ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ಮೇಲ್ಮನೆ ಮಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

Update: 2024-05-25 13:56 GMT

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರ ಆಯ್ಕೆಯ ಗೊಂದಲದಲ್ಲಿದ್ದ ಸಿದ್ದರಾಮಯ್ಯ ಅವರಿಗೆ ಅವರ  ʼವರುಣಾ ಕ್ಷೇತ್ರʼವನ್ನು ಬಿಟ್ಟುಕೊಟ್ಟಿದ್ದ ಸಿದ್ದರಾಮಯ್ಯ ಅವರ ಪುತ್ರ  ಡಾ. ಯತೀಂದ್ರ  ಸಿದ್ದರಾಮಯ್ಯ ಅವರಿಗೆ ಈ ಬಾರಿ ವಿಧಾನ ಪರಿಷತ್‌ ಸದಸ್ಯನಾಗುವ ಅವಕಾಶವನ್ನು ಕಾಂಗ್ರೆಸ್‌ ಕಲ್ಪಿಸಿದೆ.

ವರುಣಾ ಕ್ಷೇತ್ರ ಸಿದ್ದರಾಮಯ್ಯ ಅವರ ತವರು ಕ್ಷೇತ್ರವಾಗಿದ್ದರೂ, ೨೦೧೮ ರಲ್ಲಿ ತಮ್ಮ ಪುತ್ರ ಯತೀಂದ್ರ ಅವರಿಗೆ ಬಿಟ್ಟುಕೊಟ್ಟುತಾವು ಪಕ್ಕದ ಚಾಮುಂಡೇಶ್ವರಿ ಕ್ಷೇತ್ರ ಹಾಗೂ ಉತ್ತರ ಕರ್ನಾಟಕದ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು.  ಆದರೆ ಕಳೆದ ಚುನಾವಣೆಯಲ್ಲಿ ವರುಣಾದ ಶಾಸಕ ಯತೀಂದ್ರ , ತಮ್ಮ ತಂದೆಗೆ ಕ್ಷೇತ್ರ ಬಿಟ್ಟುಕೊಟ್ಟು ಅಪ್ಪನ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದರು. 

ಯತೀಂದ್ರ ಅವರನ್ನು ವಿಧಾನಪರಿಷತ್‌ಗೆ ಕಳುಹಿಸುವ ಬಗ್ಗೆ ಕಾಂಗ್ರೆಸ್‌ ಪಕ್ಷದಲ್ಲಿ ಮಾತುಕತೆಯಾಗಿತ್ತು. ಈಗ ಮತ್ತೆ ಆ ಮಾತು ಮುನ್ನೆಲೆಗೆ ಬಂದಿದ್ದು, ಜೂನ್‌ ತಿಂಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಯತೀಂದ್ರ ಅವರನ್ನು ಅಭ್ಯರ್ಥಿಯಾಗಿಸಲು ಬಹುತೇಕ ನಿರ್ಧರಿಸಿಲಾಗಿದೆ.

ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ನಿವಾಸದಲ್ಲಿ ಚರ್ಚೆ ಬಳಿಕ ಮಾತನಾಡಿದ ಕಾರ್ಯಾಧ್ಯಕ್ಷ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಅವರಿಗೆ ಪರಿಷತ್ ಸದಸ್ಯರಾಗೋದು ಖಚಿತ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಮೀರ್ ಅಹಮದ್‌ ಖಾನ್, ಕೃಷ್ಣ ಬೈರೇಗೌಡ ಮತ್ತು ಪ್ರಿಯಾಂಕ್ ಖರ್ಗೆ ಅವರು ಭಾಗಿಯಾಗಿದ್ದರು. ಈ ಸಭೆಯಲ್ಲಿ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಸಲಾಗಿದೆ. ಎಂಎಲ್‍ಸಿ ಆಯ್ಕೆ ವಿಚಾರವಾಗಿ ಮೇ 28, 29 ರಂದು ಸಿಎಂ ಹಾಗೂ ಡಿಸಿಎಂ ದೆಹಲಿಗೆ ತೆರಳಲಿರುವ ಹಿನ್ನೆಲೆಯಲ್ಲಿ ಡಿಸಿಎಂ ಕೆಲವು ಸಚಿವರ ಜೊತೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಜಾರಕಿಹೊಳಿ ಅವರು, ʻʻಯತೀಂದ್ರ ಅವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗುವುದು ನಿಶ್ಚಿತ. ವಿಧಾನ ಪರಿಷತ್‌ ಚುನಾವಣೆ ಕುರಿತು ಚರ್ಚಿಸಿದ್ದೇವೆ. ಪರಿಷತ್‌ ಸದಸ್ಯ ಸ್ಥಾನಗಳು ಬೆಂಗಳೂರಿಗೆ ಸೀಮಿತ ಆಗಬಾರದು ಎಂಬುದನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದೇವೆ. ಪಕ್ಷಕ್ಕಾಗಿ ದುಡಿದಿರುವ ಬಹಳಷ್ಟು ಮಂದಿ ಇದ್ದು, ಅಂತಹವರಿಗೆ ಅವಕಾಶ ನೀಡುವಂತೆ ಕೇಳಿದ್ದೇವೆʼʼ ಎಂದು ಹೇಳಿದರು.

ಕೆಲವರು ಅನಿವಾರ್ಯವಾಗಿ ಮುಂದುವರಿಸಬೇಕಾಗುತ್ತದೆ. ಲಂಬಾಣಿ ಸಮುದಾಯ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಕ್ಕೆ ಪ್ರಾತಿನಿಧ್ಯ ಕಲ್ಪಿಸುವಂತೆ ಒತ್ತಾಯಿಸಿದ್ದೇವೆʼʼ ಎಂದು ಅವರು ಹೇಳಿದ್ದಾರೆ.

Tags:    

Similar News