ಬೆಳಗಾವಿ ಅಧಿವೇಶನ ವೇಳೆ ಬಿಜೆಪಿ ಬಣ ಬಡಿದಾಟ; ಏನು ನಷ್ಟ? ಯಾರಿಗೆ ಲಾಭ?

ಪ್ರತಿಪಕ್ಷ ನಾಯಕ ಆರ್‌. ಅಶೋಕ್‌, ಮಾಜಿ ಸಚಿವ ಅಶ್ವತ್ಥನಾರಾಯಣ, ಬಸನಗೌಡ ಪಾಟೀಲ ಯತ್ನಾಳ, ಸುನಿಲ್‌ ಕುಮಾರ್‌ ..ಹೀಗೆ, ಸರ್ಕಾರದ ವಿರುದ್ಧ ಮಾತಿನ ಚಡಿಯೇಟು ನೀಡುವವರು ಬಿಜೆಪಿ ಬಣಗಳ ನಡುವೆ ಚದುರಿಹೋಗಿದ್ದಾರೆ.;

Update: 2024-12-09 00:30 GMT

ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಣಗಳ ಜಗಳದಿಂದ ಬಿಜೆಪಿ ಕಳೆದುಕೊಂಡಿದ್ದೇನು, ಪಡೆದಿದ್ದೇನು ಎಂಬ ಎಂಬ ಚರ್ಚೆ ಈಗ ಆ ಪಕ್ಷದೊಳಗೇ  ಆರಂಭವಾಗಿದೆ.

ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಮುಂದೆ ಹಾಜರಾಗಿ ವರಿಷ್ಠರಿಂದ ಸಂಯಮದ ಪಾಠ ಕೇಳಿಕೊಂಡು ಬಂದ ಮೇಲೂ ವಿಜಯೇಂದ್ರ ವಿರುದ್ಧ ಯತ್ನಾಳ್‌ ಟೀಕಾಪ್ರಹಾರ ಮುಂದುವರಿಸಿದ್ದಾರೆ. ನಾನೇಕೆ ಮುಖ್ಯಮಂತ್ರಿ ಆಗಬಾರದು ಎಂಬ ಮಾತುಗಳನ್ನು ಸಹ ಹೇಳುತ್ತಿದ್ದಾರೆ. ಯತ್ನಾಳ್‌ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರೂ ಹೈಕಮಾಂಡ್‌ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹಾಗಾಗಿ ಯತ್ನಾಳ್‌ ಹಿಂದಿರುವ ಪ್ರಭಾವ ಕುರಿತು ಪಕ್ಷದಲ್ಲೇ ಚರ್ಚೆ ಆರಂಭವಾಗಿದೆ. ಷೋಕಾಸ್‌ ನೋಟಿಸ್‌ಗೆ ಉತ್ತರ ನೀಡಿದ್ದ ವೇಳೆ ʼನಿಮಗೆ ಉತ್ತಮ ಭವಿಷ್ಯವಿದೆʼ ಎಂಬ ವರಿಷ್ಠರ ಅಭಯ, ಯತ್ನಾಳ್‌ಗೆ ಶ್ರೀರಕ್ಷೆಯಾಗಿದೆಯೇ ಎಂಬ ಸಂಶಯವೂ ಕಾಡಲಾರಂಭಿಸಿದೆ.

