Operation Sindoor | ಪಾಕಿಸ್ತಾನದಿಂದ ಡ್ರೋನ್ ದಾಳಿ, ಯಶಸ್ವಿಯಾಗಿ ತಡೆದ ಭಾರತದ ಏರ್ ಡಿಫೆನ್ಸ್ ಸಿಸ್ಟಮ್
ವರದಿಗಳ ಪ್ರಕಾರ, ಭಾರತೀಯ ಸೇನೆಯು ಕನಿಷ್ಠ ನಾಲ್ಕು ಕ್ಷಿಪಣಿಗಳು ಮತ್ತು ಪಾಕಿಸ್ತಾನದ F-16 ಯುದ್ಧವಿಮಾನವನ್ನು ಹೊಡೆದು ಹಾಕಿದೆ.;
ಭಾರತದ ಉತ್ತರ ಮತ್ತು ಪಶ್ಚಿಮ ಭಾಗದ 15 ನಗರಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದ ಸೇನೆಯು ಗುರುವಾರ ರಾತ್ರಿ (ಮೇ 08 ) ಡ್ರೋನ್‌ಗಳು ಮತ್ತು ಕ್ಷಿಪಣಿಗಳ ದಾಳಿಗಳನ್ನು ನಡೆಸಿದೆ. ಈ ಎಲ್ಲ ಯತ್ನವನ್ನು ಭಾರತೀಯ ಸೇನೆಯು ಯಶಸ್ವಿಯಾಗಿ ತಡೆಗಟ್ಟಿದೆ. ಇಂಟಿಗ್ರೇಟೆಡ್ ಕೌಂಟರ್ ಅನ್‌ಮ್ಯಾನ್ಡ್ ಏರ್‌ಕ್ರಾಫ್ಟ್ ಸಿಸ್ಟಮ್ (UAS) ಮತ್ತು ಏರ್ ಡಿಫೆನ್ಸ್ ಸಿಸ್ಟಮ್‌ಗಳು ಪಾಕಿಸ್ತಾನದ ಮಿಸೈಲ್ಗಳನ್ನು ತಟಸ್ಥಗೊಳಿಸಿವೆ. ಇದರ ಬಳಿಕ ಜಮ್ಮು, ಪಂಜಾಬ್‌ನ ಪಠಾಣ್‌ಕೋಟ್ ಮತ್ತು ರಾಜಸ್ಥಾನದ ಕೆಲವು ಪ್ರದೇಶಗಳಲ್ಲಿ ಸ್ಫೋಟದ ಶಬ್ದಗಳು ಕೇಳಿಸಿವೆ, ಜೊತೆಗೆ ತಾತ್ಕಾಲಿಕ ವಿದ್ಯುತ್ ಕಡಿತ ಮತ್ತು ಮೊಬೈಲ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.
ವರದಿಗಳ ಪ್ರಕಾರ, ಭಾರತೀಯ ಸೇನೆಯು ಕನಿಷ್ಠ ನಾಲ್ಕು ಕ್ಷಿಪಣಿಗಳು ಮತ್ತು ಪಾಕಿಸ್ತಾನದ F-16 ಯುದ್ಧವಿಮಾನವನ್ನು ಹೊಡೆದು ಹಾಕಿದೆ. ಸ್ಥಳೀಯರು ಹಂಚಿಕೊಂಡ ವೀಡಿಯೊಗಳಲ್ಲಿ ರಾತ್ರಿಯ ಆಕಾಶದಲ್ಲಿ ಬೆಳಕಿನ ಕಿರಣಗಳು ಕಂಡ ಬಂದಿವೆ. ಇದು ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯಿಂದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ತಡೆಗಟ್ಟುವ ವೇಳೆ ಉಂಟಾದ ಬೆಳಕು. F-16 ವಿಮಾನ ಹೊಡೆದಿರುವ ಬಗ್ಗೆ ರಕ್ಷಣಾ ಸಚಿವಾಲಯದಿಂದ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ.
ಜಮ್ಮುವಿನ ಅವಂತಿಪುರ, ಶ್ರೀನಗರ, ಮತ್ತು ಪಂಜಾಬ್‌ನ ಪಠಾಣ್‌ಕೋಟ್, ಅಮೃತಸರ, ಜಲಂಧರ, ಲುಧಿಯಾನ ಸೇರಿದಂತೆ ರಾಜಸ್ಥಾನದ ಫಲೋದಿ, ಉತ್ತರಲೈ ಮತ್ತು ಗುಜರಾತ್‌ನ ಭುಜ್‌ನಂತಹ 15 ಸ್ಥಳಗಳನ್ನು ಗುರಿಯಾಗಿಸಲು ಪಾಕಿಸ್ತಾನ ಯತ್ನಿಸಿತು. ಈ ದಾಳಿಗಳ ಭಗ್ನಾವಶೇಷಗಳನ್ನು ಈಗ ವಿವಿಧ ಸ್ಥಳಗಳಿಂದ ಸಂಗ್ರಹಿಸಲಾಗುತ್ತಿದೆ, ಇದು ಪಾಕಿಸ್ತಾನದ ದಾಳಿಗಳ ಸಾಕ್ಷಿಯಾಗಿದೆ. ಪಠಾಣ್‌ಕೋಟ್‌ನಲ್ಲಿ ಸ್ಫೋಟದ ಶಬ್ದಗಳ ಬಳಿಕ ಸೈರನ್‌ಗಳು ಮೊಳಗಿದ್ದು, ವಿದ್ಯುತ್ ಕಡಿತಗೊಂಡಿತು.
