ಸಿಲಿಕಾನ್ ಸಿಟಿಗೆ ವೀಲಿಂಗ್ ಹಾವಳಿ: ಅಪ್ರಾಪ್ತ ಮಕ್ಕಳ ಡ್ರಾಗ್ ರೇಸ್ ಕಿರಿಕಿರಿಗೆ ಪೋಷಕರ ವಿರುದ್ಧ ಕ್ರಮ
ವೀಲಿಂಗ್ ಹಾವಳಿ ತಡೆಗಟ್ಟಲು ಬೈಕ್ ಸವಾರರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದ್ದು, ಅಪ್ರಾಪ್ತರಾಗಿದ್ದಲ್ಲಿ, ಅವರ ಪೋಷಕರ ಮೇಲೂ ಪ್ರಕರಣ ದಾಖಲು ಮಾಡಲಾಗುತ್ತದೆ.;
ತಂತ್ರಜ್ಞಾನ ನಗರಿ ಬೆಂಗಳೂರಿನ ವಿಶಾಲ ರಸ್ತೆಗಳು ಇದೀಗ ವೀಲಿಂಗ್ ಪುಂಡರ ಅಪಾಯಕಾರಿ ಕಸರತ್ತುಗಳಿಗೆ ವೇದಿಕೆಯಾಗಿ ಮಾರ್ಪಟ್ಟಿವೆ. ಅದರಲ್ಲೂ, ಅಪ್ರಾಪ್ತ ವಯಸ್ಸಿನ ಬಾಲಕರು ಈ ಮಾರಣಾಂತಿಕ ಸ್ಟಂಟ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುತ್ತಿರುವುದು ಸಾರ್ವಜನಿಕರಲ್ಲಿ ಮತ್ತು ಪೋಷಕರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ.
ಈ ಗಂಭೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು, ನಗರ ಪೊಲೀಸರು ಮತ್ತು ರಾಜ್ಯ ಗೃಹ ಇಲಾಖೆಯು ಹಿಂದೆಂದಿಗಿಂತಲೂ ಕಠಿಣ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದ್ದು, ವೀಲಿಂಗ್ ಮಾಡುವ ಅಪ್ರಾಪ್ತರನ್ನು ಹಿಡಿಯುವುದಷ್ಟೇ ಅಲ್ಲದೆ, ಅವರಿಗೆ ವಾಹನವನ್ನು ಚಲಾಯಿಸಲು ನೀಡಿ, ಪರೋಕ್ಷವಾಗಿ ಈ ಅಪಾಯಕಾರಿ ಕೃತ್ಯಕ್ಕೆ ಪ್ರೋತ್ಸಾಹ ನೀಡಿದ ಪೋಷಕರ ವಿರುದ್ಧವೂ ಕಠಿಣ ಕಾನೂನು ಕ್ರಮ ಜರುಗಿಸುತ್ತಿದ್ದಾರೆ.
