Operation Sindoor: ಜೆಎಂ, ಎಲ್ಇಟಿ, ಹಿಜ್ಬುಲ್ ಮುಜಾಹಿದ್ದೀನ್ ಪ್ರಧಾನ ಕಚೇರಿ ಮೇಲೆ ಐಎಎಫ್ ದಾಳಿ
ರಕ್ಷಣಾ ಸಚಿವಾಲಯವು ರಾತ್ರಿ 1:44ಕ್ಕೆ ಹೇಳಿಕೆ ಬಿಡುಗಡೆ ಮಾಡಿ, "ಕೆಲವೇ ಗಂಟೆಗಳ ಹಿಂದೆ, ಭಾರತೀಯ ಸಶಸ್ತ್ರ ಪಡೆಗಳು 'ಅಪರೇಷನ್ ಸಿಂಧೂರ' ಆರಂಭಿಸಿ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸಿತು,'' ಎಂದು ಹೇಳಿತು.;
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (PoK) ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿವೆ. ಇವುಗಳಲ್ಲಿ ಜೈಶ್-ಎ-ಮೊಹಮ್ಮದ್‌ನ ಬಹವಲ್ಪುರ್ ಕೇಂದ್ರ ಮತ್ತು ಲಷ್ಕರ್-ಎ- ತೈಬಾದ ಮುರಿಡ್ಕೆ ಬೇಸ್ ಸೇರಿವೆ. ಈ ಕಾರ್ಯಾಚರಣೆಗೆ 'ಆಪರೇಷನ್ ಸಿಂಧೂರ' ಎಂದು ಹೆಸರಿಡಲಾಗಿದೆ. ಇದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ನಾಗರಿಕರ ಹತ್ಯಾಕಾಂಡಕ್ಕೆ ಎರಡು ವಾರಗಳ ನಂತರ ನಡೆಸಲಾಗಿದೆ.
ರಕ್ಷಣಾ ಸಚಿವಾಲಯವು ಬೆಳಿಗ್ಗೆ 1.44ಕ್ಕೆ ಹೇಳಿಕೆ ಬಿಡುಗಡೆ ಮಾಡಿ, "ಕೆಲವೇ ಗಂಟೆಗಳ ಹಿಂದೆ, ಭಾರತೀಯ ಸಶಸ್ತ್ರ ಪಡೆಗಳು 'ಅಪರೇಷನ್ ಸಿಂಧೂರ' ಆರಂಭಿಸಿ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸಿತು,'' ಎಂದು ಹೇಳಿತು. ಈ ಕಾರ್ಯಾಚರಣೆಯಲ್ಲಿ ಯಾವುದೇ ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ಎಲ್ಲಾ ಒಂಬತ್ತು ಗುರಿಗಳ ಮೇಲಿನ ದಾಳಿಗಳು ಯಶಸ್ವಿಯಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ 'ಆಪರೇಷನ್ ಸಿಂಧೂರ'ವನ್ನು ನಿಕಟವಾಗಿ ಗಮನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುರಿಡ್ಕೆ, ಲಾಹೋರ್‌ಗೆ ಹತ್ತಿರದಲ್ಲಿರುವ ಲಶ್ಕರ್-ಎ-ತೈಯ್ಬಾದ ವಿಶಾಲ "ಮರ್ಕಾಜ್" ಅಥವಾ ಬೇಸ್ ಮೇಲೆ ದಾಳಿಯಾಗಿದೆ. ಬಹವಲ್ಪುರ್ ಜೈಶ್-ಎ-ಮೊಹಮ್ಮದ್‌ನ ಪ್ರಮುಖ ಕೇಂದ್ರವಾಗಿದೆ. ಇತರ ಗುರಿಗಳಾದ ಕೊಟ್ಲಿ ಮತ್ತು ಮುಜಾಫರಾಬಾದ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಪ್ರದೇಶಗಳಾಗಿದ್ದು, ಅಲ್ಲಿ ಲಶ್ಕರ್ ಮತ್ತು ಜೈಶ್ ಶಿಬಿರಗಳು ಮತ್ತು ತರಬೇತಿ ಸೌಲಭ್ಯಗಳಿವೆ.
