Bangalore Stampede | ವಿಜಯೋತ್ಸವ ದುರಂತ: ಸಂಪುಟದಲ್ಲಿ ಬಿಸಿಯೇರಿದ ʼವೈಫಲ್ಯದʼ ಚರ್ಚೆ; ಆರ್ಸಿಬಿ ವಿರುದ್ಧ ಎಫ್ಐಆರ್
ಕಾಲ್ತುಳಿತ ದುರಂತ: ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡ ಹೈಕೋರ್ಟ್, ಮಧ್ಯಾಹ್ನ ವಿಚಾರಣೆ
ಆರ್ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಕ್ರಿಕೆಟ್ ಅಭಿಮಾನಿಗಳು ಮೃತಪಟ್ಟ ಘಟನೆಗೆ ಸಂಬಧಿಸಿದಂತೆ ಕರ್ನಾಟಕ ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಜಮಾಯಿಸಿದ್ದ ಲಕ್ಷಾಂತರ ಕ್ರೀಡಾಭಿಮಾನಿಗಳ ನಡುವೆ ಕಾಲ್ತುಳಿತ ಸಂಭವಿಸಿ ಹಲವರ ಜೀವಹಾನಿಯಾಗಿದೆ. ಈ ಘಟನೆ ಕುರಿತು ಕೂಡಲೇ ವರದಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮಧ್ಯಾಹ್ನ 2.30 ಕ್ಕೆ ನಿಗದಿಪಡಿಸಿದೆ.
ಕಾಲ್ತುಳಿತ ದುರಂತ; ಹೃದಯ ಒಡೆದಿದೆ ಎಂದ ಕೊಹ್ಲಿ
ಬುಧವಾರ(ಜೂ.4) ಮಧ್ಯಾಹ್ನ ತಂಡದ ಆಗಮನದ ನಿರೀಕ್ಷೆಯಲ್ಲಿ ಬೆಂಗಳೂರಿನಾದ್ಯಂತ ಸಾರ್ವಜನಿಕರು ಎಲ್ಲೆಡೆ ಜಮಾಯಿಸಿದ್ದರು. ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ದುರದೃಷ್ಟಕರ ಘಟನೆಯಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಪ್ರತಿಯೊಬ್ಬರ ಸುರಕ್ಷತೆ ಮತ್ತು ಯೋಗಕ್ಷೇಮ ನಮಗೆ ಅತ್ಯಂತ ಮುಖ್ಯವಾಗಿದೆ. ದುರಂತದಲ್ಲಿ ಮೃತಪಟ್ಟವರಿಗೆ ಆರ್ಸಿಬಿ ಶೋಕ ವ್ಯಕ್ತಪಡಿಸುತ್ತದೆ ಮತ್ತು ಸಂತ್ರಸ್ತ ಕುಟುಂಬಗಳಿಗೆ ನಮ್ಮ ಹೃತ್ಪೂರ್ವಕ ಸಂತಾಪವನ್ನು ಸೂಚಿಸುತ್ತದೆ ಎಂದು ಆರ್ಸಿಬಿ ಆಡಳಿತ ಮಂಡಳಿ ತಿಳಿಸಿದೆ.
ಪರಿಸ್ಥಿತಿಯ ಬಗ್ಗೆ ತಿಳಿದ ತಕ್ಷಣ, ನಾವು ನಮ್ಮ ಕಾರ್ಯಕ್ರಮವನ್ನು ಕೂಡಲೇ ಮಾರ್ಪಡಿಸಿ, ಅಧಿಕಾರಿಗಳ ಮಾರ್ಗದರ್ಶನ ಮತ್ತು ಸಲಹೆಯಂತೆ ಮಾಡಿದ್ದೇವೆ. ನಮ್ಮ ಎಲ್ಲಾ ಅಭಿಮಾನಿಗಳು ಸುರಕ್ಷಿತವಾಗಿಬೇಕೆಂದು ನಾವು ಬಯಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ದುರಂತದ ಬಗ್ಗೆ ವಿರಾಟ್ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದು, ಘಟನೆಯಿಂದ " ಮಾತನಾಡಲು ಸಾಧ್ಯವಾಗುತ್ತಿಲ್ಲ, ಹೃದಯ ಒಡೆದಿದೆ" ಎಂದಿದ್ದಾರೆ.
ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಭೇಟಿ
ಬುಧವಾರ(ಜೂ.4) ದಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತದ ಸ್ಥಳಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈ ವೇಳೆ ಗೃಹ ಸಚಿವರು ಸಭೆ ನಡೆಸಿ ಮಾಹಿತಿ ಕಲೆಹಾಕಲಿದ್ದಾರೆ. ಎಲ್ಲಾ ಗೇಟ್ ಬಳಿಯೂ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಕ್ರೀಡಾಂಗಣದ ಗೇಟ್ಗಳ ಬಳಿ ಚಪ್ಪಲಿಗಳು ಬಿದ್ದಿದ್ದು ದುರಂತಕ್ಕೆ ಸಾಕ್ಷಿಯಾಗಿದೆ.
ಆರ್ಸಿಬಿ ವಿಜಯೋತ್ಸವ ದುರಂತ: ಮೃತಪಟ್ಟವರಿಗೆ ನಟ ಕಮಲ್ ಹಾಸನ್ ಸಂತಾಪ
ಆರ್ಸಿಬಿ ವಿಜಯೋತ್ಸವ ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸೇರಿದ್ದರು. ಈ ವೇಳೆ ನಡೆದ ಕಾಲ್ತುಳಿತ ದುರಂತದ ಬಗ್ಗೆ ನಟ ಕಮಲ್ ಹಾಸನ್ ತಮ್ಮ ʼಎಕ್ಸ್ʼ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದು, ಬೆಂಗಳೂರಿನಲ್ಲಿ ನಡೆದ ಹೃದಯವಿದ್ರಾವಕ ಘಟನೆಯಿಂದ ತೀವ್ರ ದುಃಖಿತನಾಗಿದ್ದೇನೆ. ಘಟನೆಯಲ್ಲಿ ಮೃತಪಟ್ಟವರಿಗೆ ನನ್ನ ಸಂತಾಪಗಳು. ಮೃತರ ಕುಟುಂಬಗಳ ಜತೆ ನಾವಿದ್ದೇವೆ. ಗಾಯಾಳುಗಳು ಆದಷ್ಟು ಶೀಘ್ರ ಚೇತರಿಸಿಕೊಳ್ಳಲಿ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಕಾಲ್ತುಳಿತ ದುರಂತ: ಸೂಕ್ತ ತನಿಖೆಗೆ ರಾಜ್ಯಪಾಲರ ಸೂಚನೆ
ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಬಳಿ ನಡೆದ ಕಾಲ್ತುಳಿದ ಬಗ್ಗೆ ಕೂಲಂಕಷ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಬಗಳಿಗೆ ಪರಿಹಾರ ನೀಡಬೇಕು ಹಾಗೂ ಇಂತಹ ದುರ್ಘಟನೆಗಳು ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ತಿಳಿಸಿದ್ದಾರೆ.