ವೀಲಿಂಗ್ ಮಾಡುವ ಅಪ್ರಾಪ್ತ ಬೈಕ್ ಸವಾರರ ಪೋಷಕರಿಗೆ ದಂಡ ವಿಧಿಸಿ ಕಡಿವಾಣ ಹಾಕುವ ಪ್ರಯತ್ನ ಮಾಡಲಾಗಿತ್ತು. ಆದರೂ ಅಪ್ರಾಪ್ತರು ವೀಲಿಂಗ್ ಮಾಡುವುದನ್ನು ಬಿಡದ ಕಾರಣ ಪೋಷಕರ ವಿರುದ್ಧವೂ ಕಾನೂನು ಕ್ರಮ ಕೈಗೊಂಡರೆ ಇದಕ್ಕೆ ಬ್ರೇಕ್ ಹಾಕಬಹುದು ಎಂಬುದು ಗೃಹ ಇಲಾಖೆಯದ್ದಾಗಿದೆ. ಈ ನಿಟ್ಟಿನಲ್ಲಿ ವೀಲಿಂಗ್ ಮಾಡುವ ಅಪ್ರಾಪ್ತ ಪೋಷಕರನ್ನು ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ವಿಧಾನಮಂಡಲ ಅಧಿವೇಶನದಲ್ಲಿ ವೀಲಿಂಗ್‌ನಲ್ಲಿ ತೊಡಗುವ ಅಪ್ರಾಪ್ತ ಪೋಷಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿರುವುದು ಅಪ್ರಾಪ್ತರ ಬೈಕ್ ವೀಲಿಂಗ್‌ಗೆ ಕಡಿವಾಣ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಬೆಂಗಳೂರು ನಗರದಲ್ಲಿ ವೀಲಿಂಗ್ ಹಾವಳಿ ತಡೆಗಟ್ಟಲು ಅಂತಹ ಬೈಕ್ ಸವಾರರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಒಂದು ವೇಳೆ ಬೈಕ್ ಸವಾರರು ಅಪ್ರಾಪ್ತರಾಗಿದ್ದಲ್ಲಿ, ಅವರ ಜೊತೆಗೆ ಅವರ ಪೋಷಕರ ಮೇಲೂ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿ, ವೀಲಿಂಗ್ ಗೆ ಬಳಸಲಾಗುವ ವಾಹನ, ಆರ್ ಸಿ ಬುಕ್ ಹಾಗೂ ಡ್ರೈವಿಂಗ್ ಲೈಸೆನ್ಸ್ ಅನ್ನು ಅಮಾನತುಗೊಳಿಸುವಂತೆ ಸಂಬಂಧಪಟ್ಟ ಸಾರಿಗೆ ಸಂಸ್ಥೆಗಳಿಗೆ ಶಿಫಾರಸು ಮಾಡಲಾಗುತ್ತಿದೆ. ಇದಲ್ಲದೆ ಹೆಚ್ಚಾಗಿ ವೀಲಿಂಗ್ ಮಾಡುವ ರಸ್ತೆಗಳಲ್ಲಿ ಗಸ್ತು ತಿರುಗುವಿಕೆ ಹಾಗೂ ಶಾಲಾ ಕಾಲೇಜುಗಳಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂಬ ಮಾಹಿತಿ ನೀಡಿದ್ದರು.
ಅಪ್ರಾಪ್ತರ ಕೈಗೆ ದ್ವಿಚಕ್ರವಾಹನ ನೀಡಿ ಪರೋಕ್ಷವಾಗಿ ವ್ಹೀಲಿಂಗ್‌ಗೆ ಕಾರಣರಾದ 70ಕ್ಕೂ ಹೆಚ್ಚು ಪೋಷಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಸಂಚಾರ ಪೊಲೀಸರು 5 ಲಕ್ಷ ರೂ.ಗಿಂತ ಹೆಚ್ಚು ದಂಡ ವಸೂಲಿ ಮಾಡಲಾಗಿದೆ. ಅಪ್ರಾಪ್ತರು ವೀಲಿಂಗ್ ಸ್ಟಂಟ್‌ಗಳನ್ನು ಪ್ರದರ್ಶಿಸಿ ಸಿಕ್ಕಿಬಿದ್ದಾಗ, ಆತನ ಪೋಷಕರು ವಾಹನವನ್ನು ಅಪ್ರಾಪ್ತ ವಯಸ್ಕನಿಗೆ ಹಸ್ತಾಂತರಿಸಿದ್ದಕ್ಕಾಗಿ ಭಾರತೀಯ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತದೆ. ಯಾಕೆಂದರೆ ಅಪ್ರಾಪ್ತ ವಯಸ್ಕರಿಗೆ ಚಾಲನಾ ಪರವಾನಗಿ ಇರುವುದಿಲ್ಲ. ಹೀಗಾಗಿ ಅಂತಹವರ ಪೋಷಕರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ. ಅಲ್ಲಿ ಅವರ ವಿರುದ್ಧ 25 ಸಾವಿರ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ವೀಲಿಂಗ್ ಸ್ಟಂಟ್‌ಗಳನ್ನು ಪ್ರದರ್ಶಿಸುತ್ತಾ ಸಿಕ್ಕಿಬಿದ್ದವರಿಗೆ 25 ವರ್ಷ ವಯಸ್ಸಿನವರೆಗೆ ಚಾಲನಾ ಪರವಾನಗಿಗಳನ್ನು ನೀಡಬಾರದು ಎಂದು ಪೊಲೀಸರು ಸಾರಿಗೆ ಇಲಾಖೆಗೆ ಶಿಫಾರಸು ಮಾಡಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಹೇಳಿವೆ.
