BPL Card Controversy | ಬಡವರಿಗೆ ತೊಂದರೆಯಾಗದು, ವಿರೋಧ ಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುತ್ತಿವೆ: ಡಿಸಿಎಂ

ಬಿಜೆಪಿ ಹಾಗೂ ಕುಮಾರಸ್ವಾಮಿ ಅವರಿಗೆ ನಮ್ಮ ಸರ್ಕಾರದ ವಿರುದ್ಧ ಟೀಕೆ ಮಾಡಲು ವಿಚಾರಗಳಿಲ್ಲ. ಅವರ ಕಾಲದಲ್ಲಿ ಏನೇನು ಅನ್ಯಾಯ ಮಾಡಬೇಕೋ ಮಾಡಿದ್ದಾರೆ.

Update: 2024-11-19 12:02 GMT
ಡಿ.ಕೆ. ಶಿವಕುಮಾರ್

“ಬಡವರಿಗೆ ಪಡಿತರ ಕಾರ್ಡ್, ಅಕ್ಕಿ, ಪಿಂಚಣಿ, ನಿವೇಶನ ನೀಡುವ ಆಶ್ರಯ ಯೋಜನೆ, ಉಳುವವನಿಗೆ ಭೂಮಿ ಸೇರಿದಂತೆ ಜನರಿಗೆ ಪ್ರಮುಖ ಯೋಜನೆ ಕೊಟ್ಟಿರುವುದು ಕಾಂಗ್ರೆಸ್ ಸರ್ಕಾರವೇ ಹೊರತು ಬಿಜೆಪಿಯಲ್ಲ. ನಮ್ಮ ಸರ್ಕಾರದಿಂದ ಬಡವರಿಗೆ ತೊಂದರೆಯಾಗುವುದಿಲ್ಲ, ರಾಜಕೀಯ ಮಾಡಲು ವಿರೋಧ ಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುತ್ತಿವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮ ದಿನಾಚರಣೆ ಕಾರ್ಯಕ್ರಮದ ಬಳಿಕ ಅವರು ಮಾಧ್ಯಮಗಳಿಗೆ ಮಾತನಾಡಿ, ಬಿಜೆಪಿ ಹಾಗೂ ಕುಮಾರಸ್ವಾಮಿ ಅವರಿಗೆ ನಮ್ಮ ಸರ್ಕಾರದ ಮೇಲೆ ಟೀಕೆ ಮಾಡಲು ವಿಚಾರಗಳಿಲ್ಲ. ಅವರ ಕಾಲದಲ್ಲಿ ಏನೇನು ಅನ್ಯಾಯ ಮಾಡಬೇಕೋ ಮಾಡಿದ್ದಾರೆ. ಅವರ ಸರ್ಕಾರದ ಅವಧಿಯಲ್ಲಿ ಯಾವುದೇ ಬಡವರಿಗೆ ಸಹಾಯ ಮಾಡಲಿಲ್ಲ. ಅವರಿಗೆ ಬಡವರಿಗೆ ಒಂದು ಕಾರ್ಯಕ್ರಮ ಮಾಡಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ. 

ಕೆಲವು ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು, ಆರ್ಥಿಕವಾಗಿ ಅನುಕೂಲವಾಗಿರುವವರು ಬಿಡಿಎಲ್ ಕಾರ್ಡ್ ಹೊಂದಿದ್ದಾರೆ. ಅಂತಹವರನ್ನು ಪರಿಶೀಲಿಸಲು ನಾವು ಮುಂದಾಗಿದ್ದೇವೆ. ಬಡವರು ಎಂದು ನಿರ್ಧರಿಸಲು ಕೇಂದ್ರ ಸರ್ಕಾರ ಮಾನದಂಡ ವಿಧಿಸಿದ್ದು, ಅದರ ಆಧಾರದ ಮೇಲೆ ನಾವು ತೀರ್ಮಾನ ಮಾಡುತ್ತೇವೆ. ಬಡವರ ಕಾರ್ಡ್ ರದ್ದಾಗಿದ್ದರೆ ಅದನ್ನು ಸರಿಪಡಿಸಿ ಮತ್ತೆ ಅವರಿಗೆ ಬಿಪಿಎಲ್ ಕಾರ್ಡ್ ನೀಡಲಾಗುವುದು. ಈ ವಿಚಾರವಾಗಿ ಮುಖ್ಯಮಂತ್ರಿಗಳು ಹಾಗೂ ನಮ್ಮ ಸರ್ಕಾರ ತೀರ್ಮಾನಿಸಿದೆ ಎಂದು ಸ್ಪಷ್ಟನೆ ನೀಡಿದರು.

