ಯೆಲ್ಲೋ ಮೆಟ್ರೋ ಆ.10ರಿಂದ ಮುಕ್ತ: ಪಿಂಕ್‌ ಮತ್ತು ಗ್ರೀನ್‌ ಮೆಟ್ರೋ ಸಂಪರ್ಕ ಹೇಗೆ? ಸಂಚಾರ ಅವಧಿ ಎಷ್ಟು?

ಬೆಂಗಳೂರಿಗೆ ಆಗಮಿಸುತ್ತಿರುವ ನರೇಂದ್ರ ಮೋದಿ 5,056.99 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಹಳದಿ ಮಾರ್ಗವನ್ನು ಉದ್ಘಾಟಿಸಲಿದಾರೆ. ಈ ಮಾರ್ಗದಿಂದ ಬೆಂಗಳೂರಿನ 6 ಲಕ್ಷಕ್ಕೂ ಹೆಚ್ಚು ಮಂದಿಗೆ ಅನುಕೂಲವಾಗಲಿದೆ.;

Update: 2025-08-07 03:09 GMT

ನಾಲ್ಕು ವರ್ಷಗಳ ಕಾಲ ಕುಂಟುತ್ತಾ ಸಾಗಿದ್ದ ಬಹುನಿರೀಕ್ಷಿತ ನಮ್ಮ ಮೆಟ್ರೋದ ಹಳದಿ ಮಾರ್ಗವು ಸಾರ್ವಜನಿಕರಿಗೆ ಮುಕ್ತವಾಗಲು ಕೊನೆಗೂ ಕಾಲ ಕೂಡಿಬಂದಿದೆ. ಇದೇ ತಿಂಗಳು 10 ರಂದು ಪ್ರಧಾನಿ ನರೇಂದ್ರ ಮೋದಿ 'ನಮ್ಮ ಮೆಟ್ರೋ' ಹಳದಿ ಮಾರ್ಗಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಬೆಂಗಳೂರಿಗೆ ಆಗಮಿಸುತ್ತಿರುವ ನರೇಂದ್ರ ಮೋದಿ 5,056.99 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಹಳದಿ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಈ ಮಾರ್ಗದಿಂದ ಬೆಂಗಳೂರಿನ 6 ಲಕ್ಷಕ್ಕೂ ಹೆಚ್ಚು ಮಂದಿಗೆ ಅನುಕೂಲವಾಗಲಿದೆ. 

ವಾಣಿಜ್ಯ ಸಂಚಾರ ಆರಂಭಿಸಲು ಅಂತಿಮ ಹಂತದ ತಯಾರಿಗಳು ಮುಕ್ತಾಯಗೊಂಡಿವೆ. ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್‌) ಸುರಕ್ಷತಾ ತಪಾಸಣೆ ನಡೆಸಿ ಕೆಲವೊಂದು ಸಲಹೆ ನೀಡಿ ವಾಣಿಜ್ಯ ಸಂಚಾರಕ್ಕೆ ಅನುಮತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿಸಲು 'ನಮ್ಮ ಮೆಟ್ರೋ' ಸಕಲ ಸಿದ್ಧತೆಯನ್ನು ಕೈಗೊಂಡಿದೆ. 

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಭೇಟಿಯ ಅಧಿಕೃತ ವೇಳಾಪಟ್ಟಿಯು ಪ್ರಕಟವಾಗಿದ್ದು, ಬೆಂಗಳೂರಿನಲ್ಲಿ 4 ಗಂಟೆ ಇರಲಿದ್ದಾರೆ. ಈ ಸಂದರ್ಭದಲ್ಲಿ 3 ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 1 ಮೆಟ್ರೋ ಮಾರ್ಗ, 3 ವಂದೇ ಭಾರತ್‌ ರೈಲಿಗೆ ಚಾಲನೆ ನೀಡಲಿದ್ದಾರೆ. ಮತ್ತೊಂದು ನಮ್ಮ ಮೆಟ್ರೋ 3 ನೇ ಹಂತದ 2 ಕಾರಿಡಾರ್‌ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ನಡುವೆ, ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರೋಡ್‌ ಶೋ ಹಾಗೂ ಪಕ್ಷದ ಕಾರ್ಯಕ್ರಮವನ್ನು ರದ್ದು ಪಡಿಸಲಾಗಿದೆ. 

