Caste census | ಜಾತಿಗಣತಿ ವರದಿಗೆ ದಿನವೂ ದೀಪ ಬೆಳಗುತ್ತಿದ್ದೀರಾ?; ಸಿಎಂ ವಿರುದ್ಧ ಎಚ್‌ಡಿಕೆ ಕಿಡಿ

ಜಾತಿಗಣತಿ ವರದಿಯನ್ನು ಕ್ಯಾಬಿನೆಟ್ ಗೆ ತರುತ್ತೇವೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಇನ್ನೂ ಉಪ ಸಮಿತಿ, ಆಯೋಗ ಎಂದು ಚರ್ಚೆ ನಡೆಯುತ್ತಿದೆ ಎಂದು ಎಚ್‌ಡಿಕೆ ಟೀಕಿಸಿದರು

Update: 2024-10-29 13:59 GMT

ಜಾತಿವಾರು ಜನಗಣತಿ ಸಂಬಂಧ ಕಾಂತರಾಜು, ಜಯಪ್ರಕಾಶ್ ಹೆಗಡೆ ನೀಡಿರುವ ವರದಿ ಇಟ್ಟುಕೊಂಡು ದಿನವೂ ಗಂಧದ ಕಡ್ಡಿ ಹಚ್ಚಿ ದೀಪ ಬೆಳಗುತ್ತಿದ್ದೀರಾ...? ಹೀಗೆಂದು ಪ್ರಶ್ನಿಸಿದವರು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ. 

ಬೆಂಗಳೂರಿನಲ್ಲಿ ಮಂಗಳವಾರ ನಡೆದ ಪ್ರಧಾನಮಂತ್ರಿ ಉದ್ಯೋಗ ಮೇಳದಲ್ಲಿ ಪಾಲ್ಗೊಂಡ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಳ ಮೀಸಲಾತಿಯ ಬಗ್ಗೆ ಸರ್ಕಾರ ಆಯೋಗ ರಚನೆ ಮಾಡಿರುವ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಈ ಸರ್ಕಾರದಿಂದ ಜನರ ಸಮಸ್ಯೆಗಳಿಗೆ ಯಾವುದೇ ಪರಿಹಾರ ದೊರೆಯುವುದಿಲ್ಲ. ಸಂಘ ಸಂಸ್ಥೆಗಳು ಒತ್ತಾಯ ಮಾಡುತ್ತಿವೆ. ಈ ಸರ್ಕಾರದಲ್ಲಿ; ಅದರಲ್ಲೂ ಸಿದ್ದರಾಮಯ್ಯ ನಾಯಕತ್ವದಲ್ಲಿ ವರದಿ ಜಾರಿಗೆ ಬರಲ್ಲ. ಈ ಹಿಂದೆ ಇದೇ ಸಿದ್ದರಾಮಯ್ಯ ಅವರು ಕಾಂತರಾಜು ವರದಿ ಎಂದು ಭಜನೆ ಮಾಡಿದ್ದರು ಎಂದು ಟೀಕಿಸಿದರು.

ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ವರದಿ ಸ್ವೀಕಾರ ಮಾಡಿಲ್ಲ ಎಂದು ಜಾಗಟೆ ಹೊಡೆದರು. ಇವರು ಅಧಿಕಾರಕ್ಕೆ ಬಂದು ಎಷ್ಟು ವರ್ಷ ಆಯಿತು. ಒಂದೂವರೆ ವರ್ಷದಿಂದ ವರದಿಗಳನ್ನು ಇಟ್ಟುಕೊಂಡು ಗಂಧದ ಕಡ್ಡಿ ಹಚ್ಚಿ, ದಿನವೂ ದೀಪ ಬೆಳಗ್ತಾ ಇದ್ದಾರಾ? ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ವರದಿಗಳನ್ನು ಯಾತಕ್ಕಾಗಿ ಬಿಡುಗಡೆ ಮಾಡೋಕೆ ಆಗಿಲ್ಲ? ಕಾಂತರಾಜು ವರದಿ, ಅದರ ಜತೆಗೆ ಜಯಪ್ರಕಾಶ್ ಹೆಗಡೆ ಕೊಟ್ಟ ವರದಿ.., ಎರಡನ್ನೂ ಸ್ವೀಕಾರ ಮಾಡಿ ಎಷ್ಟು ದಿನ ಆಯಿತು? ಅದನ್ನು ಇಟ್ಟುಕೊಂಡು ಏನು ಮಾಡುತ್ತಿದ್ದೀರಿ? ಎರಡು ವರದಿಗಳನ್ನು ಕೊಟ್ಟವರು ಬಹಳ ದೊಡ್ಡ ಮೇಧಾವಿಗಳು ಅಲ್ಲವೇ? ಇನ್ನೂ ಯಾಕೆ ಬಿಡುಗಡೆ ಮಾಡಿಲ್ಲ? ನನ್ನ ಮೇಲೆ ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದಾರೆ. ಈಗ ಅವರೇ ಎರಡೂ ವರದಿಗಳನ್ನು ತೆಗೆದುಕೊಂಡು ಇಟ್ಟುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕ್ಯಾಬಿನೆಟ್ ಗೆ ತರುತ್ತೇವೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಇನ್ನು ಉಪ ಸಮಿತಿ, ಆಯೋಗ ಎಂದು ಚರ್ಚೆ ನಡೆಯುತ್ತಿದೆ. ಎಷ್ಟು ದಿನ ಸಬೂಬು ಹೇಳಿಕೊಂಡು ತಿರುಗುತ್ತೀರಿ? ಉಪ ಚುನಾವಣೆ ಘೋಷಣೆ ಆಗಿದೆ. ಲೋಕಸಭೆ ಚುನಾವಣೆಗೆ ಮೊದಲೇ ವರದಿ ಸ್ವೀಕಾರ ಮಾಡಿದ್ದೀರಿ ಅಲ್ಲವೇ? ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

Tags:    

Similar News