ಕುಮಾರಸ್ವಾಮಿ ಮೊದಲು ಮೋದಿ ಕೆಲಸ ಮಾಡಲಿ

ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಹೀಗಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಏನಾದರೂ ಹೇಳಲಿ. ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಏನು ಮಾಡಿದರು? ಈ ರಾಜ್ಯಕ್ಕೆ ಅವರ ಕೊಡುಗೆ ಏನು? ಗಾಳಿಯಲ್ಲಿ ಗುಂಡು ಹೊಡೆಯುವುದೇ ಅವರ ಕೊಡುಗೆ. ಅವರ ಕಾಲದಲ್ಲಿ ಸರ್ಕಾರಕ್ಕೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡಿದ್ದಾರಾ? ನಾವು ಬಂಡವಾಳ ಹೂಡಿಕೆ ತಂದು ರಾಜ್ಯದ ಆರ್ಥಿಕತೆಗೆ ಶಕ್ತಿ ತುಂಬುತ್ತಿದ್ದೇವೆ. ಟೆಕ್ ಸಮ್ಮಿಟ್ ಮಾಡಿದ್ದು ಕೂಡ ಉದ್ಯೋಗ ಸೃಷ್ಟಿ ಹಾಗೂ ಬಂಡವಾಳ ಹೂಡಿಕೆ ತರುವ ಉದ್ದೇಶದಿಂದ. ಮೋದಿ ಅವರು ಕೊಟ್ಟಿರುವ ಕೆಲಸವನ್ನು ಅವರು ಮಾಡಲಿ. ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದಾರಲ್ಲ, ರಾಜ್ಯದಲ್ಲಿ ಅವರಿಗೆ ಎಷ್ಟು ಜಮೀನು ಬೇಕು ಎಂದು ಪತ್ರ ಬರೆಯಲಿ. ಯಾವ ಕೈಗಾರಿಕೆಯನ್ನು ತರುತ್ತಾರೆ ಎಂದು ಯೋಜನಾ ವರದಿ ಸಲ್ಲಿಸಲಿ. ನಾನೇ ನಿಂತು ಅಗತ್ಯ ಜಮೀನು ಕೊಡಿಸುತ್ತೇನೆ” ಎಂದು ತಿರುಗೇಟು ನೀಡಿದರು.

ಅಭಿವೃದ್ಧಿ ಯೋಜನೆಗಳಿಗೆ ಶಾಸಕರಿಗೆ ಅನುದಾನ ಸಿಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರು ಹೇಳುತ್ತಿದ್ದಾರೆ ಎಂದು ಕೇಳಿದಾಗ, “ಕೆಲವರು ತಮ್ಮದೇ ಆದ ಲೆಕ್ಕಾಚಾರದಲ್ಲಿ ಹೇಳಿರುತ್ತಾರೆ. ಅದಕ್ಕೆ ಆದ ಪ್ರಕ್ರಿಯೆಗಳಿವೆ. ಕೆಲವರು ತಮ್ಮ ಕ್ಷೇತ್ರಕ್ಕೆ 100 ಕೋಟಿ ಅನುದಾನ ಬೇಕು ಎಂದು ಕೇಳುತ್ತಾರೆ. ಅವರು ಕೇಳಿದಾಕ್ಷಣ ಕೊಡಲು ಆಗುವುದಿಲ್ಲ. ಆಯಾ ಕ್ಷೇತ್ರಕ್ಕೆ ಎಷ್ಟು ಕೊಡಬೇಕು ಎಂಬ ಲೆಕ್ಕಾಚಾರವಿದ್ದು, ಅದರಂತೆ ನೀಡುತ್ತೇವೆ” ಎಂದರು.