ಈ ಮಧ್ಯೆ ಶನಿವಾರ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ರಾಜ್ಯ ಉಸ್ತುವಾರಿ ರಾಧಾ ಮೋಹನ ಅಗರ್‌ವಾಲ್‌ ರಾಜ್ಯ ನಾಯಕತ್ವದ ಬದಲಾವಣೆ ಪ್ರಶ್ನೆ ತಳ್ಳಿಹಾಕಿದ್ದಾರೆ. ದೆಹಲಿ ಭೇಟಿಯನ್ನು ಮೇಲುಗೈ ಎಂದು ಯತ್ನಾಳ್‌ ಬಣ ಭಾವಿಸಿದರೆ, ಕೋರ್‌ ಕಮಿಟಿ ಸಭೆಯಲ್ಲಿ ರಾಜ್ಯ ಉಸ್ತುವಾರಿಯ ಹೇಳಿಕೆಯನ್ನು ವಿಜಯೇಂದ್ರ ಬಣ ಮುನ್ನಡೆ ಎಂದು ಭಾವಿಸಿದೆ. ಆದರೆ, ಯತ್ನಾಳ್‌ ಹಾಗೂ ವಿಜಯೇಂದ್ರ ಬಣದ ನಡುವಿನ ಶೀತಲ ಸಮರದಲ್ಲಿ ನಡೆಯುತ್ತಿರುವ ಬೆಳವಣಿಗಳು ಕಾರ್ಯಕರ್ತರನ್ನು ಸಂಪೂರ್ಣ ಗೊಂದಲಕ್ಕೆ ನೂಕಿವೆ.

ಯತ್ನಾಳ್‌ ಉಚ್ಛಾಟನೆಗೆ ವಿಜಯೇಂದ್ರ ಬಣ ಪಟ್ಟು

ಪಕ್ಷದ ನಾಯಕತ್ವದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ವಿಜಯೇಂದ್ರ ಬಣದ ನಾಯಕರಾದ ಶಾಸಕ ಎಂ.ಪಿ. ರೇಣುಕಾಚಾರ್ಯ, ಬಿ.ಸಿ. ಪಾಟೀಲ್‌, ಸೋಮಶೇಖರರೆಡ್ಡಿ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ. ಈ ಬಗ್ಗೆ ದೆಹಲಿಗೆ ತೆರಳಿ ವರಿಷ್ಠರನ್ನೂ ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿಯಲ್ಲಿನ ಆಂತರಿಕ ದುಷ್ಟಶಕ್ತಿ ಯತ್ನಾಳ್‌ ಎಂದು ಜರಿದಿರುವ ವಿಜಯೇಂದ್ರ ನಿಷ್ಠೆ ಬಣ, ದುಷ್ಟಶಕ್ತಿ ಸಂಹಾರ ಮಾಡುವಂತೆ ಮೈಸೂರಿನ ಚಾಮುಂಡೇಶ್ವರಿ ದೇವಿ ದೇವಾಲಯಕ್ಕೆ ತೆರಳಿ ಪೂಜೆ ಕೂಡ ಸಲ್ಲಿಸಿ, ಯತ್ನಾಳ್‌ ವಿರುದ್ಧ ಕಿಡಿಕಾರಿದ್ದಾರೆ.

ಅಧಿವೇಶನದಲ್ಲಿ ಬಿಜೆಪಿ ಒಗ್ಗಟ್ಟು ಒಡಕು?

ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಮುಗಿ ಬೀಳಲು ಬಿಜೆಪಿ ಮುಂದೆ ಸಾಕಷ್ಟು ವಿಚಾರಗಳಿವೆ. ಆದರೆ, ಬಣ ತಿಕ್ಕಾಟದ ಪರಿಣಾಮ ಒಗ್ಗಟ್ಟಿನಲ್ಲಿ ಒಡಕು ಮೂಡಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಪ್ರತಿಪಕ್ಷ ನಾಯಕ ಆರ್‌. ಅಶೋಕ್‌, ಮಾಜಿ ಸಚಿವ ಅಶ್ವತ್ಥನಾರಾಯಣ, ಬಸನಗೌಡ ಪಾಟೀಲ ಯತ್ನಾಳ ಹೊರತುಪಡಿಸಿ ಸರ್ಕಾರದ ವಿರುದ್ಧ ಮಾತಿನ ಚಡಿಯೇಟು ನೀಡುವವರು ವಿರಳವಾಗಿದ್ದಾರೆ. ಈ ಹಿಂದೆ ಮಾಜಿ ಸಿಎಂ ಬಸವರಾಜು ಬೊಮ್ಮಾಯಿ, ಮಾಧುಸ್ವಾಮಿ, ಜೆಡಿಎಸ್‌ ಪಕ್ಷದ ಎಚ್‌.ಡಿ.ಕುಮಾರಸ್ವಾಮಿ ಅಧಿವೇಶನದಲ್ಲಿ ಸರ್ಕಾರದ ತಪ್ಪುಗಳನ್ನು ಸಮರ್ಥವಾಗಿ ಮಂಡಿಸುತ್ತಿದ್ದರು.. ಈಗ ಇವರಾರು ಇಲ್ಲ. ಇರುವ ಬಿಜೆಪಿ ಶಾಸಕರಲ್ಲೇ ಬಣ ತಿಕ್ಕಾಟವಿದೆ. ಹೀಗಿರುವಾಗ ಒಗ್ಗಟ್ಟು ಪ್ರದರ್ಶಿಸುವುದು ಕಷ್ಟಸಾಧ್ಯ ಎನ್ನಲಾಗಿದೆ.

