ಭಾರತದೊಂದಿಗಿನ ಸೌಹಾರ್ದ ಸಂಬಂಧ: ಚೀನಾ ಪುನರುಚ್ಛಾರ
ಪೂರ್ವ ಲಡಾಖ್ ಬಿಕ್ಕಟ್ಟಿನ ನಡುವೆಯೂ 20 ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಗಳು ಗಡಿಯಲ್ಲಿನ ಉದ್ವಿಗ್ನತೆ ಕಡಿಮೆ ಮಾಡಿದೆ.;
ಬೀಜಿಂಗ್: ನಮ್ಮ ಸೇನೆಯು ಭಾರತೀಯ ಸೇನೆಯೊಂದಿಗಿನ ತನ್ನ ಸಂಬಂಧವನ್ನು ಗೌರವಿಸುತ್ತದೆ ಎಂದು ಚೀನಾದ ರಕ್ಷಣಾ ಸಚಿವಾಲಯ ಹೇಳಿದೆ.
ಪೂರ್ವ ಲಡಾಖ್ ಬಿಕ್ಕಟ್ಟಿನ ನಡುವೆಯೂ 20 ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಗಳು ಗಡಿಯಲ್ಲಿನ ಉದ್ವಿಗ್ನತೆ ಕಡಿಮೆ ಮಾಡಲು ನೆರವಾಗಿವೆ ಎಂದು ಅದು ಉಲ್ಲೇಖಿಸಿದೆ.
ಪೂರ್ವ ಲಡಾಖ್‌ನ ಕೆಲವು ಪ್ರದೇಶಗಳಲ್ಲಿ ಭಾರತ ಮತ್ತು ಚೀನಾದ ಸೈನಿಕರು ಮೂರು ವರ್ಷಗಳಿಂದ ಸಂಘರ್ಷದಲ್ಲಿ ತೊಡಗಿದ್ದಾರೆ. ಆದಾಗ್ಯೂ, ರಾಜತಾಂತ್ರಿಕತೆ ಮತ್ತು ಮಿಲಿಟರಿಯನ್ನು ಒಳಗೊಂಡಂತೆ ಅನೇಕ ಮಾತುಕತೆಗಳ ನಡೆಸಿದ ಬಳಿಕ ಅವರು ಇತ್ತೀಚೆಗೆ ವಿವಿಧ ಸ್ಥಳಗಳಿಂದ ಹಿಂದೆ ಸರಿದಿದ್ದಾರೆ. ಗಡಿಯಲ್ಲಿ ಶಾಂತಿ ನೆಲೆಸದಿದ್ದರೆ ಚೀನಾ ಜತೆಗಿನ ಬಾಂಧವ್ಯ ಸಹಜವಾಗಿರಲು ಸಾಧ್ಯವಿಲ್ಲ ಎಂದು ಭಾರತ ಪ್ರತಿಪಾದಿಸುತ್ತಿದೆ.
ಪೂರ್ವ ಲಡಾಖ್‌ನಲ್ಲಿ ದೀರ್ಘಕಾಲದ ಬಿಕ್ಕಟ್ಟಿನ ಕುರಿತು ಪ್ರಶ್ನೆಗೆ ಉತ್ತರಿದ ಚೀನಾದ ರಾಷ್ಟ್ರೀಯ ರಕ್ಷಣಾ ಸಚಿವಾಲಯದ ವಕ್ತಾರ ಹಿರಿಯ ಕರ್ನಲ್ ವು ಕಿಯಾನ್ ಅವರು, ಭಾರತ-ಚೀನಾ ಗಡಿಯಲ್ಲಿ ಪ್ರಸ್ತುತ ಪರಿಸ್ಥಿತಿ ಸ್ಥಿರವಾಗಿದೆ ಎಂದರು. ರಾಜ್ಯ ನಾಯಕರ ಮಾರ್ಗದರ್ಶನದಲ್ಲಿ, ಎರಡೂ ಕಡೆಯವರು ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ಪರಿಣಾಮಕಾರಿ ಮಾತುಕತೆ ನಡೆಸಿದ್ದಾರೆ. ಇದೀಗ ಉಳಿದ ಸಮಸ್ಯೆಗಳನ್ನು ಪರಿಹರಿಸಲು ಅನುಕೂಲಕರವಾಗಿದೆ ಎಂದು ಅವರು ಹೇಳಿದರು.
ಕಾರ್ಪ್ಸ್ ಕಮಾಂಡರ್-ಮಟ್ಟದ 20 ಸುತ್ತಿನ ಮಾತುಕತೆಗಳ ನಂತರ ಬಿಕ್ಕಟ್ಟು ಪರಿಹರಿಸುವುದು ಸಾಧ್ಯವಾಗಿದೆ. ಈ ಮಾತುಕತೆಯು ಗಾಲ್ವಾನ್ ಕಣಿವೆ, ಪಾಂಗಾಂಗ್ ಸರೋವರ ಮತ್ತು ಹಾಟ್ ಸ್ಪ್ರಿಂಗ್ಸ್ ಸೇರಿದಂತೆ ನಾಲ್ಕು ಪ್ರದೇಶಗಳಲ್ಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡಿದೆ ಎಂದು ಹೇಳಿದರು.
“ಡೆಪ್ಸಾಂಗ್ ಮತ್ತು ಡೆಮ್ಚೋಕ್ ಪ್ರದೇಶಗಳಿಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಸಲು ಭಾರತ ನಿರ್ಧರಿಸಿದೆ. ಚೀನಾ ಭಾರತದೊಂದಿಗೆ ತನ್ನ ಮಿಲಿಟರಿ ಸಂಬಂಧಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಭಿನ್ನಾಭಿಪ್ರಾಯಗಳನ್ನು ನಿಭಾಯಿಸಲು ಮತ್ತು ಗಡಿಯಲ್ಲಿ ಶಾಂತಿ ಕಾಪಾಡಲು ನಮ್ಮೊಂದಿಗೆ ಭಾರತ ಸಹಕರಿಸುತ್ತದೆ ಎಂದು ನಾವು ಭಾವಿಸುತ್ತೇವೆ" ಎಂದು ಹಿರಿಯ ಕರ್ನಲ್ ವು ಹೇಳಿದರು.
ʼʼಕಾರ್ಪ್ಸ್ ಕಮಾಂಡರ್ ಮಟ್ಟದ ಕೊನೆಯ ಸುತ್ತಿನ ಮಾತುಕತೆಯು ನವೆಂಬರ್ 9-10 ರಂದು ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ)ಯ ಭಾರತೀಯ ಭಾಗದಲ್ಲಿ ಚುಶುಲ್-ಮೊಲ್ಡೊ ಗಡಿ ಸಭೆ ನಡೆಸಲಾಯಿತು. ಆದರೆ ಮುಂದಿನ ಸುತ್ತಿನ ಮಾತುಕತೆಗೆ ಅವರು ಬದ್ಧರಿರಲಿಲ್ಲ. ಮುಂಬರುವ ಕೋರ್ ಕಮಾಂಡರ್‌ಗಳ ಸಭೆಯ ವಿವರಗಳನ್ನು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇವೆʼʼ ಎಂದು ಚೀನಾದ ರಾಷ್ಟ್ರೀಯ ರಕ್ಷಣಾ ಸಚಿವಾಲಯದ ವಕ್ತಾರ ಹಿರಿಯ ಕರ್ನಲ್ ವು ಕಿಯಾನ್ ಹೇಳಿದರು.