ನನ್ನಲ್ಲಿ ಯಾಕೆ ಕೇಳುತ್ತೀರಿ?; ಹನಿಟ್ರ್ಯಾಪ್ ಕುರಿತ ಮಾಧ್ಯಮದ ಪ್ರಶ್ನೆಗೆ ಡಿಕೆಶಿ ಗರಂ
ಮುಖ್ಯಮಂತ್ರಿಯವರನ್ನು ಯಾರು ಬೇಕಾದರೂ ಭೇಟಿ ಮಾಡಬಹುದು. ಅವರನ್ನು ಯಾರು ಭೇಟಿ ಮಾಡಿದರು ಎಂಬುದರ ಬಗ್ಗೆ ನನಗೆ ಕೇಳುವ ಅಗತ್ಯ ಇಲ್ಲ ಎಂದು ಡಿಸಿಎಂ ಹೇಳಿದರು.;
ಹನಿಟ್ರ್ಯಾಪ್ ವಿಚಾರವಾಗಿ ಚರ್ಚಿಸಲು ಸಚಿವ ಕೆ ಎನ್ ರಾಜಣ್ಣ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರಾ ಎಂಬ ಪ್ರಶ್ನೆಗೆ ಡಿಸಿಎಂ ಡಿಕೆ ಶಿವಕುಮಾರ್ ಕೋಪಗೊಂಡ ಪ್ರಸಂಗ ನಡೆಯಿತು. ಸದಾಶಿವನಗರ ನಿವಾಸದ ಬಳಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ತೀಕ್ಷಣ ಪ್ರತಿಕ್ರಿಯೆ ನೀಡಿದರು.
ಮುಖ್ಯಮಂತ್ರಿಯವರನ್ನು ಯಾರು ಬೇಕಾದರೂ ಭೇಟಿ ಮಾಡಬಹುದು. ಅವರನ್ನು ಯಾರು ಭೇಟಿ ಮಾಡಿದರು ಎಂಬುದರ ಬಗ್ಗೆ ನನಗೆ ಕೇಳುವ ಅಗತ್ಯ ಇಲ್ಲ. ನನಗೆ ಸಂಬಂಧಿಸಿದ ವಿಚಾರಗಳೇನಾದರೂ ಇದ್ದರೆ ಆ ಬಗ್ಗೆ ಮಾತ್ರ ಪ್ರಶ್ನೆ ಕೇಳಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ರಾಜಣ್ಣ ಅವರು ಶನಿವಾರ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಬಗ್ಗೆ ಕೇಳಿದಾಗ, "ನನಗೆ ಆ ವಿಚಾರವಾಗಿ ಏನನ್ನೂ ಕೇಳಬೇಡಿ. ನನ್ನ ಇಲಾಖೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಾತ್ರ ನನ್ನನ್ನು ಕೇಳಿ. ಅವರು ಇವರನ್ನು ಭೇಟಿ ಮಾಡಿದರು, ಇವರು ಅವರನ್ನು ಭೇಟಿ ಮಾಡಿದರು ಎಂದು ನನ್ನನ್ನು ಯಾಕೆ ಕೇಳುತ್ತೀರಾ? ಮುಖ್ಯಮಂತ್ರಿಗಳು ಅಂದಮೇಲೆ ಎಲ್ಲಾ ಸಚಿವರು, ಶಾಸಕರು, ಸಂಸದರು, ಸಾರ್ವಜನಿಕರು ಭೇಟಿ ಮಾಡುವುದು ಸಹಜ. ನನ್ನನ್ನೂ ಅನೇಕರು ಭೇಟಿ ಮಾಡುತ್ತಾರೆ. ಇಂಥ ವಿಚಾರವಾಗಿ ಯಾವುದೇ ಪ್ರಶ್ನೆಗಳನ್ನು ನನಗೆ ಕೇಳಬೇಡಿ" ಎಂದರು.
"ಸದನದಲ್ಲಿ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪಿಸಿದ್ದಕ್ಕೆ ಸಚಿವರ ವಿರುದ್ಧ ಹೈಕಮಾಂಡ್ ಗರಂ ಆಗಿದೆಯಂತಲ್ಲಾ" ಎಂಬ ಪ್ರಶ್ನೆಗೆ, "ಇದೆಲ್ಲವೂ ಬೋಗಸ್, ಯಾರು ಗರಂ ಆಗಿದ್ದಾರೆ? ಸುಮ್ಮನೆ ಸುಳ್ಳು ಸುದ್ದಿಗಳನ್ನು ಸೃಷ್ಟಿ ಮಾಡುತ್ತಿದ್ದಾರೆ" ಎಂದು ತಿಳಿಸಿದರು.