ಜತೆಗೆ, ಮುಡಾ ಪ್ರಕರಣ, ವಕ್ಫ್‌ ವಿವಾದ, ಬಿಪಿಎಲ್‌ ಕಾರ್ಡ್‌ ಗೊಂದಲ, ವಾಲ್ಮೀಕಿ ನಿಗಮ ಹಗರಣ ಮತ್ತಿತರ ಪ್ರಕರಣಗಳಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಬಣಗಳು ಒಂದಾಗುವುದು ಸದ್ಯದ ಮಟ್ಟಿಗೆ ಕಷ್ಟಸಾಧ್ಯ ಎನ್ನಲಾಗಿದೆ.

ಅಗರ್‌ವಾಲ್‌ ಹೇಳಿಕೆ ತಂದ ಗೊಂದಲ

ಬೆಂಗಳೂರಿನಲ್ಲಿ ಕೋರ್‌ ಕಮಿಟಿ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಾಜು ಬಿಜೆಪಿ ಉಸ್ತುವಾರಿ ರಾಧಾ ಮೋಹನ ಅಗರ್‌ವಾಲ್‌ ಅವರು, ರಾಜ್ಯಾಧ್ಯಕ್ಷರ ಬದಲಾವಣೆ ಅಧಿಕಾರ ಇರುವುದು ಸಾಮಾನ್ಯ ಕಾರ್ಯಕರ್ತ ಮತ್ತು ವರಿಷ್ಠರಿಗೆ ಮಾತ್ರ. ಯಾರೋ ಹೇಳಿದರೆಂದು ಅಧ್ಯಕ್ಷರನ್ನು ಇಳಿಸಲಾಗದು ಎಂದು ಯತ್ನಾಳ್‌ ಬೇಡಿಕೆಯನ್ನು ತಳ್ಳಿಹಾಕಿದ್ದರು. ಆದರೆ, ಇದೇ ವೇಳೆ ನಾಯಕತ್ವದ ಬದಲಾವಣೆ ಅಧಿಕಾರ ವರಿಷ್ಠರಿಗಿದೆ ಎಂದು ಹೇಳಿರುವುದು ಗೊಂದಲ ಸೃಷ್ಟಿಸಿದೆ.

ಅಗರ್‌ವಾಲ್‌ ವಿರುದ್ಧ ಯತ್ನಾಳ್‌ ಬಣ ಆಕ್ರೋಶ 

ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ಅಗರ್‌ವಾಲ್ ವಿರುದ್ಧವೂ ಈ ಹಿಂದೆ ಯತ್ನಾಳ್‌ ಬಣ ಆಕ್ರೋಶ ವ್ಯಕ್ತಪಡಿಸಿತ್ತು. ರಾಜ್ಯ ನಾಯಕತ್ವ ಬದಲಾವಣೆ ಕುರಿತು ಎರಡು ತಿಂಗಳಿಂದ ಬಣ ಜಗಳ ನಡೆಯುತ್ತಿದ್ದರೂ ರಾಜ್ಯ ಉಸ್ತುವಾರಿ ರಾಧಾ ಮೋಹನ್‌ ಅಗರ್‌ವಾಲ್ ರಾಜ್ಯಕ್ಕೆ ಭೇಟಿ ನೀಡಿಲ್ಲ ಎಂದು ದೂರಿದ್ದರು. ಇದಾದ ಬಳಿಕ ವಿಜಯೇಂದ್ರ ದೆಹಲಿಗೆ ತೆರಳಿ ಯತ್ನಾಳ್‌ ವಿರುದ್ಧ ದೂರು ನೀಡಿದ್ದರು. ಬಂಡಾಯ ಶಮನಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರನ್ನು ವರಿಷ್ಠರು ರಾಜ್ಯಕ್ಕೆ ಕಳುಹಿಸಿ ವರದಿ ತರಿಸಿಕೊಂಡಿದ್ದರು.

