Dengue Outbreak | ರಾಜ್ಯದಲ್ಲಿ ಡೆಂಗ್ಯೂ ಉಲ್ಬಣ: ಮುಂದುವರಿದ ಸಾವಿನ ಸರಣಿ, ಹಾಸನ ಬಾಲಕಿ ಬಲಿ
ಮಹಾಮಾರಿ ಡೆಂಗ್ಯೂ ಜ್ವರಕ್ಕೆ 13 ವರ್ಷದ ಬಾಲಕಿಯೊರ್ವಳು ಬಲಿಯಾದ ಘಟನೆ ಹಾಸನ ಜಿಲ್ಲೆಯ ಬೊಮ್ಮನಾಯಕಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹಾಸನ: ಮಹಾಮಾರಿ ಡೆಂಗ್ಯೂ ಜ್ವರಕ್ಕೆ 13 ವರ್ಷದ ಬಾಲಕಿಯೊರ್ವಳು ಬಲಿಯಾದ ಘಟನೆ ಹಾಸನ ಜಿಲ್ಲೆಯ ಬೊಮ್ಮನಾಯಕಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಕ್ಷತಾ (13) ಮೃತ ಬಾಲಕಿ. ಅಕ್ಷತಾ ಮೂಲತಃ ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆ ಗ್ರಾಮದವರು. ಕೂಲಿ ಕಾರ್ಮಿಕರ ಕುಟುಂಬಕ್ಕೆ ಸೇರಿದ ಅಕ್ಷತಾ ಅಪ್ಪಣ್ಣ ಶೆಟ್ಟಿ ಹಾಗೂ ಪದ್ಮಾ ದಂಪತಿ ಪುತ್ರಿಯಾಗಿದ್ದು, ಹಾಸನದ ಖಾಸಗಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದರು.
ಕಳೆದ ಬುಧವಾರ ಜ್ವರಕ್ಕೆ ತುತ್ತಾಗಿದ್ದರು. ನಂತರ ಬಾಲಕಿಗೆ ಬೊಮ್ಮನಾಯಕಹಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿತ್ತು. ಆದಾಗ್ಯೂ ಬಾಲಕಿ ಗುಣಮುಖಳಾಗದೇ ಇದ್ದ ಕಾರಣ ಪೋಷಕರು ಆಕೆಯನ್ನು ಹಾಸನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೂ ಅಕ್ಷತಾ ಆರೋಗ್ಯದಲ್ಲಿ ಚೇತರಿಕೆ ಕಾಣದೇ ಮತ್ತೊಂದು ಆಸ್ಪತ್ರೆಗೆ ದಾಖಲಿಸಿದ್ದರು.
ಬಾಲಕಿ ಸ್ಥಿತಿ ಗಂಭೀರವಾಗುತ್ತಿದ್ದಂತೆ ಜಿಲ್ಲಾಸ್ಪತ್ರೆ ಕರೆದುಕೊಂಡು ಹೋಗುವಂತೆ ಖಾಸಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದರು. ನಂತರ ಪೋಷಕರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಸಾವನ್ನಪ್ಪಿದ್ದಾಳೆ.
ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದ್ದು, ಕಳೆದೊಂದು ತಿಂಗಳಲ್ಲಿ 2,300ಕ್ಕೂ ಅಧಿಕ ಮಂದಿಯಲ್ಲಿ ಡೆಂಗ್ಯೂ ದೃಢವಾಗಿದೆ. ಜನವರಿ 1 ರಿಂದ ಜುಲೈ 1 ರವರೆಗೆ 6,187 ಪ್ರಕರಣ ವರದಿಯಾಗಿವೆ. ಹಾಸನದಲ್ಲಿ 2, ಧಾರವಾಡ, ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ತಲಾ 1 ಸೇರಿದಂತೆ ಒಟ್ಟು 5 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.