ಯತ್ನಾಳ್ ಹೇಳಿದ 1 ಸಾವಿರ ಕೋಟಿ ಯಾರ ಮನೆಯಲ್ಲಿದೆ

ಶಾಸಕರ ಖರೀದಿ ಬಗ್ಗೆ ನಿಮಗೆ ಮಾಹಿತಿ ಇದೆಯೇ ಎಂದು ಕೇಳಿದಾಗ, “ಮಾಧ್ಯಮದವರು ಬಿಜೆಪಿ ವಿಚಾರವಾಗಿ ಚರ್ಚೆ ಮಾಡುತ್ತಿಲ್ಲ. ಈ ವಿಚಾರದಲ್ಲಿ ನಾನು ಮಾಧ್ಯಮಗಳ ಮೇಲೆ ಆರೋಪ ಮಾಡುತ್ತೇನೆ. ಯತ್ನಾಳ್ ಅವರು 1 ಸಾವಿರ ಕೋಟಿ ವಿಚಾರವಾಗಿ ಪ್ರಸ್ತಾಪ ಮಾಡಿದ್ದರ ಬಗ್ಗೆ ಮಾಧ್ಯಮಗಳು ಯಾಕೆ ಚರ್ಚೆ ಮಾಡುತ್ತಿಲ್ಲ. ಮೊದಲು ಯತ್ನಾಳ್ ಅವರು ಈ ವಿಚಾರ ಪ್ರಸ್ತಾಪಿಸಿದ್ದು, ಮೊದಲು ಅದರ ಬಗ್ಗೆ ಚರ್ಚೆ ಮಾಡಿ. ಆ ಹಣ ಎಲ್ಲಿಂದ ಬಂತು, ಅದು ಯಡಿಯೂರಪ್ಪ, ಅಶೋಕ್, ವಿಜಯೇಂದ್ರ, ಅಶ್ವತ್ಥ್ ನಾರಾಯಣ್, ಕುಮಾರಸ್ವಾಮಿ ಸೇರಿದಂತೆ ಯಾರ ಮನೆಯಲ್ಲಿದೆ ಎಂದು ಚರ್ಚೆ ಮಾಡಿ. ಯತ್ನಾಳ್ ಈ ಆರೋಪ ಮಾಡಿದ ಮೇಲೆ ಬಿಜೆಪಿಯವರು ಅವರಿಗೆ ನೋಟೀಸ್ ಕೊಟ್ಟಿದ್ದಾರಾ? ಅದು ಸುಳ್ಳು ಎಂದು ಹೇಳಿದ್ದಾರಾ? ಮೊದಲು ಅಲ್ಲಿಂದ ಚರ್ಚೆ ಆರಂಭವಾಗಲಿ” ಎಂದು ತಿಳಿಸಿದರು.

ವರ್ತಕರ ಹಿತ ಕಾಯುತ್ತೇವೆ

ಸಚಿವ ಆರ್.ಬಿ ತಿಮ್ಮಾಪುರ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮದ್ಯ ಮಾರಾಟಗಾರರ ಅಸೋಸಿಯೇಷನ್ ವತಿಯಿಂದ ಬುಧವಾರದಂದು ಪ್ರತಿಭಟನೆ ನಡೆಯುತ್ತಿರುವ ಬಗ್ಗೆ ಕೇಳಿದಾಗ, “ಅವರ ವಿಚಾರವನ್ನು ಕೇಳಲು ಮುಖ್ಯಮಂತ್ರಿಗಳು ಸಮಯಾವಕಾಶ ಕೊಟ್ಟಿದ್ದಾರೆ. ಅವರೊಂದಿಗೆ ಚರ್ಚೆ ಮಾಡಲಿದ್ದಾರೆ. ವರ್ತಕರಿಗೆ ಕಿರುಕುಳವಾಗಬಾರದು. ಅವರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ನಾವು ಅದನ್ನು ಮಾಡುತ್ತೇವೆ” ಎಂದು ತಿಳಿಸಿದರು.

Tags:    

Similar News