ಬೆಳಗಾವಿ - ಬೆಂಗಳೂರು, ನಾಗ್ಪುರದ ಅಜ್ನಿ- ಪುಣೆ ಮತ್ತು ಅಮೃತಸರ - ಶ್ರೀಮಾತಾ ವೈಷ್ಣೋದೇವಿ -ಕಾತ್ರಾ ವಂದೇ ಭಾರತ್‌ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ನಮ್ಮ ಮೆಟ್ರೋ 3 ನೇ ಹಂತದ ಕೆಂಪಾಪುರ - ಜೆಪಿ ನಗರ ನಡುವಿನ ಕಿತ್ತಳೆ ಮಾರ್ಗ ಮತ್ತು ಹೊಸಹಳ್ಳಿ - ಕಡಬಗೆರೆ ನಡುವಿನ ಬೂದು ಮಾರ್ಗಕ್ಕೆ ಅಡಿಗಲ್ಲು ಹಾಕಲಿದ್ದಾರೆ. 

ಹಳದಿ ಮೆಟ್ರೋ 20 ನಿಮಿಷಕ್ಕೊಮ್ಮೆ ಪ್ರಯಾಣ

ಹಳದಿ ಮಾರ್ಗದ ಸಂಚಾರಕ್ಕೆ 15 ರೈಲುಗಳ ಅಗತ್ಯವಿದೆ. ಸದ್ಯ ಮೂರು ರೈಲು ಈ ಮಾರ್ಗದಲ್ಲಿ ಓಡಲು ಸಿದ್ಧವಿದ್ದು, 20-25 ನಿಮಿಷಗಳ ಅಂತರದಲ್ಲಿ ಸಂಚರಿಸಲಿದೆ. ನಿತ್ಯ ಸುಮಾರು 25 ರಿಂದ 30 ಸಾವಿರ ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ರೈಲುಗಳ ಸಂಖ್ಯೆ ಹೆಚ್ಚಿದಂತೆ ಟ್ರಿಪ್‌ಗಳ ಸಂಖ್ಯೆ ಕೂಡ ಹೆಚ್ಚಾಗಲಿದ್ದು, ನಿತ್ಯ 3.5 ಲಕ್ಷ ಮಂದಿ ಪ್ರಯಾಣಿಸಬಹುದು ಎಂದು ಬಿಎಂಆರ್‌ಸಿಎಲ್‌ ಅಂದಾಜಿಸಿದೆ. 18.82ಕಿ.ಮೀ ಉದ್ದದ ಆರ್‌.ವಿ.ರಸ್ತೆ-ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಸದ್ಯಕ್ಕೆ ರೈಲುಗಳ ಸಂಚಾರದ ನಡುವೆ 25 ನಿಮಿಷದ ಅಂತರ ಇರಲಿದೆ. ನಿಲ್ದಾಣಗಳಲ್ಲಿ ಪ್ರಯಾಣಿಕರು ಕಾಯುವುದು ಅನಿವಾರ್ಯ. ಸದ್ಯಕ್ಕೆ ಹಳದಿ ಮಾರ್ಗಕ್ಕಾಗಿ ಕೇವಲ 3 ರೈಲುಗಳು ಮಾತ್ರ ಲಭ್ಯವಿದೆ. ಈ ಮೊದಲು ಹಳದಿ ಮಾರ್ಗದ ಎಲ್ಲ 16 ನಿಲ್ದಾಣಗಳಲ್ಲಿ ರೈಲುಗಳ ನಿಲುಗಡೆ ಮಾಡುವ ಬದಲು ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ನಿಲ್ಲಿಸಲು ಯೋಜಿಸಲಾಗಿತ್ತು. ಈ ಮೂಲಕ ರೈಲುಗಳ ಆವರ್ತನದ ಅವಧಿ ಕಡಿಮೆಗೊಳಿಸಿ ಪ್ರಯಾಣಿಕರ ಕಾಯುವಿಕೆ ತಪ್ಪಿಸುವ ಯೋಚನೆ ಇತ್ತು. ಇದೀಗ ಕೇವಲ ಏಳು ನಿಲ್ದಾಣಗಳಲ್ಲಿ ಮಾತ್ರ ನಿಲ್ಲಿಸುವ ಯೋಚನೆ ಇದೆ.

