7 ಮತ್ತು ಗರುಡಾ ತಂತ್ರಾಂಶ ದುರ್ಬಳಕೆಯಾಗಿದೆ. ಇದು ಚುನಾವಣಾ ಆಯೋಗದ ಗಂಭೀರ ಲೋಪ ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿದರು.
ಸಹಿ ಸಂಗ್ರಹ ಅಭಿಯಾನ
ಮತಗಳ್ಳತನದ ಕುರಿತು ದೇಶವ್ಯಾಪಿ ಅಭಿಯಾನ ಆರಂಭಿಸಲಾಗಿದೆ. ಕರ್ನಾಟಕದಿಂದ ಈಗಾಗಲೇ ಬೂತ್‌ವಾರು ಒಟ್ಟು ಒಂದು ಕೋಟಿ ಹನ್ನೆರಡು ಲಕ್ಷದ ನಲವತ್ತೊಂದು ಸಾವಿರ ಸಹಿಗಳೊಂದಿಗೆ ಅವರ ಮೊಬೈಲ್ ಸಂಖ್ಯೆಯನ್ನು ಸಂಗ್ರಹಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ನಾನು ಕೂಡ ಅಭಿಯಾನದಲ್ಲಿ ಸಹಿ ಹಾಕಿದ್ದೇವೆ. ನ.10 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಸಭೆ ನಡೆಯಲಿದೆ. ಅಷ್ಟರೊಳಗೆ ಸಹಿಗಳನ್ನು ರಾಷ್ಟ್ರಪತಿ, ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ತಲುಪಿಸಲಾಗುವುದು ಎಂದು ಹೇಳಿದರು.
ನಾನು ಮತ್ತು ಸಿಎಂ ಇಬ್ಬರೂ ದೆಹಲಿಗೆ ತೆರಳಿ ಸಹಿಗಳನ್ನು ಎಐಸಿಸಿ ಕಚೇರಿಗೂ ಹಸ್ತಾಂತರಿಸುತ್ತೇವೆ. ಮತಗಳ್ಳತನದ ಕುರಿತು ದೇಶವ್ಯಾಪಿ ಜಾಗೃತಿ ಮೂಡಿಸಲು ಯೋಜನೆ ನಮ್ಮದು. ಜನರಲ್ಲಿ ಇವಿಎಂ ಬಗ್ಗೆ ನಂಬಿಕೆ ಕುಸಿದಿರುವುದರಿಂದ ಮುಂದಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಯಲ್ಲಿ ಬ್ಯಾಲೆಟ್ ಮೂಲಕ ನಡೆಸಬೇಕು ಎಂದು ಅಭಿಪ್ರಾಯಪಟ್ಟರು.