ನಗರದಲ್ಲಿ 35 ಸ್ಥಳಗಳು ಗುರುತು
ಬೆಂಗಳೂರು ನಗರ ಪೊಲೀಸರು ಯುವಕರು ಹೆಚ್ಚಾಗಿ ವೀಲಿಂಗ್ ಮಾಡುವ 35 ರಸ್ತೆಗಳನ್ನು ಗುರುತಿಸಿದ್ದಾರೆ. ಸವಾರರು ಸಾಮಾನ್ಯವಾಗಿ ಮಧ್ಯರಾತ್ರಿಯಿಂದ ಬೆಳಿಗ್ಗೆ 5 ಗಂಟೆಯ ನಡುವಿನ ಸಮಯದಲ್ಲಿ ವೀಲಿಂಗ್ ಸ್ಟಂಟ್‌ಗಳನ್ನು ಮಾಡಲಾಗುತ್ತದೆ. ಇದು ಸ್ವಂತ ಮತ್ತು ಇತರರ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ. ಪೊಲೀಸರು ವೀಲಿಂಗ್ ಕಂಡುಬರುವ 35 ರಸ್ತೆಗಳನ್ನು ಗುರುತಿಸಿದ್ದಾರೆ ಮತ್ತು ಈ ಪ್ರದೇಶಗಳಲ್ಲಿ ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ.
ನಗರದಲ್ಲಿನ ಹಾಟ್‌ಸ್ಪಾಟ್‌ಗಳು
ಹಳೆ ಮದ್ರಾಸ್ ರಸ್ತೆ (ಭಟ್ರಹಳ್ಳಿ ಮತ್ತು ಮೇಡಹಳ್ಳಿ), ಐಟಿಪಿಎಲ್ ರಸ್ತೆ, ಹೊರ ವರ್ತುಲ ರಸ್ತೆ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಹೊಸೂರು ಮುಖ್ಯ ರಸ್ತೆ (ಗರೇಭಾವಿಪಾಳ್ಯ ಮತ್ತು ಬೊಮ್ಮನಹಳ್ಳಿ ಜಂಕ್ಷನ್), ಬನಶಂಕರಿಯಲ್ಲಿ ಚೆನ್ನಮ್ಮ ಮೇಲ್ಸೇತುವೆ, ಬಳ್ಳಾರಿ ರಸ್ತೆ, ತುಮಕೂರು ರಸ್ತೆ, ನಾಗವಾರ ರಸ್ತೆ, ಹೆಮ್ಮಿಗೆಪುರ ಮತ್ತು ಕೊಮ್ಮಘಟ್ಟ ರಸ್ತೆಗಳು ನಗರದಲ್ಲಿನ ಹಾಟ್‌ಸ್ಪಾಟ್‌ಗಳಾಗಿದ್ದು, ಇಲ್ಲಿ ಪೊಲೀಸರು ಹೆಚ್ಚಾಗಿ ನಿಗಾವಹಿಸಿದ್ದಾರೆ.
