ಬೀದರ್ ಯುವ ಗುತ್ತಿಗೆದಾರ ಆತ್ಮಹತ್ಯೆ | ಸಚಿವ ಪ್ರಿಯಾಂಕ್ ಖರ್ಗೆ ಆಪ್ತನ ಕಿರುಕುಳ ಆರೋಪ
ಬೀದರ್ ನಗರದಲ್ಲಿ ಯುವ ಗುತ್ತಿಗೆದಾರ ಸಚಿನ್ ಎಂಬುವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ತಮ್ಮ ಸಾವಿಗೆ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತನ ಕಿರುಕುಳ ಕಾರಣ ಎಂದು ಏಳು ಪುಟಗಳ ಡೆತ್‌ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ
ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಗುತ್ತಿಗೆದಾರರು ಮಾಡಿದ್ದ 40 ಪರ್ಸೆಂಟ್ ಕಮಿಷನ್ ಆರೋಪವನ್ನೇ ಅಸ್ತ್ರ ಮಾಡಿಕೊಂಡು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಆಡಳಿತದಲ್ಲೂ ಗುತ್ತಿಗೆದಾರರ ಆತ್ಮಹತ್ಯೆಗಳು ಮುಂದುವರಿದಿವೆ. ದಾವಣಗೆರೆಯಲ್ಲಿ ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ಬೀದರ್ ಯುವ ಗುತ್ತಿಗೆದಾರರೊಬ್ಬರು ಗುರುವಾರ ಬೆಳಿಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ಕಿರುಕುಳದಿಂದ ತಾವು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಆರೋಪಿಸಿ ಏಳು ಪುಟಗಳ ಡೆತ್‌ನೋಟ್ ಬರೆದಿಟ್ಟು, ಯುವ ಗುತ್ತಿಗೆದಾರ ಸಚಿನ್(26) ಎಂಬುವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
"ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಎಂಬಾತ ಟೆಂಡರ್ ಕೊಡಿಸುವುದಾಗಿ 15 ಲಕ್ಷ ಹಣ ಪಡೆದು ವಂಚಿಸಿದ್ದ. ಅಲ್ಲದೇ ಒಂದು ಕೋಟಿ ರೂ. ನೀಡುವಂತೆ ಸತಾಯಿಸುತ್ತಿದ್ದ. ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ" ಎಂದು ಯುವ ಗುತ್ತಿಗೆದಾರರ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಕಟ್ಟಿತೂಂಗಾವ್ ಗ್ರಾಮದ ಬಳಿ ಸಚಿನ್ ರೈಲಿಗೆ ತಲೆ ಕೊಟ್ಟಿದ್ದಾರೆ. ಸಚಿನ್ ಮೃತದೇಹ ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ರೈಲ್ವೆ ಹಳಿಗಳ ಮೇಲೆ ಪತ್ತೆಯಾಗಿದೆ. ಘಟನಾ ಸ್ಥಳದಲ್ಲಿಯೇ 7 ಪುಟಗಳ ಡೆತ್ ನೋಟ್ ದೊರೆತಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ಕಲಬುರಗಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಜು ಕಪನೂರು ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿದೆ ಎಂದು ಹೇಳಲಾಗಿದೆ.
ಇದಲ್ಲದೇ ಡೆತ್ ನೋಟ್‌ನಲ್ಲಿ ನಂದಕುಮಾರ್ ನಾಗಭುಜಂಗೆ, ಗೋರಖನಾಥ್ ಸೇರಿ 6 ಜನರು ತಮಗೆ ಜೀವ ಬೆದರಿಕೆ ಹಾಕಿರುವುದಾಗಿಯೂ ಮೃತ ಸಚಿನ್ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
ಡೆತ್ ನೋಟ್ ಸಿಕ್ಕಿದೆ ಎಂದ ರೈಲ್ವೆ ಪೊಲೀಸ್
ಘಟನೆ ಕುರಿತು ʼದ ಫೆಡರಲ್ ಕರ್ನಾಟಕʼ ಬೀದರ್ ರೈಲ್ವೆ ಪೊಲೀಸರನ್ನು ಸಂಪರ್ಕಿಸಿದ್ದು, "ಬೆಳಿಗ್ಗೆ 9 ಗಂಟೆಗೆ ಕಟ್ಟಿತೂಂಗಾವ್ ಗ್ರಾಮದ ಬಳಿ ರೈಲಿಗೆ ತಲೆಕೊಟ್ಟು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವ್ಯಕ್ತಿಯನ್ನು ಸಚಿನ್ ಎಂದು ಗುರುತಿಸಲಾಗಿದ್ದು, ಬಾಲ್ಕಿ ಸರ್ಕಾರಿ ಆಸ್ಪತ್ರೆಗೆ ಒಯ್ಯಲಾಗಿದೆ. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಘಟನಾ ಸ್ಥಳದಲ್ಲಿ ಸಿಕ್ಕಿರುವ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ. ಡೆತ್ ನೋಟ್ ಏಳು ಪುಟಗಳಷ್ಟಿದ್ದು, ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ" ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಸಚಿವ ಪ್ರಿಯಾಂಕ ಖರ್ಗೆ ಪ್ರತಿಕ್ರಿಯೆ
ಘಟನೆ ಕುರಿತಂತೆ ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, "ನನಗೂ ಈಗಷ್ಟೇ ವಿಚಾರ ತಿಳಿಯಿತು. ತಪ್ಪಿತಸ್ಥರು ಕಾಂಗ್ರೆಸ್ ಪಕ್ಷದವರೇ ಆಗಿರಲಿ, ನನ್ನ ಆಪ್ತನೇ ಆಗಿರಲಿ. ತನಿಖೆ ನಡೆಸಲಾಗುವುದು. ಇದರಲ್ಲಿ ಯಾವುದೇ ಯಾವುದೇ ಮುಚ್ಚುಮರೆ ಇಲ್ಲ. ತನಿಖೆಯಿಂದ ಸತ್ಯಾಸತ್ಯತೆ ಹೊರಗೆ ಬರಲಿ. ಸಮಗ್ರ ತನಿಖೆಗೆ ಆದೇಶಿಸುವಂತೆ ನಾನೇ ಗೃಹ ಸಚಿವರಿಗೆ ಮನವಿ ಮಾಡುತ್ತೇನೆ. ಯಾರ ಹೆಸರನ್ನು ಆರೋಪಿಸಲಾಗಿದೆಯೋ ಅವರು ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ಕಾರ್ಪೊರೇಟರ್ ಆಗಿದ್ದವರು ಎಂಬುದು ನಿಜ" ಎಂದು ಹೇಳಿದ್ದಾರೆ.