ಸೆಪ್ಟೆಂಬರ್‌ ವೇಳೆಗೆ ನಾಲ್ಕು ರೈಲುಗಳ ಓಡಾಟ

ಹಳದಿ ಮಾರ್ಗದಲ್ಲಿ ಸದ್ಯಕ್ಕೆ ಮೂರು ರೈಲುಗಳು ಸಂಚಾರವಾಗಲಿದೆ. ಆ.15ರ ಬಳಿಕ ಮತ್ತೊಂದು ರೈಲು ಆಗಮಿಸಲಿದೆ. ಅದನ್ನು ಸಂಪೂರ್ಣ ಪರಿಶೀಲನೆ  ನಡೆಸಿದ ಬಳಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ. ಸೆಪ್ಟೆಂಬರ್‌ ಮೊದಲ ಅಥವಾ ಎರಡನೇ ವಾರದಲ್ಲಿ ನಾಲ್ಕು ರೈಲುಗಳು ಓಡಾಟ ಆರಂಭವಾಗಲಿದೆ ಎಂದು ಹೇಳಲಾಗಿದೆ. 

ನಮ್ಮ ಮೆಟ್ರೋ ಹಳದಿ ಮಾರ್ಗದ ನಿಲ್ದಾಣಗಳು

ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರ್ ರಸ್ತೆ, ಇನ್ಫೋಸಿಸ್‌ ಫೌಂಡೇಷನ್ ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್‌ ಸಿಟಿ, ಬಿರಿಟೇನ ಅಗ್ರಹಾರ, ಹೊಸ ರೋಡ್, ಸಿಂಗಸಂದ್ರ, ಕೂಡ್ಲು ಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿ ಗುಡ್ಡ ದೇವಸ್ಥಾನ, ಆರ್‌.ವಿ (ರಾಷ್ಟ್ರೀಯ ವಿದ್ಯಾಲಯ) ರಸ್ತೆ. 

3 ಮೆಟ್ರೋ ಮಾರ್ಗಕ್ಕೆ ಸಂಪರ್ಕ

ನಮ್ಮ ಮೆಟ್ರೋ ಹಳದಿ ಮಾರ್ಗವು ಸದ್ಯ 3 ಮೆಟ್ರೋ ಮಾರ್ಗಗಳಿಗೆ ಸಂಪರ್ಕ ಕಲ್ಪಿಸಲಿದೆ. ಹಸಿರು ಮಾರ್ಗ, ಗುಲಾಬಿ, ನೀಲಿ ಮಾರ್ಗಕ್ಕೆ ಹಳದಿ ಮಾರ್ಗವು ಸಂಪರ್ಕಿಸುತ್ತದೆ. ರಾಷ್ಟ್ರೀಯ ವಿದ್ಯಾಲಯ ರಸ್ತೆ (ಆರ್‌ವಿ ರೋಡ್‌) ನಿಲ್ದಾಣದಲ್ಲಿ ಇಂಟರ್‌ಚೇಂಜ್‌ ಆಗಲಿದ್ದು, ಹಸಿರು ಮಾರ್ಗ ರೇಷ್ಮೆ ಸಂಸ್ಥೆ - ಮಾದಾವರ ಮಾರ್ಗ ಸಂಚರಿಸಲಿದೆ. ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಇಂಟರ್‌ಚೇಂಜ್‌ ಆಗಲಿದ್ದು, ಗುಲಾಬಿ ಮಾರ್ಗ ನಾಗಾವರ - ಕಾಳೇನ ಅಗ್ರಹಾರ ಮಾರ್ಗ ಸಂಚಾರವಾಗಲಿದೆ. ಸಿಲ್ಕ್‌ ಬೋರ್ಡ್‌ನಲ್ಲಿ ಮತ್ತೊಂದು ಇಂಟರ್‌ಚೇಂಜ್‌ ಆಗಲಿದೆ. ಇದು ನೀಲಿ ಮಾರ್ಗ ಸಿಲ್ಕ್‌ಬೋರ್ಡ್‌ - ಕೆಆರ್‌ ಪುರಂಗೆ ಸಂಚಾರವಾಗಲಿದೆ. 