ಬುಧವಾರ ಆರ್ಸಿಬಿ ವಿಜಯೋತ್ಸವ ಕಣ್ತುಂಬಿಕೊಳ್ಳಲು ಸಾವಿರಾರು ಅಭಿಮಾನಿಗಳು ಕ್ರೀಡಾಂಗಣದ ಬಳಿ ಸೇರಿದ್ದರು. ಈ ವೇಳೆ ಕಾಲ್ತುಳಿತ ಉಂಟಾಗಿ 11 ಜನ ಮೃತಪಟ್ಟು 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಘಟನೆಗೆ ತಮ್ಮ ಸಾಮಾಜಿಕ ಜಾಲತಾಣ ʼಎಕ್ಸ್ʼನಲ್ಲಿ ಪ್ರತಿಕ್ರಿಯಿಸಿರುವ ರಾಜ್ಯಪಾಲರು, ಕ್ರೀಡಾಂಗಣದ ಹೊರಗೆ ಸಂಭವಿಸಿದ ದುರಂತದ ಕುರಿತು ನನಗೆ ವಿಷಾದವಿದೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ ಹಾಗೂ ಗಾಯಗೊಂಡವರು ಬೇಗನೆ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಬ್ರಿಟನ್ ಮಾಜಿ ಪ್ರಧಾನಿ ಸುನಕ್ ಸಂತಾಪ
ಅಹಮದಾಬಾದ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾಗಿಯಾಗಿದ್ದ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಬೆಂಗಳೂರಿನಲ್ಲಿ ನಡೆದ ದುರಂತಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ‘ದುರಂತದಲ್ಲಿ ಮೃತರಾದವರ ಸಂಬಂಧಿಗಳು ಮತ್ತು ಗಾಯಗೊಂಡವರ ನೋವಿನಲ್ಲಿ ನಾನು ಮತ್ತು ಅಕ್ಷತಾ ಭಾಗಿಯಾಗಿದ್ದೇವೆ. ನಾವು ನಿಮ್ಮೊಂದಿಗೆ ಸಂಭ್ರಮಾಚಾರಣೆ ಮಾಡಿದ್ದೆವು; ಆದರೆ, ಈಗ ಶೋಕಾಚರಣೆ ಮಾಡುತ್ತಿದ್ದೇವೆ’ ಎಂದು ನೋವು ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ವಿಷಾದ
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮುರ್ಮು ಅವರು, ‘ಬೆಂಗಳೂರಿನ ಕ್ರೀಡಾಂಗಣದಲ್ಲಿ ನಡೆದ ದುರಂತಲ್ಲಾದ ಜೀವಹಾನಿ ಆಘಾತಕಾರಿ ಮತ್ತು ಹೃದಯವಿದ್ರಾವಕವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ದುರಂತದಿಂದ ನಮಗೆ ತುಂಬಾ ನೋವಾಗಿದೆ: ಡಿಕೆಶಿ
ಈ ದುರಂತದಿಂದ ನಮಗೆ ತುಂಬಾ ನೋವಾಗಿದೆ. ಇದು ಎಂದಿಗೂ ಸಂಭವಿಸಬಾರದಿತ್ತು. ಇಷ್ಟೊಂದು ಜನಸಂದಣಿ ಬರುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ - ಕ್ರೀಡಾಂಗಣವು 35,000 ಜನರಿಗೆ ಸ್ಥಳಾವಕಾಶ ಕಲ್ಪಿಸಿದ್ದರೂ, 3 ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
"ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ - ನಾವು ನಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಪದಗಳು ಸಾಕಾಗುವುದಿಲ್ಲ, ಆದರೆ ನಿಮ್ಮ ದುಃಖದಲ್ಲಿ ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ಈ ಘಟನೆಗೆ ನಾವು ವಿಷಾದಿಸುತ್ತೇವೆ. ನಿಮ್ಮ ನೋವು ನಮ್ಮದು. ಈ ದುಃಖದಲ್ಲಿ ನಾವು ನಮ್ಮ ಜನರೊಂದಿಗೆ ನಿಲ್ಲುತ್ತೇವೆ," ಎಂದು ತಮ್ಮ ಎಕ್ಸ್ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿಷಾದ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ವಿಜಯೋತ್ಸವ ಸಂದರ್ಭದಲ್ಲಿ ನಡೆದ ಈ ದುರಂತವನ್ನು ಕ್ರಿಕೆಟ್ ಅಸೋಸಿಯೇಶನ್ ಅಥವಾ ನಾವು ನಿರೀಕ್ಷಿಸಿರಲಿಲ್ಲ. ಕಾಲ್ತುಳಿತದಿಂದ ಸಾವಿಗೀಡಾದವರಲ್ಲಿ ಹೆಚ್ಚಿನವರು ಯುವಕರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಜಯೋತ್ಸವ ಕಾರ್ಯಕ್ರಮವನ್ನು ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್ನವರು ಹಮ್ಮಿಕೊಂಡಿದ್ದರು. ಸರ್ಕಾರದ ವತಿಯಿಂದ ವಿಧಾನಸೌಧದ ಎದುರು ಕಾರ್ಯಕ್ರಮ ಆಯೋಜಿಸಲಾಗಿತ್ತು. ನಿರೀಕ್ಷೆಗೂ ಮೀರಿ ಜನ, ಅಭಿಮಾನಿಗಳು ಸೇರಿದ್ದರು. ವಿಧಾನಸೌಧ ಎದುರು ನಡೆದ ಸಮಾರಂಭದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರೂ ಯಾವುದೇ ಅನಿರೀಕ್ಷಿತ ಘಟನೆಗಳು, ದುರಂತ ನಡೆದಿಲ್ಲದರು., ಈಗ ದೊಡ್ಡ ಪ್ರಮಾಣದ ದುರಂತ ಸಂಭವಿಸಿದೆ ಎಂದು ವಿಷಾದಿಸಿದ್ದಾರೆ.
ಕಾಲ್ತುಳಿತಕ್ಕೆ ಡಿಸಿಎಂ ಡಿಕೆಶಿಯೇ ಹೊಣೆ : HDK ಆರೋಪ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಚಾತುರ್ಯ, ಆತುರ, ಅಪರಿಪಕ್ವ ವರ್ತನೆ ಹಾಗೂ ಅವಿವೇಕಿತನದಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ ಹನ್ನೊಂದು ಜನ ಕ್ರಿಕೆಟ್ ಪ್ರೇಮಿಗಳು ಧಾರುಣವಾಗಿ ಸಾವನ್ನಪ್ಪಿದ ಘಟನೆ ನಡೆಯಿತು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೇರ ಆರೋಪ ಮಾಡಿದ್ದಾರೆ.
ನವದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ತಡರಾತ್ರಿ ಕರೆದಿದ್ದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಕೇಂದ್ರ ಸಚಿವರು ಮಾತನಾಡಿ; ಈ ದುರಂತಕ್ಕೆ ಕಾರಣನಾದ ಅವಿವೇಕಿಯನ್ನು ಸಂಪುಟದಿಂದ ಹೊರ ಹಾಕಬೇಕು ಎಂದು ಒತ್ತಾಯ ಮಾಡಿದರು.
ಕರ್ನಾಟಕದಲ್ಲಿ ಇರುವುದು ಕಟುಕರ ಸರಕಾರ. ಈ ಸರಕಾರದ ಮುಖ್ಯಮಂತ್ರಿಯ ಬಗ್ಗೆ ಈ ಪದ ಹೇಳಲು ನನಗೆ ಬೇಸರವಾಗುತ್ತದೆ. ಅವರೊಬ್ಬ ನಿಷ್ಕ್ರಿಯ ಮುಖ್ಯಮಂತ್ರಿ. ಡಿಸಿಎಂ ಮುಂದೆ ಅವರ ಆಟವೇನೂ ನಡೆಯುತ್ತಿಲ್ಲ. ಇನ್ನು ಗೃಹ ಸಚಿವರ ಬಗ್ಗೆ ಹೇಳುವುದೇ ಬೇಡ. ಈ ವ್ಯಕ್ತಿ ಕೂರು ಎಂದರೆ ಕೂರುತ್ತಾರೆ, ನಿಲ್ಲು ಎಂದರೆ ನಿಲ್ಲುತ್ತಾರೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.