ಮೂರು ವರ್ಷದಲ್ಲಿ ಅಪ್ರಾಪ್ತರ ವಿರುದ್ಧ ದಾಖಲಾದ ಪ್ರಕರಣಗಳು
2022ರಲ್ಲಿ 283 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 23 ಅಪ್ರಾಪ್ತರ ವಿರುದ್ಧ ಪ್ರಕರಣ ದಾಖಲಾಗಿದೆ. 2023ರಲ್ಲಿ 219 ಪ್ರಕರಣಗಳು ದಾಖಲಾಗಿದ್ದು, 74 ಅಪ್ರಾಪ್ತರ ವಿರುದ್ಧ ಪ್ರಕರಣ ದಾಖಲಾಗಿದೆ. 2024ರಲ್ಲಿ 532 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 121 ಅಪ್ರಾಪ್ತರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಲೈಕ್‌ಗಾಗಿ ವೀಲಿಂಗ್
ಇತ್ತೀಚೆಗೆ ವೀಲಿಂಗ್ ಪ್ರಕರಣಗಳು ಹೆಚ್ಚಾಗುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಸ್ಟಂಟ್‌ಗಳನ್ನು ಪೋಸ್ಟ್ ಮಾಡುವ ಜನಪ್ರಿಯತೆ ಹೆಚ್ಚಾಗಿರುವುದು. ಇದು ಲೈಕ್‌ಗಳಿಗಾಗಿ ಯುವಕರಲ್ಲಿ ಸ್ಪರ್ಧಾತ್ಮಕ ವಾತಾವರಣವನ್ನು ಸೃಷ್ಟಿಸಿದೆ. ವೀಲಿಂಗ್ ಮಾಡುವ ದೃಶ್ಯವನ್ನು ಚಿತ್ರೀಕರಣ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್ ಮಾಡಿ ಗೆಳೆಯರಿಂದ ಪ್ರಶಂಸೆ ಪಡೆದುಕೊಳ್ಳುವ ಖಯಾಲಿ ಇತ್ತೀಚೆಗೆ ಜಾಸ್ತಿಯಾಗಿದೆ. ಹೀಗಾಗಿ ಅಪ್ರಾಪ್ತರು ಸ್ಕೂಟರ್ ಕಲಿತು, ಸಾರ್ವಜನಿಕ ಸ್ಥಳದಲ್ಲಿ ಅಪಾಯಕಾರಿ ರೀತಿಯಲ್ಲಿ ವೀಲಿಂಗ್ ಮಾಡುತ್ತಾರೆ. ಇದರಿಂದಾಗಿ ಹಲವಾರು ಅವಘಡಗಳು ನಡೆಯುತ್ತಲೇ ಇರುತ್ತವೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸರು ಆರೋಪಿಗಳ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಿಗೆ ಹೊಕ್ಕು, ಅಲ್ಲಿ ಪತ್ತೆಯಾದ ವಿಡಿಯೊ ಹಾಗೂ ಫೋಟೋಗಳ ಆಧಾರದಲ್ಲಿ ಆರೋಪಿಗಳ ಮನೆಗೆ ದಾಳಿ ಮಾಡಿ ಅವರನ್ನು ಬಂಧಿಸುತ್ತಿದ್ದಾರೆ.
ರಾಜ್ಯದಲ್ಲಿ ವೀಲಿಂಗ್ ವಿರುದ್ಧ ಪ್ರಕರಣಗಳು
ರಾಜ್ಯದಲ್ಲಿಯೂ ವೀಲಿಂಗ್ ಪ್ರಕರಣಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳುತ್ತಿದ್ದಾರೆ. 2022ರಲ್ಲಿ 404 ಪ್ರಕರಣಗಳಲ್ಲಿ 67 ಪ್ರಕರಣಗಳ ಪರವಾನಗಿ ರದ್ದುಗೊಳಿಸಲು ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗಿದೆ. 2023ರಲ್ಲಿ 392 ಪ್ರಕರಣಗಳಲ್ಲಿ 196 ಪ್ರಕರಣಗಳ ಪರವಾನಗಿ ರದ್ದು ಮಾಡಲು ಶಿಫಾರಸು ಮಾಡಲಾಗಿದ್ದು, 2024ರಲ್ಲಿ 822 ಪ್ರಕರಣದಲ್ಲಿ 453 ಪ್ರಕರಣಗಳ ಪರವಾನಗಿ ರದ್ದುಗೊಳಿಸಲು ಶಿಫಾರಸು ಮಾಡಲಾಗಿದೆ. 2025ರ ಜುಲೈ31ರ ವರೆಗೆ 706 ಪ್ರಕರಣಗಳಲ್ಲಿ 544 ಪ್ರಕರಣಗಳ ಶಿಫಾರಸು ರದ್ದುಗೊಳಿಸಲಾಗಿದೆ ಎಂದು ದಾಖಲೆಗಳು ತಿಳಿಸಿವೆ.