ಹಳದಿ ಮಾರ್ಗದ ಅನುಕೂಲಗಳು ಏನು?

ಬೆಂಗಳೂರಿನ ಐಟಿ ಹಬ್‌ ಎಲೆಕ್ಟ್ರಾನಿಕ್‌ ಸಿಟಿಯಿಂದ ಬೆಂಗಳೂರಿನ ಕೇಂದ್ರ ಭಾಗಕ್ಕೆ ತ್ವರಿತ ಸಂಪರ್ಕ ಕಲ್ಪಿಸಲಿದೆ. ಜನ ಮೆಟ್ರೋ ಬಳಸುವುದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರ ಕಡಿಮೆಯಾಗಿ ಟ್ರಾಫಿಕ್‌ ದಟ್ಟಣೆ ತಗ್ಗಲಿದೆ. ಅಲ್ಲದೇ, ಎಚ್‌ಎಸ್‌ಆರ್‌ ಲೇಔಟ್‌, ಬಿಟಿಎಂ, ಸಿಂಗಸಂದ್ರ, ಬೊಮ್ಮನಹಳ್ಳಿ, ಜಯನಗರ, ತಿಲಕ್‌ನಗರ ಸೇರಿದಂತೆ ಹಲವು ವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲಿದೆ. ಪ್ರತಿಷ್ಠಿತ ಜಯದೇವ ಆಸ್ಪತ್ರೆ, ಇನ್ಫೋಸಿಸ್‌ಗೆ ತೆರಳುವ ಸಾವಿರಾರು ಜನರಿಗೆ ಅನುಕೂಲವಾಗಲಿದೆ. ಬೆಂಗಳೂರಿನಿಂದ ತಮಿಳುನಾಡು (ಹೊಸೂರು) ಭಾಗಕ್ಕೆ ತೆರಳುವ ಪ್ರಯಾಣಿಕರಿಗೂ ಅನುಕೂಲವಾಗಲಿದೆ.

ಇದು ಮೊದಲ ಚಾಲಕ ರಹಿತ ರೈಲು

'ನಮ್ಮ ಮೆಟ್ರೋ' ಚಾಲಕ ರಹಿತ ರೈಲು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಚಾಲಕ ರಹಿತ ರೈಲು ನಿಯಂತ್ರಣ ಕೇಂದ್ರದಿಂದ ವರ್ಧಿತ ಮೇಲ್ವಿಚಾರಣೆ ಸಾಮರ್ಥ್ಯ, ಟ್ರ್ಯಾಕ್ ಮಾನಿಟರಿಂಗ್ ಸಿಸ್ಟಮ್, ಹಾಟ್ ಆಕ್ಸಲ್ ಪತ್ತೆ ವ್ಯವಸ್ಥೆ, ಅಡಚಣೆ ಮತ್ತು ಡಿರೈಲೆಂಟ್ ಡಿಟೆಕ್ಷನ್ ವ್ಯವಸ್ಥೆ ಇತ್ಯಾದಿಗಳಿವೆ. ರೈಲಿನ ಬೋಗಿಗಳು, ಮಾರ್ಗ ವಿವರ, ಜಾಹೀರಾತುಗಳು, ಸೂಚನೆಗಳು, ಮಾಹಿತಿ ಇತ್ಯಾದಿಗಳನ್ನು ಪ್ರದರ್ಶಿಸಲು ಬಾಗಿಲುಗಳ ಮೇಲೆ ವಿದ್ಯುತ್ ಸಂಕೇತಗಳನ್ನು ಹೊಂದಿವೆ.

