ʼರಾಮ-ಶಾಮ-ಭಾಮʼ ಚಿತ್ರ ಖ್ಯಾತಿಯ ಯಶವಂತ ಸರದೇಶಪಾಂಡೆ ವಿಧಿವಶ

ಹಾಸ್ಯನಟ, ನಿರ್ದೇಶಕ, ನಾಟಕಕಾರ, ರಚನೆಕಾರ, ಸಂಭಾಷಣಾಕಾರರಾಗಿ ತಮ್ಮ ಕಲೆಯ ಮೂಲಕ ಲಕ್ಷಾಂತರ ಜನರ ಮನ ಗೆದ್ದಿದ್ದಾರೆ. ಅವರ 'ಆಲ್ ದಿ ಬೆಸ್ಟ್' ನಾಟಕವು ಅಭೂತಪೂರ್ವ ಯಶಸ್ಸು ಕಂಡಿತು.

Update: 2025-09-29 07:41 GMT
Click the Play button to listen to article

ಕನ್ನಡದ ಖ್ಯಾತ ರಂಗಭೂಮಿ ಕಲಾವಿದ, ಬೆಳ್ಳಿ ತೆರೆ ಹಾಗೂ ಕಿರುತೆರೆಯಲ್ಲಿ ನಟಿಸಿದ್ದ ಯಶವಂತ ಸರದೇಶಪಾಂಡೆ (63) ಸೋಮವಾರ ಇಹಲೋಕ ತ್ಯಜಿಸಿದ್ದಾರೆ. 

ಮೂಲತಃ ಹುಬ್ಬಳ್ಳಿಯವರಾದ ಅವರು, ಹಾಸ್ಯನಟ, ನಿರ್ದೇಶಕ, ನಾಟಕಕಾರ, ರಚನೆಕಾರ, ಸಂಭಾಷಣಾಕಾರರಾಗಿ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.  ತಮ್ಮ ಹಾಸ್ಯಭರಿತ ನಟನೆ, ಸಂಭಾಷಣೆಯಿಂದ ಲಕ್ಷಾಂತರ ಜನರ ಮನ ಗೆದ್ದಿದ್ದರು. ಅವರು ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು ಎಂದು ಕುಟುಂಬದ  ಮೂಲಗಳು ತಿಳಿಸಿವೆ.  

ಯಶವಂತ ಸರದೇಶಪಾಂಡೆ ಅವರ 'ಆಲ್ ದಿ ಬೆಸ್ಟ್' ನಾಟಕವು ಅಭೂತಪೂರ್ವ ಯಶಸ್ಸು ಕಂಡಿತ್ತು. ಕಿರುತೆರೆ ಮತ್ತು ಚಲನಚಿತ್ರಗಳಲ್ಲಿಯೂ ಅವರು ನಟಿಸಿದ್ದರು. 'ರಾಮ ಶಾಮ ಭಾಮʼ ನಲ್ಲಿ ನಟಿಸಿದ್ದರು. 

1965ರ ಜೂನ್ 13ರಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದಲ್ಲಿ ಶ್ರೀಧರರಾವ್ ಗೋಪಾಲರಾವ್ ಸರದೇಶಪಾಂಡೆ, ಕಲ್ಪನಾದೇವಿ ದಂಪತಿಯ ಪುತ್ರನಾಗಿ ಜನಿಸಿದ್ದ ಸರದೇಶಪಾಂಡೆ ಅವರು, ಚಿಕ್ಕಂದಿನಿಂದಲೇ ನಾಟಕಗಳಲ್ಲಿ ಆಸಕ್ತಿ ಹೊಂದಿದ್ದರು. ಹೆಗ್ಗೋಡಿನ ನಿನಾಸಂ ನಾಟಕ ಸಂಸ್ಥೆಯಿಂದ ಡಿಪ್ಲೊಮ ಪಡೆದರು. ನಂತರ ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ನಾಟಕ ರಚನೆ ಮತ್ತು ಚಲನಚಿತ್ರ ಸಂಭಾಷಣೆ ವಿಷಯದಲ್ಲಿ ವಿಶೇಷ ತರಬೇತಿ ಪಡೆದಿದ್ದರು. 

60ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಅಂಧಯುಗ, ಇನ್‌ಸ್ಪೆಕ್ಟರ್ ಜನರಲ್, ಮಿಡ್‌ಸಮರ್ ನೈಟ್ಸ್ ಡ್ರೀಮ್, ಬಾಡಿಗೆ ಮನೆ, ಕಿತ್ತೂರು ರಾಣಿ ಚೆನ್ನಮ್ಮ, ಪುಷ್ಪರಾಣಿ, ಗಲಿವರನ ಯಾತ್ರೆ, ಬೆಪ್ಪುತಕ್ಕಡಿ ಬೋಳೇ ಶಂಕರ, ತುಂಟ ಮಕ್ಕಳ ತಂಟೆ, ಮಕ್ಕಳೆರಡೇ ಇರಲಿ, ಕುಂಟಾ ಕುಂಟ ಕುರವತ್ತಿ ಮುಂತಾದ ನಾಟಕಗಳು ಅವರ ನಿರ್ದೇಶನದ ಉದಾಹರಣೆಗಳು. ರಂಗವರ್ತುಲ ಮತ್ತು ಬೇಂದ್ರೆ ರಂಗಾವಳಿಯ ಮುಖಾಂತರ ಕವಿ ಬೇಂದ್ರೆಯವರ ಎಲ್ಲಾ ನಾಟಕಗಳನ್ನು ರಂಗಕ್ಕೆ ತಂದು ಅಭೂತಪೂರ್ವ ಯಶಸ್ಸು ಪಡೆದಿದ್ದಾರೆ.

ಯದ್ವಾ ತದ್ವಾ, ಬಣ್ಣದ ಬುಗುರಿ, ದಶಾವತಾರ, ಪರ್ವ, ತುಂತುರು ಧಾರಾವಾಹಿಗಳಲ್ಲಿ ನಟಿಸಿದ್ದು, ಕೆಲವು ಧಾರಾವಾಹಿಗಳಿಗೆ ಸಂಭಾಷಣೆ ಬರೆದಿದ್ದಾರೆ.  ಅತಿಥಿ, ಮರ್ಮ, ಜೂಜಾಟ, ಸ್ಟೂಡೆಂಟ್, ಅಮೃತಧಾರೆ, ರಾಮಶಾಮಭಾಮ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ರಾಮ ಶಾಮ ಭಾಮ ಚಿತ್ರಕ್ಕೆ ಸಂಭಾಷಣೆ ಬರೆದು, ಕಮಲಹಾಸನ್ ಅವರ ಪಾತ್ರಕ್ಕೆ ಉತ್ತರ ಕರ್ನಾಟಕದ ಆಡುಭಾಷೆ ಬಳಸುವ ಮೂಲಕ ಹೊಸ ಪ್ರಯೋಗಕ್ಕೆ ಸಾಕ್ಷಿಯಾಗಿದ್ದರು.

Tags:    

Similar News