ಕೋಬ್ರಾ ಸಿಬ್ಬಂದಿ ನೇಮಕ
ಬೆಂಗಳೂರು ನಗರದಲ್ಲಿ ವೀಲಿಂಗ್ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕುವ ದೃಷ್ಟಿಯಿಂದ ನಗರ ಸಂಚಾರ ಪೊಲೀಸ್ ಠಾಣೆಗಳಲ್ಲಿ ಸಾಮಾನ್ಯವಾಗಿ ವೀಲಿಂಗ್ ಮಾಡುವ ರಸ್ತೆಗಳನ್ನು ಗುರುತಿಸಿ ಅಂತಹ ರಸ್ತೆಗಳಲ್ಲಿ ಗಸ್ತು ಕರ್ತವ್ಯಕ್ಕೆ ಕೋಬ್ರಾ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ವೀಲಿಂಗ್ ಪ್ರಕರಣಗಳಲ್ಲಿ ಭಾಗಿಯಾಗುವ ವಾಹನಗಳ ನೋಂದಣಿ ಪುಸ್ತಕಗಳನ್ನು ರದ್ದುಪಡಿಸಲು ಸಂಬಂಧಪಟ್ಟ ಆರ್.ಟಿ.ಓ. ಕಛೇರಿಗೆ ಶಿಫಾರಸುಗಳನ್ನು ಕಳುಹಿಸಲಾಗುತ್ತಿದೆ. ರಾಜ್ಯದ ಎಲ್ಲಾ ಘಟಕಗಳಲ್ಲಿ ವೀಲಿಂಗ್ ಮಾಡುತ್ತಾ ಇತರೆ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯನ್ನುಂಟು ಮಾಡುತ್ತಿರುವ ಸವಾರರುಗಳ ವಿರುದ್ಧ ಕಾಲಕಾಲಕ್ಕೆ ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸವಾರರಿಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಎಸ್ಎಆರ್‌ಎಸ್ ಯೋಜನೆಯಡಿಯಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಸಮಯದಲ್ಲಿ ವೀಲಿಂಗ್ ಮಾಡುವುದರಿಂದ ಆಗುವ ಅನಾಹುತಗಳ ಬಗ್ಗೆ ಶಾಲೆಗಳಿಗೆ ಭೇಟಿ ಕೊಟ್ಟು ತಿಳುವಳಿಕೆ ನೀಡಲಾಗುತ್ತಿದೆ. ಅಲ್ಲದೇ, ವೀಲಿಂಗ್‌ನಲ್ಲಿ ಭಾಗಿಯಾಗುವ ವಾಹನಗಳ ಮಾರ್ಪಾಡು ಸಂಬಂಧ ವಾಹನಗಳನ್ನು ಮಾರ್ಪಾಡು ಗ್ಯಾರೇಜ್‌ಗಳು ಹಾಗೂ ಮೆಕ್ಯಾನಿಕ್‌ಗಳ ವಿವರಗಳನ್ನು ಸಂಗ್ರಹಿಸಿ ಅಂತಹ ಗ್ಯಾರೇಜ್‌ಗಳ ಹಾಗೂ ಮೆಕ್ಯಾನಿಕ್‌ಗಳ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲು ಸಂಚಾರ ವಿಭಾಗದ ಎಲ್ಲಾ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ ಎಂದಿದ್ದಾರೆ.