ಆರಂಭದಲ್ಲಿ ಲೊಕೋ ಪೈಲಟ್ ನಿಯೋಜನೆ

ಹಳದಿ ಮಾರ್ಗದಲ್ಲಿ ಸಂಚರಿಸುವ ರೈಲುಗಳನ್ನು ಸಂವಹನ-ಆಧಾರಿತ ರೈಲು ನಿಯಂತ್ರಣ ವ್ಯವಸ್ಥೆಯ ಭಾಗವಾಗಿ ಪರಿಚಯಿಸಲಾಗುತ್ತಿದೆ. ಇದನ್ನು ಸಾಮಾನ್ಯವಾಗಿ 'ಚಾಲಕರಹಿತ ತಂತ್ರಜ್ಞಾನ' ಎಂದು ಕರೆಯಲಾಗುತ್ತದೆ. ಇದು ಅಸ್ತಿತ್ವದಲ್ಲಿರುವ ಎರಡೂವರೆ ನಿಮಿಷಗಳಿಗಿಂತ 90 ಸೆಕೆಂಡುಗಳ ಮಟ್ಟಿಗೆ ಹೆಡ್‌ವೇ ಅನ್ನು ಕಡಿಮೆ ಮಾಡುತ್ತದೆ. ಆದರೂ ಆರಂಭದಲ್ಲಿ ಕೆಲ ಸಮಯ ಲೊಕೋ ಪೈಲಟ್ ನಿಯಂತ್ರಣದೊಂದಿಗೆ ಹಳದಿ ಮಾರ್ಗದಲ್ಲಿ ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಡಬ್ಬಲ್‌ ಡೆಕ್ಕರ್ ಪ್ಲೈ ಓವರ್

ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್‌ ಹಳದಿ ಮಾರ್ಗದಲ್ಲಿ ನಿರ್ಮಾಣ ಆಗಿದೆ. ರಾಗಿಗುಡ್ಡದಿಂದ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ವರೆಗೆ (ಸಿಎಸ್‌ಬಿ) ಡಬ್ಬಲ್‌ ಡೆಕ್ಕರ್ (3.3 ಕಿ.ಮೀ.) ನಿರ್ಮಿಸಲಾಗಿದೆ. ಡಬ್ಬಲ್‌ ಡೆಕ್ಕರ್‌ ಫ್ಲೈಓವರ್‌ನ ಮೇಲ್ಭಾಗದಲ್ಲಿ ನಮ್ಮ ಮೆಟ್ರೋ ರೈಲು ಓಡಾಡಲಿದೆ. ಕೆಳಭಾಗ ವಾಹನಗಳ ಓಡಾಟಕ್ಕೆ ಮೀಸಲಾಗಿದೆ. ಕೆಳರಸ್ತೆಯಿಂದ ಡಬ್ಬಲ್‌ ಡೆಕ್ಕರ್‌ನ ಮೊದಲ ಫ್ಲೈಓವರ್‌ 8 ಮೀ. ಎತ್ತರದಲ್ಲಿದ್ದರೆ, ಮೆಟ್ರೋ ವಯಡಕ್ಟ್‌ 16 ಮೀ. ಎತ್ತರದಲ್ಲಿದೆ.

ಅತೀ ಎತ್ತರದ ಜಯದೇವ ಇಂಟರ್‌ಚೇಂಜ್‌

ಜಯದೇವ ಇಂಟರ್‌ ಚೇಂಜ್‌ ಮೆಟ್ರೋ ನಿಲ್ದಾಣದಲ್ಲಿ ಐದು ಹಂತದ ಸಾರಿಗೆ ವ್ಯವಸ್ಥೆ ನಿರ್ಮಾಣವಾಗಿದೆ. ಐದನೇ ಹಂತ ನೆಲಮಟ್ಟದಿಂದ 29 ಮೀ. ಎತ್ತರದಲ್ಲಿದೆ. ಇದು ದೇಶದ ಅತಿ ಎತ್ತರದ ಮೆಟ್ರೋ ನಿಲ್ದಾಣ ಎನ್ನಿಸಿಕೊಳ್ಳಲಿದೆ. ಇಂಟರ್‌ಚೇಂಜ್‌ ನಿಲ್ದಾಣದಲ್ಲಿ ಅಂಡರ್‌ಪಾಸ್‌, ನೆಲಮಟ್ಟದಲ್ಲಿ ಸಾಮಾನ್ಯ ವಾಹನ ಸಂಚಾರ, ಅದರ ಮೇಲೆ ರಾಗಿಗುಡ್ಡ-ಸಿಲ್ಕ್‌ ಬೋರ್ಡ್‌ ಮೇಲ್ಸೇತುವೆ, ಅದರ ಮೇಲೆ ಹಳದಿ ಮಾರ್ಗ ನಿರ್ಮಾಣವಾಗಿದೆ. ಇದರ ಮೇಲೆ ಗುಲಾಬಿ ಮಾರ್ಗ ತಲೆ ಎತ್ತಲಿದ್ದು, 2026ರ ಡಿಸೆಂಬರ್‌ಗೆ ಈ ಮಾರ್ಗ ಉದ್ಘಾಟನೆ ಆಗಲಿದೆ.