ವೈ.ಕೆ. ರಾಮಯ್ಯ ಅವರ ಕಾಲದಿಂದ ಹೇಮಾವತಿ ಕೆನಾಲ್ ವಿಚಾರ ಚರ್ಚೆ
ಹೇಮಾವತಿ ಕೆನಾಲ್ ವಿಚಾರವಾಗಿ ನೀವು ಮತ್ತು ಶಾಸಕ ರಂಗನಾಥ್ ಅವರು ತೊಂದರೆ ಮಾಡುತ್ತಿದ್ದೀರಿ ಎಂದು ರಾಜೇಂದ್ರ ಅವರು ಆರೋಪಿಸಿದ್ದಾರೆ ಎಂದು ಕೇಳಿದಾಗ, "ಅವರು ಏನು ಬೇಕಾದರೂ ಮಾತನಾಡಲಿ. ಹೇಮಾವತಿ ನಾಲೆ ಬಗ್ಗೆ ಇಂದಲ್ಲ, 20-30 ವರ್ಷಗಳಿಂದಲೂ, ವೈ.ಕೆ. ರಾಮಯ್ಯ ಅವರ ಕಾಲದಿಂದಲೂ ಚರ್ಚೆ ನಡೆಯುತ್ತಿದೆ" ಎಂದು ಸ್ಪಷ್ಟಪಡಿಸಿದರು.
ಹೈಕಮಾಂಡ್ ನಾಯಕರ ಭೇಟಿ ಇಲ್ಲ
"ನೀವು ದೆಹಲಿ ಪ್ರವಾಸ ಮಾಡುತ್ತಿದ್ದು, ಹೈಕಮಾಂಡ್ ನಾಯಕರ ಜೊತೆ ಇತ್ತೀಚಿನ ಬೆಳವಣಿಗೆ ಬಗ್ಗೆ ಚರ್ಚೆ ಮಾಡುತ್ತೀರಾ" ಎಂದು ಕೇಳಿದಾಗ, "ಇಂಥ ಸುಳ್ಳು ಸುದ್ದಿಗಳ ಬಗ್ಗೆ ನಾನು ಯಾರನ್ನೂ ಭೇಟಿ ಮಾಡುವ ಅವಶ್ಯಕತೆ ಇಲ್ಲ. ಮಾಧ್ಯಮ ಸ್ನೇಹಿತರು ಸಮ್ಮೇಳನಕ್ಕೆ (Conclave) ಆಹ್ವಾನ ನೀಡಿದ್ದು, ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗುತ್ತಿದ್ದೇನೆ. ಕಾರ್ಯಕ್ರಮ ಮುಗಿದ ಬಳಿಕ ರಾತ್ರಿಯೇ ಮರಳುತ್ತಿದ್ದೇನೆ" ಎಂದು ಸ್ಪಷ್ಟಪಡಿಸಿದರು.
"ಹನಿಟ್ರ್ಯಾಪ್ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿ, ದೂರು ನೀಡದಿದ್ದರೆ ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರವಲ್ಲವೇ" ಎಂದು ಕೇಳಿದಾಗ, "ಈ ಬಗ್ಗೆ ಮುಖ್ಯಮಂತ್ರಿಗಳನ್ನು ಕೇಳಿ" ಎಂದಷ್ಟೇ ಹೇಳಿದರು.
ತಮ್ಮ ಬಳಿ ಏನೂ ಇಲ್ಲ ಎಂದು ರಾಜಣ್ಣ ಹೇಳಿದ್ದಾರೆ
ರಾಜಣ್ಣ ತಮ್ಮನ್ನು ಭೇಟಿ ಮಾಡಿದ್ದರಾ ಎಂದು ಕೇಳಿದಾಗ, "ಕೆಪಿಸಿಸಿ ಅಧ್ಯಕ್ಷನಾಗಿ ನಿಮ್ಮ ಬಳಿ ಏನಾದರೂ ದಾಖಲೆ ಇದ್ದರೆ ಕೊಡಿ ಎಂದು ಕೇಳಿದ್ದೇನೆ. ನನ್ನ ಬಳಿ ಏನೂ ಇಲ್ಲ ಎಂದು ಅವರು ಹೇಳಿದ್ದಾರೆ. ಅವರು ನನ್ನ ಬಳಿ ಇನ್ನೇನೇನು ಹೇಳಿದ್ದಾರೆ ಎಂಬುದನ್ನು ನಿಮ್ಮ ಮುಂದೆ ಹೇಳಲು ಆಗುವುದಿಲ್ಲ. ನಿಮ್ಮದು ಏನಾದರೂ ಇದ್ದರೆ ದೂರು ನೀಡಿ ಎಂದು ಹೇಳಿದ್ದೇನೆ. ಅವರು ಕೋಲಾರದಲ್ಲಿ ಈಗಾಗಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಇದಕ್ಕಿಂತ ಇನ್ನೇನು ಹೇಳಲು ಸಾಧ್ಯ" ಎಂದು ಕೇಳಿದರು.