ಎಸ್‌ಟಿ ಸೋಮಶೇಖರ್‌, ಹೆಬ್ಬಾರ್‌ ಉಚ್ಛಾಟನೆಗೆ ಶಿಫಾರಸು

ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ ಬಿಜೆಪಿ ಶಾಸಕರಾದ ಎಸ್‌.ಟಿ.ಸೋಮಶೇಖರ್‌ ಹಾಗೂ ಶಿವರಾಮ್‌ ಹೆಬ್ಬಾರ್ ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಕೋರ್‌ ಕಮಿಟಿ ಸಭೆ ಶಿಫಾರಸು ಮಾಡಿದೆ. ಈ ಇಬ್ಬರು ಬಿಜೆಪಿ ಶಾಸಕರು ಕಾಂಗ್ರೆಸ್‌ ಜೊತೆ ಗುರುತಿಸಿಕೊಂಡು, ಬಿಜೆಪಿ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದರು.

ಇನ್ನು ಸಂಡೂರು ಹಾಗೂ ಶಿಗ್ಗಾವಿ ಕ್ಷೇತ್ರದ ಸೋಲಿನ ಕುರಿತು ಪರಿಶೀಲಿಸಲು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಹಾಗೂ ಪಕ್ಷದ ಉಪಾಧ್ಯಕ್ಷ ಎನ್. ಮಹೇಶ್ ನೇತೃತ್ವದಲ್ಲಿ ಸತ್ಯಶೋಧನಾ ತಂಡ ರಚಿಸಲಾಗಿದೆ. ಈ ತಂಡವು ಎರಡೂ ಕ್ಷೇತ್ರಕ್ಕೆ ತೆರಳಿ ಮಾಹಿತಿ ಪಡೆಯಲಿದೆ.

ನಾನು ಸಿಎಂ ಯಾಕೆ ಆಗಬಾರದು; ಯತ್ನಾಳ್

ಕೋರ್‌ ಕಮಿಟಿ ಸಭೆಯ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌, ನಾನು ಮುಖ್ಯಮಂತ್ರಿ ಯಾಕಾಗಬಾರದು. ನನ್ನಲ್ಲಿ ಏನು ಕೊರತೆ ಇದೆ. ಪ್ರಾಮಾಣಿಕರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಲು ಮುಂದಾದರೆ, ಒಳ್ಳೆಯ ಮನುಷ್ಯ ಬೇಕೆಂದು ದೇವರು ಆದೇಶಿಸಿದರೆ ನನ್ನ ಹೆಸರು ಮೊದಲು ಬರುತ್ತದೆ. ಆಗ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿದ್ದಾರೆ. ಆ ಮೂಲಕ ವಿಜಯೇಂದ್ರ ಮುಂದಿನ ಸಿಎಂ ಎಂಬ ಅವರ ಪರ ಬೆಂಬಲಿಗರ (ರೇಣುಕಾಚಾರ್ಯ) ಮಾತಿಗೆ ಪ್ರತಿಯೇಟ ನೀಡಿದ್ದಾರೆ. ಈ ಮೂಲಕ ವಿಜಯೇಂದ್ರ  ಹಾಗೂ ಯತ್ನಾಳ್‌ ಬಣಗಳ ಸಮರ ಇನ್ನೂ ಒಂದ ಹೆಜ್ಜೆ ಮುಂದೆ ಹೋಗಿದೆ.

Tags:    

Similar News