ಹಳದಿ ಮಾರ್ಗದ ಟಿಕೆಟ್‌ ದರ

ಕನಿಷ್ಠ ದರ -10 ರೂ. ಆಗಿದ್ದು, ಗರಿಷ್ಠ ದರ - 60 ರೂ. ಇದೆ. ಟೋಕನ್‌ -60 ರೂ. ಮತ್ತು ಸ್ಮಾರ್ಟ್‌ ಕಾರ್ಡ್‌- 57 ರೂ., ಸ್ಮಾರ್ಟ್‌ಕಾರ್ಡ್‌ (ನಾನ್‌ಪೀಕವರ್‌)- 54 ರೂ. ಮತ್ತು ಗುಂಪು ಟಿಕೆಟ್‌ -51 ರೂ. ನಿಗದಿ ಮಾಡಲಾಗಿದೆ. 

ಪ್ರಧಾನಿ ಮೋದಿ ಉದ್ಘಾಟನಾ ಕಾರ್ಯಕ್ರಮದ ವೇಳಾಪಟ್ಟಿ

  1. ಬೆಳಿಗ್ಗೆ 7.50 ಕ್ಕೆ ದೆಹಲಿಯಿಂದ ಹೊರಡಲಿದ್ದಾರೆ.
  2. 10.30 ಕ್ಕೆ ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮನ.
  3. 10.50 ಕ್ಕೆ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ನಲ್ಲಿ ಎಚ್‌ಕ್ಯೂಟಿಸಿ ಹೆಲಿಪ್ಯಾಡ್‌ಗೆ ಆಗಮನ.
  4. 11ಕ್ಕೆ ರಸ್ತೆ ಮೂಲಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ಸಿಟಿ ರೈಲ್ವೆ ನಿಲ್ದಾಣಕ್ಕೆ ಆಗಮನ.
  5. 11.15 ಕ್ಕೆ 3 ವಂದೇ ಭಾರತ್‌ ರೈಲಿಗೆ ಚಾಲನೆ.
  6. 11.45 ಕ್ಕೆ ರಸ್ತೆ ಮಾರ್ಗವಾಗಿ ಆರ್‌ವಿ ರಸ್ತೆಯ ರಾಗಿಗುಡ್ಡ ಮೆಟ್ರೋ ನಿಲ್ದಾಣಕ್ಕೆ ಆಗಮನ.
  7. 11.50 ರಿಂದ 12.50 ವರೆಗೂ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ; ಮೆಟ್ರೋ ರೈಲಿನಲ್ಲಿಯೇ ಎಲೆಕ್ಟ್ರಾನಿಕ್‌ ಸಿಟಿ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣ.
  8. ಮಧ್ಯಾಹ್ನ 1 ರಿಂದ 2 ಗಂಟೆವರೆಗೂ ಐಐಐಟಿ ಆಡಿಟೋರಿಯಂ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ನಮ್ಮ ಮೆಟ್ರೋ 3 ನೇ ಹಂತಕ್ಕೆ ಶಂಕುಸ್ಥಾಪನೆ.
  9. 2.05 ಕ್ಕೆ ಹೆಲಿಕಾಪ್ಟರ್‌ನಲ್ಲಿ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಪ್ರಯಾಣ.
  10. 2.40 ಕ್ಕೆ ದೆಹಲಿಗೆ ವಿಮಾನ ಪ್ರಯಾಣ.
  11. ಸಂಜೆ 5.20 ಕ್ಕೆ ದೆಹಲಿ ತಲುಪಲಿದ್ದಾರೆ.
Tags:    

Similar News