ರಕ್ಷಣಾ ಸಚಿವಾಲಯದ ಪ್ರಕಾರ, ಪಾಕಿಸ್ತಾನವು ಮೇ 7 ರ ರಾತ್ರಿ ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ಥಲಾ, ಜಲಂಧರ್, ಲುಧಿಯಾನಾ, ಆದಂಪುರ್, ಭಟಿಂಡಾ, ಚಂಡೀಗಢ, ನಾಲ್, ಫಲೋಡಿ, ಉತ್ತರಲೈ ಮತ್ತು ಭುಜ್ ಸೇರಿದಂತೆ 15 ಸ್ಥಳಗಳನ್ನು ಗುರಿಯಾಗಿಸಿತ್ತು. ಆದರೆ, ಭಾರತದ ಸಂಯೋಜಿತ ಕೌಂಟರ್ ಯುಎಎಸ್ ಗ್ರಿಡ್ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳು ಈ ದಾಳಿಗಳನ್ನು ಯಶಸ್ವಿಯಾಗಿ ತಡೆಗಟ್ಟಿದವು. ಇದರ ಜೊತೆಗೆ, ಭಾರತವು ಪಾಕಿಸ್ತಾನದ ಲಾಹೋರ್‌ನಲ್ಲಿ ಇರುವ ಒಂದು ವಾಯು ರಕ್ಷಣಾ ವ್ಯವಸ್ಥೆಯನ್ನು ಧ್ವಂಸಗೊಳಿಸಿದೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಗುರುವಾರ ಸಂಜೆ ಮಾಧ್ಯಮಗಳಿಗೆ ವಿವರಣೆ ನೀಡಿ, "ಪಾಹಲ್ಗಾಮ್ ಭಯೋತ್ಪಾದಕ ದಾಳಿಯೊಂದಿಗೆ ಪಾಕಿಸ್ತಾನವೇ ಸಂಘರ್ಷ ಆರಂಭಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತವು ಆಪರೇಷನ್ ಸಿಂದೂರ್ ಮೂಲಕ ಪ್ರತಿಸ್ಪಂದಿಸಿತು. ಈಗ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಆಯ್ಕೆ ಪಾಕಿಸ್ತಾನದ ಮುಂದಿದೆ" ಎಂದು ಹೇಳಿದರು. ಏಪ್ರಿಲ್ 22 ರಂದು ಪಾಹಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ 26 ಮಂದಿ, ಮುಖ್ಯವಾಗಿ ಪ್ರವಾಸಿಗರು, ಪ್ರಾಣ ಕಳೆದುಕೊಂಡಿದ್ದನ್ನು ಅವರು ಸ್ಮರಿಸಿದ್ದರು. .
ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಸಭೆಯಲ್ಲಿ ಪಾಕಿಸ್ತಾನವು ದಿ ರೆಸಿಸ್ಟೆನ್ಸ್ ಫೋರ್ಸ್ (ಟಿಆರ್‌ಎಫ್) ಭಯೋತ್ಪಾದಕ ಸಂಘಟನೆಯ ಪಾತ್ರವನ್ನು ನಿರಾಕರಿಸಿದೆ. ಆದರೆ ಈ ಸಂಘಟನೆಯು ಈಗಾಗಲೇ ಪಾಹಲ್ಗಾಮ್ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು ಎಂದು ಮಿಸ್ರಿ ಮಾಹಿತಿ ನೀಡಿದ್ದಾರೆ.
ಇದೇ ದಿನ ನವದೆಹಲಿಯಲ್ಲಿ ಆಪರೇಷನ್ ಸಿಂದೂರ್ ಕುರಿತು ಸರ್ವಪಕ್ಷ ಸಭೆ ನಡೆದಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿದರು. ಈ ಘಟನೆಯು ಎರಡೂ ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಹದಗೆಡಿಸಿದ್ದು, ಜಾಗತಿಕ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಗುಜರಾತ್‌ನ ಭುಜ್ನಲ್ಲಿ ಸಂಪೂರ್ಣ ವಿದ್ಯುತ್ ಕಡಿತ ಜಾರಿ