ರಾಜ್ಯದ ನಾಲ್ಕು ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್, ಬೆಂಗಳೂರಿನಲ್ಲಿಂದು ಮಳೆ ಜೋರು
ಉತ್ತರ ಒಳನಾಡಿನ ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ಹಾಗೂ ಕರಾವಳಿಯ ಉಡುಪಿ, ದಕ್ಷಿಣ ಕನ್ನಡದಲ್ಲಿ ಸಾಧರಣ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.;
ಬೆಂಗಳೂರಿನಲ್ಲಿ ಸುರಿಯುವ ಮಳೆಯಲ್ಲಿಯೇ ವಾಹನ ಚಲಾಯಿಸಿದ ಬೈಕ್ ಸವಾರರು.(ಎಕ್ಸ್ ಖಾತೆಯಿಂದ)
ರಾಜ್ಯದಲ್ಲಿ ಶುಕ್ರವಾರ(ಮೇ 2) ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಾಲ್ಕು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದ್ದು ಬೆಂಗಳೂರಿನಲ್ಲಿಯೂ ವ್ಯಾಪಕ ಮಳೆಯಾಗಲಿದೆ ಎಂದು ತಿಳಿಸಿದೆ.
ಯೆಲ್ಲೋ ಅಲರ್ಟ್ ಘೋಷಿಸಿರುವ ನಾಲ್ಕು ಜಿಲ್ಲೆಗಳಾದ ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗಿರಲಿದ್ದು, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ವಿಜಯನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ತುಮಕೂರು, ಕೋಲಾರ, ಮಂಡ್ಯ ಹಾಗೂ ರಾಮನಗರದಲ್ಲಿ ಹೆಚ್ಚು ಮಳೆಯಾಗಲಿದ್ದು ಸಾರ್ವಜನಿಕರು ಸುರಕ್ಷಿತವಾಗಿರುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಉತ್ತರ ಒಳನಾಡಿನ ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ಹಾಗೂ ಕರಾವಳಿಯ ಉಡುಪಿ, ದಕ್ಷಿಣ ಕನ್ನಡದಲ್ಲಿ ಸಾಧರಣ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಮಳೆಗೆ ಆಟೋ ಚಾಲಕ ಬಲಿ
ಬೆಂಗಳೂರಿನಲ್ಲಿ ಗುರುವಾರ (ಮೇ 1) ಸಂಜೆ ಗುಡುಗು ಸಹಿತ ಮಳೆ ಸುರಿದಿದ್ದು, ತಡ ರಾತ್ರಿವರೆಗೂ ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ. ಕತ್ರಿಗುಪ್ಪೆಯ ಬಳಿ ಆಟೋ ಮೇಲೆ ಮರವೊಂದು ಉರುಳಿ ಬಿದ್ದು ಚಾಲಕ ಮೃತಪಟ್ಟಿರುವ ಘಟನೆ ನಡೆದಿದೆ.
ಕಲಬುರಗಿಯಲ್ಲಿ ಹೆಚ್ಚಿನ ಉಷ್ಣಾಂಶ
ಗುರುವಾರ ಕಲಬುರಗಿಯಲ್ಲಿ 42 ಡಿಗ್ರಿ ಸೆಲ್ಸಿಯಸ್, ಬೀದರ್ನಲ್ಲಿ 41 ಡಿಗ್ರಿ ಸೆಲ್ಸಿಯಸ್, ವಿಜಯಪುರದಲ್ಲಿ 40.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಶುಕ್ರವಾರವೂ ಕೆಲವು ಕಡೆ ಉಷ್ಣಾಂಶ ಮುಂದುವರಿಯಲಿದ್ದು ಮುಂಜಾಗೃತ ಕ್ರಮಗಳನ್ನು ಅನುಸರಿಸುವಂತೆ ಸಾರ್ವಜನಿಕರಿಗೆ ತಿಳಿಸಿದೆ.