ರಕ್ಷಣಾ ಸಚಿವರು ಹೇಳಿದ್ದೇನು?
ದಾಳಿಯ ನಂತರ ರಕ್ಷಣಾ ಸಚಿವ ರಾಜನಾಥ್ ಸಿಂಗ್ 'X'ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿ, "ಭಾರತ ಮಾತೆ ಕೀ ಜೈ!" (ಭಾರತ ಮಾತೆಗೆ ಜಯವಾಗಲಿ) ಎಂದು ಬರೆದುಕೊಂಡಿದ್ದಾರೆ.
ಪಾಕಿಸ್ತಾನ ಸೇನೆಯ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶರೀಫ್ ಚೌಧರಿ, ಭಾರತವು ಕೊಟ್ಲಿ, ಮುಜಾಫರಾಬಾದ್ ಮತ್ತು ಬಹವಲ್ಪುರ್‌ನಲ್ಲಿ ಕ್ಷಿಪಣಿ ದಾಳಿಗಳನ್ನು ನಡೆಸಿದೆ ಎಂದು ದೃಢಪಡಿಸಿದ್ದಾರೆ. "ನಮ್ಮ ಎಲ್ಲಾ ವಾಯುಪಡೆ ಜೆಟ್‌ಗಳು ಚಲಿಸುತ್ತಿವೆ. ಈ ದಾಳಿಯನ್ನು ಭಾರತವು ತನ್ನ ವಾಯುಪ್ರದೇಶದಿಂದಲೇ ನಡೆಸಿದೆ," ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಶರೀಫ್, ಈ "ಯುದ್ಧದ ಕೃತ್ಯ"ಕ್ಕೆ "ಸೂಕ್ತ ಉತ್ತರ" ನೀಡುವ ಹಕ್ಕು ತಮ್ಮ ದೇಶಕ್ಕೆ ಇದೆ ಎಂದು ಹೇಳಿಕೊಂಡಿದ್ದಾರೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಭಾರತದ ಕ್ರಮವನ್ನು ಖಂಡಿಸಿದ್ದು, ಇದು "ಅಪ್ರಚೋದಿತ ಮತ್ತು ಸ್ಪಷ್ಟ ಯುದ್ಧ ಕೃತ್ಯ" ಎಂದು ಹೇಳಿಕೊಂಡಿದೆ.
ದಾಳಿಗಳು ಭಾರತ-ಪಾಕಿಸ್ತಾನ ಸಂಬಂಧಗಳ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು. ಪಾಕಿಸ್ತಾನದಿಂದ ಸಂಭಾವ್ಯ ಪ್ರತಿಕ್ರಿಯೆ ಮತ್ತು ಅಂತರರಾಷ್ಟ್ರೀಯ ಸಮುದಾಯದ ಪ್ರತಿಕ್ರಿಯೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಪಾಕಿಸ್ತಾನದಿಂದ ಎದುರಾಗುವ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಮೆಟ್ಟಿ ನಿಲ್ಲಲು ಭಾರತವು ದೃಢವಾದ ರಾಷ್ಟ್ರೀಯ ನೀತಿ ಹೊಂದಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಧ್ವಂಸ ಮಾಡಿದ ಭಾರತೀಯ ಸಶಸ್ತ್ರ ಪಡೆಗಳ ಕಾರ್ಯದ ಬಗ್ಗೆ ಹೆಮ್ಮೆಯಿದೆ. ಸೇನೆಯ ದೃಢ ಸಂಕಲ್ಪ ಮತ್ತು ಧೈರ್ಯವನ್ನು ನಾವು ಶ್ಲಾಘಿಸುತ್ತೇವೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ದಿನದಿಂದ ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಯಾವುದೇ ನಿರ್ಣಾಯಕ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಪಕ್ಷ ಸರ್ಕಾರದ ಜೊತೆ ನಿಲ್ಲಲಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಏಕತೆ ಮತ್ತು ಒಗ್ಗಟ್ಟು ಇಂದಿನ ಅಗತ್ಯವಾಗಿದೆ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಮ್ಮ ಸಶಸ್ತ್ರ ಪಡೆಗಳೊಂದಿಗೆ ನಿಲ್ಲಲಿದೆ. ರಾಷ್ಟ್ರೀಯ ಹಿತಾಸಕ್ತಿ ನಮಗೆ ಅತ್ಯುನ್ನತವಾಗಿದೆ ಎಂದು ತಿಳಿಸಿದ್ದಾರೆ.
ಭಾರತೀಯ ಸೇನೆ ಕೈಗೊಂಡಿರುವ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ಹಿನ್ನೆಲೆಯಲ್ಲಿ ಭದ್ರತೆಯನ್ನು ಗಮನದಲ್ಲಿ ಇಟ್ಟುಕೊಂಡು ಜಮ್ಮು ಕಾಶ್ಮೀರದಲ್ಲಿ ವೈಮಾನಿಕ ನೆಲೆಯನ್ನು ಮುಚ್ಚಲಾಗಿದೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) 9 ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಸೇನೆ ಕ್ಷಿಪಣಿ ದಾಳಿ ನಡೆಸಿದೆ. ಭಾರತದ ದಾಳಿಗೆ ಪ್ರತಿಯಾಗಿ ಪಾಕಿಸ್ತಾನವು ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ದೇಶದ ಗಡಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಪಾಕಿಸ್ತಾನದಲ್ಲಿ ಭಯೋತ್ಪಾದಕರ ಶಿಬಿರಗಳ ಮೇಲೆ ಭಾರತ ನಡೆಸಿದ ದಾಳಿಯಲ್ಲಿ 50ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿರುವ ಕುರಿತು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಉಗ್ರ ಮಸೂದ್ ಅಜರ್ ನ ಪ್ರಧಾನ ಕಚೇರಿ ಮೇಲೂ ದಾಳಿ ನಡೆಸಲಾಗಿದೆ. ಪ್ರಧಾನ ಕಚೇರಿ ಹಾಗೂ ಮದರಸಾ ನಾಶವಾಗಿವೆ ಎಂದು ಹೇಳಿವೆ.
ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತ ಆರಂಭಿಸಿರುವ ಆಪರೇಷನ್ ಸಿಂಧೂರ ಕಾರ್ಯಾಚರಣೆ ಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾತ್ರಿ ಇಡೀ ವಾರ್ ರೂಮ್ ನಲ್ಲಿ ಕುಳಿತು ವೀಕ್ಷಿಸಿದರು.
ಭಾರತವು ಪಾಕಿಸ್ತಾನದಲ್ಲಿರುವ 9 ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ರಾತ್ರಿ ದಾಳಿ ನಡೆಸಿದೆ.
ರಕ್ಷಣಾ ಪಡೆಗಳ ಮುಖ್ಯಸ್ಥರು, ಗುಪ್ತಚರ ಅಧಿಕಾರಿಗಳು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ನಿರಂತರವಾಗಿ ಪ್ರಧಾನಿಗೆ ಮಾಹಿತಿ ನೀಡಿದರು. ಪಹಲ್ಗಾಮ್ ದಾಳಿಯ ನಂತರ ಪ್ರಧಾನಿ ಮೋದಿ ಅವರು ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥರ ನಡುವೆ ಹಲವಾರು ಸುತ್ತಿನ ಮಾತುಕತೆಗಳನ್ನು ಕೂಡ ನಡೆಸಿರುವುದು ಕುತೂಹಲ ಮೂಡಿಸಿದೆ.