ರಾಮನಗರ, ಮಂಗಳೂರಿನಲ್ಲಿ ಪಾಕ್ ಮೂಲದ ಮಹಿಳೆಯರು ಪತ್ತೆ
ಪಾಕ್ ಪ್ರಜೆಗಳನ್ನು ಮರಳಿ ಪಾಕಿಸ್ತಾನಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ. ರಾಜ್ಯಗಳಲ್ಲಿರುವ ಪಾಕ್ ಪ್ರಜೆಗಳ ಮಾಹಿತಿ ಕಲೆಹಾಕಲಾಗುತ್ತಿದ್ದು ರಾಮನಗರದಲ್ಲಿ ಮಹಿಳೆ ವಾಸವಾಗಿರುವುದು ಪತ್ತೆಯಾಗಿದೆ.;
ಪಾಕ್ ಮೂಲದ 52 ವರ್ಷ ವಯಸ್ಸಿನ ಮಹಿಳೆಯೊಬ್ಬರು ಸ್ಥಳೀಯ ವ್ಯಕ್ತಿಯನ್ನು ಮದುವೆಯಾಗಿ ಕಳೆದ ಇಪ್ಪತ್ತು ವರ್ಷಗಳಿಂದ ರಾಮನಗರದಲ್ಲಿ ವಾಸವಾಗಿದ್ದಾರೆ ಎಂದು ತಿಳಿದುಬಂದಿದೆ. ಈ ವಿಷಯವನ್ನು ಖಚಿತಪಡಿಸಿರುವ ಪೊಲೀಸರು ಮಹಿಳೆ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ನಂತರ ದೇಶದಲ್ಲಿರುವ ಪಾಕ್ ಪ್ರಜೆಗಳನ್ನು ಮರಳಿ ಪಾಕಿಸ್ತಾನಕ್ಕೆ ತೆರಳುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ರಾಜ್ಯಗಳಲ್ಲಿರುವ ಪಾಕ್ ಪ್ರಜೆಗಳ ಮಾಹಿತಿ ಕಲೆಹಾಕಲಾಗುತ್ತಿದ್ದು ಅದರಂತೆ ರಾಮನಗರದಲ್ಲಿ ಮಹಿಳೆ ವಾಸವಾಗಿರುವುದು ಪತ್ತೆಯಾಗಿದೆ. ಮಹಿಳೆಯು ಯಾವ ಕಾರಣದಿಂದ ಭಾರತಕ್ಕೆ ಬಂದಿದ್ದರು, ಅವರ ಬಳಿ ವೀಸಾ ಇದೆಯೇ ಅಥವಾ ಅನಧೀಕೃತವಾಗಿ ವಾಸವಾಗಿದ್ದಾರೆಯೇ ಎಂಬುದರ ಕುರಿತು ಪೊಲೀಸ್ ಮೂಲಗಳು ಮಾಹಿತಿ ಕಲೆಹಾಕುತ್ತಿದ್ದಾರೆ.
ಮಂಗಳೂರಿನಲ್ಲೂ ಪಾಕ್ ಮಹಿಳೆಯರು ಪತ್ತೆ
ಮಂಗಳೂರು ನಗರ ವ್ಯಾಪ್ತಿಯಲ್ಲಿ ಪಾಕಿಸ್ತಾನದಿಂದ ಬಂದು ಮದುವೆಯಾಗಿ ಮಂಗಳೂರಿನಲ್ಲಿ ನೆಲೆಸಿರುವ ಮೂವರು ಮಹಿಳೆಯರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ನಗರದ ಹೊರವಲಯದ ವಾಮಂಜೂರು ಬಳಿ ಒಬ್ಬರು, ನಗರದ ಫಳ್ನೀರ್‌ನಲ್ಲಿ ಒಬ್ಬರು ವಾಸವಾಗಿದ್ದು ಮತ್ತೊಬ್ಬರ ವಿಳಾಸ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಉಡುಪಿಯಲ್ಲಿ ಪಾಕಿಸ್ತಾನ ಪ್ರಜೆಗಳು ವಾಸವಿಲ್ಲ
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೂಚನೆಯಂತೆ ಪಾಕ್ ಪ್ರಜೆಗಳ ಗುರುತಿಸುವ ಕೆಲಸ ಪ್ರಾರಂಭವಾಗಿದ್ದು ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಪಾಕ್ ಪ್ರಜೆಗಳು ವಾಸವಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ತಿಳಿಸಿದ್ದಾರೆ.
ರಾಜ್ಯಗಳಲ್ಲಿರುವ ಪಾಕಿಸ್ತಾನದ ಪ್ರಜೆಗಳನ್ನು ಪತ್ತೆಹಚ್ಚಿ ಗಡಿಪಾರು ಮಾಡಿ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಬೆನ್ನಲ್ಲೇ, ರಾಜ್ಯದಲ್ಲಿರುವ ಪಾಕ್ ಪ್ರಜೆಗಳ ಪತ್ತೆಕಾರ್ಯ ಚುರುಕುಗೊಂಡಿದೆ.